ಕೇಳಿ ಪ್ರಶ್ನೆ ಕೇಳಿ... ಮಕ್ಕಳು ತಮಗೆ ತಿಳಿದಿಲ್ಲವೆಂದು ಪ್ರಶ್ನೆಗಳನ್ನು ಕೇಳುವುದಿಲ್ಲ. ನಿಮಗೆ ತಿಳಿದಿರಬಹುದು ಎಂದೂ ಪ್ರಶ್ನೆಗಳನ್ನು ಕೇಳುವುದಿಲ್ಲ. ಅವರ ಮನಸಿನಲ್ಲಿರುವ ಗೊಂದಲಗಳನ್ನು ಸ್ಪಷ್ಟಪಡಿಸಿಕೊಳ್ಳಲು ಪ್ರಶ್ನೆಗಳನ್ನು ಕೇಳುತ್ತಾರೆ. ಸಾಮಾನ್ಯವಾಗಿ ಮಕ್ಕಳು ಕೇಳುವ ಕೆಲ ಪ್ರಶ್ನೆಗಳಿಗೆ ಉತ್ತರಗಳೇ ದೊರೆಯುವುದಿಲ್ಲ. ಒಂದೋ ನಕ್ಕು ಸುಮ್ಮನಾಗುತ್ತಾರೆ. ಇಲ್ಲವೇ ನಗುವ ಸರಕಾಗಿ ಆ ಪ್ರಶ್ನೆ ಬದಲಾಗಿರುತ್ತದೆ. ಅಂಥ ಸಂದರ್ಭಗಳಲ್ಲಿ ಸೂಕ್ಷ್ಮ ಮನಸಿನ ಮಕ್ಕಳು ನಿಮ್ಮನ್ನು ಪ್ರಶ್ನಿಸುವುದನ್ನೇ ನಿಲ್ಲಿಸಬಹುದು. ಸಾಮಾನ್ಯವಾಗಿ ಮಕ್ಕಳಿಗೆ ಉತ್ತರಿಸಲಾಗದ ಪ್ರಶ್ನೆಗಳೆಂದರೆ ಹುಟ್ಟು ಸಾವಿಗೆ ಸಂಬಂಧಿಸಿದ ಪ್ರಶ್ನೆಗಳು.ನಾನು ಹುಟ್ಟಿದ್ದು ಹೇಗೆ? ತಂಗಿ ಅಥವಾ ತಮ್ಮ ಹುಟ್ಟಿದ್ದು ಹೇಗೆ? ಹೊಟ್ಟೆಯೊಳಗೆ ಹೇಗೆ ಬಂದೆವು? ಇಲ್ಲವೇ ನೀನೂ ಸಾಯುವಿಯಾ? ನಾನೂ ಸಾಯುವೆನೆ? ಸತ್ತ ಮೇಲೆ ದೆವ್ವ ಆಗ್ತೀವಾ? ಸತ್ತವರೆಲ್ಲ ದೇವರ ಬಳಿ ಹೋದರೇಕೆ? ಮಕ್ಕಳೇಕೆ ದುಡ್ಡು ಕೇಳಬಾರದು? ಸಿಡಿಲಿನಲ್ಲಿ ಕರೆಂಟ್‌ ಇದ್ದರೆ ಸಮುದ್ರದೊಳಗಿರುವ ಮೀನಿಗೇಕೆ ವಿದ್ಯುತ್‌ ತಗಲುವುದಿಲ್ಲ? ಇಂಥ ಹತ್ತು ಹಲವು ಬಗೆಯ ಪ್ರಶ್ನೆಗಳ ಬಾಣಗಳನ್ನು ಹೆತ್ತವರಿಗೆ ಹೂಡುತ್ತಲೇ ಇರುತ್ತವೆ. ಈ ಪ್ರಶ್ನೆಗಳಿಗೆ ಉತ್ತರಿಸಲೇಬೇಕೆ? ಉತ್ತರಿಸುವುದಾದರೆ ಹೇಗೆ ಉತ್ತರಿಸಬೇಕು? ಮಾಹಿತಿ ನೀಡಲೇಬೇಕೆ? ಮನರಂಜನೆಯ ಸರಕಾಗುವಂತೆ ನಕ್ಕುಬಿಡಬೇಕೆ? ಈ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ ಮೊದಲು ಕೇಳಿ! ಪ್ರಶ್ನೆಯನ್ನು ಕೇಳಲು ಬಿಡಿ. ನಿನಗದು ತಿಳಿಯುವುದಿಲ್ಲ ಎನ್ನುವ ಬದಲು ಆ ಪ್ರಶ್ನೆ ಹುಟ್ಟಿದ ಹಿನ್ನೆಲೆಯನ್ನು ಅರಿಯಲು ಪ್ರಯತ್ನಿಸಿ. ಆಗ ಅವರು ಬಯಸಿರುವ ಉತ್ತರವೇನು? ಅವರ ಗೊಂದಲವೇನು ಎಂದು ಅರಿಯಬಹುದಾಗಿದೆ. ಹೆತ್ತವರು ಮತ್ತು ಮಕ್ಕಳ ನಡುವಿನ ಕಂದರ ಮುಚ್ಚುವ ಕೆಲಸ ಮಾಡುತ್ತವೆ ಈ ಪ್ರಶ್ನೆಗಳು.ಪ್ರಶ್ನೆಗಳನ್ನು ಉತ್ತರಿಸುವುದರಿಂದ ಅವರ ಗೊಂದಲಗಳು ತಿಳಿಯಾಗದಿದ್ದರೂ ಅಪ್ಪ ಅಮ್ಮ ತಮ್ಮ ಮಾತನ್ನು ಕೇಳುತ್ತಾರೆ ಎಂಬ ವಿಶ್ವಾಸವಂತೂ ಅವರಲ್ಲಿ ಮೂಡುತ್ತದೆ. ತಮ್ಮ ಕುತೂಹಲ ತಣಿಸಿಕೊಳ್ಳಲು ಪ್ರತಿಸಲವೂ ಅವರು ಹೆತ್ತವರಲ್ಲಿಯೇ ಆತ್ಮೀಯ ವಲಯವನ್ನು ಕಂಡುಕೊಳ್ಳುತ್ತಾರೆ. ಹೆತ್ತವರು ಅಥವಾ ಶಿಕ್ಷಕರು ಉತ್ತರಗಳನ್ನು ನಿರಾಕರಿಸಿದಷ್ಟೂ ಅವರ ಕುತೂಹಲ ಹೆಚ್ಚುತ್ತದೆ. ಮಾಹಿತಿಗಾಗಿ ಮತ್ತೊಬ್ಬರನ್ನು ಅಥವಾ ಸ್ನೇಹಿತರನ್ನು, ಅಂತರ್ಜಾಲವನ್ನು ಅವಲಂಬಿಸುವುದು ಹೆಚ್ಚಾಗುತ್ತದೆ. ಪ್ರತಿ ಮಗುವೂ ತನ್ನೊಳಗಿನ ಅನುಮಾನ, ಆತಂಕವನ್ನೇ ಪ್ರಶ್ನೆಯಾಗಿ ನಿಮ್ಮ ಮುಂದೆ ಇಟ್ಟಿರುತ್ತದೆ. ಮಗುವಿನ ಅರಿವು ಹೆಚ್ಚಿಸುವ, ವಿವರಿಸುವ ಸಾಮರ್ಥ್ಯ ನಿಮ್ಮಲ್ಲಿ ಹೆಚ್ಚಿಸಿಕೊಳ್ಳಬೇಕು. *ಪ್ರಶ್ನೆ ಕೇಳುವ ಸೈರಣೆ ಬೆಳೆಸಿಕೊಳ್ಳಿ *ಸಾಧ್ಯವಿದ್ದಷ್ಟೂ ಉತ್ತರಿಸಲು ಪ್ರಯತ್ನಿಸಿ *ಉತ್ತರ ಗೊತ್ತಿರದಿದ್ದರೆ ಅವರೊಂದಿಗೆ ಒಟ್ಟಾಗಿಯೇ ಉತ್ತರ ಹುಡುಕಲು ಯತ್ನಿಸಿ ಬಾಂಧವ್ಯ ಗಟ್ಟಿಗೊಳಿಸುತ್ತಲೇ ಕಲಿಯಬೇಕೆನ್ನುವ ಉತ್ಸಾಹ ಹುಟ್ಟಿಸುವ ಅವಕಾಶಗಳನ್ನು ಈ ಪ್ರಶ್ನೆಗಳು ಹೊತ್ತು ತರುತ್ತವೆ. ಅವುಗಳನ್ನು ನಿರಾಕರಿಸಬೇಡಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.