ಅಂಧರಿಗೆ ಅಕ್ಷರ ಕಲಿಸುವ ಶಾಲೆ ‘ರಾಜ್ಯದ ಯಾವ ಭಾಗದಲ್ಲಾದರೂ ಅಂಧ ಮಗುವೊಂದು ಅಕ್ಷರ ಕಲಿಯುವ ಹಂಬಲ ಹೊಂದಿದ್ದರೆ, ಮಗುವಿನ ಆಕಾಂಕ್ಷೆಗಳಿಗೆ ಜೀವ ತುಂಬಿ ಸಾಕಾರಗೊಳಿಸಲು ಪ್ರಯತ್ನಿಸುತ್ತೇವೆ. ವಾಸಸ್ಥಳಕ್ಕೆ ನಾವೇ ತೆರಳಿ ಪೋಷಕರು ಅಥವಾ ಸಂಬಂಧಿಕರಿಂದ ನಯಾ ಪೈಸೆ ಹಣ ಅಪೇಕ್ಷಿಸದೇ ಮಗುವನ್ನು ಶಾಲೆಗೆ ಕರೆತರುತ್ತೇವೆ. ಉಚಿತವಾಗಿ ಊಟ, ವಸತಿಯೊಂದಿಗೆ ಮಗುವಿನ ಭವಿಷ್ಯಕ್ಕೆ ಭದ್ರ ತಳಪಾಯ ಹಾಕುತ್ತೇವೆ’. ಹೀಗೆ ಹೇಳುವ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಆಶಾಕಿರಣ ಅಂಧಮಕ್ಕಳ ಉಚಿತ ವಸತಿಯುತ ಶಾಲೆ ಶಿಕ್ಷಕರು ರಾಜ್ಯದ ಉದ್ದಗಲಕ್ಕೂ ಸಂಚರಿಸಿದ್ದಾರೆ, ಕತ್ತಲಲ್ಲೇ ಇದ್ದ ಮಕ್ಕಳಲ್ಲಿ ಬಣ್ಣಬಣ್ಣದ ಕನಸುಗಳನ್ನು ಬಿತ್ತಿದ್ದಾರೆ. ಶ್ರೀಮಂತ ಮತ್ತು ಬಡಮಕ್ಕಳು ಎಂಬ ತಾರತಮ್ಯ ಮಾಡದೇ ಸಮಾನ ಶಿಕ್ಷಣ ನೀಡಿ ಪ್ರಗತಿಯತ್ತ ಹೆಜ್ಜೆ ಹಾಕಲು ಮಾರ್ಗದರ್ಶನ ನೀಡುತ್ತಿದ್ದಾರೆ. ಆಶಾಕಿರಣ ಶಿಕ್ಷಣ ಸಂಸ್ಥೆಯು 1991ರಲ್ಲಿ ಆರಂಭಗೊಂಡಿತಾದರೂ ಅಂಧ ಮಕ್ಕಳಿಗೆಂದೇ 1997ರಲ್ಲಿ ಪ್ರತ್ಯೇಕ ಶಾಲೆ ತೆರೆಯಿತು. 1ರಿಂದ 10ನೇ ತರಗತಿಯವರಗೆ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಾರೆ. ಬ್ರೈಲ್‌ ಲಿಪಿಯಲ್ಲಿ ಶಿಕ್ಷಣ ನೀಡುವುದು, ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಬೆಳಕಿಗೆ ತರಲು ಶ್ರಮಿಸುತ್ತೇವೆ. ಕ್ರೀಡೆ, ಸಂಗೀತ, ಅಧ್ಯಯನ ಯಾವುದೇ ಕ್ಷೇತ್ರವಾಗಿದ್ದರೂ ಅದಕ್ಕೆ ಪೂರಕವಾಗಿ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತೇವೆ. ಸರ್ಕಾರ ಅಥವಾ ಸ್ವಯಂ–ಸೇವಾ ಸಂಸ್ಥೆಗಳ ಸೌಲಭ್ಯ ಒದಗಿಸುತ್ತೇವೆ ಎಂದು ಆಶಾಕಿರಣ ಅಂಧಮಕ್ಕಳ ಉಚಿತ ವಸತಿಯುತ ಶಾಲೆಯ ಸಂಯೋಜಕ ಟಿ.ಎಂ.ಗೋಪಾಲಯ್ಯ ಹೇಳುತ್ತಾರೆ. ಪ್ರತಿ ವರ್ಷವೂ ಶೈಕ್ಷಣಿಕ ಪರೀಕ್ಷೆಗಳಲ್ಲಿ ಮಕ್ಕಳ ಸಾಧನೆ ಗಮನಾರ್ಹವಾಗಿದೆ. ಶೇ 100ರ ಫಲಿತಾಂಶದೊಂದಿಗೆಎಲ್ಲಾ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರೋತ್ಸಾಹಧನ ದೊರೆಯುತ್ತದೆ. ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯು ಸಹ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತದೆ. ಮಕ್ಕಳ ಪ್ರತಿಭೆ ಕಂಡು ದಾನಿಗಳು ಸಹ ನೆರವಿಗೆ ಮುಂದಾಗುತ್ತಾರೆ ಎಂದು ಅವರು ಹೇಳುತ್ತಾರೆ. 2003–04ರ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು 95 ಮಕ್ಕಳು ಶಿಕ್ಷಣ ಪಡೆದಿದ್ದರು. ಸದ್ಯಕ್ಕೆ ಇಲ್ಲಿ 58 ಮಕ್ಕಳಿದ್ದು, ಪುಸ್ತಕ, ಸಮವಸ್ತ್ರ ಸೇರಿದಂತೆ ಇತರ ಅಗತ್ಯ ಸೌಕರ್ಯಗಳನ್ನು ಉಚಿತವಾಗಿ ಒದಗಿಸಿದ್ದೇವೆ. ಅವರ ಬೇಕು–ಬೇಡಗಳಿಗೆ ಸ್ಪಂದಿಸುತ್ತ ಅವರಲ್ಲಿ ಜೀವನೋತ್ಸಾಹ ತುಂಬುತ್ತೇವೆ ಎಂದು ಅವರು ಹೇಳುತ್ತಾರೆ. ಆಸಕ್ತಿಮಯ ವಿಷಯವೆಂದರೆ, ಇಲ್ಲಿನ 6 ಮಂದಿ ಶಿಕ್ಷಕರ ಪೈಕಿ ಐವರು ಅಂಧರಾಗಿದ್ದಾರೆ. ಮಗುವಿನ ಪೋಷಕರು ತುಂಬ ಬಡವರು ಮತ್ತು ನಿರ್ಗತಿಕರಾಗಿದ್ದರೆ, ಕೆಲ ಸಂದರ್ಭಗಳಲ್ಲಿ ಸಂಸ್ಥೆಯವರೇ ಧನಸಹಾಯ ಮಾಡಿ ವಾಪಸ್‌ ಊರಿಗೆ ಹೋಗಲು ವ್ಯವಸ್ಥೆ ಮಾಡುತ್ತಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಾದ ಮೇಲೆ ಮುಂದೇನು ಮಾಡಬೇಕು ಎಂಬ ಗೊಂದಲ ಮಕ್ಕಳಲ್ಲಿದ್ದರೆ ಮಾರ್ಗದರ್ಶನವನ್ನೂ ನೀಡಲಾಗುತ್ತದೆ. ಶಾಲೆ ಸ್ಥಾಪನೆಗೊಂಡು 17 ವರ್ಷಗಳಲ್ಲಿ 300ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆದಿದ್ದು, ಪ್ರತಿಭಾ ಕಾರಂಜಿಯಲ್ಲದೇ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ರಾಜ್ಯಮಟ್ಟದವರೆಗೆ ಉತ್ತಮ ಪೈಪೋಟಿ ನೀಡಿದ್ದಾರೆ. 2013–14ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿನಿ ರಾಧಾ ಶಾಸ್ತ್ರೀಯ ಸಂಗೀತದಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನ ಗಳಿಸಿದ್ದರು. ಬುದ್ಧಿಮಾಂದ್ಯರ ಶಾಲೆಯೂ ಇದೆ ಆಶಾಕಿರಣ ಶಿಕ್ಷಣ ಸಂಸ್ಥೆಯು ಶಿಡ್ಲಘಟ್ಟದ ಹಾನೂರಿನಲ್ಲಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯನ್ನು ನಡೆಸುತ್ತಿದ್ದು, ಅಲ್ಲಿಯೂ ಉಚಿತವಾಗಿ ವಸತಿಯುತ ಶಿಕ್ಷಣ ನೀಡಲಾಗುತ್ತಿದೆ. ಅಂಧ ಮಕ್ಕಳ ಶಾಲೆಯಲ್ಲಿ ಅನುಸರಿಸಲಾಗುವ ನೀತಿ–ನಿಯಮಾವಳಿಗಳನ್ನೇ ಅಲ್ಲಿಯೂ ಸಹ ಪಾಲಿಸಲಾಗುತ್ತದೆ. ಮಗುವಿಗೆ ಆರೋಗ್ಯ ಪರೀಕ್ಷೆಗೆ ಒಳಪಡಿಸಿ, ಅಗತ್ಯ ದಾಖಲೆಪತ್ರಗಳು ಲಭ್ಯವಾದಲ್ಲಿ ದಾಖಲಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ದಾಖಲಾತಿ ಹೇಗೆ? ಪ್ರತಿ ವರ್ಷ ಮೇ ಮತ್ತು ಜೂನ್‌ ತಿಂಗಳಲ್ಲಿ ಶಾಲಾ ದಾಖಲಾತಿ ಪ್ರಕ್ರಿಯೆ ನಡೆಯುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಆಶಾಕಿರಣ ಅಂಧ ಮಕ್ಕಳ ಶಾಲೆಯ ಶಿಕ್ಷಕರು ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ ದಾಖಲಾತಿ ಅಭಿಯಾನ ಕೈಗೊಳ್ಳುತ್ತಾರೆ. ಯಾರಾದರೂ ದೂರವಾಣಿ ಕರೆ ಮೂಲಕ ಅಂಧ ಮಗುವಿನ ಬಗ್ಗೆ ಮಾಹಿತಿ ನೀಡಿದ್ದಲ್ಲಿ, ಆ ಸ್ಥಳಕ್ಕೆ ಭೇಟಿ ನೀಡಿ ಪೋಷಕರೊಂದಿಗೆ ಚರ್ಚಿಸಿ ಮಗುವಿನ ಶಿಕ್ಷಣಕ್ಕೆ ದಾಖಲಾತಿ ಪ್ರಕ್ರಿಯೆ ಕೈಗೊಳ್ಳುತ್ತಾರೆ. ಶಾಲೆಗೆ ದಾಖಲಿಸಿಕೊಳ್ಳುವ ಮುನ್ನ ಆರೋಗ್ಯ ಪರೀಕ್ಷೆಯೊಂದಿಗೆ ಅಂಧತ್ವದ ಪ್ರಮಾಣ ಖಾತ್ರಿ ಮಾಡಿಕೊಳ್ಳಲಾಗುತ್ತದೆ. ಒಂಟಿ ಕಣ್ಣು ಅಂಧರಿಗೆ ಇಲ್ಲಿ ದಾಖಲಾತಿಗೆ ಅವಕಾಶವಿಲ್ಲ. ದಾಖಲಾತಿ ವೇಳೆ ಪಡಿತರ ಚೀಟಿ, ಆದಾಯ ಮತ್ತು ಜಾತಿ ಪ್ರಮಾಣಪತ್ರ ಅವಶ್ಯಕ. ಇದಲ್ಲದೇ ಮಗುವಿನ 3 ಭಾವಚಿತ್ರ ಬೇಕು. ಮಗುವನ್ನು ದಾಖಲಿಸಿಕೊಂಡ ನಂತರ ಪ್ರತಿಭೆ ಮತ್ತು ಶೈಕ್ಷಣಿಕ ಆಸಕ್ತಿಯನ್ನು ಗಮನಿಸಿ ಸೂಕ್ತ ತರಗತಿಗೆ ದಾಖಲಿಸಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9449314250. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.