ಮಾತೃಭಾಷೆಯಿಂದಲೇ ಯಶಸ್ಸು ಗುರುದತ್ತ ಹೆಗಡೆ, ಧಾರವಾಡದವರು. ಯುಪಿಎಸ್ಸಿಯಲ್ಲಿ 25ನೇ ರ‍್ಯಾಂಕ್. ಕರ್ನಾಟಕಕ್ಕೆ ಪ್ರಥಮ ರ‍್ಯಾಂಕ್ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಬರೆದವರಲ್ಲಿಯೇ ಹೆಚ್ಚು ಅಂಕ ಪಡೆದಿದ್ದಾರೆ. ಇವರ ಒಟ್ಟು ಅಂಕ 972. "ಪ್ರಜಾವಾಣಿ" ಕೇಳಿದ ಪುಟ್ಟ ಪ್ರಶ್ನೆಗಳಿಗೆ ಗುರುದತ್ತ ಅವರು ನೀಡಿದ ಸ್ಫೂರ್ತಿದಾಯಕಗಳು ಇಲ್ಲಿವೆ. *ನಿಮಗೆ ನಾಗರಿಕ ಸೇವೆಯ ಕಡೆಗೆ ಆಸಕ್ತಿ ಬರಲು ಪ್ರೇರಣೆ ಯಾರು? ನಾನು ಪದವಿಯಲ್ಲಿ ಓದುತ್ತಿದ್ದಾಗ ಡೈನಾಮಿಕ್ ನಿರ್ಧಾರ ತೆಗೆದುಕೊಳ್ಳುವ ಮಣಿವಣ್ಣನ್್ ಮತ್ತು ದರ್ಪಣ್ ಜೈನ್‌ ಅವರಂತಹ ಐಎಎಸ್‌ ಅಧಿಕಾರಿಗಳೇ ನನಗೆ ಪ್ರೇರಣೆ. *ನಿಮ್ಮ ವೈಯಕ್ತಿಕ ಹಿನ್ನೆಲೆ ತಿಳಿಸಿ? ನನ್ನ ತಂದೆ ‘ಪ್ರಜಾವಾಣಿ’ ಪ್ರೆಸ್‌ನಲ್ಲಿ ಕಾರ್ಮಿಕರ ಗುತ್ತಿಗೆದಾರ, ತಾಯಿ ಧಾರವಾಡ ಕೆ.ಇ.ಬೋರ್ಡ್‌ ಶಾಲೆಯ ಶಿಕ್ಷಕಿ. ನಾನು ಬೆಂಗಳೂರಿನ ಆರ್‌.ವಿ. ದೇಶಪಾಂಡೆ ಕಾಲೇಜಿನಲ್ಲಿ ಇ ಅಂಡ್‌ ಸಿಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದೇನೆ. *ನಿಮ್ಮ ಪರೀಕ್ಷೆಯ ಸಿದ್ಧತೆಯ ಬಗ್ಗೆ ತಿಳಿಸಿ? ಈ ಪರೀಕ್ಷೆಯಲ್ಲಿ ವಿಷಯ ಸಂಗ್ರಹವೇ ಪ್ರಮುಖ ಮೈಲಿಗಲ್ಲು. ಏಕೆಂದರೆ ಕೇವಲ ಮಾರುಕಟ್ಟೆಯಲ್ಲಿ ಸಿಗುವ ಪುಸ್ತಕ ತೆಗೆದುಕೊಂಡು ಕುಳಿತರೆ ಯಶಸ್ಸು ಸಾಧ್ಯವಿಲ್ಲ. ಸಂಗ್ರಹಿಸಿದ ಮಾಹಿತಿಯನ್ನು ವ್ಯವಸ್ಥಿತವಾಗಿ ಹೊಂದಿಸಿ, ಉತ್ತಮ ಉಪನ್ಯಾಸಕರು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾದ ವ್ಯಕ್ತಿಗಳೊಂದಿಗೆ ಚರ್ಚಿಸಬೇಕು. ಇದರಿಂದ ಯಾವುದನ್ನು ಓದಬೇಕು ಎಂದು ತಿಳಿಯುತ್ತದೆ. ಯಾವ ಪುಸ್ತಕ ಓದಬೇಕು ಎಂದು ತಿಳಿದರೆ ಅಲ್ಲಿಗೆ ಅರ್ಧ ಕೆಲಸ ಮುಗಿದಂತೆ. ನಾನು ಕನ್ನಡ ಸಾಹಿತ್ಯ ತೆಗೆದುಕೊಂಡೆ. ನಮ್ಮ ಆಸಕ್ತಿ, ವಿಷಯ ಸಂಗ್ರಹ ಗಮನದಲ್ಲಿಟ್ಟು ವಿಷಯ ಆಯ್ಕೆ ಮಾಡಬೇಕು. ಆಯ್ಕೆ ಮಾಡುವ ಮುನ್ನ ಪಠ್ಯಕ್ರಮ ಪರಾಮರ್ಶಿಸುವುದು ಸೂಕ್ತ. *ನೀವು ಯಾವ ಪರೀಕ್ಷಾ ಮಾಧ್ಯಮದಲ್ಲಿ ಬರೆದ್ರಿ, ಯಾವ ಮಾಧ್ಯಮ ಸೂಕ್ತ? ಹೆಚ್ಚು ಅಂಕ ಪಡೆಯುವಲ್ಲಿ ಮಾಧ್ಯಮ ಪಾತ್ರವಿಲ್ಲ. ಇಂಗ್ಲಿಷ್‌ನಲ್ಲಿ ಬರೆದರೆ ಜಾಸ್ತಿ ಅಂಕ, ಪ್ರಾದೇಶಿಕ ಭಾಷೆಯಲ್ಲಿ ಬರೆದರೆ ಕಡಿಮೆ ಅಂಕವೆಂದು ಇಲ್ಲ. ನಾನು ಆರಂಭದ ಎರಡು ಪ್ರಯತ್ನಗಳನ್ನು ಇಂಗ್ಲಿಷ್‌ನಲ್ಲಿ ಬರೆದೆ. ಆದರೆ ಮೂರನೇ ಪ್ರಯತ್ನದಲ್ಲಿ, ಕನ್ನಡ ಸಾಹಿತ್ಯದ ಬರವಣಿಗೆಯಿಂದ ಕನ್ನಡ ಬರವಣಿಗೆ ಶೈಲಿ ಸುಧಾರಣೆಯಾಗಿದ್ದರಿಂದ ಕನ್ನಡ ಮಾಧ್ಯಮದಲ್ಲಿ ಬರೆದೆ. ನಮ್ಮ ಅಭಿವ್ಯಕ್ತಿ ಸಾಮರ್ಥ್ಯ ಉತ್ತಮವಾಗಿರುವ ಮಾಧ್ಯಮದಲ್ಲಿ ಬರೆಯುವುದು ಸೂಕ್ತ. *ಪೂರ್ವಭಾವಿ ಪರೀಕ್ಷೆಗೆ ಯಾವ ರೀತಿಯ ಅಭ್ಯಾಸ ಕ್ರಮ ಅಳವಡಿಸಿಕೊಂಡಿರಿ? ನಾನು ಪೂರ್ವಭಾವಿ ಪರೀಕ್ಷೆಗಾಗಿ ಪ್ರತ್ಯೇಕವಾಗಿ ಎಂದೂ ಅಭ್ಯಾಸ ಮಾಡಿಲ್ಲ. ಪರೀಕ್ಷೆ ಸಮೀಪಿಸಿದ ಎರಡರಿಂದ ಮೂರು ತಿಂಗಳು CSATಗಾಗಿ ಪ್ರತಿದಿನ ಮೂರು–ನಾಲ್ಕು ತಾಸು ಅಪ್ಟಿಟ್ಯೂಡ್‌ ಸಮಸ್ಯೆಗಳನ್ನು ಮತ್ತು ಇಂಗ್ಲಿಷ್‌ ಕಾಂಪ್ರಹೆನ್ಷೆನ್‌ ಮಾದರಿ ಬಿಡಿಸುತ್ತಿದ್ದೆ. *ಮುಖ್ಯ ಪರೀಕ್ಷೆಗೆ ಯಾವ ರೀತಿಯ ಅಭ್ಯಾಸ ಕ್ರಮ ರೂಢಿಸಿಕೊಂಡಿದ್ದಿರಿ? ಮುಖ್ಯ ಪರೀಕ್ಷೆಯಲ್ಲಿ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವ ಅಳೆಯಲಾಗುತ್ತದೆ. ಇಲ್ಲಿ ಯಾವುದೇ ಒಂದು ವಿಷಯ ಪ್ರಾಮುಖ್ಯತೆ ಪಡೆಯವುದಿಲ್ಲ, ಎಲ್ಲ ವಿಷಯಗಳು ಸಮಾನ. ಕಠಿಣವೆನಿಸಿದ ಸಮಸ್ಯೆಗಳನ್ನು ಆಸಕ್ತಿಯಿಂದ ಓದಬೇಕು. ಮುಖ್ಯ ಪರೀಕ್ಷೆಯ ಉತ್ತರಗಳು ಅನ್ವಯಾತ್ಮಕವಾಗಿರಬೇಕಾಗಿರುವುದರಿಂದ ವಿಷಯವನ್ನು ವಸ್ತುನಿಷ್ಠ, ವಿಶ್ಲೇಷಣಾತ್ಮಕ, ರಚನಾತ್ಮಕ, ಧನಾತ್ಮಕ ಮತ್ತು ಅಭಿಪ್ರಾಯ ಆಧಾರಿತವಾಗಿ ಬರೆಯಬೇಕು. ಈ ನಿಟ್ಟಿನಲ್ಲಿ ಸರಿಯಾದ ಯೋಜನೆ ಹಾಕಿಕೊಂಡು ಅಭ್ಯಾಸ ಮಾಡಬೇಕು. ಆರಂಭದಲ್ಲಿ ಪುಸ್ತಕ ಓದುವುದು ಸೂಕ್ತ. *ಋಣಾತ್ಮಕ ಅಂಕ ಮತ್ತು ಸಮಯ ನಿರ್ವಹಣೆ ಹೇಗೆ ಮಾಡಿದಿರಿ? ಪೂರ್ವಭಾವಿ ಪರೀಕ್ಷೆಯಲ್ಲಿ ಋಣಾತ್ಮಕ ಅಂಕ ಇರುವುದರಿಂದ ಗೊತ್ತಿದ್ದ ಪ್ರಶ್ನೆಗೆ ಉತ್ತರಿಸಬೇಕು. ಪರೀಕ್ಷೆ ಸಮೀಪಿಸಿದ ಮೂರು ತಿಂಗಳು ನಿರಂತರವಾಗಿ ಅಭ್ಯಾಸ ಮಾಡಿದರೆ, ಸಮಯ ನಿರ್ವಹಿಸಬಹುದು. ಎಲ್ಲ ಸರಳ ಪ್ರಶ್ನೆಗಳಿಗೂ ಉತ್ತರಿಸಿದ ನಂತರ ಕಠಿಣ ಪ್ರಶ್ನೆಗೆ ಆದ್ಯತೆ ನೀಡಬೇಕು. ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಬರೆಯುವುದಕ್ಕಿಂತ, ಉತ್ತರಗಳನ್ನು ನಿಖರವಾಗಿ, ಸಂಕ್ಷಿಪ್ತವಾಗಿ ಬರೆದು ಸಮಯ ನಿರ್ವಹಿಸಬಹುದು. *ಪ್ರಚಲಿತ ಘಟನೆಗೆ ಸಂಬಂಧಿಸಿದಂತೆ ಹೇಗೆ ತಯಾರಿ ಮಾಡಿದಿರಿ? ದಿ ಹಿಂದೂ ಮತ್ತು ‘ಪ್ರಜಾವಾಣಿ’ಯಲ್ಲಿಯ ಪ್ರಚಲಿತ ಘಟನೆಗಳ ಸಂಬಂಧಿ ಲೇಖನಗಳನ್ನು ಮತ್ತು ಅಂಕಣಗಳ ಪ್ರತಿಯನ್ನು ಕಂಪ್ಯೂಟರ್‌ನಲ್ಲಿ ತೆಗೆದಿರಿಸುತ್ತಿದ್ದೆ. ಫ್ರಂಟ್‌ಲೈನ್‌, ಯೋಜನಾ, ಎಕನಾಮಿಕ್‌ ಅಂಡ್‌ ಪೊಲಿಟಿಕಲ್‌ ವೀಕ್್ಲಿ, ಸೈನ್ಸ್‌ ರಿಪೋರ್ಟರ್‌, ಡೌನ್‌ ಟು ಅರ್ಥ್‌ ಮುಂತಾದ ಸಂಚಿಕೆಗಳನ್ನೂ ಓದುತ್ತಿದ್ದೆ. *ಇಂಗ್ಲಿಷ್‌ ಕಾಂಪ್ರಿಹೆನ್ಷನ್‌ ಗ್ರಹಿಸುವುದು ಹೇಗೆ? ನಿರಂತರವಾಗಿ ಇಂಗ್ಲಿಷ್‌ ದಿನಪತ್ರಿಕೆ ಓದುತ್ತಿದ್ದರೆ, ಕಾಂಪ್ರಿಹೆನ್ಷನ್‌ ಕಷ್ಟವಾಗುವುದಿಲ್ಲ. ಆದರೆ ಓದುವಾಗ ವಿಶ್ಲೇಷಣಾತ್ಮಕವಾಗಿ ಓದುತ್ತಾ ಹೋಗಬೇಕು. ಇದಕ್ಕೆ ಅಭ್ಯಾಸವೇ ಪರಿಹಾರ. ತಯಾರಿ ನಡೆಸುವವರು ಈ ವಿಷಯ ಕಠಿಣ ಎಂಬುದನ್ನು ಮೊದಲು ತಮ್ಮ ತಲೆಯಿಂದ ತೆಗೆದು ಹಾಕಬೇಕು. *ಸಿಸ್ಯಾಟ್‌ನಲ್ಲಿ ಬೌದ್ಧಿಕ ಸಾಮರ್ಥ್ಯದ ಪ್ರಶ್ನೆ ಹೆಚ್ಚು ಕೇಳುವುದರಿಂದ ಕಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆಯೇ? ಬೌದ್ಧಿಕ ಸಾಮರ್ಥ್ಯ ಕಠಿಣವಾದರೆ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮಾನವಿಕ ವಿಷಯಗಳು ಕಠಿಣ. ನಿರಂತರವಾಗಿ ಗಣಿತ ಅಭ್ಯಾಸ ಆರಂಭಿಸಿದರೆ ಸರಳವಾಗುವುದು. ಇಲ್ಲಿ ಕೇವಲ ಎಸ್ಸೆಸ್ಸೆಲ್ಸಿ ಮಟ್ಟದ ಸಮಸ್ಯೆ ಕೇಳಲಾಗುವುದು. *ಹೊಸ ವಿಷಯವಾದ ಎಥಿಕ್ಸ್‌ ಹೇಗೆ ಅಭ್ಯಾಸ ಮಾಡಿದಿರಿ? ಇದು ಸಾಮಾನ್ಯ ನಾಗರಿಕನ ನೈತಿಕ ಮೌಲ್ಯ ಪರೀಕ್ಷಿಸುತ್ತದೆ. ಆದ್ದರಿಂದ ಸರ್ಕಾರದ ಎರಡನೇ ಆಡಳಿತಾತ್ಮಕ ಸುಧಾರಣಾ ವರದಿಗಳನ್ನು ಓದಿದ್ದೆ. *ಪ್ರಬಂಧ ಬರವಣಿಗೆ ಸುಧಾರಣೆಗೆ ಯಾವ ಕ್ರಮ ಕೈಗೊಳ್ಳಲಾಯಿತು? ಮಾದರಿ ಪ್ರಬಂಧ ಬರೆದು ಮೌಲ್ಯಮಾಪನ ಮಾಡಿಸಿಕೊಳ್ಳುತ್ತಿದ್ದೆ. ಪ್ರಬಂಧವನ್ನು ಬರೆಯುವ ಮೊದಲು ವಿಷಯದ ಪುನರ್‌ ಮನನ ಮಾಡಿಕೊಳ್ಳಬೇಕು.ಪ್ರಬಂಧ ಜಾಸ್ತಿ ಬರೆಯುವುದಕ್ಕಿಂತ ಕೇಳಿದ್ದಕ್ಕಿಂತ ಕಡಿಮೆ ಬರೆಯಬಹುದು ಆದರೆ ಅದು ಗುಣಮಟ್ಟದಿಂದ ಕೂಡಿರಬೇಕು. *ಕೇವಲ ಪುಸ್ತಕ ಅವಲಂಬಿಸಿದ್ದೀರಾ? ಇಲ್ಲವೇ ಇಂಟರ್‌ನೆಟ್‌ ಉಪಯೋಗಿಸುತ್ತಿದ್ದೀರಾ? ಅಂತರ್ಜಾಲ ಅವಲಂಬಿತ ಅಧ್ಯಯನ ನನಗೆ ತುಂಬಾ ಸಹಕಾರಿಯಾಯಿತು. ಅಂತರ್ಜಾಲದಿಂದ ಸಾಕಷ್ಟು ವಿಷಯಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದೇನೆ. ನೋಟ್ಸ್‌ಗಳನ್ನು ಕೂಡ ಕಂಪ್ಯೂಟರ್‌ನಲ್ಲಿ ಟೈಪ್‌ ಮಾಡಿಟ್ಟುಕೊಂಡು, ಹೊಸ ವಿಷಯವನ್ನು ಅದೇ ಫೈಲ್‌ಗೆ ಸೇರಿಸುತ್ತಾ ಹೋದೆ. ಹೀಗಾಗಿ ಅಪ್‌ಡೇಟ್‌ ಮಾಡಿಕೊಳ್ಳುವುದು ಸುಲಭವಾಯಿತು. ಪಿಐಬಿ, ಪಿಆರ್‌ಎಸ್‌, ಒಆರ್‌ಜಿ ಮತ್ತು ಕೇಂದ್ರದ ವಿವಿಧ ಇಲಾಖೆಗಳಾದ ಎಂಎಚ್‌ಎ, ಎಂಇಎ ನಂತಹ ಸೈಟ್‌ಗಳನ್ನು ಆಗಾಗ ಸಂಪರ್ಕಿಸುವುದು ಉತ್ತಮ. *ಗುಂಪು ಅಭ್ಯಾಸ ( ), ನೋಟ್ಸ್‌ ತಯಾರಿ ಹೇಗಿತ್ತು? ಖಂಡಿತ. ಏಕೆಂದರೆ ನಾವು ಋಣಾತ್ಮಕ ವಿಚಾರಗಳಿಂದ ಹೊರಬರಬಹುದು ಮತ್ತು ಗುಂಪು ಚರ್ಚೆ ಮಾಡುವುದರಿಂದ ಅರ್ಥವಾಗದ ವಿಷಯ ಹಂಚಿಕೊಳ್ಳಬಹುದು ಮತ್ತು ಇದು ಪರಿಣಾಮಕಾರಿ. ತಮಿಳುನಾಡಿನಲ್ಲಿ ಐಪಿಎಸ್‌ ಆಗಿರುವ ವಿಕ್ರಾಂತ ಪಾಟೀಲ ಮತ್ತು 10*ನೇ ರ್‍ಯಾಂಕ್‌ ಪಡೆದ ಲಕ್ಷ್ಮಣ ನಿಂಬರಗಿ ಜೊತೆಗಾರರಾಗಿದ್ದರು. ನಾನು ಓದುವಾಗ ಸಣ್ಣದಾಗಿ ವಿವರಗಳನ್ನು ಬರೆದಿಟ್ಟುಕೊಳ್ಳುತ್ತಿದ್ದೆ. ಅಗತ್ಯವಿದ್ದ ಅಂಕಣಗಳನ್ನು ಸಂಗ್ರಹಿಸುತ್ತಿದ್ದೆ. ಮಾದರಿ ಉತ್ತರ ತಯಾರಿಸಿ ಮೌಲ್ಯಮಾಪನ ಮಾಡಿಸುತ್ತಿದ್ದೆ. ಓದುವಾಗ ಮುಖ್ಯಾಂಶಗಳನ್ನು ಬರೆಯುತ್ತಾ ಇಲ್ಲವೇ ನೋಟ್ಸ್‌ ಮಾಡಿಕೊಳ್ಳುತ್ತಾ ಓದುವುದು ಸೂಕ್ತ. *ಸಂದರ್ಶನ ಹೇಗಿತ್ತು ? ಐದು ಜನರ ಸಮಿತಿ ಸಂದರ್ಶನ ನಡೆಸುತ್ತದೆ. ಛತ್ರಸಿಂಗ್‌ ನೇತೃತ್ವದ ಸಮಿತಿ ನನ್ನ ಸಂದರ್ಶನ ನಡೆಸಿತು. ನಮ್ಮ ಪರಿಪೂರ್ಣ ವ್ಯಕ್ತಿತ್ವ ಅಳೆಯಲು, ನಮಗೆ ಗೊತ್ತಿರುವ ವಿಷಯವನ್ನೇ ಕೇಳುತ್ತಾರೆ. ಇಲ್ಲಿ ನಮ್ಮ ಪ್ರಾದೇಶಿಕತೆಯ ಬಗ್ಗೆ ಹೆಚ್ಚು ಪ್ರಶ್ನೆ ಕೇಳುತ್ತಾರೆ. ಸಮಸ್ಯೆ ನೀಡಿ, ಒಬ್ಬ ಜಿಲ್ಲಾಧಿಕಾರಿಯಾಗಿ ಪರಿಹರಿಸಲು ಯಾವ ಕ್ರಮ ಕೈಗೊಳ್ಳಬಹುದು ಎಂದು ಕೇಳುತ್ತಾರೆ. *ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಏನನ್ನು ಹೇಳಲು ಬಯಸುತ್ತೀರಿ? ನಾನು ಬರೆದಿದ್ದು ಕನ್ನಡದಲ್ಲಿ, ಪ್ರಾದೇಶಿಕ ಭಾಷೆಗಳಲ್ಲಿ ಬರೆದಿರುವವರಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಅಂಕ ಗಳಿಸಿದವನು ನಾನು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದಾರೆ. ಆದರೆ ಪರೀಕ್ಷೆ ಬಗ್ಗೆ ಜಾಗೃತಿ ಕಡಿಮೆ. ಗ್ರಾಮೀಣ ಭಾಗದ ಜನರಿಗೆ ಮತ್ತು ಬಡ ಪ್ರತಿಭಾವಂತರಿಗೆ ಪ್ರೋತ್ಸಾಹದ ಕೊರತೆ ಕಾಡುತ್ತಿದೆ. ಒಳ್ಳೆಯ ಪ್ರೋತ್ಸಾಹ ಸಿಕ್ಕರೆ, ಪ್ರತಿ ಜಿಲ್ಲೆಗೆ ಕನಿಷ್ಠ ನಾಲ್ಕು ಜನ ಆಯ್ಕೆಯಾಗಬಹುದು. *ತರಬೇತಿ ಅವಶ್ಯವೇ? ನನಗೆ ಅವಶ್ಯವೆನಿಸಿತ್ತು. ಇಲ್ಲದಿದ್ದರೆ, ಇನ್ನೂ ಎರಡು ಪ್ರಯತ್ನಗಳ ನಂತರ ಆಯ್ಕೆಯಾಗುತ್ತಿದ್ದೆ. ಈ ಕುರಿತು ಹೆಚ್ಚಿನ ಮಾಹಿತಿ ಇರುವವರು ತರಬೇತಿ ಇಲ್ಲದೇ ಕೂಡ ಆಯ್ಕೆಯಾಗಿದ್ದಾರೆ. *ಪುಸ್ತಕದ ಪಟ್ಟಿ ನೀಡುತ್ತೀರಾ? ಪಠ್ಯಕ್ರಮ ಬದಲಾವಣೆ ಬಗ್ಗೆ ನಿಮ್ಮ ಅಭಿಪ್ರಾಯ . ಸೈಟ್‌ನಲ್ಲಿ ಎಲ್ಲ ಪುಸ್ತಕದ ಪಟ್ಟಿ ಮತ್ತು ಅಭ್ಯಾಸ ಕ್ರಮದ ಕುರಿತು ಇದೆ. ಪಠ್ಯಕ್ರಮ ಬದಲಾವಣೆ ಉತ್ತಮ ಬೆಳವಣಿಗೆ ಏಕೆಂದರೆ ಜಿಲ್ಲಾಧಿಕಾರಿಯಾಗುವವರ ಹೊಸ ಪರಿಸರಕ್ಕೆ ಬೇಗ ಹೊಂದಿಕೊಳ್ಳುವ ಸ್ವಭಾವ, ಉತ್ತಮ ಇಂಗ್ಲಿಷ್‌ ಗ್ರಹಿಕಾ ಸಾಮಾರ್ಥ್ಯ ಮತ್ತು ಬೌದ್ಧಿಕ ಸಾಮರ್ಥ್ಯ ಪರೀಕ್ಷಿಸುವುದು ಸೂಕ್ತ. ಹೊಸ ನಿಯಮಗಳು ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವುದಿಲ್ಲ. *ವಿದ್ಯಾರ್ಥಿಗಳಿಗೆ ನಿಮ್ಮ ಕಿವಿಮಾತು? ಹಾರ್ಡ್‌ವರ್ಕ್‌ಗಿಂತ ಸ್ಮಾರ್ಟ್‌ ವರ್ಕ್‌ ಮಾಡಿದರೆ ಖಂಡಿತಾ ಇದನ್ನು ಪಾಸು ಮಾಡಬಹುದು. ಅಧಿಕಾರಿಯಾಗುತ್ತೇನೆ ಎಂಬ ಹಗಲು ಕನಸು ಬೇಡ. ನಿಖರ ಗುರಿ ಇಟ್ಟುಕೊಳ್ಳಿ. ಆ ಗುರಿ ಮುಟ್ಟಲು ಕಠಿಣ ಪ್ರಯತ್ನ ಇರಲಿ. ತಾಳ್ಮೆ, ಏಕಾಗ್ರತೆಯಿಂದ ಅಭ್ಯಾಸ ಮಾಡಿದಲ್ಲಿ ಗೆಲುವು ನಿಮ್ಮದಾಗುವುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.