ಮಕ್ಕಳಿಗೆ ಬೇಕು ರಂಗ ಶಿಕ್ಷಣ ರಂಗಭೂಮಿ ಮೂಲತಃ ಸಮಷ್ಟಿ ಕಲೆ. ಲಲಿತಕಲೆಗಳನ್ನು ಒಳಗೊಂಡಿರುವ ರಂಗಭೂಮಿ ಮಕ್ಕಳನ್ನು ಸುಲಭವಾಗಿ ತಲುಪುತ್ತದೆ. ವಿಭಿನ್ನ ಚಟುವಟಿಕೆಗಳ ಮೂಲಕ ಮಕ್ಕಳನ್ನು ಕ್ರಿಯಾಶೀಲರನ್ನಾಗಿಸುವುದಷ್ಟೇ ಅಲ್ಲ, ಅವರ ಮಾನಸಿಕ ಬೆಳವಣಿಗೆಯಲ್ಲೂ ಪ್ರಧಾನ ಪಾತ್ರ ವಹಿಸಿ, ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ವಾರ್ಷಿಕೋತ್ಸವಗಳಲ್ಲೋ ಅಥವಾ ಸಮಾರಂಭಗಳಲ್ಲೋ ಮನೋರಂಜನೆಗಾಗಿ ನಾಟಕ ಪ್ರದರ್ಶಿಸುವ ಪರಿಪಾಠವಿದೆ. ಶೈಕ್ಷಣಿಕ ವರ್ಷದ ಕೊನೆಯಲ್ಲಿ ಪ್ರದರ್ಶನವಾಗುವ ಇಂಥ ನಾಟಕಗಳು ಶಿಕ್ಷಕರಿಗೆ, ಪೋಷಕರಿಗೆ, ವಿದ್ಯಾರ್ಥಿಗಳಿಗೆ ಮನೋರಂಜನೆ ಒದಗಿಸಿ, ಮುಕ್ತಾಯ ಹೊಂದುವುದೇ ಹೆಚ್ಚು. ಮತ್ತೆ ನಾಟಕಗಳಿಗೆ, ರಂಗ ಚಟುವಟಿಕೆಗಳಿಗೆ ಜೀವ ಬರುವುದು ಬೇಸಿಗೆ ರಂಗ ಶಿಬಿರಗಳಲ್ಲಿ ಅಥವಾ ಮುಂದಿನ ಶಾಲಾ ವಾರ್ಷಿಕೋತ್ಸವದಲ್ಲಿ ಮಾತ್ರ. ಹಾಗಾದರೆ, ರಂಗಭೂಮಿಯ ಉದ್ದೇಶ ಕೇವಲ ಮನೋರಂಜನೆ ಅಷ್ಟೆಯೇ ಎಂದು ಪ್ರಶ್ನಿಸಿಕೊಂಡರೆ, ಉತ್ತರ ಖಂಡಿತಾ ಅಲ್ಲಾ ಎಂದು ಥಟ್ ಅಂತ ಬರುತ್ತದೆ. ಹಾಗೆ ನೋಡಿದರೆ, ರಂಗಭೂಮಿಯ ಮಹತ್ವ ಮತ್ತು ಅದು ಬೀರುವ ಅಗಾಧ ಪರಿಣಾಮದ ಅರಿವಿದ್ದ ಕ್ರೈಸ್ತ ಮಿಷನರಿಗಳು ಇದನ್ನು ಮೊಟ್ಟಮೊದಲ ಶಿಕ್ಷಣದಲ್ಲಿ ಅಳವಡಿಸಿಕೊಂಡಿದ್ದವು. ಅದಕ್ಕೆ ಸಾಕ್ಷಿಯೆಂಬಂತೆ ಕರ್ನಾಟಕದ ಕರಾವಳಿ ಭಾಗದಲ್ಲಿದ್ದ ಕ್ರೈಸ್ತ ಮಿಷನರಿಗಳು ದಶಕಗಳ ಹಿಂದೆಯೇ ಶಾಲೆಯಲ್ಲಿ ರಂಗಶಿಕ್ಷಣ ನೀಡಿದ್ದ ದಾಖಲೆಗಳು ದೊರೆಯುತ್ತವೆ. ಮಕ್ಕಳ ಮನಸ್ಸು ಹೂವಿದ್ದಂತೆ ಎನ್ನುತ್ತಾರೆ ಮಕ್ಕಳ ತಜ್ಞರು. ಅದು ಹೂವಿನಂತೆಯೇ ಸಹಜವಾಗಿ ಅರಳಿದರೆ ಮಾತ್ರ ಅಂಥ ಮಕ್ಕಳು ಉತ್ತಮ ಪ್ರಜೆಯಾಗಬಲ್ಲರು ಎನ್ನುವುದು ಅವರ ಅಭಿಮತ. ಆದರೆ, ಇಂದಿನ ಒತ್ತಡದ ಶೈಕ್ಷಣಿಕ ದಿನಚರಿಯ ನಡುವೆ ಬಹುತೇಕ ಮಕ್ಕಳ ಮನಸ್ಸು, ಬಾಲ್ಯ ಸಹಜವಾಗಿ ಅರಳುವ ಬದಲು ಬಾಡಿಹೋಗುವುದೇ ಹೆಚ್ಚು. ಅಂಕಗಳಿಕೆಯೊಂದನ್ನೇ ಮಾನದಂಡವಾಗಿರಿಸಿ ಕೊಂಡಿರುವ ಪೋಷಕರು, ಶಿಕ್ಷಕರು ಮಕ್ಕಳಿಗೆ ಅಕ್ಷರಶಃ ಖಳನಾಯಕರಂತೆಯೇ ಗೋಚರಿಸುತ್ತಿದ್ದಾರೆ. ಅಂಕ ಗಳಿಕೆಯಾಚೆಗೂ ಮಕ್ಕಳ ವ್ಯಕ್ತಿತ್ವ ವಿಕಸನವಿದೆ, ಅಸ್ತಿತ್ವವಿದೆ ಎಂಬ ಅರಿವು ಕೆಲ ಪೋಷಕರಿಗಾಗಲೀ, ಶಿಕ್ಷಕರಿಗಾಗಲೀ ಮನದಟ್ಟಾಗುವುದೇ ಇಲ್ಲ. ಹೀಗೆ ಅಂಕಗಳಿಸಿ, ಎಂಜಿನಿಯರೋ, ಡಾಕ್ಟರೋ ಆದರೆ ನಮ್ಮ ಜವಾಬ್ದಾರಿ ಮುಗಿಯಿತು ಎನ್ನುವ ಪೋಷಕರಿಗೆ ತಮ್ಮ ಮಕ್ಕಳ ಸಾಮಾಜಿಕ ವರ್ತನೆ ಮೇಲೆ ಒತ್ತಡದ ಶೈಕ್ಷಣಿಕ ಜೀವನ ಎಂಥ ಪರಿಣಾಮ ಬೀರುತ್ತಿದೆ ಎಂದು ಅರಿಯುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ. ಇಂಥ ಸಂದರ್ಭಗಳಲ್ಲೇ ಮಗಳು ಹೋಂವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಗೃಹಿಣಿಯೊಬ್ಬಳು ಮಗಳನ್ನು ಸಾಯಿಸಿ, ತಾನೂ ಸಾಯುತ್ತಾಳೆ (ಪತ್ರಿಕಾ ವರದಿ), ತನ್ನ ಕೈಲಿ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಒಂಭತ್ತರ ಬಾಲೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುತ್ತಾಳೆ (ಪತ್ರಿಕಾವರದಿ). ಹಾಗಾದರೆ, ಮಕ್ಕಳಿಗೆ ಹೋಂ ವರ್ಕ್ ಮಾಡು ಅಂತ ಹೇಳುವುದು ತಪ್ಪೇ? ಅವರ ಭವಿಷ್ಯ ಚೆನ್ನಾಗಿರಬೇಕಾದರೆ ಹೆಚ್ಚಿನ ಅಂಕ ಪಡೆಯುವುದು ತಪ್ಪೇ? ಎಂಬ ಪ್ರಶ್ನೆಗಳು ಎದುರಾಗುತ್ತವೆ. ಇವೆಲ್ಲಾ ಸರಿ. ಆದರೆ, ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳ ಮನಸ್ಸನ್ನು ಅರಳಿಸುವ, ವಿಷಯದತ್ತ ಕುತೂಹಲ ಹೆಚ್ಚಿಸುವ ಪಠ್ಯಪೂರಕ ಚಟುವಟಿಕೆಗಳು ಇವೆಯೇ ಎಂದು ಪ್ರಶ್ನಿಸಿದರೆ ಇದಕ್ಕೆ ಸಮರ್ಪಕ ಉತ್ತರ ದೊರಕಲಾರದು. ಅಂಥದೊಂದು ತುರ್ತು ಅಗತ್ಯವನ್ನು ಸರಳವಾಗಿ, ಸುಲಭವಾಗಿ ಪೂರೈಸುವ ಏಕೈಕ ಮಾಧ್ಯಮವೆಂದರೆ ಅದು ರಂಗಭೂಮಿ. ಕಂಠಪಾಠದ ಪಠ್ಯ ಚಟುವಟಿಕೆಗಳು, ಅಂಕವೊಂದನ್ನೇ ಮಾನದಂಡವಾಗಿರಿಸಿಕೊಳ್ಳುವ ಬದಲು ಒಟ್ಟಾರೆ ಮಕ್ಕಳು ವಿಷಯ ಜ್ಞಾನವನ್ನು ಗ್ರಹಿಸುವುದು ಅದನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ರಂಗಭೂಮಿಯಂಥ ಅಭಿನಯ ಕಲೆ ಹೊಂದಿರುವ ಪಠ್ಯೇತರ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಕೊಠಾರಿ ಆಯೋಗವೂ ಮನಗಂಡಿತ್ತು. ಮಕ್ಕಳಿಗೆ ಹೊರೆಯಾಗದ ಕಲಿಕಾ ವಿಧಾನಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲು ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕೂಡಾ ಶಿಫಾರಸು ಮಾಡಿರುವುದು ರಂಗಶಿಕ್ಷಣದ ಮಹತ್ವವನ್ನು ಹೇಳುತ್ತದೆ. ಪಠ್ಯೇತರ ಚಟುವಟಿಕೆಗಳು ಮತ್ತು ರಂಗ ಶಿಕ್ಷಣ ಅರಿವಿರುವ ಪಾಶ್ಚಾತ್ಯ ರಾಷ್ಟ್ರಗಳು ಈಗಾಗಲೇ ತಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ರಂಗಕಲೆಯನ್ನು ಅಳವಡಿಸಿಕೊಂಡಿವೆ. ರಂಗಭೂಮಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಾಥಮಿಕ ಶಾಲಾ ಹಂತದಿಂದ ಹಿಡಿದು ವಿಶ್ವವಿದ್ಯಾಲಯಗಳ ತನಕ ಅಧ್ಯಯನ ಮತ್ತು ಸಂಶೋಧನೆಗೆ ಅವಕಾಶ ಕಲ್ಪಿಸಿವೆ. ಅಷ್ಟೇ ಅಲ್ಲ, ವಿಶ್ವ ಸಂಸ್ಥೆ ಕೂಡಾ ರಂಗಭೂಮಿಯನ್ನು ಶೈಕ್ಷಣಿಕ ವಿಷಯವನ್ನಾಗಿ ಅಳವಡಿಸಿಕೊಳ್ಳಲು ಅನುಮೋದನೆ ನೀಡಿದೆ ಎನ್ನುತ್ತಾರೆ ರಂಗತಜ್ಞರು. ರಂಗಭೂಮಿ ಮೂಲತಃ ಸಮಷ್ಟಿ ಕಲೆ. ಲಲಿತಕಲೆಗಳನ್ನು ಒಳಗೊಂಡಿರುವ ರಂಗಭೂಮಿ ಮಕ್ಕಳನ್ನು ಸುಲಭವಾಗಿ ತಲುಪುತ್ತದೆ. ವಿಭಿನ್ನ ಚಟುವಟಿಕೆಗಳ ಮೂಲಕ ಮಕ್ಕಳನ್ನು ಕ್ರಿಯಾಶೀಲರನ್ನಾಗಿಸುವುದಷ್ಟೇ ಅಲ್ಲ, ಅವರ ಮಾನಸಿಕ ಬೆಳವಣಿಗೆಯಲ್ಲೂ ಪ್ರಧಾನ ಪಾತ್ರ ವಹಿಸಿ, ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ರಂಗ ಶಿಕ್ಷಣದ ಮೂಲಕ ಮಗು ಸುಲಭವಾಗಿ ಪಠ್ಯವನ್ನು ಅರ್ಥ ಮಾಡಿಕೊಳ್ಳಬಲ್ಲದು. ಈ ರೀತಿ ಕಲಿಯುವ ಪಾಠ ಮಗುವಿನ ಮನಸ್ಸಿನಲ್ಲಿ ದೀರ್ಘ ಕಾಲ ನೆನಪಿನಲ್ಲಿ ಉಳಿಯುತ್ತದೆ. ತರಗತಿಯಲ್ಲಿ ಎಲ್ಲಾ ಮಕ್ಕಳು ಒಂದೇ ರೀತಿಯಾಗಿರುವುದಿಲ್ಲ. ಒಬ್ಬೊಬ್ಬರ ಆಸಕ್ತಿ, ಅಭಿರುಚಿ ಭಿನ್ನ. ಕೆಲವರಿಗೆ ಪಾಠವನ್ನು ಕೇಳುವ ಮೂಲಕ ನೆನಪಿಟ್ಟುಕೊಳ್ಳುವುದು ಸುಲಭವಾದರೆ, ಮತ್ತೆ ಕೆಲವರಿಗೆ ನೋಟ, ದೃಶ್ಯಗಳ ಮೂಲಕ ನೆನಪಿಟ್ಟುಕೊಳ್ಳುವುದು ಸುಲಭವಾಗಬಹುದು. ಇಂಥ ಸಂದರ್ಭಗಳಲ್ಲಿ ರಂಗ ಶಿಕ್ಷಣ ಎಲ್ಲಾ ಮನೋಭಾವದ ಮಕ್ಕಳಿಗೆ ಸುಲಭವಾಗಿ ತಲುಪಲು ಸಾಧ್ಯ. ಮುಖ್ಯವಾಗಿ ಮಕ್ಕಳು ಅನುಕರಣೆ ಮೂಲಕ ಕಲಿಯುವುದು ಹೆಚ್ಚು. ಭಾಷೆ, ಹಾಡುಗಾರಿಕೆ, ನೃತ್ಯ, ಚಿತ್ರಕಲೆ ಹೀಗೆ ಬಹುಮುಖಿ ಆಯಾಮವನ್ನು ಒಳಗೊಂಡಿರುವ ರಂಗಶಿಕ್ಷಣ ಮಕ್ಕಳ ಮನಸ್ಸಿನ ಮೇಲೆ ಬೀರುವ ಪರಿಣಾಮ ಅನನ್ಯ. ಇದು ಮಗುವಿನ ಪ್ರತಿಭಾಶಕ್ತಿ ಅನಾವರಣಕ್ಕೆ ವೇದಿಕೆ ಒದಗಿಸುತ್ತದೆ ಮಾತ್ರವಲ್ಲದೇ ಅವರಲ್ಲಿ ಪ್ರಶ್ನಿಸುವ ಮನೋಭಾವವನ್ನೂ ಹುಟ್ಟು ಹಾಕುತ್ತದೆ. ಮಕ್ಕಳು ಸಂಕೋಚ ತೊರೆದು, ಮೈಚಳಿ ಬಿಟ್ಟು ತನ್ನೊಳಗಿನ ಭಾವನೆಗಳನ್ನು ಇತರರೊಂದಿಗೆ ಸುಲಭವಾಗಿ ಹಂಚಿಕೊಳ್ಳಲು ರಂಗಭೂಮಿ ಸಹಕಾರಿ. ಹೀಗೆ ಮೈಚಳಿ ಬಿಟ್ಟು ತನ್ನ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ಮಗುವಿನಲ್ಲಿ ಸಂವಹನ ಕೌಶಲವೂ ವೃದ್ಧಿಯಾಗುತ್ತದೆ. ಶಾಲೆಗಳಲ್ಲಿ ರಂಗಶಿಕ್ಷಣದ ಸಮ್ಮಿಲನದಿಂದ ಪಠ್ಯ ಬೋಧನೆ ಯಶಸ್ವಿಯಾಗಲು, ಪಠ್ಯದ ಹಿಂದಿನ ಆಶಯಗಳನ್ನೂ ನೆರವೇರಿಸಲು ರಂಗಭೂಮಿ ಸಹಕಾರಿಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಲ್ಲಿ ಪರಸ್ಪರ ಭೇದಭಾವ ತೊರೆದು, ಸಮಾನತೆ, ಶಿಸ್ತು, ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವ ರೂಪಿಸುವಲ್ಲಿ ರಂಗ ಶಿಕ್ಷಣ ಬೀರುವ ಪರಿಣಾಮ ಅಗಾಧವಾದದ್ದು. ಆಟಗಳ ಮೂಲಕ ಪಾಠಗಳನ್ನು ಕಲಿಯುವ ಮಕ್ಕಳ ಮನಸ್ಸು ಆಗ ಸಹಜವಾಗಿಯೇ ಹೂವಿನಂತೆ ಅರಳೀತು, ಅಷ್ಟೇ ಅಲ್ಲ ರಂಗಕಲೆಯೂ ಉಳಿದೀತು. ಸಂವಹನ ಕೌಶಲ ವೃದ್ಧಿ ‘ಮಗು ಕಲಿಯುವುದು ಅನುಕರಣೆ ಮೂಲಕ. ಅಭಿನಯ ಮಗುವಿನ ಪ್ರತಿಭೆಯನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತದೆ. ಮಗುವಿನ ಅಪಾರ ಪ್ರತಿಭಾಶಕ್ತಿ ಪ್ರಚ್ಛನ್ನವಾಗಿ ರೂಪುಗೊಳ್ಳಲು ರಂಗಭೂಮಿ ಉತ್ತಮ ವೇದಿಕೆ. ಸಶಕ್ತ ರಂಗಕಲೆಯಲ್ಲಿ ಪರಿಣಿತಿ ಪಡೆದ ಮಗುವಿನಲ್ಲಿ ಅದ್ಭುತವಾದ ಅಭಿವ್ಯಕ್ತಿ ಸಾಮರ್ಥ್ಯ ರೂಪುಗೊಳ್ಳುತ್ತದೆ. ಮಕ್ಕಳಿಗೆ ದೃಶ್ಯಕಲೆ, ಅಭಿನಯ ಕಲೆಯ ಮೂಲಕ ತರಬೇತಿ ನೀಡಿದಲ್ಲಿ ಅದು ಮಕ್ಕಳ ಗ್ರಹಿಕೆಯ ಸಾಮರ್ಥ್ಯ, ಸಂವಹನ ಕೌಶಲವನ್ನು ವೃದ್ಧಿಸುತ್ತದೆ’. -ಆರ್.ಕೆ.ಹುಡಗಿ, ನಿರ್ದೇಶಕರು, ರಂಗಾಯಣ, ಕಲಬುರ್ಗಿ. ರಂಗಮುಖೇನ ಶಿಕ್ಷಣ ಯಶಸ್ವಿ ಮೈಸೂರಿನ ರಂಗಾಯಣದ ನಿರ್ದೇಶಕನಾಗಿದ್ದಾಗ ‘ಚಿಣ್ಣರ ಮೇಳ’ ಆರಂಭಿಸಿ ರಂಗ ಮುಖೇನ ಶಿಕ್ಷಣವನ್ನು ಯಶಸ್ವಿಯಾಗಿ ಪರಿಚಯಿಸಲಾಗಿತ್ತು. ರಂಗ ಶಿಕ್ಷಣದ ಮೂಲಕ ಮಕ್ಕಳಿಗೆ, ನಾಡು-ನುಡಿ, ಸಂಸ್ಕೃತಿ, ಪರಿಸರದ ಪರಿಚಯವನ್ನಷ್ಟೇ ಅಲ್ಲ, ಅದು ಅವರ ಅನುಭೂತಿಗೆ ದಕ್ಕುವಂತೆಯೂ ಮಾಡಲು ಸಾಧ್ಯ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ದೈಹಿಕ ಬೆಳವಣಿಗೆಗಾಗಿ ದೈಹಿಕ ಶಿಕ್ಷಕರನ್ನು ನೇಮಿಸಲಾಗುತ್ತದೆ. ಆದರೆ, ಮಕ್ಕಳ ಮಾನಸಿಕ ಬೆಳವಣಿಗೆಗೆ ರಂಗ ಶಿಕ್ಷಕರನ್ನು ನೇಮಿಸುವುದು ಅತ್ಯಗತ್ಯ. ಮಕ್ಕಳು ಕೇವಲ ದೈಹಿಕವಾಗಿ ಬೆಳೆದರಷ್ಟೇ ಸಾಲದು, ಮಾನಸಿಕವಾಗಿಯೂ ಸದೃಢವಾಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ರಂಗಶಿಕ್ಷಣವನ್ನು ಶೈಕ್ಷಣಿಕವಾಗಿ ಕಡ್ಡಾಯ ವಿಷಯವನ್ನಾಗಿ ಅಳವಡಿಸಬೇಕು –ಸಿ. ಬಸವಲಿಂಗಯ್ಯ, ನಿರ್ದೇಶಕರು, ರಾಷ್ಟ್ರೀಯ ನಾಟಕ ಶಾಲೆ (ದಕ್ಷಿಣ ಭಾರತ), ಬೆಂಗಳೂರು. ಬಸಮಾನ- ಸಹಜೀವನ ಸಾಧ್ಯ ರಂಗ ಶಿಕ್ಷಣವು ಮಕ್ಕಳಲ್ಲಿ ಜಾತಿ, ಧರ್ಮವನ್ನೂ ಮೀರಿದ ಸಂಸ್ಕೃತಿಯನ್ನು ಕಲಿಸುತ್ತದೆ. ಒಟ್ಟಿಗೆ ಬದುಕುವುದು ಹೇಗೆ ಎಂಬುದನ್ನು ಕಲಿಸಿಕೊಡುತ್ತದೆ. ನೈತಿಕ ಮೌಲ್ಯ ಕುಸಿಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿರುವ ಈ ದಿನಗಳಲ್ಲಿ ರಂಗಭೂಮಿ ಮಕ್ಕಳಲ್ಲಿ ನೈತಿಕ ಮೌಲ್ಯವನ್ನೂ ಕಲಿಸಿಕೊಡುತ್ತದೆ. ಪ್ರಾಥಮಿಕ, ಪ್ರೌಢಶಾಲಾ ಹಂತದಿಂದಲೇ ಮಕ್ಕಳಿಗೆ ರಂಗಶಿಕ್ಷಣ ನೀಡುವುದರಿಂದ ಆರೋಗ್ಯಪೂರ್ಣ ಸಮಾಜ ನಿರ್ಮಿಸಬಹುದು. ಮಕ್ಕಳಲ್ಲಿ ಸಮಾನ, ಸಹಜೀವನವನ್ನು ರೂಪಿಸಬಹುದು. –ಬಿ. ಸುರೇಶ, ರಂಗಕರ್ಮಿ, ಸಿನಿಮಾ ನಿರ್ದೇಶಕ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.