ಬಡ ವಿದ್ಯಾರ್ಥಿಗಳಿಗೆ ಎಲ್‌ಐಸಿ ನೆರವು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ವು ಕೇವಲ ವಿಮೆ ಮಾಡಿಸಿಕೊಳ್ಳುವ ಹಣಕಾಸು ವ್ಯವಹಾರದ ಕೆಲಸಗಳಿಗೆ ಮಾತ್ರ ಸೀಮಿತವಾಗದೆ ಸಮಾಜ ಮತ್ತು ಸಮುದಾಯದ ಅಭಿವೃದ್ಧಿಗೂ ತನ್ನದೆ ಆದ ಕೊಡುಗೆಯನ್ನು ನೀಡುತ್ತ ಬಂದಿದೆ. ಶಿಕ್ಷಣ, ಸಮುದಾಯ, ಮೂಲ ಸೌಕರ್ಯ, ಕುಡಿಯುವ ನೀರು, ಆರೋಗ್ಯ ಮತ್ತು ನೈರ್ಮಲ್ಯ ಸೇರಿದಂತೆ ಇತರ ವಲಯಗಳ ಅಭಿವೃದ್ಧಿಗೆ ಹಣಕಾಸು ನೆರವು ನೀಡುತ್ತಿದೆ.. ಎಲ್‌ಐಸಿ ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ ಆರಂಭಿಸಿದ ಸುವರ್ಣ ಮಹೋತ್ಸವ ಫೌಂಡೇಷನ್‌ ಮೂಲಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತ ದೇಶದ ಸಮಗ್ರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿದೆ. ಎಲ್‌ಐಸಿ ಇತರ ಸೇವಾ ವಲಯಕ್ಕಿಂತಲೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹಣಕಾಸು ನೆರವು ನೀಡುತ್ತ ಬರುತ್ತಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಲ್‌ಐಸಿ ಸುವರ್ಣ ಮಹೋತ್ಸವ ಸ್ಕಾಲರ್‌ಶಿಪ್‌ (ಗೋಲ್ಡನ್‌ ಜ್ಯುಬಿಲಿ) ನೀಡುತ್ತಿದೆ. ಗ್ರಾಮೀಣ ಮತ್ತು ಚಿಕ್ಕ ಪಟ್ಟಣ ವಾಸಿ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಹಣಕಾಸು ನೆರವು ನೀಡುವುದು ಇದರ ಉದ್ದೇಶ. ಆ ಮೂಲಕ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳಾಗಿ ಅಥವಾ ಉದ್ಯೋಗಿಗಳನ್ನಾಗಿ ರೂಪಿಸುವುದು ಈ ಸ್ಕಾಲರ್‌ಶಿಪ್‌ನ ಮುಖ್ಯ ಧ್ಯೇಯ. ಡಿಪ್ಲೊಮಾ ಮತ್ತು ಪದವಿ ಓದುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ ಯೋಜನೆಯ ಸೌಲಭ್ಯ ಪಡೆಯಬಹುದು. ಅರ್ಹತೆಗಳು: ಇದು ರಾಷ್ಟ್ರೀಯ ಸ್ಕಾಲರ್‌ಶಿಪ್‌ ಯೋಜನೆ ಆಗಿರುವುದರಿಂದ ಭಾರತದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ. ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ. ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳು/ ವಿಶ್ವವಿದ್ಯಾಲಯಗಳು, ತಾಂತ್ರಿಕ, ವೃತ್ತಿಪರ ಮತ್ತು ಕೈಗಾರಿಕ ತರಬೇತಿ ಸಂಸ್ಥೆಗಳಲ್ಲಿ ಡಿಪ್ಲೊಮಾ ಹಾಗೂ ಪದವಿ ಮಟ್ಟದ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. 2013–2014ನೇ ಸಾಲಿನಲ್ಲಿ ಪದವಿ ಮಟ್ಟದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಶೇ 60ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಡಿಪ್ಲೊಮಾ ಅಥವಾ ಇತರ ವೃತ್ತಿಪರ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಶೇ 60ರಷ್ಟು ಅಂಕಗಳನ್ನು ಪಡೆದಿರಬೇಕು. ಡಿಪ್ಲೊಮಾ, ಕೈಗಾರಿಕ ತರಬೇತಿ ಕೋರ್ಸ್‌ಗಳು, ಮೆಡಿಕಲ್‌, ಮೆಡಿಸಿನ್‌, ಎಂಜಿನಿಯರಿಂಗ್‌, ಕಲಾ/ವಿಜ್ಞಾನ/ವಾಣಿಜ್ಯ ಪದವಿ, ಇತರೆ ತಾಂತ್ರಿಕ/ ವೃತ್ತಿಪರ ಪದವಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅವಧಿ ಮತ್ತು ವೇತನ: ಈ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗುವ ಅಭ್ಯರ್ಥಿಗಳ ಕೋರ್ಸ್‌ ಮುಗಿಯುವವರೆಗೂ ಹಣಕಾಸು (ವಿದ್ಯಾರ್ಥಿ ವೇತನ) ನೆರವು ನೀಡಲಾಗುತ್ತದೆ. ವಾರ್ಷಿಕ 10 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ಲಭಿಸುವುದು. ಪ್ರತಿ ತಿಂಗಳು ಒಂದು ಸಾವಿರ (ಹತ್ತು ತಿಂಗಳಿಗೆ ಅನ್ವಯವಾಗುವಂತೆ) ರೂಪಾಯಿಗಳನ್ನು ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದವರು ತಮ್ಮ ಬ್ಯಾಂಕ್‌ ಖಾತೆಯ ವಿವರ ಮತ್ತು ಐಎಫ್‌ಎಸ್‌ಸಿ ಕೋಡ್‌ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಷರತ್ತುಗಳು: ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ತಂದೆ ತಾಯಿ/ಪೋಷಕರ ವಾರ್ಷಿಕ ವರಮಾನ ಎಲ್ಲಾ ಮೂಲಗಳಿಂದಲೂ 1ಲಕ್ಷ ರೂಪಾಯಿ ಮಿತಿಯೊಳಗೆ ಇರಬೇಕು. ವಿದ್ಯಾರ್ಥಿಗಳು ಪಡೆದ ಅಂಕಗಳು, ಕೌಟುಂಬಿಕ ಹಿನ್ನೆಲೆ, ವರಮಾನವನ್ನು ಆಧರಿಸಿ ಸ್ಕಾಲರ್‌ಶಿಪ್‌ಗೆ ಆಯ್ಕೆ ಮಾಡಲಾಗುವುದು. ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದವರು ವೃತ್ತಿಪರ ಮತ್ತು ತಾಂತ್ರಿಕ ವಿಭಾಗದ ಕೊರ್ಸ್‌ಗಳಲ್ಲಿ ಶೇ 55ರಷ್ಟು ಅಂಕಗಳು, ಇತರೆ ಪದವಿಯವರು ಶೇ 50ರಷ್ಟು ಅಂಕಗಳೊಂದಿಗೆ ಪ್ರತಿ ವರ್ಷ ಉತ್ತೀರ್ಣರಾಗಬೇಕು. ಒಂದು ವೇಳೆ ಅನುತ್ತೀರ್ಣಗೊಂಡರೆ ಅಂತಹವರ ಸ್ಕಾಲರ್‌ಶಿಪ್‌ ನಿಲ್ಲಿಸಲಾಗುವುದು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸ್ಕಾಲರ್‌ಶಿಪ್‌ ನೀಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳು ಉತ್ತಮ ಹಾಜರಾತಿಯನ್ನು ಹೊಂದಿರಬೇಕು. ಪ್ರತಿ ವರ್ಷ ಹಾಜರಾತಿ ಪತ್ರವನ್ನು ಸಂಬಂಧಪಟ್ಟ ಕಾಲೇಜುಗಳ ಪ್ರಾಚಾರ್ಯರಿಂದ ಪಡೆದು ಲಗತ್ತಿಸಬೇಕು. ವಿದ್ಯಾರ್ಥಿಗಳು ನಿಗದಿತ ನಮೂನೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಎಲ್‌ಐಸಿ ಸುವರ್ಣ ಮಹೋತ್ಸವ ಸ್ಕಾಲರ್‌ಶಿಪ್‌ ಯೋಜನೆಯ ನಿಯಮ ಮತ್ತು ನಿಬಂಧನೆಗಳಿಗೆ ಬದ್ಧರಾಗಿರಬೇಕು. ನೀತಿ ನಿಯಮಗಳನ್ನು ಉಲ್ಲಂಘಿಸುವ ಅಭ್ಯರ್ಥಿಗಳ ಸ್ಕಾಲರ್‌ಶಿಪ್‌ ಅನ್ನು ರದ್ದುಗೊಳಿಸಲಾಗುವುದು. ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮುಖಾಂತರವೇ ಅರ್ಜಿ ಸಲ್ಲಿಸಬೇಕು. ಇತರೆ ವಿಧಾನದ ಮೂಲಕ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಎಲ್‌ಐಸಿ ಇಂಡಿಯಾದ ವೆಬ್‌ಸೈಟ್‌ಗೆ ಲಾಗಿನ್‌ ಆಗಬೇಕು. ಹೋಮ್‌ ಪೇಜ್‌ನಲ್ಲಿ (ಮುಖಪುಟ) ಕಾಣುವ ಆನ್‌ಲೈನ್‌ ಅರ್ಜಿಯನ್ನು ಕ್ಲಿಕ್ಕಿಸಿ ಭರ್ತಿ ಮಾಡಬೇಕು. ಅರ್ಜಿ ತುಂಬಿದ ಬಳಿಕ ಆನ್‌ಲೈನ್‌ ಅರ್ಜಿಯ ಸ್ವೀಕೃತಿ ಪತ್ರ ಅಭ್ಯರ್ಥಿಗಳ ಇಮೇಲ್‌ಗೆ ಬರುತ್ತದೆ. ಮುಂದಿನ ಹಂತದ ಪ್ರಕ್ರಿಯೆಗಳು ಜಿಲ್ಲೆಗಳ ವಿಭಾಗವಾರು ಎಲ್‌ಐಸಿ ಶಾಖಾ ಕಚೇರಿಗಳಲ್ಲಿ ನಡೆಯುತ್ತವೆ. ಆನ್‌ಲೈನ್‌ ಅರ್ಜಿಯನ್ನು ಸೆಪ್ಟೆಂಬರ್‌ 23ನೇ ದಿನಾಂಕದೊಳಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ವೆಬ್‌ ವಿಳಾಸ ../gjf_scholarship. ಇದಾಗಿದೆ. ಈ ಸ್ಕಾಲರ್‌ಶಿಪ್‌ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಆಯಾ ಜಿಲ್ಲೆಗಳ ವಿಭಾಗವಾರು ಎಲ್‌ಐಸಿ ಕಚೇರಿಗಳಲ್ಲಿ ಅಥವಾ .. ಈ ವೆಬ್‌ ವಿಳಾಸದಲ್ಲಿ ಪಡೆಯಬಹುದು. ಮುಂದಿನವಾರ: ಟಾಟಾ ಫೌಂಡೇಷನ್‌ ಸ್ಕಾಲರ್‌ಶಿಪ್‌ ಮತ್ತು ಫೆಲೋಶಿಪ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.