ದೂರಶಿಕ್ಷಣ ಡಿಪ್ಲೊಮಾ ಕೋರ್ಸ್ ರಾಜ್ಯದಲ್ಲಿರುವ ಸಾಕಷ್ಟು ರೈತರಿಗೆ ಆಧುನಿಕ ತಂತ್ರಜ್ಞಾನವನ್ನು ಅನುಸರಿಸಿ ಇಳುವರಿ ಹೆಚ್ಚಿಸುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇದರಿಂದಾಗಿ ಹೆಚ್ಚಿನ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಹಾಗೂ ಯುವಕರನ್ನು ಕೃಷಿ ಕ್ಷೇತ್ರದತ್ತ ಆಕರ್ಷಿಸಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಒಂದು ವರ್ಷದ ‘ಡಿಪ್ಲೊಮಾ ಇನ್‌ ಅಗ್ರಿಕಲ್ಚರ್‌’ ಕೋರ್ಸ್‌ ಪರಿಚಯಿಸಿದೆ. ಕೃಷಿಯಲ್ಲಿ ಆಸಕ್ತಿ ಹೊಂದಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪ್ರತಿಯೊಬ್ಬರೂ ಈ ಕೋರ್ಸ್‌ಗೆ ದಾಖಲಾಗಬಹುದು. ಇದಕ್ಕಾಗಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೃಷಿ ವಿಸ್ತರಣಾ ಘಟಕ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದೆ. ಇದರಲ್ಲಿ ಎರಡು ಸೆಮಿಸ್ಟರ್‌ಗಳಿದ್ದು, ಪ್ರತಿ ಸೆಮಿಸ್ಟರ್‌ಗೆ 6 ವಿಷಯಗಳಿರುತ್ತವೆ. ಕೋರ್ಸ್‌ ಪ್ರಾರಂಭವಾದ ನಂತರ ಪ್ರತಿ ಸೆಮಿಸ್ಟರ್‌ಗೆ ಒಂದು ವಾರ ಸಂಪರ್ಕ ತರಗತಿಗಳನ್ನು (ಕಾಂಟ್ಯಾಕ್ಟ್‌ ಕ್ಲಾಸ್‌) ತೆಗೆದುಕೊಳ್ಳಲಾಗುವುದು. ಈ ತರಗತಿಗಳನ್ನು ಪ್ರತಿ ಜಿಲ್ಲೆಗಳಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಹಾಗೂ ಜಿಲ್ಲೆಗಳಲ್ಲಿರುವ ಕೃಷಿ ವಿದ್ಯಾಲಯಗಳ ಆವರಣಗಳಲ್ಲೇ ನಡೆಸಲಾಗುವುದು. ಅಲ್ಲಿಯೇ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆದರೆ ಸೇವಿಸುವ ಆಹಾರಕ್ಕೆ ಮಾತ್ರ ಕಡಿಮೆ ದರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಸೆಮಿಸ್ಟರ್‌ಗೆ ₨ 5 ಸಾವಿರದಂತೆ ಒಂದು ವರ್ಷದ ಕೋರ್ಸ್‌ಗೆ ₨ 10 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ. ಇದು ವಿಶ್ವವಿದ್ಯಾಲಯ ನೀಡುವ ಪಠ್ಯ ಪುಸ್ತಕಗಳು, ಸಂಪರ್ಕ ತರಗತಿಗೆ ಬಂದಾಗ ವಿದ್ಯಾರ್ಥಿಗಳು ಉಳಿದುಕೊಳ್ಳಲು ಮಾಡುವ ವ್ಯವಸ್ಥೆಗೆ ತಗುಲುವ ವೆಚ್ಚವನ್ನು ಒಳಗೊಂಡಿರುತ್ತದೆ. ಮೊದಲ ಸೆಮಿಸ್ಟರ್‌ನಲ್ಲಿ ಒಂದು ವಾರ ಮತ್ತು ಎರಡನೇ ಸೆಮಿಸ್ಟರ್‌ನಲ್ಲಿ ಇನ್ನೊಂದು ವಾರ ಸೇರಿ ಒಟ್ಟು 12ದಿನಗಳು ಮಾತ್ರ ಸಂಪರ್ಕ ತರಗತಿ (ಕಾಂಟ್ಯಾಕ್ಟ್‌ ಕ್ಲಾಸ್‌) ನಡೆಸಲಾಗುವುದು. ಉಳಿದಂತೆ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಅಭ್ಯರ್ಥಿಗಳಿಗೆ ನೀಡುತ್ತಾರೆ. ಅವರೇ ಮನೆಯಲ್ಲಿ ಕುಳಿತು ಅಭ್ಯಾಸ ಮಾಡಿ ಬಳಿಕ ಪರೀಕ್ಷೆ ಬರೆಯಬಹುದು. ಮುದ್ರಿತ ಪಠ್ಯಗಳಲ್ಲಿ ಪ್ರತಿ ಚಾಪ್ಟರ್‌ನ ಕೊನೆಯಲ್ಲಿ ಅದಕ್ಕೆ ಸಂಬಂಧಿಸಿದ ಒಂದು ಪ್ರಶ್ನೆ ಹಾಗೂ ಅದಕ್ಕೆ ಉತ್ತರವನ್ನೂ ನೀಡಲಾಗಿರುತ್ತದೆ. ಈ ಕೋರ್ಸ್‌ ಕೃಷಿಯ ಬಗ್ಗೆ ಸಮಗ್ರ ಅಧ್ಯಯನ ಒಳಗೊಂಡಿರುತ್ತವೆ. ಕೃಷಿ, ತೋಟಗಾರಿಕೆ, ರೇಷ್ಮೆ, ಮಣ್ಣಿನ ಪರೀಕ್ಷೆ, ಕೀಟಗಳು, ಬೆಳೆಗೆ ಬರಬಹುದಾದ ರೋಗಗಳು, ಅವುಗಳಿಗೆ ಔಷಧಿಗಳ ಬಳಕೆ, ರೋಗಗಳು ಬಾರದಂತೆ ಯಾವಾಗ, ಹೇಗೆ ಮುನ್ನೆಚ್ಚರಿಕೆ ವಹಿಸಬೇಕು, ಪಶುಸಂಗೋಪನೆ, ರಾಸಾಯನಿಕ ಕ್ರಿಮಿನಾಶಕಗಳ ಬದಲಾಗಿ ಜೈವಿಕ ಕ್ರಿಮಿನಾಶಕಗಳನ್ನು ಬಳಸುವ ಕುರಿತು, ಯಾವ ಬೆಳೆಯೊಂದಿಗೆ ಬೇರೆ ಯಾವ ಬೆಳೆಗಳನ್ನು ಬೆಳೆದರೆ ಉತ್ತಮ, ಕೃಷಿ ಕ್ಷೇತ್ರದಲ್ಲಿ ವಿಜ್ಞಾನಿಗಳು ಮಾಡುತ್ತಿರುವ ಹೊಸ ಸಂಶೋಧನೆಗಳು, ಹೊಸ ರೋಗಗಳು ಪತ್ತೆಯಾದಾಗ ಅನುಸರಿಸಬೇಕಾದ ಕ್ರಮಗಳು, ಕೃಷಿಯೊಂದಿಗೆ ಮಾಡಬಹುದಾದ ಉಪಕಸುಬುಗಳ ಬಗ್ಗೆ ಮಾಹಿತಿಗಳನ್ನು ಕೋರ್ಸ್ ಒಳಗೊಂಡಿರುತ್ತದೆ. ಜತೆಗೆ ಇರುವ ತಂತ್ರಜ್ಞಾನವನ್ನು ಬಳಸುವ ವಿಧಾನ, ಅವುಗಳಿಗೆ ಸಂಬಂಧಿಸಿದಂತೆ ಚಿತ್ರ ವಿವರಗಳನ್ನೂ ನೀಡಲಾಗಿರುತ್ತದೆ. ಡಿಪ್ಲೊಮೊ ಕೃಷಿ ಕೋರ್ಸ್ ಅನ್ನು ರೈತರಿಗೆ ಅರ್ಥವಾಗಲೆಂದು ಕನ್ನಡದಲ್ಲೇ ನಡೆಸಲಿದೆ. ಪ್ರತಿವರ್ಷ ನಡೆಸುವ ಕೃಷಿ ಮೇಳ ಅಥವಾ ಸಂಸ್ಥಾಪಕ ದಿನಾಚರಣೆಯಂದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ಪಡೆಯದೆ ವಿಶ್ವವಿದ್ಯಾಲಯವೇ ನಿರ್ವಹಣೆ ಮಾಡಬೇಕೆಂದು ಡಿಪ್ಲೊಮೊ ಕೋರ್ಸ್‌ಗೆ ಶುಲ್ಕ ನಿಗದಿಪಡಿಸಿದೆ. ಇವನ್ನು ಆರಂಭಿಸಲು ಆರ್ಥಿಕ ನೆರವು ನೀಡಿ ಎಂದು ಸರ್ಕಾರದ ಮೊರೆ ಹೋಗದೆ ವಿದ್ಯಾರ್ಥಿಗಳಿಂದ ಬರುವ ಶುಲ್ಕದಿಂದಲೇ ಈ ಕೋರ್ಸ್‌ಗಳನ್ನು ಪ್ರಾರಂಭಿಸುತ್ತಿದೆ. ಕೃಷಿ ವಿ.ವಿ.ಯ ವಿದ್ಯಾ ವಿಷಯ ಪರಿಷತ್ (ಅಕಾಡಮಿಕ್ ಕೌನ್ಸಿಲ್) ಹಾಗೂ ಅಧ್ಯಯನ ಮಂಡಳಿ (ಬೋರ್ಡ್ ಆಫ್ ಸ್ಟಡೀಸ್) ಈ ಕೋರ್ಸ್ ಪ್ರಾರಂಭಿಸಲು ಈಗಾಗಲೇ ಅನುಮತಿ ನೀಡಿದೆ. ಹೀಗಾಗಿ ದೂರ ಶಿಕ್ಷಣ ವಿಭಾಗವು ಕೋರ್ಸ್‌ನ ಸ್ವರೂಪವನ್ನು ನಿರ್ಧರಿಸಿದ್ದು, ವಿಷಯ ತಜ್ಞರ ಸಹಾಯದಿಂದ ಪಠ್ಯದ ವಿನ್ಯಾಸವನ್ನು ಸಹ ಮಾಡಿದೆ. ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಇಳುವರಿ ಪಡೆದು, ಹೆಚ್ಚು ಲಾಭ ಪಡೆಯಬಹುದು. ಇದನ್ನು ರೈತರಿಗೆ ತಿಳಿಸಿಕೊಡುವ ಉದ್ದೇಶದಿಂದ ಈ ಕೋರ್ಸನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ ಇನ್ನು ಮುಂದೆ ರೈತರು ಕಾಲೇಜಿಗೆ ತೆರಳದೆ ದೂರ ಶಿಕ್ಷಣ ಮೂಲಕ ಡಿಪ್ಲೊಮೊ ಪಡೆಯಬಹುದಾಗಿದೆ. ಇದರೊಂದಿಗೆ ಸಮಗ್ರ ಕೃಷಿ ಅಧ್ಯಯನದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳಬಹುದಾಗಿದೆ. ಕೃಷಿ ವಿ.ವಿ.ಯ ದೂರ ಶಿಕ್ಷಣ ವಿಭಾಗವು ಒಟ್ಟು ಏಳು ಕೋರ್ಸ್‌ಗಳನ್ನು ಈಗಾಗಲೇ ಆರಂಭಿಸಿದೆ. ಅವುಗಳಲ್ಲಿ ಎರಡು ವರ್ಷಗಳ ಹಿಂದೆ 2 ತಿಂಗಳ ಅವಧಿಯ ಕೃಷಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿತ್ತು. ಇದಕ್ಕೆ ಕಳೆದ ಸೆಮಿಸ್ಟರ್‌ನಲ್ಲಿ 617 ಮಂದಿ ಪ್ರವೇಶ ಪಡೆದು, ಪ್ರಮಾಣಪತ್ರ ಪಡೆದಿದ್ದರು. ಇದರಿಂದ ಉತ್ತೇಜಿತಗೊಂಡಿರುವ ವಿ.ವಿ.ಯು ಕೃಷಿಯಲ್ಲಿ ಡಿಪ್ಲೊಮಾ ಆರಂಭಿಸುವ ನಿರ್ಧಾರ ಕೈಗೊಂಡಿದೆ. ಈ ಕೋರ್ಸ್‌ಗೆ ಜಿಲ್ಲೆಗಳಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಹಾಗೂ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಅರ್ಜಿಗಳು ಲಭ್ಯವಿದ್ದು, ಅಕ್ಟೋಬರ್‌ 31ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಸದ್ಯಕ್ಕೆ ಸೀಟುಗಳನ್ನು ಸಂಖ್ಯೆಯನ್ನು ಮಿತಿಗೊಳಿಸಿಲ್ಲ. ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು. ಉದ್ಯೋಗಾವಕಾಶ ಈ ಕೋರ್ಸ್‌ ಮಾಡಿ ಪ್ರಮಾಣಪತ್ರ ಪಡೆದವರು ಕೃಷಿ ವಿಶ್ವವಿದ್ಯಾಲಯದಲ್ಲಿ ಟೆಕ್ನಿಕಲ್‌ ಅಸಿಸ್ಟೆಂಟ್, ಲ್ಯಾಬ್‌ ಅಸಿಸ್ಟೆಂಟ್‌, ಅಗ್ರಿ ಅಸಿಸ್ಟೆಂಟ್‌, ಫೀಲ್ಡ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಸರ್ಕಾರ ಅರ್ಜಿ ಆಹ್ವಾನಿಸಿದಾಗ ವಯೋಮಿತಿ ಸರಿಹೊಂದಿದವರು ಅರ್ಜಿ ಸಲ್ಲಿಸಬಹುದು. ಉಚಿತ ತರಬೇತಿ ಕೇಂದ್ರ ಸರ್ಕಾರ ಹಾಗೂ ಕೃಷಿ ವಿ.ವಿ.ಯ ಪ್ರಾಯೋಜಕತೆಯಲ್ಲಿ 3 ತಿಂಗಳ ‘ಅಗ್ರಿ ಕ್ಲಿನಿಕ್ ಮತ್ತು ಅಗ್ರಿ ಬಿಜೆನೆಸ್’ ಎಂಬ ಉಚಿತ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ. ಇದು ಈ ಹಿಂದೆ ಕೇವಲ ಪದವೀಧರರಿಗೆ ಮೀಸಲಾಗಿತ್ತು, ಆದರೆ ಈಗ ದೂರಶಿಕ್ಷಣ ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿದವರೂ ಈ ತರಬೇತಿ ಪಡೆಯಲು ಅರ್ಹರಾಗುತ್ತಾರೆ. ಇದರಲ್ಲಿ ಕೃಷಿ ಸಂಬಂಧಿತ ಉಪಕಸುಬುಗಳಾದ ಫೌಲ್ಟ್ರಿ, ರೇಷ್ಮೆ ಸಾಗಣೆ, ಹೈನುಗಾರಿಕೆ, ಎರೆಹುಳು, ಮೀನು, ಜೇನು, ಕುರಿ, ಹಂದಿ ಸಾಕಾಣಿಕೆ ಸೇರಿದಂತೆ ಇತರೆ ಸ್ವಂತ ಉದ್ಯಮಗಳನ್ನು ಪ್ರಾರಂಭಿಸಲು ತರಬೇತಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಸರ್ಕಾರ ನೀಡುವ ಸಬ್ಸಿಡಿ ಸಾಲ ಪಡೆಯಬಹುದು. ಈ ತರಬೇತಿ ಪಡೆದವರು ನಬಾರ್ಡ್ ಬ್ಯಾಂಕ್‌ ಶೇ 30ರಷ್ಟು ರಿಯಾಯ್ತಿ ದರದಲ್ಲಿ ನೀಡುವ ಸಾಲವನ್ನು ಪಡೆಯಲು ಅರ್ಹರಾಗುತ್ತಾರೆ. –ಎನ್‌. ನಾಗರಾಜ, ನಿರ್ದೇಶಕ, ವಿಸ್ತರಣಾ ವಿಭಾಗ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.