ಮಕ್ಕಳ ಮನದಾಳದ ಮಾತು ಕೇಳಿ ಪ್ರಕರಣ -1 ಬೆಳಿಗ್ಗೆ ವಾಕಿಂಗ್‌ನಿಂದ ಮನೆಗೆ ವಾಪಸ್ ಬರುತ್ತಿದ್ದೆವು, ನಾವು ಬರುವ ಹಾದಿಯಲ್ಲಿ ಒಂದು ಶಾಲೆ ಇದೆ, ಪ್ರತಿ ದಿನ ಮಕ್ಕಳು ಶಾಲೆಗೆ ಹೋಗುವುದನ್ನು ನೋಡುತ್ತಿರುತ್ತೇವೆ, ಒಬ್ಬ ಹುಡುಗಿ ಸುಮಾರು ಎಂಟು ವರ್ಷವಿರಬಹುದು, ಶಾಲೆಗೆ ಹೋಗುವುದಿಲ್ಲ ಎಂದು ಮನೆಗೆ ಹೋಗುತ್ತಿದ್ದವಳನ್ನು ಬಲವಂತವಾಗಿ ಅವರ ತಂದೆಯೋ ಅಥವಾ ಚಿಕ್ಕಪ್ಪನಿರಬಹುದು, ಎಳೆದುಕೊಂಡೇ ಶಾಲೆಗೆ ಕರೆದುಕೊಂಡು ಹೋಗಿ ಒಂದು ಏಟು ಕೊಟ್ಟು, ಶಾಲೆಗೆ ಬಿಟ್ಟು ಬಂದರು. ಆ ಹೆಣ್ಣು ಮಗು ಹೋಗುವುದಿಲ್ಲವೆಂದು ಕಿರುಚುತ್ತಲೇ ಇತ್ತು. ಪ್ರಕರಣ -2 ಒಂಬತ್ತು ವರ್ಷದ ಹುಡುಗ ಬಹಳ ತುಂಟ ಎಂದು ಒಂದು ಆಶ್ರಮದ ಶಾಲೆಗೆ ಬಿಟ್ಟು ಬಂದರು, ಮಗು ತಾಯಿಯನ್ನು ಬಿಟ್ಟಿರಲಾಗದೆ ಮತ್ತೆ ಮನೆಗೆ ಓಡಿ ಬಂದ, ಬಲವಂತ ಮಾಡಿ ಹೋಗುವುದಿಲ್ಲವೆಂದು ಎಷ್ಟು ಹಟ ಮಾಡಿದರೂ ವಾಪಸ್ ಆಶ್ರಮದ ಶಾಲೆಗೆ ಬಿಟ್ಟು ಬಂದರು. ಸ್ವಲ್ಪ ದಿನದ ನಂತರ ಮಗುವಿನ ಶವ ಮನೆಗೆ ಬಂದಿತು. ಅವನು ಓಡಿ ಹೋಗಲು ಪ್ರಯತ್ನಿಸಿದಾಗ ಕಾಡು ಪ್ರಾಣಿ ಅವನನ್ನು ಸಾಯಿಸಿರಬಹುದೆಂದು ಶಂಕಿಸಲಾಯಿತು. ಆದರೆ ನಡೆದದ್ದೇ ಬೇರೆ ಆ ಆಶ್ರಮದಲ್ಲಿ ಮಕ್ಕಳ ಅಂಗಗಳನ್ನು ಕಸಿ ಮಾಡಿ ದುಡ್ಡು ಮಾಡುವ ಕಾರ್ಯ ನಡೆಯುತ್ತಿತ್ತು ಈ ಮಗುವಿಗೆ ಗೊತ್ತಾಗಿದ್ದರಿಂದ ಅದನ್ನು ಸಾಯಿಸಲಾಯಿತು. ಇದು ಉತ್ತರ ಭಾರತದಲ್ಲಿ ನಡೆದ ಸತ್ಯ ಘಟನೆ. ಮಕ್ಕಳು ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡಿದರೆ ಅಥವಾ ಶಾಲೆಯ ಬಗ್ಗೆ ಅನಾದರ ಮಾಡಿದರೆ ಸಾಮಾನ್ಯವಾಗಿ ತಂದೆ ತಾಯಿಯರಿಗೆ ಸಿಟ್ಟು ಬರುತ್ತದೆ, ಬೇರೆಲ್ಲಾ ಮಕ್ಕಳು ಸುಮ್ಮನೆ ಶಾಲೆಗೆ ಹೋಗುತ್ತಾರೆ, ಇವಳದೇನು? ಸುಮ್ಮನೆ ಹಟ ಮಾಡುತ್ತಾಳೆ, ಸೋಮಾರಿ ಎಂದುಕೊಂಡು ಬಲವಂತವಾಗಿ ಹೊಡೆದು ಬಡೆದು ಶಾಲೆಗೆ ಕಳುಹಿಸಲಾಗುತ್ತದೆ. ಆದರೆ ಮಕ್ಕಳು ಈ ರೀತಿ ಮಾಡಿದಾಗ ಪೋಷಕರು ಸ್ವಲ್ಪ ಗಮನಿಸಬೇಕು ಮತ್ತು ಯಾವ ಕಾರಣಕ್ಕಾಗಿ ಶಾಲೆಗೆ ಹೋಗಲು ಇಷ್ಟ ಪಡುವುದಿಲ್ಲ ಎನ್ನುವುದನ್ನು ತಿಳಿಯುವ ಪ್ರಯತ್ನ ಮಾಡಬೇಕಾಗುತ್ತದೆ. ಮೇಲಿಂದ ಮೇಲೆ ಶಾಲೆಗಳಲ್ಲಿ ನಡೆಯುವ ಅತ್ಯಾಚಾರದ ಘಟನೆಗಳು, ಶಿಕ್ಷಕರು ಮಕ್ಕಳಿಗೆ ಶಿಕ್ಷೆಯ ರೂಪದಲ್ಲಿ ನೀಡುವ ಅಮಾನುಷ ಕೃತ್ಯಗಳನ್ನೆಲ್ಲಾ ಗಮನಿಸಿದಾಗ ಮಕ್ಕಳ ಮನ ಹೊಕ್ಕು ನೋಡಬೇಕಾಗುತ್ತದೆ. ಅವರ ನಡತೆಗೆ ನಿಜವಾದ ಒಂದು ಕಾರಣವಿರುತ್ತದೆ, ಅದನ್ನು ತಿಳಿಯುವುದು ಪೋಷಕರ ಆದ್ಯ ಕರ್ತವ್ಯ. ಶಾಲೆಗೆ ಮಕ್ಕಳನ್ನು ಕಳುಹಿಸಿ ನಿರಾಳವಾಗಿರುವಂತಿಲ್ಲ, ಪ್ರತಿ ದಿನ ಮಕ್ಕಳಿಂದ ಶಾಲೆಯಲ್ಲಿ ನಡೆದದ್ದನ್ನು ತಿಳಿಯಬೇಕಾಗುತ್ತದೆ. ಆದ್ದರಿಂದ ತಾಯಿ ಮತ್ತು ಮಕ್ಕಳ ನಡುವೆ ಅನುಬಂಧ ಏರ್ಪಡುತ್ತದೆ. ಆಗ ಅವರು ಮುಕ್ತವಾಗಿ ನಿಮ್ಮೊಡನೆ ಎಲ್ಲವನ್ನೂ ಹೇಳಿ ಕೊಳ್ಳುತ್ತಾರೆ, ಅನೇಕ ಬಾರಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಬರಿಯ ಮಗುವಿನ ಚಟುವಟಿಕೆಗಳಷ್ಟೇ ಅಲ್ಲ ಅದರ ಜೊತೆ ಅಲ್ಲಿನ ಶಿಕ್ಷಕರು ಮಿಕ್ಕ ಆಡಳಿತವರ್ಗ, ಅಲ್ಲಿ ಕೆಲಸ ಮಾಡುವ ಅಟೆಂಡರ್ ಇರಬಹುದು ಅಥವಾ ವ್ಯಾನಿನ ಚಾಲಕನಿರಬಹುದು ಎಲ್ಲರ ಬಗ್ಗೆಯೂ ತಿಳಿಯುವುದು ಅಗತ್ಯ. ಮಕ್ಕಳ ಮೂಲಕ ಅವರ ಸ್ವಭಾವವನ್ನು ತಿಳಿದುಕೊಳ್ಳಬೇಕು ಜೊತೆಗೆ ಸ್ವತಃ ನೀವೂ ಸಹಾ ಅವರನ್ನು ಗಮನಿಸುವುದು ಅಗತ್ಯ. ನಿಮ್ಮ ಮಗುವಿನ ಚಟುವಟಿಕೆಗಳ ಬಗ್ಗೆ ನಿರಂತರವಾಗಿ ಶಿಕ್ಷಕರಿಂದ ಮಾಹಿತಿ ಪಡೆಯುವುದು ಸೂಕ್ತ. ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ಗಳ ಬಗ್ಗೆ ತಿಳಿಸಿ, ಸೂಕ್ಷ್ಮವಾಗಿ ಅವರೊಂದಿಗೆ ಮಿಕ್ಕವರ ವರ್ತನೆಗಳ ಬಗ್ಗೆ ತಿಳಿದುಕೊಳ್ಳುವುದರ ಜೊತೆ ಮಕ್ಕಳಿಗೆ ಅರಿವನ್ನೂ ನೀಡಬೇಕಾಗುತ್ತದೆ. ಮಕ್ಕಳನ್ನು ಅಪರಿಚಿತರ ಜೊತೆಗೆ ಬಿಡಬೇಡಿ. ಶಾಲೆಯ ನಂತರದ ವೇಳೆಯಲ್ಲಿ ಇರಬೇಕೆಂದಾಗ ಸರಿಯಾಗಿ ವಿಚಾರಿಸಿ. ಮಕ್ಕಳು ಸ್ವಲ್ಪ ಸಪ್ಪಗಿದ್ದರೆ ಉದಾಸೀನ ಸಲ್ಲದು, ಮೆಲ್ಲಗೆ ಒಳ್ಳೆಯ ಮಾತಿನಲ್ಲಿ ಕಾರಣ ವಿಚಾರಿಸಿ. ನಾಲ್ಕನೆಯ ತರಗತಿಯತನಕ ಮಹಿಳಾ ಸಿಬ್ಬಂದಿ ಮತ್ತು ಮಹಿಳಾ ಶಿಕ್ಷಕರಿರುವಂತೆಯೇ ಶಾಲಾ ಆಡಳಿತ ಮಂಡಳಿಗೆ ಒತ್ತಡ ಹೇರಬಹುದು. ಚಿಕ್ಕ ಮಕ್ಕಳಿಗೆ ಗೊತ್ತಾಗುವುದಿಲ್ಲವೆಂದೇ ಈ ರೀತಿ ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು. ಆಗಾಗ ನಿಮ್ಮ ಮಕ್ಕಳು ಶಾಲೆಗೆ ಹೋಗುವ ವಾಹನದಲ್ಲಿ ನೀವೂ ಹೋಗುವ ಅಭ್ಯಾಸ ಇಟ್ಟುಕೊಳ್ಳಿ, ಈ ಬಗ್ಗೆ ಶಾಲೆಯಿಂದ ಪರವಾನಗಿ ಪಡೆಯಿರಿ. ಜೊತೆಗೆ ಮಕ್ಕಳಿಗೆ ಸ್ವರಕ್ಷಣಾ ತರಬೇತಿಯನ್ನು ಕಡ್ದಾಯವಾಗಿ ನೀಡಬೇಕು. ಈಗಂತೂ ಇರುವ ಒಂದೋ ಅಥವಾ ಎರಡು ಮಕ್ಕಳಲ್ಲೇ ಜೀವ ಹಿಡಿದುಕೊಂಡಿರುತ್ತಾರೆ ಹೆತ್ತವರು, ಮಕ್ಕಳು ಕೇಳಿದ್ದನ್ನು ಕೊಡಿಸಿ, ಹೆಚ್ಚಿನ ಶುಲ್ಕ ನೀಡಿ ಒಳ್ಳೆಯ ಶಾಲೆಗೆ ಕಳುಹಿಸಿದರೆ ಸಾಲದು, ಶಾಲೆಗೆ ಕಳುಹಿಸಿಯೂ ನೀವು ನಿಶ್ಚಿಂತರಾಗಿರಲು ಸಾಧ್ಯವಿಲ್ಲ, ಪೋಷಕರಿಗೆ ಹಿಂದೆಂದಿಗಿಂತಲೂ ಮಕ್ಕಳ ಮೇಲಿನ ಜವಾಬ್ದಾರಿ ಬಹಳ ಹೆಚ್ಚಿನದಾಗಿದೆ. ಎಷ್ಟು ಎಚ್ಚರದಿಂದಿದ್ದರೂ ಸಾಲದು. ಶಾಲೆಯಲ್ಲಿ ಪೋಷಕರ ಸಭೆಯನ್ನು ಮಾಡಿಕೊಂಡು ಜವಾಬ್ದಾರಿಗಳನ್ನು ಹಂಚಿಕೊಂಡಾಗ ಒತ್ತಡ ಸ್ವಲ್ಪವಾದರೂ ಕಡಿಮೆಯಾಗಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.