ಸಂಶೋಧನೆಗೆ ಫೆಲೋಶಿಪ್ ಭಾರತದಲ್ಲಿ ಕಳೆದೊಂದು ದಶಕದಿಂದ ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತ ಬಂದಿದೆ. ಹಿಂದುಳಿದ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸರ್ಕಾರದ ಜೊತೆಗೂಡಿ ಹಲವಾರು ಶೈಕ್ಷಣಿಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಹಾಗೆಯೇ ಸ್ವತಂತ್ರವಾಗಿ ಶಾಲೆಗಳನ್ನು ಸ್ಥಾಪಿಸಿ ಶಿಕ್ಷಣ ನೀಡುತ್ತಿದೆ. ಸಮಾನ ಮತ್ತು ಗುಣಮಟ್ಟದ ಶಿಕ್ಷಣ ಎಲ್ಲಾ ಮಕ್ಕಳಿಗೂ ಲಭ್ಯವಾಗಬೇಕು ಎನ್ನುವುದು ಫೌಂಡೇಷನ್‌ ಗುರಿ. ಈ ನಿಟ್ಟಿನಲ್ಲಿ ಕರ್ನಾಟಕದ ಯಾದಗಿರಿ ಮತ್ತು ಮಂಡ್ಯ ಹಾಗೂ ಚತ್ತೀಸ್‌ಗಢ, ರಾಜಸ್ತಾನ, ಪುದುಚೇರಿ, ಉತ್ತರಖಂಡ್‌ ರಾಜ್ಯಗಳಲ್ಲಿ ಶಾಲೆಗಳನ್ನು ತೆರದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಜಿಲ್ಲೆಗಳಲ್ಲೂ ಶಾಲೆಗಳನ್ನು ಆರಂಭಿಸುವ ಗುರಿ ಹೊಂದಿದೆ. ಅತಿ ಹಿಂದುಳಿದ ಜಿಲ್ಲೆಗಳಲ್ಲಿ ಸಮುದಾಯ ಶಿಕ್ಷಣದ ಅಭಿವೃದ್ಧಿ ಹಾಗೂ ಅದರ ವಿವಿಧ ಆಯಾಮಗಳ ಸಂಶೋಧನೆಗಾಗಿ ಆಸಕ್ತ ಅಭ್ಯರ್ಥಿಗಳಿಂದ ಎರಡು ವರ್ಷಗಳ ಫೆಲೋಶಿಪ್ಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಶೈಕ್ಷಣಿಕ ಅರ್ಹತೆಗಳು: ಫೆಲೋಶಿಪ್‌ಗೆ ಸೇರಬಯಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ವೃತ್ತಿಪರ ಪದವಿಯನ್ನು ಪಡೆದಿರಬೇಕು. ಯಾವುದೇ ಕ್ಷೇತ್ರದಲ್ಲಿ ಕನಿಷ್ಠ 6 ವರ್ಷ ಕೆಲಸ ಮಾಡಿದ ಅನುಭವವಿರಬೇಕು. ಮುಖ್ಯವಾಗಿ ಸಾಮಾಜಿಕ ಪರಿವರ್ತನೆ ಅಥವಾ ಸಮುದಾಯದಲ್ಲಿ ಬದಲಾವಣೆ ತರುವ ಮನೋಭಾವ ಹೊಂದಿರುವವರಾಗಿರಬೇಕು. ಅಭ್ಯರ್ಥಿಗಳು ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯನ್ನು ಬಲ್ಲವರಾಗಿರಬೇಕು. ಅವಧಿ: ಈ ಫೆಲೋಶಿಪ್‌ ಅನ್ನು ಎರಡು ವರ್ಷಗಳವರೆಗೆ ಮಾತ್ರ ನೀಡಲಾಗುತ್ತದೆ. ಮೊದಲ ಎರಡು ವಾರಗಳು ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಕುರಿತು ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಡಲಾಗುವುದು. ನಂತರ ಐದು ವಾರಗಳು ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ತರಗತಿಗಳು ನಡೆಯಲಿವೆ. ಉಳಿದ 22 ತಿಂಗಳು ಕಡ್ಡಾಯವಾಗಿ ಕ್ಷೇತ್ರಕಾರ್ಯವನ್ನು ಮಾಡಬೇಕು. ಕ್ಷೇತ್ರ ಕಾರ್ಯದಲ್ಲಿ ತೊಡಗುವ ಅಭ್ಯರ್ಥಿಗಳು ಸಮುದಾಯ ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣದ ಗುಣಮಟ್ಟ, ಮಕ್ಕಳ ಆರೋಗ್ಯ, ಶಿಕ್ಷಕರು ಮತ್ತು ಸಮುದಾಯ ಜನರ ನಡುವಿನ ಸಂಬಂಧದ ಕುರಿತಾಗಿ ಅಧ್ಯಯನ ಮಾಡಬೇಕಾಗುತ್ತದೆ. ಕ್ಷೇತ್ರ ಕಾರ್ಯಕ್ಕೆ ಅಜೀಂ ಪ್ರೇಮ್‌ಜಿ ಶಾಲೆಗಳು ಹಾಗೂ ಇತರೆ ಸರ್ಕಾರಿ ಶಾಲೆಗಳನ್ನು ಆಯ್ದುಕೊಳ್ಳಬೇಕು. ಸಂಶೋಧನೆ ಮಾಡಿದ ಬಳಿಕ ಅಧ್ಯಯನ ವರದಿಯನ್ನು ಫೌಂಡೇಷನ್‌ಗೆ ಸಲ್ಲಿಸಬೇಕು. ಭತ್ಯೆ: ಫೆಲೋಶಿಪ್‌ಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 27000 ರೂಪಾಯಿ ನೀಡಲಾಗುವುದು. ಇದರ ಜತೆಗೆ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮೂಲಕ ಪೆಲೋಶಿಪ್‌ಗೆ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯು ಬಹು ಆಯ್ಕೆ ಪ್ರಶ್ನೆಗಳು ಮತ್ತು ಪ್ರಬಂಧ ಮಾದರಿಯ ಸ್ವರೂಪದಲ್ಲಿರುತ್ತದೆ. ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಸಮಾಜ, ಪರಿಸರ, ಆರ್ಥಿಕತೆ, ರಾಜಕೀಯ, ಶಿಕ್ಷಣ, ಆರೋಗ್ಯ, ಸಮುದಾಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಇವೇ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಬಂಧ ರಚಿಸಬೇಕು. ಈ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಅಭ್ಯರ್ಥಿಗಳ ಭೌದ್ದಿಕ ಮಟ್ಟ, ಆತ್ಮವಿಶ್ವಾಸ, ಸಮಾಜ ಮತ್ತು ಸಮುದಾಯ ಜೊತೆಗಿನ ಸಂವಹನ, ಶಿಕ್ಷಣದ ಮೇಲಿನ ಆಸಕ್ತಿ ಕುರಿತಾಗಿ ಪರೀಕ್ಷಿಸಲಾಗುವುದು. ಕ್ಷೇತ್ರಕಾರ್ಯದ ವಿವರ: ಕ್ಷೇತ್ರ ಕಾರ್ಯದಲ್ಲಿ ಮುಖ್ಯವಾಗಿ ಸರ್ಕಾರಿ ಶಾಲೆಗಳ ಕುರಿತಾಗಿ ಅಧ್ಯಯನ ಮಾಡಬೇಕು. ಶಿಕ್ಷಣದ ಗುಣಮಟ್ಟ, ಮತ್ತಷ್ಟು ಪರಿಣಾಮಕಾರಿಯಾಗಿ ಶಿಕ್ಷಣ ನೀಡಬೇಕಾದರೆ ಕೈಗೊಳ್ಳಬೇಕಾದ ಕ್ರಮಗಳು, ಶಿಕ್ಷಣದ ಮೌಲ್ಯಮಾಪನ ಮತ್ತು ಸುಧಾರಣಾ ಕ್ರಮಗಳ ಕುರಿತಾಗಿ ಅಧ್ಯಯನ ಮತ್ತು ಸಂಶೋಧನೆ ನಡೆಸಬೇಕು. ಕ್ಷೇತ್ರಕಾರ್ಯ ಸಮಯದಲ್ಲಿ ಫೌಂಡೇಷನ್‌ನ ಸಮುದಾಯದ ನೌಕರರಿಗೂ ನೆರವಾಗಬೇಕು. ಫೆಲೋಶಿಪ್‌ನ ಕೊನೆಯ ತಿಂಗಳಲ್ಲಿ ಅಭ್ಯರ್ಥಿಗಳು ಕೈಗೊಂಡಿದ್ದ ಸಂಶೋಧನೆ ಮತ್ತು ಅಧ್ಯಯನ ಮಾಡಿದ ವಿಸ್ತೃತ ವರದಿಯನ್ನು ಸಲ್ಲಿಸಬೇಕು. ಅವಕಾಶಗಳು: ಕ್ಷೇತ್ರಕಾರ್ಯದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಮತ್ತು ಶಿಕ್ಷಣ, ಸಾಮಾಜಿಕ ಬದಲಾವಣೆ ಕುರಿತಂತೆ ಅತೀವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ಉದ್ಯೋಗ ಕಲ್ಪಿಸಲಾಗುವುದು. ಫೆಲೋಶಿಪ್‌ ಆರಂಭ: ಫೆಲೋಶಿಪ್‌ 2014ರ ಡಿಸೆಂಬರ್‌ನಲ್ಲಿ ಆರಂಭವಾಗುವುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ಪ್ರವೇಶ ಪತ್ರ ಹಾಗೂ ಸಂದರ್ಶನಕ್ಕೆ ಆಯ್ಕೆಯಾದವರಿಗೆ ಸಂದರ್ಶನ ಪತ್ರವನ್ನು ಇಮೇಲ್‌ ಮೂಲಕ ಕಳುಹಿಸಲಾಗುವುದು. ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಬೇಕು. ಅಜೀಂ ಪ್ರೇಮ್‌ಜಿ ಫೌಂಡೇಷನ್‌ ವೆಬ್‌ಸೈಟಿಗೆ ಲಾಗಿನ್‌ ಆಗಿ ಅಲ್ಲಿರುವ ಫೆಲೋಶಿಪ್‌ ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿಯೊಂದಿಗೆ ಬಯೋಡೆಟಾ ಹಾಗೂ ಇತ್ತೀಚಿನ ಭಾವಚಿತ್ರವನ್ನು ಲಗತ್ತಿಸಬೇಕು. ಆನ್‌ಲೈನ್‌ ಅರ್ಜಿಯನ್ನು ಸೆಪ್ಟೆಂಬರ್‌ 15ನೇ ತಾರೀಖಿನೊಳಗೆ ಸಲ್ಲಿಸಬೇಕು. ಫೆಲೋಶಿಪ್‌ನ ಇನ್ನಿತರ ಮಾಹಿತಿ ಮತ್ತು ಆನ್‌ಲೈನ್‌ ಅರ್ಜಿ ಸಲ್ಲಿಸಲು ಈ ಕೆಳಗಿನ ವೆಬ್‌ ವಿಳಾಸವನ್ನು ಸಂಪರ್ಕಿಸಬಹುದು. ../ ಉಚಿತ ಸಹಾಯವಾಣಿ ಸಂಖ್ಯೆ: 1800 419 0201 (ಸೋಮವಾರದಿಂದ ಶುಕ್ರವಾರದವರೆಗೆ: ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಫೋನ್‌ ಮಾಡಬಹುದು) ಮುಂದಿನವಾರ: ಟಾಟಾ ಫೌಂಡೇಷನ್‌ ಸ್ಕಾಲರ್‌ಶಿಪ್‌ ಮತ್ತು ಫೆಲೋಶಿಪ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.