ಹೆಚ್ಚಿನ ಓದಿಗೆ ಇಂಡಿಯನ್‌ ಆಯಿಲ್‌ ಬೆಂಬಲ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರಗಳು ಮಾಡುತ್ತಿರುವ ಕೆಲಸದಷ್ಟೇ ಸ್ವಯಂ ಸೇವಾ ಸಂಸ್ಥೆಗಳು ಕೂಡ ಕೆಲಸ ಮಾಡುತ್ತಿವೆ. ಸರ್ಕಾರೇತರ ಮತ್ತು ಕಾರ್ಪೊರೇಟ್‌ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪೆನಿಗಳು, ವಿವಿಧ ಕಾರ್ಖಾನೆಗಳು ಈ ನಿಟ್ಟಿನಲ್ಲಿ ಕಾರ್ಯನಿವರ್ಹಿಸುತ್ತಿವೆ. ಶಾಲಾ ಕಾಲೇಜುಗಳ ಸ್ಥಾಪನೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ಕೌಶಲ ಅಭಿವೃದ್ಧಿ ತರಬೇತಿ, ವಿದ್ಯಾರ್ಥಿ ವೇತನ ಸೇರಿದಂತೆ ಹಲವಾರು ಶೈಕ್ಷಣಿಕ ಸುಧಾರಣೆ ಕೆಲಸಗಳಲ್ಲಿ ತೊಡಗಿವೆ. ದೇಶದ ಅತಿ ದೊಡ್ಡ ತೈಲ ಕಂಪೆನಿಯಾಗಿರುವ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಹಲವು ವರ್ಷಗಳಿಂದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಸ್ಕಾಲರ್‌ಶಿಪ್‌ ನೀಡುತ್ತಿದೆ. 2014–15ನೇ ಸಾಲಿನ ಸ್ಕಾಲರ್‌ಶಿಪ್‌ಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ವರ್ಷ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ 2600 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಲಾಗುತ್ತಿದ್ದು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪಿಯುಸಿ, ಐಟಿಐ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಐಒಸಿ ಎರಡು ವಿಭಾಗಗಳಲ್ಲಿ ವಿದ್ಯಾರ್ಥಿ ವೇತನ ನೀಡುತ್ತಿದೆ. ಪಿಯುಸಿ ಮತ್ತು ಐಟಿಐ ಓದುತ್ತಿರುವ 2000 ವಿದ್ಯಾರ್ಥಿಗಳಿಗೆ ಹಾಗೂ ಎಂಜಿನಿಯರಿಂಗ್‌, ಮೆಡಿಕಲ್‌, ಎಂಬಿಎ ಓದುತ್ತಿರುವ 600 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಲಾಗುತ್ತಿದೆ. ಪಿಯುಸಿ/ಐಟಿಐ ವಿದ್ಯಾರ್ಥಿ ವೇತನ... 2013–14ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಮಾತ್ರ ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳು ಶೇಕಡಾ 65ರಷ್ಟು ಅಂಕಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ಮಹಿಳೆಯರು ಶೇಕಡಾ 60 ಅಂಕಗಳು, ಅಂಗವಿಕಲರು ಶೇಕಡಾ 50ರಷ್ಟು ಅಂಕಗಳನ್ನು ಕಡ್ಡಾಯವಾಗಿ ಪಡೆದಿರಬೇಕು. ಮೊದಲ ವರ್ಷದ ಪಿಯುಸಿ ಅಥವಾ ತತ್ಸಮಾನ ಅಥವಾ ಐಟಿಐನಲ್ಲಿ ಓದುತ್ತಿರಬೇಕು. 2000 ವಿದ್ಯಾರ್ಥಿಗಳಿಗೆ ಎರಡು ವರ್ಷದವರೆಗೆ ಮಾತ್ರ ಈ ಸ್ಕಾಲರ್‌ಶಿಪ್‌ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ಲಭಿಸುವುದು. ಇತರೆ ಖರ್ಚು ವೆಚ್ಚಗಳನ್ನು ನೀಡಲಾಗುವುದಿಲ್ಲ. ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದಿರುವ ಅಂಕಗಳು, ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಹಿನ್ನೆಲೆ, ವಾಸವಾಗಿರುವ ರಾಜ್ಯ, ಜಿಲ್ಲೆಯನ್ನು ಪರಿಗಣಿಸಿ ಸ್ಕಾಲರ್‌ಶಿಪ್‌ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪದವಿ ಮತ್ತು ಸ್ನಾತಕೋತ್ತರ ಪದವಿ ಸ್ಕಾಲರ್‌ಶಿಪ್‌... ತಾಂತ್ರಿಕ ಪದವಿ, ಮೆಡಿಕಲ್‌, ಎಂಬಿಎ ವ್ಯಾಸಂಗ ಮಾಡುತ್ತಿರುವ 600 ವಿದ್ಯಾರ್ಥಿಗಳಿಗೆ ಮಾತ್ರ ಈ ಸ್ಕಾಲರ್‌ಶಿಪ್‌ ನೀಡಲಾಗುವುದು. ಅಭ್ಯರ್ಥಿಗಳು ಕಡ್ಡಾಯವಾಗಿ ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರಬೇಕು. ಎಂಜಿನಿಯರಿಂಗ್‌ ಮತ್ತು ಎಂಬಿಬಿಎಸ್‌ ಓದುತ್ತಿರುವ ವಿದ್ಯಾರ್ಥಿಗಳು ಪಿಯುಸಿ ಹಾಗೂ ಎಂಬಿಎ ಓದುತ್ತಿರುವ ವಿದ್ಯಾರ್ಥಿಗಳು ಪದವಿಯಲ್ಲಿ ಐಒಸಿ ನಿಗದಿ ಪಡಿಸಿರುವ ಅಂಕಗಳ ಮಿತಿಯೊಂದಿಗೆ ಉತ್ತೀರ್ಣರಾಗಿ­ರಬೇಕು. ಸಾಮಾನ್ಯ ವರ್ಗದವರು ಶೇಕಡಾ 65, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ಮಹಿಳೆಯರು ಶೇಖಡಾ 60, ಅಂಗವಿಕಲರು ಶೇಕಡಾ 50ರಷ್ಟು ಅಂಕಗಳನ್ನು ಪಡೆದಿರಬೇಕು. ಎಂಜಿನಿಯರಿಂಗ್‌ ಮತ್ತು ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳವರೆಗೆ ಮಾಸಿಕ 3000 ರೂಪಾಯಿ ನೀಡಲಾಗುವುದು. ಎಂಬಿಎ ಓದುತ್ತಿರುವ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಮಿತಿಯಲ್ಲಿ ಮಾಸಿಕ 3000 ರೂಪಾಯಿ ಲಭಿಸುವುದು. ಒಟ್ಟು 600 ಸ್ಕಾಲರ್‌ಶಿಪ್‌ಗಳಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ 300, ಮೆಡಿಕಲ್‌ ವಿದ್ಯಾರ್ಥಿಗಳಿಗೆ 200 ಮತ್ತು ಎಂಬಿಎ ವಿದ್ಯಾರ್ಥಿಗಳಿಗೆ 100 ಸ್ಕಾಲರ್‌ಶಿಪ್‌ಗಳನ್ನು ನೀಡಲಾಗುವುದು. ಸಾಮಾನ್ಯ ಅರ್ಹತೆಗಳು... ಐಒಸಿ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವವರ ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ರೂಪಾಯಿ ಮೀರುವಂತಿಲ್ಲ. ಕನಿಷ್ಠ 15, ಗರಿಷ್ಠ 30 ವರ್ಷ ಮಯೋಮಿತಿ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಪ.ಜಾತಿ, ಪ.ಪಂಗಡ ವಿದ್ಯಾರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗದವರಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ದೂರಶಿಕ್ಷಣ, ಅಂಚೆ ಮತ್ತು ತೆರಪಿನ ಹಾಗೂ ಆನ್‌ಲೈನ್‌ ಶಿಕ್ಷಣದಲ್ಲಿ ಉರ್ತ್ತೀಣರಾದವರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಸುವ ವಿಧಾನ ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ ಮುಖಾಂತರವೇ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 30 ಕೊನೆಯ ದಿನವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಪ್ರಿಂಟೌಟ್‌ ಪ್ರತಿಯನ್ನು ತೆಗೆದಿರಿಸಿಕೊಳ್ಳಬೇಕು. ನಂತರ ಅಗತ್ಯ ದಾಖಲೆ ಪತ್ರಗಳಾದ ಅಂಕಪಟ್ಟಿ, ಕಾಲೇಜಿನ ದಾಖಲಾತಿ ಪತ್ರ, ವರಮಾನ ಮತ್ತು ಜಾತಿ ಪ್ರಮಾಣ ಪತ್ರ, ಅಂಗವಿಕಲರ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಭರ್ತಿ ಮಾಡಿರುವ ಪ್ರಿಂಟೌಟ್‌ ಅರ್ಜಿಗೆ ಲಗತ್ತಿಸಿ ಅಕ್ಟೋಬರ್‌ 15ನೇ ತಾರೀಖಿನೊಳಗೆ ‘ಸಿಫಿ ಟೆಕ್ನಾಲಜಿ ಲಿಮಿಟೆಡ್‌, (ಐಒಸಿಎಲ್‌ ಇಎಸ್‌ಎಸ್‌ ವಿಭಾಗ) ಪ್ಲಾಟ್‌ ಸಂಖ್ಯೆ ಬಿ7, ಸೆಕ್ಟರ್‌-132, ನೊಯಿಡಾ-201301 ಉತ್ತರ ಪ್ರದೇಶ’ ಈ ವಿಳಾಸಕ್ಕೆ ರಿಜಿಸ್ಟರ್ಡ್‌ ಪೊಸ್ಟ್‌ ಅಥವಾ ಸ್ಪೀಡ್‌ ಪೊಸ್ಟ್‌ ಮುಖಾಂತರ ಕಳುಹಿಸಿಕೊಡಬೇಕು. ಅರ್ಜಿಯನ್ನು ಭರ್ತಿ ಮಾಡಲು ಹಾಗೂ ಹೆಚ್ಚಿನ ಮಾಹಿತಿಗಾಗಿ ://.. ಅಥವಾ ://..//. ವೆಬ್‌ಸೈಟ್‌ ನೋಡುವುದು. (ಮುಂದಿನ ವಾರ; ಅಜೀಂ ಪ್ರೇಮ್‌ಜೀ ಫೌಂಡೇಶನ್‌ ಫೆಲೋಶಿಪ್‌) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.