ಫೇರ್‌ ಅಂಡ್‌ ಲವ್ಲಿ ವಿದ್ಯಾರ್ಥಿ ವೇತನ ಖಾಸಗಿ ಕಂಪೆನಿಗಳು ಅಥವಾ ಕಾರ್ಪೊರೇಟ್‌ ಸಂಸ್ಥೆಗಳಿಗೆ ವ್ಯಾಪಾರದ ಜೊತೆ ಸಮುದಾಯ ಪ್ರಜ್ಞೆಯೂ ಇದೆ ಎಂಬುದಕ್ಕೆ ಫೇರ್‌ ಅಂಡ್‌ ಲವ್ಲಿ ಕಂಪೆನಿ ಅತ್ಯುತ್ತಮ ಉದಾಹರಣೆ. ಶಿಕ್ಷಣ, ಸಮುದಾಯ, ಆರೋಗ್ಯ ಹಾಗೂ ಸಮಾಜ ಸುಧಾರಣೆ ಬಗ್ಗೆ ಕಾಳಜಿ ಹೊಂದಿರುವ ನೂರಾರು ಕಂಪೆನಿಗಳು ಹಣಕಾಸು ನೆರವನ್ನು ನೀಡುತ್ತಿವೆ. ಸೌಂದರ್ಯವರ್ಧಕಗಳನ್ನು ತಯಾರಿಸುವ ಫೇರ್‌ ಅಂಡ್‌ ಲವ್ಲಿ ಕಂಪೆನಿಯು ಮಹಿಳೆಯರ ಶಿಕ್ಷಣ, ಸಬಲೀಕರಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡುತ್ತಿದೆ. ಕಂಪೆನಿ ಹಲವು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್‌ಗಳನ್ನು ನೀಡುತ್ತ ಬಂದಿದೆ. ಪ್ರಸಕ್ತ ವರ್ಷದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್‌ಗಳನ್ನು ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಹತೆಗಳು: ಭಾರತ ಸರ್ಕಾರ/ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ನಡೆಯುತ್ತಿರುವ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ದ್ವಿತೀಯ ಪಿಯುಸಿಯಲ್ಲಿ ಶೇ 60 ರಷ್ಟು ಅಂಕಗಳನ್ನು ಪಡೆದು ಯಾವುದೇ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಹಾಗೂ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌.ಡಿ ಮಾಡುತ್ತಿರುವ ವಿದ್ಯಾರ್ಥಿನಿಯರು ಕೂಡ ಅರ್ಜಿ ಸಲ್ಲಿಸಬಹುದು. ಆಯ್ಕೆ/ವೇತನ: ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್‌ಗಳನ್ನು ನೀಡಲಾಗುವುದಿಲ್ಲ. ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಪಡೆದ ಅಂಕಗಳು, ಅಭ್ಯರ್ಥಿಗಳ ವಾರ್ಷಿಕ ವರಮಾನ ಮತ್ತು ಅವರು ರಚಿಸಿದ ಪ್ರಬಂಧವನ್ನು ಮೌಲ್ಯಮಾಪನ ಮಾಡುವ ಮೂಲಕ ಸ್ಕಾಲರ್‌ಶಿಪ್‌ಗೆ ಆಯ್ಕೆ ಮಾಡಲಾಗುವುದು. ಕೋರ್ಸ್‌ ಸಂಪೂರ್ಣವಾಗಿ ಮುಗಿಯುವವರೆಗೂ ಸ್ಕಾಲರ್‌ಶಿಪ್‌ ನೀಡಲಾಗುವುದು. ಆದಾಗ್ಯೂ ಈ ವಿದ್ಯಾರ್ಥಿ ವೇತನವನ್ನು ಪ್ರತಿ ವರ್ಷ ನವೀಕರಿಸಿಕೊಳ್ಳಬೇಕು. ಕಂಪೆನಿ ಎಷ್ಟು ಸ್ಕಾಲರ್‌ಶಿಪ್‌ಗಳು ಹಾಗೂ ಎಷ್ಟು ರೂಪಾಯಿ ಹಣಕಾಸು ನೆರವು ನೀಡಲಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಅರ್ಜಿ ಸಲ್ಲಿಸುವ ವಿಧಾನ: ಅರ್ಜಿಯನ್ನು ಆನ್‌ಲೈನ್‌ ಅಥವಾ ನಿಗದಿತ ನಮೂನೆ ಮೂಲಕ ಸಲ್ಲಿಸಬಹುದು. ../ /. ಈ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಆನ್‌ಲೈನ್‌ ಮೂಲಕ ಅರ್ಜಿಯನ್ನು ಭರ್ತಿಮಾಡಬಹುದು. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇದೇ ವೆಬ್‌ಸೈಟ್‌ನಲ್ಲಿ ಇರುವ ಅರ್ಜಿ ಫಾರಂ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಅದಕ್ಕೆ ದೃಢೀಕರಿಸಿದ ಅಗತ್ಯ ದಾಖಲಾತಿ ಪತ್ರಗಳನ್ನು ಲಗತ್ತಿಸಿ ಅಂಚೆ ಮೂಲಕ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು. ವಿದ್ಯಾರ್ಥಿನಿಯರಿಗೆ 1000 ಸ್ಕಾಲರ್‌ಶಿಪ್‌ಗಳು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಎಂಜಿನಿಯರಿಂಗ್‌ ಅಭ್ಯಾಸ ಮಾಡುವ ವಿದ್ಯಾರ್ಥಿನಿಯರಿಗೆ ಮಾತ್ರ ಉದಾನ್‌ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ಸ್ಕಾಲರ್‌ಶಿಪ್‌ ನೀಡಲು ಅರ್ಜಿ ಕರೆದಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 80 ರಷ್ಟು ಅಂಕಗಳನ್ನು ಪಡೆದಿರಬೇಕು. ದ್ವೀತಿಯ ಪಿಯುಸಿಯಲ್ಲಿ ಪಿಸಿಎಂ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ) ನಿಕಾಯದಲ್ಲಿ ಶೇ 75 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ದೇಶದಾದ್ಯಂತ 1000 ಸ್ಕಾಲರ್‌ಶಿಪ್‌ಗಳನ್ನು ನೀಡಲಾಗುವುದು. ಸಾಮಾನ್ಯ ವರ್ಗದವರಿಗೆ 500 ಸ್ಕಾಲರ್‌ಶಿಪ್‌ಗಳು, ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗದವರಿಗೆ 500 ಸ್ಕಾಲರ್‌ಶಿಪ್‌ಗಳನ್ನು ಮೀಸಲಿರಿಸಲಾಗಿದೆ. ಪಿಯುಸಿಯಲ್ಲಿ ಪಡೆದ ಅಂಕಗಳ ಮೆರಿಟ್‌ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಸ್ಕಾಲರ್‌ಶಿಪ್‌ಗೆ ಆಯ್ಕೆ ಮಾಡಲಾಗುವುದು. ಅರ್ಜಿ ತುಂಬುವ ವಿಧಾನ, ವೇತನ, ಅರ್ಹತೆಗಳು, ಷರತ್ತುಗಳು ಸೇರಿದಂತೆ ಹೆಚ್ಚಿನ ಮಾಹಿತಿಗೆ ಈ ://../ ವೆಬ್‌ಸೈಟ್‌ ನೋಡಬಹುದು. ಅರ್ಜಿ ಸಲ್ಲಿಸುವ ಕಡೆಯ ದಿನಾಂಕ: 08–11–2014 ಕಳುಹಿಸಬೇಕಾದ ದಾಖಲಾತಿ ಪತ್ರಗಳ ವಿವರ: ಇತ್ತೀಚಿನ ಪಾಸ್‌ಪೋರ್ಟ್‌ ಅಳತೆಯ ಎರಡು ಭಾವಚಿತ್ರಗಳು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿ, ಆದಾಯ ಪ್ರಮಾಣ ಪತ್ರ ಹಾಗೂ ಕಾಲೇಜಿಗೆ ದಾಖಲಾಗಿರುವ ಬಗ್ಗೆ ಪ್ರಾಂಶುಪಾಲರಿಂದ ಪಡೆದ ದಾಖಲಾತಿ ಪತ್ರವನ್ನು ಲಗತ್ತಿಸಿ ಕಳುಹಿಸಬೇಕು. ಇವುಗಳು ಜೆರಾಕ್ಸ್‌ ಪ್ರತಿಯಲ್ಲಿದ್ದು, ಕೇಂದ್ರ ಅಥವಾ ರಾಜ್ಯ ಸರ್ಕಾರದ ಗೆಜೆಟೆಡ್‌ ಅಧಿಕಾರಿಗಳಿಂದ ದೃಢೀಕರಿಸಿರಬೇಕು. ಇವುಗಳ ಜೊತೆಗೆ 250 ರಿಂದ 300 ಪದಗಳ ಮಿತಿಯಲ್ಲಿ ಪ್ರಬಂಧವನ್ನು ಬರೆದು ಕಳುಹಿಸುವುದು ಕಡ್ಡಾಯ. ‘ನಿಮ್ಮ ಜೀವನದ ಗುರಿ ಮತ್ತು ಅದನ್ನು ನೀವು ಹೇಗೆ ತಲುಪುತ್ತೀರಾ’ ಎಂಬ ವಿಷಯ ಕುರಿತಂತೆ ಪ್ರಬಂಧ ಬರೆಯಬೇಕು. ಇತರೆ ಷರತ್ತುಗಳು *ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರು ಮಾತ್ರ ಅರ್ಜಿಸಲ್ಲಿಸಬೇಕು. *ನಿಖರವಾಗಿ ಭರ್ತಿ ಮಾಡಿರದ ಮತ್ತು ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. *4ಈ ಸ್ಕಾಲರ್‌ಶಿಪ್‌ ಪಡೆಯುವವರು ತಮ್ಮ ವ್ಯಾಸಂಗದ ಜೊತೆಯಲ್ಲೇ ಕಂಪೆನಿಯ ಉತ್ಪನ್ನಗಳನ್ನು ಪ್ರಚಾರ ಮಾಡಬಹುದು. ಅದಕ್ಕಾಗಿ ಪ್ರತ್ಯೇಕ ವೇತನವನ್ನು ನೀಡಲಾಗುವುದು. ಆದರೆ ಇದು ಕಡ್ಡಾಯವಲ್ಲ. ಅಭ್ಯರ್ಥಿಗಳು ಅರ್ಜಿಯನ್ನು ಅಂಚೆ ಮುಖಾಂತರ ಕಳುಹಿಸಲು ಹಾಗೂ ಆನ್‌ಲೈನ್‌ನಲ್ಲಿ ಭರ್ತಿ ಮಾಡಲು ನವೆಂಬರ್‌ 30 ಕೊನೆಯ ದಿನವಾಗಿರುತ್ತದೆ. ನಿಗದಿತ ನಮೂನೆಯ ಅರ್ಜಿಗಳನ್ನು ಫೇರ್‌ ಅಂಡ್‌ ಲವ್ಲಿ ಫೌಂಡೇಶನ್‌, ಹಿಂದೂಸ್ತಾನ್‌ ಯೂನಿಲಿವರ್‌ ಹೌಸ್‌, ಬಿ.ಡಿ. ಸಾವಂತ್‌ ಮಾರ್ಗ, ಚಕಾಲ, ಮುಂಬೈ–400099 ಈ ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದು. (ಎಂಟಿಎನ್‌ಎಲ್‌/ಬಿಎಸ್‌ಎನ್‌ಎಲ್‌) 1800-220-130. ವೆಬ್‌ ವಿಳಾಸ: .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.