ಕಲಿಕಾ ವಿಧಾನ ಅರಿಯಿರಿ ಮಕ್ಕಳ ಕಲಿಕಾ ಸಾಮರ್ಥ್ಯ ಅರಿಯದೆ, ಉತ್ತಮ ಫಲಿತಾಂಶಕ್ಕಾಗಿ ಪೀಡಿಸುವುದೂ ಅಪರಾಧ. ಅವರ ಕಷ್ಟವನ್ನರಿಯದೇ ಪಾಲಕರು ತಮ್ಮ ಇಷ್ಟವನ್ನು ಹೇರುವುದು ಕ್ರೌರ್ಯವೆಂದೇ ಹೇಳಬಹುದು. ಮಗುವಿಗೆ ಓದಲು ಆಗುವುದಿಲ್ಲ, ಚೆನ್ನಾಗಿ ಓದಿದರೆ, ಬರೆಯಲು ಆಗುವುದಿಲ್ಲ. ಬರೆಯಲು ಬರುತ್ತದೆ, ಆದರೆ ಸ್ಪೆಲ್ಲಿಂಗ್‌ಗಳು, ಅಕ್ಷರಗಳು ಹಿಂದೆ ಮುಂದೆ ಆಗುತ್ತವೆ. ಅಂಕಿಗಳಲ್ಲಿ ಜಾಣೆ, ಭಾಷಾ ಕೌಶಲವಿಲ್ಲ... ಭಾಷೆ ಸಲೀಸು, ಗಣಿತ ಲೆಕ್ಕಕ್ಕೇ ಬೇಡ... ಇಂಥ ಹತ್ತು ಹಲವು ಸಮಸ್ಯೆಗಳೀಗ ಪಾಲಕರ ಬಳಿ ಇವೆ. ಸ್ವಲ್ಪ ತಿಳಿದವರಾದರೂ ಇದಕ್ಕೆ ಕಲಿಕಾ ದೋಷ ಅಂತಾರಾ? ಇದು ಕಲಿಕಾ ನ್ಯೂನತೆಯೇ? ಅಂಥ ಮಗು, ಸಮಸ್ಯಾತ್ಮಕ ಮಗುವೇ? ಭಾಷೆ ಅಥವಾ ಅಂಕಿಅಂಶವನ್ನು ಗುರುತಿಸಲಾಗದ ಅಸಹಾಯಕತೆಯೇ? ಇಂಥ ಎಲ್ಲ ಪ್ರಶ್ನೆಗಳನ್ನೂ ಮುಂದಿರಿಸಿಕೊಂಡು ಎಲ್ಲರಂತಲ್ಲ ನಮ್ಮ ಮಕ್ಕಳು ಎಂದು ಕೊರಗುತ್ತಾರೆ. ಆದರೆ ಮಗುವಿನ ಬಗೆಗಿರುವ ಈ ನಕಾರಾತ್ಮಕ ಭಾವವನ್ನು ಮೊದಲು ಕಿತ್ತೊಗೆಯಬೇಕು. ಇದು ದೋಷ ಅಲ್ಲ. ನ್ಯೂನತೆಯೂ ಅಲ್ಲ. ಮಗುವಿನ ಕಲಿಕಾ ವಿಧಾನದಲ್ಲಿ ಬದಲಾವಣೆ ತರಬೇಕಿದೆ. ಬೇರೆಯದ್ದೇ ಕಲಿಕಾ ವಿಧಾನ ಬಯಸುವ ಮಗುವಿದು ಎಂಬ ನಿರ್ಧಾರಕ್ಕೆ ಬರಬೇಕು. ಮುಂದಿನ ಹಂತವೇನು? ನಿಮ್ಮ ಮಗು ಇನ್ನೂ ಯು.ಕೆ.ಜಿ, ಎಲ್.ಕೆ.ಜಿಯಲ್ಲಿದ್ದರೆ, ಒಂದನೇ ತರಗತಿ, ಎರಡನೇ ತರಗತಿಯಲ್ಲಿ ಓದುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ. ಸಮಸ್ಯೆ ಇರುವ ವಿಷಯಗಳ ಕಲಿಕಾ ವಿಧಾನದಲ್ಲಿ ಬದಲಾವಣೆ ತಂದು ಪ್ರಯತ್ನಿಸಿ. ಸಾಮಾನ್ಯವಾಗಿ 8 ವರ್ಷಗಳವರೆಗೂ ಮಗುವಿನ ಶೈಕ್ಷಣಿಕ ಮೌಲ್ಯಮಾಪನವನ್ನು ಮಾಡುವುದಿಲ್ಲ. ಆದರೆ ಮೂರನೆಯ ತರಗತಿ ಓದುತ್ತಿರುವಾಗ ಅಥವಾ ನಾಲ್ಕನೆ ತರಗತಿಗೆ ಪ್ರವೇಶ ಪಡೆಯುತ್ತಿರುವಾಗ ಓದು–ಬರಹ, ಕೇಳುವ, ಅಂಕಿ ಬರೆಯುವ, ಹೇಳುವ ಕ್ರಮದಲ್ಲಿ ವ್ಯತ್ಯಾಸವಾಗುತ್ತಿದೆ ಎಂದೆನಿಸಿದರೆ ಒಮ್ಮೆ ಮೌಲ್ಯಮಾಪನ ಮಾಡಿಸುವುದು ಒಳಿತು. ಮೊದಲ ಹಂತದಲ್ಲಿ ಪ್ರತಿಯೊಂದು ಶಾಲೆಯೂ ಇಂಥ ಸಣ್ಣ ಸಣ್ಣ ಪರೀಕ್ಷೆಗಳನ್ನು ಏರ್ಪಡಿಸುವುದು ಒಳಿತು. ಅಂದರೆ ಎಂಟು ವರ್ಷಕ್ಕೆ ಮಗುವಿನ ಶಬ್ದ ಸಂಪತ್ತು ಎಷ್ಟಿರಬೇಕು? ಮಗುವಿನ ಭಾಷಾ ಸಾಮರ್ಥ್ಯ, ಗಣಿತದ ಸಾಮರ್ಥ್ಯ, ಕೇಳುವುದರಲ್ಲಿ, ಗ್ರಹಿಸುವುದರಲ್ಲಿ, ಗ್ರಹಿಸಿದ್ದನ್ನು ಮತ್ತೆ ಅಭಿವ್ಯಕ್ತಿಗೊಳಿಸುವಲ್ಲಿ ಕೌಶಲ ಹೇಗಿದೆ ಎಂದು ಪರಿಶೀಲಿಸುತ್ತಾರೆ. ಮೌಲ್ಯಮಾಪನದಲ್ಲಿ ಸಾಮಾನ್ಯ ಸಮಸ್ಯೆ, ಗಂಭೀರ ಸಮಸ್ಯೆ, ತೀವ್ರತರನಾದ ಸಮಸ್ಯೆಯೆಂದು ಗುರುತಿಸಲಾಗುತ್ತದೆ. ಸಾಮಾನ್ಯ ಸಮಸ್ಯೆ ಇದ್ದರೆ, ಕಲಿಕಾ ವಿಧಾನದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಗಳನ್ನು ಮಾಡಬಹುದು. ಇದಕ್ಕೆ ಪಾಲಕರ ಪಾಲ್ಗೊಳ್ಳುವಿಕೆಯ ಅಗತ್ಯವಿರುತ್ತದೆ. ಗಂಭೀರ ಸಮಸ್ಯೆಯಿದ್ದರೆ ಮಗುವಿಗೆ ಅಗತ್ಯವಿರುವ ಕ್ಷೇತ್ರಗಳಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಿ ಕಲಿಯುವ ಅಗತ್ಯವನ್ನು ಎತ್ತಿಹಿಡಿಯಲಾಗುತ್ತದೆ. ತೀವ್ರತರನಾದ ಸಮಸ್ಯೆ ಕಂಡು ಬಂದಲ್ಲಿ ಮಗುವಿಗೆ ಶೈಕ್ಷಣಿಕ ಮೌಲ್ಯಮಾಪನದ ಅಗತ್ಯವಿದೆ ಎಂದರ್ಥ. ಈ ಮೌಲ್ಯಮಾಪನವು ಮಾನ್ಯತೆ ಪಡೆದಿರುವ ಸಂಸ್ಥೆಗಳಲ್ಲಿಯೇ ಆಗಬೇಕಿರುವುದು ಅತ್ಯಗತ್ಯ. ಕರ್ನಾಟಕದಲ್ಲಿ ಸ್ಪ್ಯಾಸ್ಟಿಕ್ ಸೊಸೈಟಿ ಹಾಗೂ ನಿಮ್ಹಾನ್ಸ್ ಸಂಸ್ಥೆಗಳು ಮಾತ್ರ ಮಾನ್ಯತೆ ಪಡೆದಿರುವ ಸಂಸ್ಥೆಗಳಾಗಿವೆ. ಈ ಸಂಸ್ಥೆಯ ಶಿಫಾರಸಿನ ಮೇರೆಗೆ ಮಗುವಿನ ಕಲಿಕಾ ವಿಧಾನವನ್ನು ಬದಲಿಸಬಹುದು. ಮುಕ್ತ ಕಲಿಕೆಯ ಅವಕಾಶ ಮಾಡಿಸಿಕೊಡಬಹುದು. ಗುರುತಿಸುವುದು ಹೇಗೆ? ಮಗು ಓದುವಾಗ ಹಿಮ್ಮುಖವಾಗಿ ಓದುತ್ತಿದ್ದರೆ, -, , , ಗಮನಿಸಬೇಕು. ಒಂದೆರಡು ವರ್ಷಗಳ ನಂತರವೂ ಸರಳ ಶಬ್ದಗಳನ್ನೂ ಹಿಂದುಮುಂದಾಗಿ ಇಲ್ಲವೇ ಹಿಮ್ಮುಖವಾಗಿ ಓದುತ್ತಿದ್ದರೆ ಶಾಲೆಯಲ್ಲಿ ಶೈಕ್ಷಣಿಕ ಮೌಲ್ಯಮಾಪನಕ್ಕೆ ಒಳಪಡಿಸುವುದು ಅತ್ಯಗತ್ಯ. ಕೆಲವು ಮಕ್ಕಳು ಭಾಷೆಯಲ್ಲಿ ಪರಿಣತರಾಗಿರುತ್ತಾರೆ. ಅವರ ವ್ಯಾಕರಣ, ಶಬ್ದ ಸಂಪತ್ತು, ಭಾಷಾ ಸೌಂದರ್ಯ ಎಲ್ಲವೂ ಪರಿಣತರ ಮಟ್ಟಕ್ಕೆ ಬೆಳೆದಿರುತ್ತದೆ. ಆದರೆ ಗಣಿತ ಮಾತ್ರ ಕಬ್ಬಿಣದ ಕಡಲೆ. ಎರಡೆರಡು ಅಂಕಿಗಳನ್ನೂ ಕೂಡಲಾಗುವುದಿಲ್ಲ. ಆದರೆ ಅದು ಅಸಹಾಯಕತನವಲ್ಲ. ಗಣಿತವಿಲ್ಲದೇ ಬದುಕಿಲ್ಲ ಎನ್ನುವಷ್ಟು ಒತ್ತಡಕ್ಕೆ ಮಕ್ಕಳನ್ನು ಈಡು ಮಾಡಬಾರದು. ಅದಕ್ಕಾಗಿ ವಿಶೇಷ ತರಗತಿ, ತರಬೇತಿಗಳನ್ನು ನೀಡುತ್ತ ಬಂದರೆ ಮಕ್ಕಳು ಸಾಮಾನ್ಯ ಮಕ್ಕಳ ಕಲಿಕಾ ಮಟ್ಟವನ್ನು ಸಾಧಿಸುವ ಸ್ಥಿತಿಗೆ ಬಂದೇ ಬರುತ್ತಾರೆ. ಆದರೆ ಅವರ ಪರಿಣತಿ ಇರುವ ಕ್ಷೇತ್ರವನ್ನು ಗುರುತಿಸಿ, ಪ್ರೇರಣೆ ನೀಡಿದರೆ, ಅಸಾಮಾನ್ಯ ಸಾಧನೆ ಅವರಿಂದ ಸಾಧ್ಯವಿದೆ. ಇದು ಮುಕ್ತ ಕಲಿಕೆಯಲ್ಲಿ ಆಗುವಂಥದ್ದು. ನಾಲ್ಕನೆಯ ತರಗತಿಗೆ ಮುಂಚೆ ಈ ಮೌಲ್ಯ ಮಾಪನವಾಗದಿದ್ದರೆ? ಮಗುವಿನ ಕಲಿಕೆಯು ಸಮರ್ಪಕವಾಗಿಲ್ಲ, ಮಗು ಕಲಿಯಲಾರದು, ಜಾಣ್ಮೆ ಇಲ್ಲ ಎಂಬ ತೀರ್ಮಾನಕ್ಕೆ ಬರುವುದು ಸುಲಭ. ಆದರೆ ಅದರೊಂದಿಗೆ ಜಾಣ್ಮೆ, ಪರಿಣತಿ ಇರುವ ಕ್ಷೇತ್ರದಲ್ಲಿಯೂ ಮಗುವನ್ನು ಬಡವಾಗಿಸುವುದು ನ್ಯಾಯವೇ? ಮಗು ತನಗೇನೂ ಬಾರದು ಎಂಬ ಮನೋಭಾವದಲ್ಲಿ ತೊಳಲಾಡುತ್ತದೆ. ಇಲ್ಲವೇ ತನ್ನತನ ಸ್ಥಾಪಿಸಲು ಅತಿರೇಕವೆನಿಸುವಷ್ಟು ತುಂಟತನ ಮಾಡುತ್ತದೆ. ಇಲ್ಲವೇ ಹಟ ಹಿಡಿಯುತ್ತದೆ. ಇಲ್ಲವೇ ಅಂತರ್ಮುಖಿಯಾಗುತ್ತದೆ. ಮಗು ಬೆಳೆಯುತ್ತಿರುವಾಗಲೇ ಶೈಕ್ಷಣಿಕ ಮೌಲ್ಯಮಾಪನವಾದರೆ ವಿಶೇಷ, ತರಬೇತಿ, ತರಗತಿಗಳ ಮೂಲಕ ಆತ್ಮವಿಶ್ವಾಸ ಹೆಚ್ಚಿಸಬಹುದು. ಸಕಾಲದಲ್ಲಿ ಮೌಲ್ಯಮಾಪನವಾದರೆ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚುತ್ತದೆ. ಪಾಲಕರಲ್ಲಿಯೂ ಅವರ ಮಕ್ಕಳ ಬಗ್ಗೆ ಯಾವುದೇ ಬಗೆಯ ಅಸಮಾಧಾನಗಳು ಇರುವುದಿಲ್ಲ. ಒಂದು ಮಗುವಿನ ವ್ಯಕ್ತಿತ್ವ ಬೆಳವಣಿಗೆಗೆ ಇಂಥ ಸಹಾಯ ಮತ್ತು ಬೆಂಬಲ ಅಗತ್ಯವಾಗಿರುತ್ತದೆ. ಮಗುವಿಗೇನು ಬೇಕು ಎನ್ನುವುದನ್ನು ಹುಡುಕಿ ನೀಡಬೇಕೇ ಹೊರತು, ವ್ಯವಸ್ಥೆಯನ್ನೇ ಮಗುವಿನ ಮೇಲೆ ಹೇರಿ, ನಮ್ಮ ನಿರೀಕ್ಷೆಗಳನ್ನು ತಲುಪಲಿ ಎಂದು ಬಯಸುವುದು ಇಂಥ ಮಕ್ಕಳೊಂದಿಗಿನ ಕ್ರೌರ್ಯವಾಗುತ್ತದೆ. ಮಕ್ಕಳ ಶೈಕ್ಷಣಿಕ ಮೌಲ್ಯಮಾಪನಕ್ಕೆ ಸಂಪರ್ಕಿಸಿ, ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.