ಕೌಶಲಾಭಿವೃದ್ಧಿಗೆ ಎಸ್‌ಸಿಪಿ–ಟಿಎಸ್‌ಪಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ವಿದ್ಯಾರ್ಥಿಗಳಿಗೆ ಅಗತ್ಯ ಶಿಕ್ಷಣ ನೀಡಿ, ಉದ್ಯೋಗ ಕಲ್ಪಿಸಿ ಆರ್ಥಿಕವಾಗಿ ಸಬಲರನ್ನಾಗಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ನಡೆಯುತ್ತಿದೆ. ಈ ಮೂಲಕ ಸಮಾಜದಲ್ಲಿ ತಾರತಮ್ಯ ನಿವಾರಿಸುವುದು ಇದರ ಹಿಂದಿನ ಉದ್ದೇಶ. ಈ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ (ಎಸ್‌ಸಿಪಿ–ಟಿಎಸ್‌ಪಿ) ಒಂದು. ಈ ಯೋಜನೆಯಡಿ ಕರ್ನಾಟಕ ಚರ್ಮ ತಂತ್ರಜ್ಞಾನ ಸಂಸ್ಥೆ (ಕಿಲ್ಟ್‌), ಮೈಸೂರಿನಲ್ಲಿರುವ ಕೇಂದ್ರೀಯ ಪ್ಲಾಸ್ಟಿಕ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್‌), ಅಪೆರಲ್‌ ತರಬೇತಿ ಮತ್ತು ವಿನ್ಯಾಸ ಕೇಂದ್ರ (ಎಟಿಡಿಸಿ), ತೆಂಗು ಮತ್ತು ನಾರು ಅಭಿವೃದ್ಧಿ ನಿಗಮ ನಿಯಮಿತ, ತೆಂಗು ಮತ್ತು ನಾರು ಸಹಕಾರ ಮಹಾ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರಗಳು ನೋಂದಾಯಿತ ಸಂಸ್ಥೆಗಳ ಮೂಲಕ ಎಸ್‌ಟಿ/ಎಸ್‌ಸಿ ಅಭ್ಯರ್ಥಿಗಳಿಗೆ ತಾಂತ್ರಿಕ ತರಬೇತಿ ಕೊಡಿಸುತ್ತಿವೆ. ಜಿಟಿಟಿಸಿಯಲ್ಲಿ 57 ಸೀಟು ಲಭ್ಯ ರಾಜ್ಯದಲ್ಲಿರುವ 20 ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ಗಳಲ್ಲಿ 360 ಎಸ್‌ಸಿ ಮತ್ತು 276 ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ತಾಂತ್ರಿಕ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತದೆ. ತರಬೇತಿ ಪ್ರಕ್ರಿಯೆ ಜುಲೈನಿಂದಲೇ ಆರಂಭವಾಗಿದ್ದು, ಒಟ್ಟು 636 ವಿದ್ಯಾರ್ಥಿಗಳ ಪೈಕಿ 595 ಮಂದಿ ಕೋರ್ಸ್‌ಗೆ ಸೇರ್ಪಡೆಯಾಗಿದ್ದಾರೆ. ಅದರಲ್ಲಿ ಎಸ್‌ಟಿ ಸಮುದಾಯದ 19 ಮತ್ತು ಎಸ್‌ಸಿ ಸಮುದಾಯದ 38 ಸೀಟುಗಳು ಇನ್ನೂ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಎಸ್‌ಸಿಪಿ–ಟಿಎಸ್‌ಪಿ ಯೋಜನೆಯಡಿ ಟೂಲ್‌ ರೂಮ್‌ ಮಶಿನಿಸ್ಟ್‌, ಸಿಎನ್‌ಸಿ ಟೆಕ್ನಾಲಜಿಸ್ಟ್ ಮತ್ತು ಕ್ಯಾಡ್‌ – ಕ್ಯಾಮ್‌ ಕುರಿತು ತರಬೇತಿ ನೀಡಲಾಗುತ್ತದೆ. ಇವುಗಳೆಲ್ಲವೂ ಸರ್ಟಿಫಿಕೇಟ್‌ ಕೋರ್ಸ್‌ಗಳಾಗಿದ್ದು, ತರಬೇತಿ ನೀಡುವ ಸಂಸ್ಥೆಯೇ ಶೇ 100ರಷ್ಟು ಉದ್ಯೋಗ ದೊರಕಿಸುವಲ್ಲಿ ಸಹಯೋಗ ನೀಡುತ್ತದೆ. ಕೈಗಾರಿಕೆಗಳಲ್ಲಿ ಈ ಕೋರ್ಸ್ ಮಾಡಿದವರಿಗೆ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಸಾಕಷ್ಟು ಬೇಡಿಕೆಯಿದೆ. ಸ್ವಂತ ಉದ್ಯಮ ಆರಂಭಿಸಲು ಅವಕಾಶವಿದ್ದು, ಸರ್ಕಾರದಿಂದ ಸಾಲ–ಸೌಲಭ್ಯಗಳು ಸಿಗುತ್ತವೆ. ಕೈಗಾರಿಕಗಳಿಗೆ ಭೇಟಿ, ಚರ್ಚೆ, ಸಾಫ್ಟ್‌ ಸ್ಕಿಲ್ ತರಬೇತಿ, ಜಾಬ್‌ಫೇರ್‌ ಮತ್ತು ಕ್ಯಾಂಪಸ್‌ ಸಂದರ್ಶನದ ಜೊತೆಗೆ ಪಠ್ಯ–ಪುಸ್ತಕ ಮತ್ತಿತರ ಸೌಲಭ್ಯವನ್ನು ಕೋರ್ಸ್‌ ಮಾಡುವಾಗ ಒದಗಿಸಲಾಗುತ್ತದೆ. ಉಚಿತ ತರಬೇತಿಯ ಜೊತೆಗೆ ಸರ್ಕಾರ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆರೂ1,500 ಸ್ಟೈಫಂಡ್‌ ಸಹ ನೀಡುತ್ತಿದೆ. ‘ಮಾರ್ಚ್‌ವರೆಗೂ ಕೋರ್ಸ್‌ಗೆ ಸೇರ್ಪಡೆಯಾಗಲು ಅವಕಾಶವಿದೆ. ನಿಗದಿತ ವಿದ್ಯಾರ್ಥಿಗಳು ಇದಕ್ಕೂ ಮುನ್ನವೇ ಬಂದರೂ ತರಗತಿಗಳು ಆರಂಭವಾಗುತ್ತವೆ. ರಾಜ್ಯದ ವಿವಿಧ ಕಡೆ ಇರುವ ಜಿಟಿಟಿಸಿ ಕೇಂದ್ರಗಳಲ್ಲಿ ಅಗತ್ಯ ದಾಖಲೆ ಒದಗಿಸಿ ವಿದ್ಯಾರ್ಥಿಗಳು ಕೋರ್ಸ್‌ ಕಲಿಯಬಹುದು. ಒಂದೇ ಕೋರ್ಸ್‌ನಲ್ಲಿ ಬಹು ಕೌಶಲ ರೂಢಿಸಿಕೊಳ್ಳುವ ಅವಕಾಶವಿದೆ’ ಎನ್ನುತ್ತಾರೆ ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ಟಿ. ಹಾಲಸ್ವಾಮಿ. ಸಾಕಷ್ಟು ಯುವಕರು ಸ್ಟೈಫಂಡ್‌ ಆಸೆಗೆ ಕೋರ್ಸ್‌ ಸೇರುತ್ತಿದ್ದಾರೆ. ನಿಯಮದ ಪ್ರಕಾರ ಶೇ 80ರಷ್ಟು ಹಾಜರಾತಿ ಇರುವವರಿಗೆ ಮಾತ್ರ ಸ್ಟೈಫಂಡ್ ನೀಡಬೇಕಾಗಿದೆ. ಬಹುತೇಕ ಮಂದಿ ಕೋರ್ಸ್‌ಗೆ ಸೇರುತ್ತಾರೆಯೇ ವಿನಾ ತರಬೇತಿಗೆ ಹಾಜರಾಗುವುದಿಲ್ಲ. ಆದ್ದರಿಂದ ಯೋಜನೆ ಯಶಸ್ವಿಯಾಗುತ್ತಿಲ್ಲ. ಕೋರ್ಸ್‌ ಸೇರಿ ತರಗತಿಗೆ ಗೈರಾಗುವ ವಿದ್ಯಾರ್ಥಿಗಳಿಗೆ ಮೂರು ಬಾರಿ ನೋಟಿಸ್‌ ನೀಡಲಾಗುತ್ತದೆ. ಅದಾಗ್ಯೂ ಅವರು ತರಗತಿಗೆ ಹಾಜರಾಗದಿದ್ದಲ್ಲಿ ಅಂತಹವರನ್ನು ಕೈಬಿಟ್ಟು, ಅಗತ್ಯವಿರುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಎಸ್‌ಸಿಪಿ–ಟಿಎಸ್‌ಪಿ ಅಡಿ ಕಲಿಯಬಹುದಾದ ಕೋರ್ಸ್‌ಗಳು ಒಂದು ವರ್ಷದ ಟೂಲ್‌ ರೂಮ್‌ ಮಶಿನಿಷ್ಟ್‌ ಕೋರ್ಸ್‌ನಲ್ಲಿ ಬೆಂಚ್ ಫಿಟ್ಟಿಂಗ್‌, ಡ್ರಿಲ್ಲಿಂಗ್‌, ಟರ್ನಿಂಗ್, ಮಿಲ್ಲಿಂಗ್‌, ಸರ್ಫೇಸ್ ಗ್ರೈಂಡಿಂಗ್‌, ಸಿಲಿಂಡ್ರಿಕಲ್‌ ಗ್ರೈಂಡಿಂಗ್‌, ಟೂಲ್ ಮತ್ತು ಕಟರ್‌ ಗ್ರೈಂಡಿಂಗ್‌, ಸಿಎನ್‌ಸಿ ಮಿಲ್ಲಿಂಗ್‌, ಸಿಎನ್‌ಸಿ ಟರ್ನಿಂಗ್‌ ಮತ್ತು ಇಡಿಎಂ ಮುಂತಾದ ಯತ್ರೋಪಕರಣಗಳನ್ನು ನಡೆಸುವ ತರಬೇತಿ ನೀಡಲಾಗುತ್ತದೆ. ಜೊತೆಗೆ ಬೇಸಿಕ್ ವರ್ಕ್‌ಶಾಪ್‌ ಥಿಯರಿ, ಎಂಜಿನಿಯರಿಂಗ್‌ ಡ್ರಾಯಿಂಗ್‌, ವರ್ಕ್‌ಶಾಪ್‌ ಕ್ಯಾಲಿಕ್ಯುಲೇಶನ್ ಹೇಳಿಕೊಡಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಪೂರೈಸಿದವರು ಈ ಕೋರ್ಸ್‌ಗೆ ಸೇರಬಹುದಾಗಿದೆ. * ತಿಂಗಳ ಕೋರ್ಸ್‌ ಆದ ಟರ್ನರ್‌/ಮಿಲ್ಲರ್‌/ಗ್ರೈಂಡರ್‌ ಕೋರ್ಸುಗಳಲ್ಲಿ ಆಯಾ ಯಂತ್ರಗಳನ್ನು ನಡೆಸುವುದು, ಕಬ್ಬಿಣ, ಅಲ್ಯೂಮಿನಿಯಂ ಅಥವಾ ಇನ್ನಾವುದೇ ಲೋಹಕ್ಕೆ ಆಕಾರ ನೀಡುವುದು, ಉತ್ಪನ್ನಗಳ ಫಿನಿಶಿಂಗ್‌ ಕುರಿತು ಪಾಠ ಪ್ರಾಯೋಗಿಕವಾಗಿ ಹೇಳಿ ಕೊಡಲಾಗು ತ್ತದೆ. ಎಸ್‌ಎಸ್‌ಎಲ್‌ಸಿ ಪೂರೈಸಿದ ಯುವಕರು ಈ ಕೋರ್ಸ್‌ಗೆ ಸೇರಲು ಅರ್ಹರಾಗಿರುತ್ತಾರೆ. *ತಿಂಗಳ ಕ್ಯಾಡ್‌/ಕ್ಯಾಮ್‌ ಕೋರ್ಸ್‌ನಲ್ಲಿ ಕೈಗಾರಿಕೆಗಳಲ್ಲಿ ಬಳಸಲಾಗುವ ಪ್ರಚಲಿತ 6 ಕ್ಯಾಡ್ ತಂತ್ರಾಂಶಗಳನ್ನು ಹೇಳಿಕೊಡಲಾಗುತ್ತದೆ. ತಂತ್ರಾಂಶ ಬಳಸಿ ಉತ್ಪನ್ನವೊಂದರ ವಿನ್ಯಾಸ, ಪ್ರೋಗ್ರಾಮಿಂಗ್ ಮಾಡುವುದು, ಗಣಕಯಂತ್ರದ ಮೂಲಕ ಯಂತ್ರವನ್ನು ಕೆಲಸಕ್ಕೆ ಹಚ್ಚುವ ರೀತಿಯನ್ನು ಹೇಳಿಕೊಡಲಾಗುತ್ತದೆ. ಐಟಿಐ, ಡಿಪ್ಲೊಮಾ ಅಥವಾ ಎಂಜಿನಿಯರಿಂಗ್‌ ಪದವಿ ಪಡೆದವರು ಈ ಕೋರ್ಸ್‌ಗೆ ಸೇರಬಹುದಾಗಿದೆ. ಇನ್ನು 6 ತಿಂಗಳ ಸಿಎನ್‌ಸಿ ಟೆಕ್ನಾಲಜಿಸ್ಟ್‌ ಕೋರ್ಸ್‌ನಲ್ಲಿ ತಂತ್ರಾಂಶಗಳ ಸಹಾಯದಿಂದ ಪ್ರೊಗ್ರಾಂ ಬರೆಯುವುದು, ಯಂತ್ರಗಳನ್ನು ಮುನ್ನಡೆಸುವುದು, ಮ್ಯಾನ್ಯುವಲ್‌ ಆಗಿ ಪ್ರೋಗ್ರಾಮ್‌್ ಬರೆಯುವುದು, ಕಟಿಂಗ್‌ ಟೂಲ್‌ ಮತ್ತು ಮಟೀರಿಯಲ್‌ ಟೆಕ್ನಾಲಜಿಯ ಬಗ್ಗೆ ಹೇಳಿಕೊಡಲಾಗುತ್ತದೆ. ಅದರ ಜೊತೆಗೆ ಆ ಉತ್ಪನ್ನ ತಯಾರಿಸಲು ಯಾವ ವಸ್ತು ಬಳಸಬೇಕು ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಐಟಿಐ, ಡಿಪ್ಲೊಮಾ ಅಥವಾ ಎಂಜಿಯರಿಂಗ್ ಪದವಿ ಪಡೆದವರು ಈ ಕೋರ್ಸ್‌ಗೆ ಸೇರಬಹುದಾಗಿದೆ. ‘ಇದೇ ಕೋರ್ಸ್‌ಗಳನ್ನು ಸ್ವಂತ ಖರ್ಚಿನಲ್ಲಿ ಕಲಿಯುವುದಾದರೆ ಪ್ರತಿ ಕೋರ್ಸ್‌ಗೆರೂ45,000–ರೂ70,000 ವರೆಗೂ ವೆಚ್ಚವಾಗುತ್ತದೆ. ಆದರೆ ಸರ್ಕಾರ ಫೀ ತುಂಬುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಸ್ಟೈಫಂಡ್‌ ನೀಡುತ್ತಿದೆ. ಆದ್ದರಿಂದ ಈ ಅದ್ಭುತ ಅವಕಾಶವನ್ನು ಎಸ್‌ಸಿ/ಎಸ್‌ಟಿ ಯುವಕರು ಬಳಸಿಕೊಳ್ಳಬೇಕು’ ಎಂಬುದು ಹಾಲಸ್ವಾಮಿ ಅವರ ಅಭಿಪ್ರಾಯ. ರಾಷ್ಟ್ರೀಯ ಕೌಶಲ ಅಭಿವೃದ್ಧಿ ಸಂಸ್ಥೆಯ (ಎನ್‌ಎಸ್‌ಡಿಸಿ) ವರದಿಯ ಪ್ರಕಾರ 2022ರ ವೇಳೆಗೆ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ದುಪ್ಪಟ್ಟಾಗುತ್ತದೆ. ಅದರಲ್ಲೂ ಕೈಗಾರಿಕಾ ಉತ್ಪನ್ನ ತಯಾರಿಕಾ ಕ್ಷೇತ್ರ ಮೂರನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಕೋರ್ಸ್‌ಗಳನ್ನು ಮಾಡುವವರಿಗೆ ಸಾಕಷ್ಟು ಬೇಡಿಕೆ ಇದೆ ಎನ್ನುತ್ತಾರೆ ಜಿಟಿಟಿಸಿ ಸಿಬ್ಬಂದಿ. ಎಸ್‌ಟಿ ಅಭ್ಯರ್ಥಿಗಳ ಸ್ಪಂದನೆ ಕಡಿಮೆ ಎಸ್‌ಸಿಪಿ–ಟಿಎಸ್‌ಪಿ ಯೋಜನೆಯಡಿ ರಾಜ್ಯದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಒಟ್ಟು 3,500 ಯುವಕ–ಯುವತಿಯರಿಗೆ ಉಚಿತ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ 2400 ಎಸ್‌ಸಿ ಮತ್ತು 930 ಎಸ್‌ಟಿ ಅಭ್ಯರ್ಥಿಗಳು ಸೇರಿದ್ದಾರೆ. ಸರ್ಕಾರ ಈ ಬಾರಿ ಕಳೆದ ವಾರ ಎಸ್‌ಇಪಿಗೆರೂ4.8 ಕೋಟಿ ಮತ್ತು ಟಿಎಸ್‌ಪಿಗೆರೂ1.95 ಕೋಟಿ ಸೇರಿದಂತೆ ಒಟ್ಟುರೂ6.75 ಕೋಟಿ ಅನುದಾನ ನೀಡಿದೆ. ಇದುವರೆಗೆ ಸುಮಾರು 2000 ಮಂದಿ ತರಬೇತಿಗೆ ಹಾಜರಾಗಿದ್ದು, ಇನ್ನೂ 1500 ಎಸ್‌ಸಿ ಮತ್ತು ಎಸ್‌ಟಿ ಮಂದಿ ಇದರ ಲಾಭ ಪಡೆಯಬಹುದು. ಜನಸಂಖ್ಯೆ ಕಡಿಮೆ ಅಥವಾ ಇದಕ್ಕಿಂತಲೂ ಉತ್ತಮ ಅವಕಾಶ ಸಿಗುತ್ತಿರುವುದರಿಂದ ಎಸ್‌ಟಿ ಸಮುದಾಯದ ಯುವಕರು ಯೋಜನೆಯ ಲಾಭ ಪಡೆಯುತ್ತಿಲ್ಲ ಎನ್ನುತ್ತಾರೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಅಬ್ದುಲ್‌ ಅಜೀಜ್‌. ಈ ಯೋಜನೆಯ ಲಾಭ ಪಡೆಯ ಬಯಸುವ ಎಸ್‌ಟಿ ಮತ್ತು ಎಸ್‌ಸಿ ಅಭ್ಯರ್ಥಿಗಳು ಜಿಲ್ಲಾ ಕೈಗಾರಿಕಾ ಕೇಂದ್ರವನ್ನು ಸಂಪರ್ಕಿಸಬಹುದು ಎನ್ನುತ್ತಾರೆ ಅವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.