ಅರಿಶಿಣದೆಲೆ ಎಣ್ಣೆಯಿಂದ ಬೈಕ್‌ ಓಡಿಸಿ ಪೆಟ್ರೋಲ್‌ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗಿ ಏರುತ್ತಲೇ ಇದೆ. ಮತ್ತೊಂದೆಡೆ ಪರ್ಯಾಯ ಇಂಧನಕ್ಕಾಗಿ ಅನೇಕ ಪ್ರಯೋಗಗಳು ನಡೆಯುತ್ತಿವೆ. ಇಂಥ ಹೊತ್ತಿನಲ್ಲಿ ಅರಿಶಿಣದೆಲೆಯ ಎಣ್ಣೆ ಬಳಸಿ ಬೈಕ್ ಓಡಿಸುವ ಮೂಲಕ ಪೆಟ್ರೋಲ್‌ಗೆ ಪರ್ಯಾಯ ತೈಲವನ್ನು ಕಂಡುಕೊಂಡಿದ್ದಾರೆ ಬಳ್ಳಾರಿಯ ರಾವ್‌ ಬಹದ್ದೂರ್‌ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು. ಮೇವಿಗೂ ಬಳಕೆಯಾಗದ ಅರಿಶಿಣದ ಎಲೆಯಿಂದ ತೆಗೆದ ಎಣ್ಣೆಯಲ್ಲಿ ದ್ವಿಚಕ್ರ ವಾಹನ ಓಡಿಸುವ ಮೂಲಕ ಈ ವಿದ್ಯಾರ್ಥಿಗಳು ಹೊಸ ಪ್ರಯೋಗ ಮಾಡಿದ್ದಾರೆ. ಒಂದು ಲೀಟರ್‌ ಅರಿಶಿಣದೆಲೆಯ ಎಣ್ಣೆಗೆ 40ರಿಂದ 50 ರೂಪಾಯಿ ವೆಚ್ಚವಾಗುತ್ತದೆ. ಒಂದು ಲೀಟರ್‌ಗೆ 65ರಿಂದ 70 ಕಿ.ಮೀ ಇಂಧನ ಕ್ಷಮತೆ (ಮೈಲೇಜ್‌) ದೊರೆಯುತ್ತದೆ. ‘ಕೇರಳದಲ್ಲಿ ಅರಿಶಿಣದ ಎಲೆಯನ್ನು ಆಯುರ್ವೇದ ಸೇರಿದಂತೆ ಅನೇಕ ಉಪಯೋಗಗಳಿಗೆ ಬಳಸುತ್ತಾರೆ ಎಂಬುದು ತಿಳಿದಿತ್ತು. ನಾವು ಮೊದಲು ಹೊಂಗೆ ಎಣ್ಣೆ, ಟಯರ್‌ ಕರಗಿಸಿ ತೆಗೆದ ತೈಲದಿಂದ ಬೈಕ್‌ ಓಡಿಸಲು ಪ್ರಯತ್ನಿಸಿದೆವು. ಆದರೆ ಅದು ಫಲ ಕೊಡಲಿಲ್ಲ. ನಂತರ ನಮಗೆ ಕಂಡದ್ದು ಅರಿಶಿಣದ ಎಲೆ. ಒಮ್ಮೆ ಅರಿಶಿಣದ ಎಣ್ಣೆಯನ್ನು ನಮ್ಮ ಕಾಲೇಜಿನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದೆವು. ಪೆಟ್ರೋಲ್ ಹಾಗೂ ಈ ಎಣ್ಣೆಯ ಥರ್ಮಲ್‌ ಪ್ರಾಪರ್ಟೀಸ್‌ ಒಂದೇ ಆಗಿತ್ತು. ಅರಿಶಿಣದೆಲೆಯ ಎಣ್ಣೆಗೆ ಬೆಂಕಿ ತಾಗಿಸಿದ ಕೂಡಲೇ ಪೆಟ್ರೋಲ್‌ನಂತೆ ಉರಿಯಲಾರಂಭಿಸಿತು. ಆಗ ನಾವು ಬೈಕ್‌ಗೆ ಬಳಸಲು ಮುಂದಾದೆವು. ಪ್ರಯೋಗಕ್ಕಾಗಿ ಮೊದಲಿಗೆ 100 ಎಂ.ಎಲ್‌ ಅರಿಶಿಣದೆಲೆಯ ಎಣ್ಣೆಯನ್ನು ತೆಗೆದುಕೊಂಡು ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ ಪಕ್ಕದಲ್ಲಿ ಸಣ್ಣ ಬಾಟಲಿ ಅಳವಡಿಸಿದೆವು. ಬಾಟಲಿಯಿಂದ ಎಂಜಿನ್‌ಗೆ ಸಂಪರ್ಕ ಕಲ್ಪಿಸುವ ಮಧ್ಯಭಾಗದ ಕೊಳವೆಗೆ ಎರಡು ಮ್ಯಾಗ್ನಟೈಜರ್‌ (ಕಾಂತೀಕಾರಕ) ಕ್ಲಿಪ್‌ಗಳನ್ನು ಅಳವಡಿಸಿದೆವು. ಈ ಮ್ಯಾಗ್ನಟೈಜರ್‌ಗಳು ಇಂಧನ ಕ್ಷಮತೆ ಹೆಚ್ಚಾಗಲು ಸಹಕರಿಸುತ್ತವೆ ಮತ್ತು ಎಂಜಿನ್‌ನಲ್ಲಿ ಕಾರ್ಬನ್‌ ಉಳಿಯದಂತೆ ತಡೆಯುತ್ತವೆ. 100 ಎಂ.ಎಲ್‌ ತೈಲದಿಂದ ಏಳು ಕಿ.ಲೋ ಮೀಟರ್‌ ಬೈಕ್‌ ಓಡಿಸಿದೆವು’ ಎನ್ನುತ್ತಾರೆ ಅರುಣ್‌ ಕುಮಾರ್ ಜಿ. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ 8ನೇ ಸೆಮಿಸ್ಟರ್‌ ಅಭ್ಯಾಸ ಮಾಡುತ್ತಿರುವ ಅರುಣ್‌ ಕುಮಾರ್‌, ಪ್ರಶಾಂತ್‌, ರವಿ, ಚನ್ನವೀರಯ್ಯ ಅವರು ಆರು ತಿಂಗಳ ಶ್ರಮದಿಂದ ಈ ಪ್ರಯೋಗವನ್ನು ಯಶಸ್ವಿಗೊಳಿಸಿದ್ದಾರೆ. ಇವರಿಗೆ ಮಾರ್ಗದರ್ಶನ ನೀಡಿದವರು ಡಾ. ಹೀರೇಗೌಡರ್‌ ಯರ್ರನಗೌಡ ಹಾಗೂ ವಿಭಾಗದ ಮುಖ್ಯಸ್ಥ ಕೋರಿ ನಾಗರಾಜ್‌. ‘ಅರಿಶಿಣದ ಎಲೆಯ ತೈಲದಿಂದ ಓಡಿಸುವ ಬೈಕ್‌ ಪರಿಸರ ಸ್ನೇಹಿಯಾಗಿದೆ, ಹೆಚ್ಚು ಹೊಗೆ ಉಗುಳುವುದಿಲ್ಲ. ಇದಕ್ಕೆ ಸಾಕ್ಷಿ ಸಾರಿಗೆ ಇಲಾಖೆಯಿಂದ ಸಿಕ್ಕಿರುವ ಎಮಿಷನ್‌ ಪರೀಕ್ಷೆಯ ಪ್ರಮಾಣ ಪತ್ರ. ಈ ಎಣ್ಣೆಯಿಂದ ಎಂಜಿನ್‌ಗೂ ಹಾನಿಯಾಗುವುದಿಲ್ಲ ಎಂಬುದನ್ನು ಮೆಕ್ಯಾನಿಕ್‌ಗಳು ಪರೀಕ್ಷಿಸಿ, ದೃಢೀಕರಿಸಿದ್ದಾರೆ. ಆದ್ದರಿಂದ ನಮ್ಮ ಈ ಪ್ರಯತ್ನವನ್ನು ಎಲ್ಲೆಡೆ ಕಾರ್ಯರೂಪಕ್ಕೆ ತರಲು ಏನೂ ತೊಂದರೆ ಇಲ್ಲ. ಅಲ್ಲದೇ ಪ್ರಪಂಚದ ಉತ್ಪಾದನೆಯಲ್ಲಿ ಶೇ.75ರಷ್ಟು ಅರಿಶಿಣವನ್ನು ಭಾರತದಲ್ಲೇ ಬೆಳೆಯಲಾಗುತ್ತಿದೆ. ಹಾಗಾಗಿ ಪೆಟ್ರೋಲ್‌ಗೆ ಪರ್ಯಾಯವಾಗಿ ಅರಿಶಿಣದೆಲೆಯ ಎಣ್ಣೆಯನ್ನು ಮುಂದಿನ ದಿನಗಳಲ್ಲಿ ಬಳಸಿಕೊಂಡರೆ ಸಾರ್ವಜನಿಕರು ಹಾಗೂ ಸರ್ಕಾರಕ್ಕೂ ಬಹುದೊಡ್ಡ ಅನುಕೂಲವಾಗಲಿದೆ ಎಂಬುದು ಈ ವಿದ್ಯಾರ್ಥಿಗಳ ಅಭಿಪ್ರಾಯ. ಮಾಹಿತಿಗೆ: 91644 26568. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.