ಯಂಗ್‌ ಇಂಡಿಯಾ ಫೆಲೋಶಿಪ್‌ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ, ಸಮಾಜ ವಿಜ್ಞಾನ, ವಾಣಿಜ್ಯ, ತಂತ್ರಜ್ಞಾನ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ಮಾತ್ರ ಬೋಧನೆ ಮಾಡಲಾಗುತ್ತಿದೆ. ಈ ಜ್ಞಾನ ದೇಗುಲಗಳಿಂದ ಹೊರಬಂದ ವಿದ್ಯಾರ್ಥಿಗಳು ನೇರವಾಗಿ ಉದ್ಯೋಗಕ್ಕೆ ಸೇರುತ್ತಾರೆ. ಹೀಗೆ ಕೆಲಸಕ್ಕೆ ಸೇರಿದವರು ಆರಂಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಸಂಬಂಧಿತ ವಿಷಯದಲ್ಲಿ ಪದವಿ ಪಡೆದಿರುತ್ತಾರೆಯೇ ವಿನಾ ಕೆಲಸಕ್ಕೆ ಬೇಕಾಗಿರುವ ಅಗತ್ಯ ಕೌಶಲ್ಯಗಳನ್ನು ಕಲಿತಿರುವುದಿಲ್ಲ. ಕೆಲವು ಕಂಪೆನಿಗಳು ಆಗಾ ತಾನೆ ವಿಶ್ವವಿದ್ಯಾಲಯದಿಂದ ಹೊರ ಬಂದ ವಿದ್ಯಾರ್ಥಿಗಳಿಗೆ ಕೆಲಸ ನಿರಾಕರಿಸುತ್ತವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಗತ್ಯ ಕೌಶಲ ತರಬೇತಿಗಾಗಿಯೇ ಅಶೋಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಹರಿಯಾಣದಲ್ಲಿರುವ ಈ ವಿಶ್ವವಿದ್ಯಾಲಯ ಕೌಶಲ ಅಭಿವೃದ್ಧಿಗಾಗಿಯೇ ಹತ್ತಾರು ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಿದೆ. ಇದರ ಜೊತೆಗೆ ಯುವಕರಿಗೆ ನಾಯಕತ್ವ ಗುಣಗಳ ಬಗ್ಗೆ ತರಬೇತಿ ನೀಡಲು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ ಅನ್ನು ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಇದನ್ನು ‘ಯಂಗ್‌ ಇಂಡಿಯಾ ಫೆಲೋಶಿಪ್‌’ಎಂದು ಸಹ ಕರೆಯಲಾಗುತ್ತದೆ. ಪ್ರಸ್ತುತ 2014ನೇ ಸಾಲಿನ ‘ಯಂಗ್‌ ಇಂಡಿಯಾ ಫೆಲೋಶಿಪ್‌’ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ನಾಯಕರು ಎಂದರೆ, ಕೇವಲ ರಾಜಕೀಯ ಅಥವಾ ಸಿನಿಮಾ ನಾಯಕರಲ್ಲ! ಸಮಾಜದ ಅಭಿವೃದ್ಧಿಗೆ ಪೂರಕವಾಗಿರುವ ಹಲವು ಕೇತ್ರಗಳಲ್ಲಿ ದುಡಿಯುತ್ತಿರುವವರೂ ನಾಯಕರು. ವಿವಿಧ ಕ್ಷೇತ್ರಗಳಿಗೆ ಪ್ರವೇಶಿಸುವ ಯುವಕರಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಉತ್ತಮ ನಾಯಕರನ್ನಾಗಿ ರೂಪಿಸುವುದು ಈ ಫೆಲೋಶಿಪ್‌ನ ಮುಖ್ಯ ಉದ್ದೇಶ. ಪ್ರತಿ ವರ್ಷ 200 ವಿದ್ಯಾರ್ಥಿಗಳಿಗೆ ಮಾತ್ರ ಫೆಲೋಶಿಪ್‌ ನೀಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಒಂದು ವರ್ಷ ತರಬೇತಿ ನೀಡಲಾಗುವುದು. ಅರ್ಹತೆಗಳು... * ಫೆಲೋಶಿಪ್‌ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಉತ್ತಿರ್ಣರಾಗಿರಬೇಕು. * ಪದವಿ ಅಥವಾ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. * ವ್ಯವಹಾರಿಕ ಭಾಷೆಯಾದ ಇಂಗ್ಲಿಷ್‌ ಮಾತನಾಡಲು, ಬರೆಯಲು ಹಾಗೂ ಸ್ಪಷ್ಟವಾಗಿ ಓದಲು ಗೊತ್ತಿರಬೇಕು. * 28 ವರ್ಷದೊಳಗಿನ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ವಯೋಮಿತಿ ಸಡಿಲಿಕೆಯಲ್ಲಿ ಯಾವುದೇ ಮೀಸಲಾತಿ ಇರುವುದಿಲ್ಲ. * ಭಾರತೀಯ ಪ್ರಜೆಗಳು ಮಾತ್ರ ಈ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಯ್ಕೆ ವಿಧಾನ... ಮೂರು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳನ್ನು ಮೊದಲ ಹಂತದಲ್ಲಿ ದೂರವಾಣಿ ಮೂಲಕ ಸಂದರ್ಶನ ಮಾಡಲಾಗುವುದು. ಇದರಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಎರಡನೆ ಹಂತವಾದ ನೇರ ಸಂದರ್ಶನಕ್ಕೆ ಕರೆಯಲಾಗುವುದು. ನೇರ ಸಂದರ್ಶನವು ದೆಹಲಿ, ಕೊಲ್ಕತ್ತಾ, ಬೆಂಗಳೂರು ಮತ್ತು ಮುಂಬೈ ನಗರಗಳಲ್ಲಿ ನಡೆಯಲಿದೆ. ನೇರ ಸಂದರ್ಶನದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳನ್ನು ಫೆಲೋಶಿಪ್‌ಗೆ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ, ಶಬ್ದ ಅರಿವು, ಭಾಷೆ ಮೇಲಿನ ಹಿಡಿತ. ವಿಶ್ಲೇಷಣಾ ಮನೋಧರ್ಮ ಮತ್ತು ಪದವಿ ವಿಷಯಗಳಲ್ಲಿನ ಜ್ಞಾನದ ಮಟ್ಟವನ್ನು ಪರೀಕ್ಷಿಸಲಾಗುವುದು. ಫೆಲೋಶಿಪ್‌ ಅವಧಿ ಮತ್ತು ಭತ್ಯೆ: ಅಶೋಕ ವಿಶ್ವವಿದ್ಯಾಲಯದ ನವದೆಹಲಿ ಸ್ನಾತಕೋತ್ತರ ಕೇಂದ್ರದಲ್ಲಿ ಈ ಫೆಲೋಶಿಪ್‌ ಕೋರ್ಸ್‌ ನಡೆಯಲಿದೆ. ಕೋರ್ಸ್‌ ಒಂದು ವರ್ಷ ಮಾತ್ರ. ಫೆಲೋಶಿಪ್‌ ಅನ್ನು ಯಶಸ್ವಿಯಾಗಿ ಪೂರೈಸಿದವರಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ನಿಗಮ ಮಂಡಳಿಗಳು, ಸಚಿವಾಲಯಗಳಲ್ಲಿ ಉದ್ಯೋಗ ಕಲ್ಪಿಸುವ ಸಾಧ್ಯತೆಗಳಿವೆ. ಫೆಲೋಶಿಪ್‌ ಅವಧಿಯಲ್ಲಿ ದಿನಭತ್ಯೆ, ಪ್ರವಾಸ ಭತ್ಯೆ ಸೇರಿದಂತೆ ಇತರೆ ಭತ್ಯೆಗಳನ್ನು ನೀಡಲಾಗುವುದು. ವಸತಿ ಮತ್ತು ಊಟದ ವೆಚ್ಚವನ್ನು ಪ್ರತ್ಯೇಕವಾಗಿ ಭರಿಸಲಾಗುವುದು. ಅರ್ಜಿ ಸಲ್ಲಿಸುವ ವಿಧಾನ... ಅರ್ಜಿಗಳನ್ನು ಎರಡು ವಿಧಾನದಲ್ಲಿ ಸಲ್ಲಿಸಬಹುದು. .. ಈ ವೆಬ್‌ಸೈಟ್‌ಗೆ ಲಾಗಿನ್‌ ಆಗುವ ಮೂಲಕ, ಆನ್‌ಲೈನ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಅಂಚೆ ಮುಖಾಂತರ ಅರ್ಜಿ ಸಲ್ಲಿಸುವವರು ಇದೇ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅರ್ಜಿ ಫಾರಂ ಅನ್ನು ಡೌನ್‌ ಲೋಡ್‌ ಮಾಡಿಕೊಂಡು ಅಗತ್ಯ ದಾಖಲೆ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಅಂಚೆ ಮುಖಾಂತರ ಸಲ್ಲಿಸಬಹುದು. ವಿದ್ಯಾರ್ಥಿಗಳ ಇ–ಮೇಲ್‌ ವಿಳಾಸ ರಿಜಿಸ್ಟರ್ಡ್‌ ಆದ ಮೇಲೆಯೇ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸುವುದು ಸೂಕ್ತವಾದದ್ದು. ಇದಕ್ಕೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಪ್ರಮುಖ ದಿನಾಂಕಗಳು... ಆಸಕ್ತ ವಿದ್ಯಾರ್ಥಿಗಳು ಅರ್ಜಿಯನ್ನು ಡಿಸೆಂಬರ್‌ 15ರಿಂದ 2015 ಫೆಬ್ರುವರಿ 28ನೇ ತಾರೀಖಿನವರೆಗೂ ಸಲ್ಲಿಸಬಹುದು. ತದನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. 2015ರ ಮಾರ್ಚ್‌ 1ರಿಂದ 15ನೇ ತಾರೀಖಿನವರೆಗೂ ದೂರವಾಣಿ ಸಂದರ್ಶನ ನಡೆಸಲಾಗುವುದು. ಮಾರ್ಚ್‌ 15ರಿಂದ ಮೇ15ರ ವರೆಗೆ ನೇರ ಸಂದರ್ಶನ ಹಾಗೂ ಏಪ್ರಿಲ್‌ 15ರಿಂದ ಮೇ 30ರವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ. ಜುಲೈ 15 ರಿಂದ ತರಗತಿಗಳು ಪ್ರಾರಂಭವಾಗಲಿವೆ. ಫೆಲೋಶಿಪ್‌ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು .. ವೆಬ್‌ಸೈಟ್‌ ಮುಖಾಂತರ ಪಡೆಯಬಹುದು. ಅಥವಾ ಖುದ್ದಾಗಿ ನಂ.2, ಗ್ರೀನ್‌ ಅವೆನ್ಯೂ ರೋಡ್‌, ಗ್ರೀನ್‌ ಅವೆನ್ಯೂ, ಪಾಕೇಟ್‌ ಡಿ3, ನವದೆಹಲಿ –11007070 ಈ ವಿಳಾಸವನ್ನು ಸಂಪರ್ಕಿಸಬಹುದು. ಮೊಬೈಲ್‌ ಸಂಖ್ಯೆ: 91 1165652645. ಇಮೇಲ್‌ ವಿಳಾಸ: @.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.