ನಿಮ್ಮಿಷ್ಟದ ಆಯ್ಕೆಗೆ ವೃತ್ತಿ ಉತ್ಸವ ಪಿಯುಸಿ ನಂತರ ಹೆತ್ತವರ ಒತ್ತಾಯಕ್ಕೋ, ಸ್ನೇಹಿತರ ಒತ್ತಾಸೆಗೋ ಮಣಿದು, ಇಷ್ಟವಿಲ್ಲದ ಕ್ಷೇತ್ರಕ್ಕೆ ಹೋಗುವುದೇ ಹೆಚ್ಚು. ಅದರ ಬದಲಿಗೆ ತಮ್ಮಿಷ್ಟದ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಲ್ಲಿ ಅನುಕೂಲವಾಗುವಂತೆ, ಹೆತ್ತವರಿಗೂ, ವಿದ್ಯಾರ್ಥಿಗಳಿಗೂ ಅನುಕೂಲವಾಗುವಂಥ ಮೇಳವೊಂದನ್ನು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಪಿಯುಸಿ ನಂತರ ಮುಂದೆ ಯಾವ ಕೋರ್ಸ್‌ ಆಯ್ದುಕೊಳ್ಳಬೇಕು? ಹನ್ನೆರಡನೇ ತರಗತಿ ಮುಗಿಸಿ ಆಯಿತು, ಮುಂದೇನು? ಯಾವ ಕೋರ್ಸ್‌ಗೆ ಸೇರಿದರೆ ಒಳ್ಳೆಯದು? ಆಸಕ್ತಿ ಇರುವ ವಿಷಯದ ಕೋರ್ಸ್‌ಗೆ ಸೇರಬೇಕೋ ಅಥವಾ ಕ್ಲಿಷ್ಟ ಎನಿಸಿದರೂ ಹೆಚ್ಚು ಬೇಡಿಕೆ ಇರುವ ವೃತ್ತಿಪರ ಕೋರ್ಸ್‌ಗೆ ಸೇರಬೇಕೋ? ಸ್ನೇಹಿತರು ಸೇರಿದ ಕೋರ್ಸ್‌ಗೆ ಸೇರಲೇ ಅಥವಾ ಪೋಷಕರು ಹೇಳಿದ ಕೋರ್ಸ್‌ಗೆ ಸೇರಲೇ? ಯಾವ ಕೋರ್ಸ್‌ಗೆ ಯಾವ ಕಾಲೇಜಿಗೆ ಸೇರಿದರೆ ಒಳಿತು? ಯಾವ ಕಾಲೇಜು ಯಾವ ಕೋರ್ಸ್‌ಗಳ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದೆ? ಪಿಯುಸಿ ನಂತರ ವಿದ್ಯಾರ್ಥಿಗಳ ಮುಂದೆ ಇಂಥ ಸಾವಿರಾರು ಪ್ರಶ್ನೆಗಳು ಪೆಡಂಭೂತಗಳಾಗಿ ನಿಲ್ಲುತ್ತವೆ. ಕೋರ್ಸ್‌ಗಳ ಆಯ್ಕೆಯ ಗೊಂದಲಕ್ಕೆ ಸಿಲುಕುವ ಬಹುತೇಕ ವಿದ್ಯಾರ್ಥಿಗಳು ಯಾವುದೋ ಒಂದು ಕೋರ್ಸ್‌ಗೆ ಸೇರಿ, ತಮಗಿಷ್ಟವಿಲ್ಲದ ಕ್ಷೇತ್ರದಲ್ಲಿ ನೌಕರಿ ಮಾಡುತ್ತಾ, ‘ನಾನು ಏನೋ ಆಗಬೇಕಿತ್ತು. ಇನ್ನೇನೋ ಆದೆ’ ಎಂದು ಹಲುಬುವುದು ಸಾಮಾನ್ಯ. ಕೋರ್ಸ್‌ಗಳ ಆಯ್ಕೆಯಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಭವಿಷ್ಯವಿಡೀ ಹೀಗೆ ಕೊರಗುವುದು ಇದ್ದಿದ್ದೆ. ಈ ಗೊಂದಲಗಳ ನಿವಾರಣೆಗೆಂದು ‘ಫ್ಯೂಲ್‌ ಮೀಡಿಯಾ ಸಲೂಷನ್ಸ್‌’ ಹಾಗೂ ‘ಕೆ2 ಲರ್ನಿಂಗ್‌’ ಸಂಸ್ಥೆಗಳು ಜಂಟಿಯಾಗಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಎರಡು ದಿನಗಳ ‘ವೃತ್ತಿ ಉತ್ಸವ’ವನ್ನು ಆಯೋಜಿಸಿವೆ. ಡಿಸೆಂಬರ್‌ 6 ಮತ್ತು 7ರಂದು ಬೆಂಗಳೂರಿನ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಹಾಗೂ ಡಿ.20 ಮತ್ತು 21 ಮಂಗಳೂರಿನ ಟಿ.ಎಂ.ಎ ಪೈ ಸಭಾಂಗಣದಲ್ಲಿ ವೃತ್ತಿ ಉತ್ಸವ ನಡೆಯಲಿದೆ. ಡಿ. 6 ರಂದು ಬೆಳಿಗ್ಗೆ 9 ಗಂಟೆಗೆ ಜನಪ್ರಿಯ ಕಾದಂಬರಿಕಾರ ಚೇತನ್‌ ಭಗತ್‌ ಉತ್ಸವ ಉದ್ಘಾಟಿಸಲಿದ್ದಾರೆ. ಯಾವುದನ್ನು ವೃತ್ತಿ ಶಿಕ್ಷಣವಾಗಿ ಕಲಿಯಬೇಕು?, ಆಸಕ್ತಿಯ ಕ್ಷೇತ್ರವನ್ನು ವೃತ್ತಿಯಾಗಿ ಸ್ವೀಕರಿಸುವುದು ಹೇಗೆ?, ಹವ್ಯಾಸವನ್ನು ವೃತ್ತಿಯಾಗಿ ಬದಲಾಯಿಸಿಕೊಳ್ಳಬಹುದೇ? ಎಂಬ ಹಲವು ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಶಿಕ್ಷಣ ತಜ್ಞರಿಂದ ಉತ್ತರ ಕಂಡುಕೊಳ್ಳಬಹುದು. ಎಂವಿಜೆ ಇಂಜಿನಿಯರಿಂಗ್ ಕಾಲೇಜ್, ಪಿಇಎಸ್ ವಿಶ್ವವಿದ್ಯಾಲಯ, ಎಸ್‌ಆರ್‌ಎಂ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಸಮೂಹ ಸಂಸ್ಥೆಗಳು, ರೇವಾ ವಿಶ್ವವಿದ್ಯಾಲಯ, ಅಲೈಯೆನ್ಸ್ ವಿಶ್ವವಿದ್ಯಾಲಯ, ರಾಮಯ್ಯು ಸಂಸ್ಥೆಗಳು, ಅಮಿಟಿ ವಿಶ್ವವಿದ್ಯಾಲಯ, ಎಐಎಂಎಸ್, ಡಿಎಸ್‌ಕೆ ಅಂತರಾಷ್ಟ್ರೀಯ ಡಿಸೈನ್ ಸ್ಕೂಲ್, ಸಂಭ್ರಮ್ ಸಮೂಹ, ಡಾನ್ ಬಾಸ್ಕೋ, ಐಇಎಸ್, ಎಸ್‌ಬಿಐ, ಟಿವಿಎಸ್, ಐನೊಕ್ಸ್ ಮತ್ತಿತರ ಸಂಸ್ಥೆಗಳು ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ವೃತ್ತಿ ಆಯ್ಕೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದ ಜತೆಗೆ ಈ ವೃತ್ತಿ ಉತ್ಸವದಲ್ಲಿ ಭಾಗವಹಿಸುತ್ತಿವೆ. ಎರಡು ದಿನಗಳ ಕಾಲ ನಡೆಯಲಿರುವ ಈ ಉತ್ಸವಕ್ಕೆ ಪ್ರವೇಶ ಉಚಿತ. ಎಂಜಿನಿಯರಿಂಗ್, ವೈದ್ಯಕೀಯ, ನಿರ್ವಹಣೆ (ಮ್ಯಾನೇಜ್‌ಮೆಂಟ್), ಡಿಸೈನಿಂಗ್‌, ಅನಿಮೇಷನ್, ಚಾರ್ಟೆಡ್‌ ಅಕೌಂಟೆಂಟ್‌ ಸೇರಿದಂತೆ ಹೊಸ ಪೀಳಿಗೆ ವೃತ್ತಿ ಆಯ್ಕೆಗಳು ಹಾಗೂ ಕಲಿಕೆಯ ಆಸಕ್ತಿಗಳ ಬಗ್ಗೆ ವೃತ್ತಿ ಉತ್ಸವದಲ್ಲಿ ಕಾರ್ಯಾಗಾರಗಳು ನಡೆಯಲಿವೆ. ಇಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಸಂದೇಹಗಳಿಗೆ ಶಿಕ್ಷಣತಜ್ಞರಿಂದ ನೇರವಾಗಿ ಪರಿಹಾರ ಕಂಡುಕೊಳ್ಳಬಹುದು. ಜತೆಗೆ ಮಾದರಿ ಸಿಇಟಿ ಪರೀಕ್ಷೆ, ಮಾನಸಿಕ ಸಾಮರ್ಥ್ಯ ಪರೀಕ್ಷೆ ಹಾಗೂ ಉಚಿತ ಸಮಾಲೋಚನೆಯೂ ಉತ್ಸವದಲ್ಲಿದೆ. ಹೊರ ರಾಜ್ಯ ಹಾಗೂ ವಿದೇಶದಲ್ಲಿ ಕಲಿಕೆಗಿರುವ ಅವಕಾಶಗಳು ಹಾಗೂ ವೃತ್ತಿ ಆಯ್ಕೆಗಳ ಬಗ್ಗೆ ಉತ್ಸವದಲ್ಲಿ ಚರ್ಚೆ– ಸಂವಾದಗಳು ನಡೆಯಲಿವೆ. ವಿವಿಧ ಕೋರ್ಸ್‌ಗಳ ಮಾಹಿತಿಯ ಜತೆಗೆ ಆಯಾ ಕೋರ್ಸ್‌ಗಳ ಶುಲ್ಕ, ಶೈಕ್ಷಣಿಕ ಸಾಲ, ವಿದ್ಯಾರ್ಥಿ ವೇತನದ ಮಾಹಿತಿಯೂ ಈ ಉತ್ಸವದಲ್ಲಿ ದೊರಕಲಿದೆ. ‘ವೃತ್ತಿ ಶಿಕ್ಷಣದಲ್ಲಿ ಕೋರ್ಸ್‌ಗಳ ಆಯ್ಕೆಯ ಬಗ್ಗೆ ವಿದ್ಯಾರ್ಥಿಗಳ ಗೊಂದಲ ನಿವಾರಿಸಲು ಈ ಉತ್ಸವ ಆಯೋಜಿಸಲಾಗಿದೆ. ಮೂರನೇ ಆವೃತ್ತಿಯ ಈ ಬಾರಿಯ ವೃತ್ತಿ ಉತ್ಸವದಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೆಚ್ಚೆಚ್ಚು ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸಿ ಪಿಯುಸಿ ನಂತರದ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆಯಬೇಕು’ ಎನ್ನುತ್ತಾರೆ ಫ್ಯೂಲ್‌ ಮೀಡಿಯಾ ಸಲೂಷನ್ಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ನಾಯ್ಕ್. ‘ಈ ಉತ್ಸವದ ಅಂಗವಾಗಿ ಪಿಯುಸಿ ನಂತರದ ಕೋರ್ಸ್‌ಗಳ ಬಗ್ಗೆ ಸಮಗ್ರ ಮಾಹಿತಿಯುಳ್ಳ ಮಾಹಿತಿ ಕೈಪಿಡಿಯನ್ನು ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಿದ್ಯಾರ್ಥಿಗೂ ಈ ಮಾಹಿತಿ ಕೈಪಿಡಿ ತಲುಪಿಸುವ ಉದ್ದೇಶ ಹೊಂದಿದ್ದೇವೆ. ಈ ಕೈಪಿಡಿಯಲ್ಲಿ ವೃತ್ತಿ ಶಿಕ್ಷಣ ಹಾಗೂ ಕೋರ್ಸ್‌ ಆಯ್ಕೆಯ ಕುರಿತ ಸಾಕಷ್ಟು ಮಾಹಿತಿಯನ್ನು ಒದಗಿಸಲಾಗಿದೆ’ ಎಂದು ಕೆ2 ಲರ್ನಿಂಗ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಪಾಲ್‌ ಜೈನ್‌ ತಿಳಿಸಿದರು. ಹೆಚ್ಚಿನ ಮಾಹಿತಿಗೆ 70220 19103/ 98444 31199 ಕರೆ ಮಾಡಬಹುದು ಅಥವಾ ವೆಬ್‌ಸೈಟ್ .. ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.