ಆನ್‌ಲೈನ್‌ ನೇಮಕಾತಿ; ಅನಂತ ಸಾಧ್ಯತೆ ಇತ್ತೀಚೆಗೆ ನೈರುತ್ಯ ರೈಲ್ವೆ ಇಲಾಖೆ ‘ಡಿ’ ಗ್ರೂಪ್‌ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಲಿಖಿತ ಪರೀಕ್ಷೆಗಾಗಿ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ವಾರದ ಮೊದಲೇ ಕಳುಹಿಸಲಾಗಿತ್ತು. ಆದರೆ, ತಾಂತ್ರಿಕ ದೋಷದಿಂದ ಪರೀಕ್ಷೆಗೆ ಒಂದು ದಿನ ಬಾಕಿ ಇದ್ದರೂ ಪ್ರವೇಶ ಪತ್ರ ಸಾಕಷ್ಟು ಅಭ್ಯರ್ಥಿಗಳ ಕೈ ಸೇರಿರಲಿಲ್ಲ. ಇದರಿಂದ ಆತಂಕಗೊಂಡ ಅಭ್ಯರ್ಥಿಗಳು, ಪ್ರವೇಶ ಪರೀಕ್ಷೆ ನಡೆಯುವ ದಿನ ಹುಬ್ಬಳ್ಳಿಯ ರೈಲ್ವೆ ಕಚೇರಿಗೆ ಆಗಮಿಸಿದ್ದರು. ಪರೀಕ್ಷೆ ಶುಲ್ಕ ತುಂಬಿ, ತಿಂಗಳುಗಟ್ಟಲೆ ಅಧ್ಯಯನ ನಡೆಸಿ ಪರೀಕ್ಷೆ ಎದುರಿಸಲು ಸಿದ್ಧರಾದವರು, ಕೊನೆಯ ಕ್ಷಣದಲ್ಲಿ ಪ್ರವೇಶ ಪತ್ರವಿಲ್ಲದೆ ಪರದಾಡಿದರು. ನೂರಾರು ಅಭ್ಯರ್ಥಿಗಳು ಪರೀಕ್ಷೆ ಬರೆಯುವುದರಿಂದ ವಂಚಿತರಾ­ದರು. ರೈಲ್ವೆ ಇಲಾಖೆ, ಅಂಚೆ ಬದಲಿಗೆ, ಇ–ಮೇಲ್‌ ಮುಖಾಂತರ ಪ್ರವೇಶ ಪತ್ರಗಳನ್ನು ಕಳುಹಿಸಿದ್ದರೆ ಅಥವಾ ಆನ್‌ಲೈನ್‌ನಲ್ಲೇ ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅಂಚೆ ಇಲಾಖೆಯ ವಿಳಂಬ ನೀತಿಯಿಂದ ನೂರಾರು ಅಭ್ಯರ್ಥಿಗಳ ಉದ್ಯೋಗದ ಕನಸು ಕಮರಿಹೋಯಿತು. ತಂತ್ರಜ್ಞಾನ ಮುಂದುವರಿದಿರುವಾಗ, ಇನ್ನೂ ಹಳೆಯ ಕಾಲದ ನೇಮಕಾತಿ ವಿಧಾನವನ್ನೇ ರೈಲ್ವೆ ಇಲಾಖೆ ಇಟ್ಟುಕೊಂಡಿದೆ ಎಂದು ಪರೀಕ್ಷೆ ವಂಚಿತರು ಆಕ್ರೋಶ ವ್ಯಕ್ತಪಡಿಸಿದರು. ಸಾಂಪ್ರದಾಯಿಕ ನೇಮಕಾತಿ ವಿಧಾನವನ್ನು ಬದಲಿಸಬೇಕೆಂಬ ಧ್ವನಿಯೂ ಈ ಸಂದರ್ಭದಲ್ಲಿ ಕೇಳಿಬಂತು. ರೈಲ್ವೆ ಇಲಾಖೆ ಮಾತ್ರವಲ್ಲ, ಬಹುತೇಕ ಸರ್ಕಾರಿ ನೇಮಕಾತಿ ವಿಧಾನ ಹೆಚ್ಚೂ ಕಡಿಮೆ ಹೀಗೇ ಇದೆ. ಈ ಘಟನೆಯು ಆನ್‌ಲೈನ್‌ ನೇಮಕಾತಿ ಸಾಧ್ಯತೆ ಬಗ್ಗೆ ಚಿಂತಿಸುವಂತೆ ಮಾಡಿದೆ. ಜಾಗತೀಕರಣದ ಪ್ರಭಾವ ಎಂಬತ್ತು, ತೊಂಬತ್ತರ ದಶಕಗಳಲ್ಲಿ ತರಬೇತಿ/ಶಿಷ್ಯವೃತ್ತಿ () ವಿಧಾನದಲ್ಲಿ ನೇಮಕ ನಡೆಯುತ್ತಿತ್ತು. ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಂಡ ನಂತರ ಅವರಿಗೆ ಕೌಶಲ ತರಬೇತಿ ನೀಡುತ್ತಿದ್ದ ವ್ಯವಸ್ಥೆ ಇದು. ಅಪ್ರೆಂಟಿಸ್‌ ಪೂರ್ಣಗೊಂಡ ನಂತರವೇ ಕಂಪೆನಿ ಅವರನ್ನು ಕಾಯಂ ಉದ್ಯೋಗಿಗಳನ್ನಾಗಿ ನೇಮಿಸಿಕೊ­ಳ್ಳುತ್ತಿತ್ತು. ಆದರೆ, 90ರ ದಶಕದ ನಂತರ ಬೀಸಿದ ಜಾಗತೀಕರಣ ಮತ್ತು ಉದಾರೀಕರಣದ ಗಾಳಿ ನೇಮಕಾತಿ ವಿಧಾನದಲ್ಲೂ ಸಾಕಷ್ಟು ಬದಲಾವಣೆ ತಂದಿತು. ಕಾರ್ಪೊರೇಟ್‌ ಮತ್ತು ಬಹು ರಾಷ್ಟ್ರೀಯ ಕಂಪೆನಿಗಳು ಅಧುನಿಕ ಮತ್ತು ಹೊಸ ತಲೆಮಾರಿನ ನೇಮಕಾತಿ ವಿಧಾನಗಳನ್ನು ಅಳವಡಿಸಿಕೊಂಡವು. ಒಟ್ಟಾರೆ ಮಾನವ ಸಂಪನ್ಮೂಲ ನಿರ್ವಹಣೆ (ಎಚ್‌ಆರ್‌ಎಂ) ವ್ಯವಸ್ಥೆ ಬದಲಾಯಿತು. ಆನ್‌ಲೈನ್‌ ನೇಮಕಾತಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸೂಕ್ತ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳುವುದು ನಿಜಕ್ಕೂ ಸವಾಲು. ಕೆಲವೊಮ್ಮೆ ಒಂದೇ ಒಂದು ಹುದ್ದೆ ಖಾಲಿ ಇದ್ದರೂ ಅದಕ್ಕೆ ಸಾವಿರಾರರು ಅರ್ಜಿಗಳು ಬರುತ್ತವೆ. ಅದನ್ನು ನಿರ್ವಹಣೆ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಅರ್ಜಿಗಳನ್ನು ಪರಿಷ್ಕರಿಸಿ, ಪ್ರವೇಶ ಪರೀಕ್ಷೆ ನಡೆಸುವುದು ಬಹುದೊಡ್ಡ ಪ್ರಕ್ರಿಯೆ. ಇದಕ್ಕೆ ಸಾಕಷ್ಟು ಸಮಯ, ಹಣ ಬೇಕಾಗುತ್ತದೆ. ಆನ್‌ಲೈನ್‌ ಮೂಲಕವಾದರೆ ಈ ಪ್ರಕ್ರಿಯೆ ಸುಲಭ. ನೇಮಕಾತಿಯ ಪ್ರಕ್ರಿಯೆ ಮೂರು, ನಾಲ್ಕು ಹಂತಗಳನ್ನು ಆನ್‌ಲೈನ್‌ ಮೂಲಕವೇ ಸರಳವಾಗಿ ನಿರ್ವಹಿ­ಸಬಹುದು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಕೌಶಲ ಹೊಂದಿರುವ ಮಾನವ ಸಂಪನ್ಮೂಲದ ಸೂಸುವಿಕೆಯ () ಕಾರ್ಯವನ್ನು ಪ್ರಾರಂಭದ ಹಂತದಿಂದಲೇ ಮಾಡಬಹುದು ಎನ್ನುತ್ತಾರೆ ಕನ್ಸಲ್ಟನ್ಸಿ ಕಂಪೆನಿ ಮೈಹಿಯರಿಂಗ್ ಕ್ಲಬ್‌ನ ‘ಸಿಇಒ’ ರಾಜೇಶ್ ಕುಮಾರ್. ಸರಳ ಮತ್ತು ವೇಗ ಆನ್‌ಲೈನ್‌ ಮೂಲಕ ನಡೆಯುವ ನೇಮಕಾತಿ ಇತರೆ ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಸರಳ ಮತ್ತು ತ್ವರಿತ. ಅಗ್ಗವೂ ಹೌದು. ಇಲ್ಲಿ ಕೈಯಲ್ಲಿ ಅರ್ಜಿ ಬರೆದು, ಅಂಚೆ ಮೂಲಕ ಕಳುಹಿಸುವ ಅಗತ್ಯವಿಲ್ಲ. ಪ್ರವೇಶ ಪತ್ರಕ್ಕಾಗಿ ಕಾಯುವ ಅಗತ್ಯವೂ ಇಲ್ಲ. ಹೀಗಾಗಿ ಕಂಪೆನಿಗಳು ಮತ್ತು ಕಂಪೆನಿಗಳ ಪರವಾಗಿ ನೇಮಕಾತಿ ಪ್ರಕ್ರಿಯೆ ನಿರ್ವಹಿಸುವ ಸಂಸ್ಥೆಗಳು ಇತ್ತೀಚೆಗೆ ಈ ಮಾದರಿಯನ್ನೇ ಬಳಸುತ್ತಿವೆ. ಹುದ್ದೆಗೆ ನಿಗದಿಪಡಿರುವ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ, ಕೌಶಲ ಇತ್ಯಾದಿ ಅಂಶಗಳನ್ನು ತ್ವರಿತವಾಗಿ ವಿಶ್ಲೇಷಣೆಗೆ ಒಳಪಡಿಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಒಟ್ಟಾರೆ ನೇಮಕ ಪ್ರಕ್ರಿಯೆ ವಿಳಂಬವಿಲ್ಲದೆ ನಡೆಯುತ್ತದೆ. ಇದು ಕಾಗದ ರಹಿತ ತಂತ್ರಜ್ಞಾನ. ಅಭ್ಯರ್ಥಿಗಳ ದಾಖಲೆ ಡಿಜಿಟಲ್‌ ಸ್ವರೂಪದಲ್ಲಿ ಭದ್ರವಾಗಿರುವುದರಿಂದ ಕಾಗದ ಸ್ವರೂಪದಲ್ಲಿ ಕಡತಗಳನ್ನು ಸಂರಕ್ಷಿಸಿಡುವ ಅಗತ್ಯವಿಲ್ಲ. ಪತ್ರ ವ್ಯವಹಾರದ ಅಗತ್ಯವೇ ಬರುವುದಿಲ್ಲ. ಯಾವಾಗ ಬೇಕಿದ್ದರೂ ಉದ್ಯೋಗದಾತರು, ಉದ್ಯೋಗಿಯ ಮಾಹಿತಿ ಬೆರಳ ತುದಿಯಲ್ಲಿ ಪಡೆಯಬಹುದು. ಅನಂತ ಸಾಧ್ಯತೆ ಅಂತರ್ಜಾಲವೆಂಬ ಮಾಹಿತಿ ಸಾಗರದ ಅನಂತ ಸಾಧ್ಯತೆಯೇ ಅದು. ಇದು ಏಕಕಾಲದಲ್ಲಿ ದೊಡ್ಡ ಪ್ರಮಾಣದ ಜನಸಮುದಾಯವನ್ನು ತಲುಪುತ್ತದೆ. ಯಾವುದೇ ಭೌಗೋಳಿಕ ಮಿತಿ ಇಲ್ಲ. ಇಂಟರ್‌ನೆಟ್‌ ಮೂಲಕ ನಡೆಯುವ ನೇಮಕ ಪ್ರಕ್ರಿಯೆಗೆ ಜಾಗತಿಕ ಮಟ್ಟದ ಪ್ರಸಾರ ವ್ಯಾಪ್ತಿ () ಲಭಿಸುತ್ತದೆ. ಹೀಗಾಗಿ ಸ್ಪರ್ಧಾತ್ಮಕತೆ ಹೆಚ್ಚುತ್ತದೆ. ಹೆಚ್ಚೆಚ್ಚು ಸಮರ್ಥರನ್ನು ನೇಮಕ ಮಾಡಿಕೊಳ್ಳಬಹುದು ಎನ್ನುವುದು ಕಂಪೆನಿಗಳ ವಿವರಣೆ. ಹೆಚ್ಚಿನವರು ಸರ್ಚ್‌ ಎಂಜಿನ್‌ ಮೂಲಕವೇ ಉದ್ಯೋಗ ಮಾಹಿತಿ ಹುಡುಕುತ್ತಿರುವ ಕಾಲವಿದು. ಹೀಗಾಗಿ ಇತ್ತೀಚೆಗೆ ಕಾರ್ಪೊರೇಟ್‌ ಕಂಪೆನಿಗಳು ಖಾಲಿ ಇರುವ ಹುದ್ದೆಗಳ ವಿವರ ಪ್ರತಿಕೆಗಳಲ್ಲಿ ಜಾಹೀರಾತು ನೀಡುವ ಬದಲು, ತಮ್ಮ ವೆಬ್‌ ತಾಣಗಳಲ್ಲೇ ಪ್ರಕಟಿಸುತ್ತಿವೆ. ಫಾರ್ಚೂನ್‌ 500 ಪಟ್ಟಿಯಲ್ಲಿರುವ ಕಂಪೆನಿಗಳು ತಮಗೆ ಬೇಕಿರುವ ಅಭ್ಯರ್ಥಿಗಳನ್ನು ನೇರ ನೇಮಕ ಮಾಡಿಕೊಳ್ಳಲು . ಎಂಬ ವೆಬ್‌ ತಾಣವನ್ನೇ ಪ್ರಾರಂಭಿಸಿವೆ. ದತ್ತಾಂಶ ಸುರಕ್ಷಿತ ಆನ್‌ಲೈನ್‌ ಮೂಲಕ ನೇಮಕಾತಿ ನಡೆಸುವ ಸಂಸ್ಥೆಗಳು ಅಭ್ಯರ್ಥಿಗಳ ದತ್ತಾಂಶ ನಿರ್ವಹಣೆ ಮಾಡಲು ಕ್ಲೌಡ್‌ ಕಂಪ್ಯೂಟಿಂಗ್‌ ತಂತ್ರಜ್ಞಾನ ಆಧರಿಸಿದ ‘ಎಸ್‌ಎಎಸ್‌’ ಸೇವೆಯನ್ನು ಬಳಸಿಕೊಳ್ಳುತ್ತಿವೆ. ಆನ್‌ಲೈನ್‌ನಲ್ಲೇ ಸಿದ್ಧ ನೇಮಕಾತಿ ತಂತ್ರಾಂಶವನ್ನು ( ) ಕ್ಲೌಡ್‌ ತಂತ್ರಜ್ಞಾನ ಒದಗಿಸುತ್ತದೆ. ಹೀಗಾಗಿ ಕಂಪೆನಿಗಳಿಗೆ ಅಭ್ಯರ್ಥಿಗಳ ಸಂಪೂರ್ಣ ವಿವರ ಬೆರಳ ತುದಿಯಲ್ಲಿಯೇ ಲಭ್ಯವಿರುತ್ತದೆ. ಒಮ್ಮೆ ಅಭ್ಯರ್ಥಿಯ ವೈಯಕ್ತಿಕ ವಿವರ ಈ ತಂತ್ರಾಂಶಕ್ಕೆ ಅಡಕಗೊಳಿಸಿದರೆ, ಮುಂದೆ ಕಂಪೆನಿಯ ಎಚ್‌.ಆರ್‌ ವಿಭಾಗಕ್ಕೆ ಈ ಮೂಲಕವೇ ಒಟ್ಟಾರೆ ನೇಮಕಾತಿ ನಿರ್ವಹಿಸಬಹುದು. ಕೊನೆಯಲ್ಲಿ ಅಗತ್ಯ ಬಿದ್ದರೆ ಮಾತ್ರ ಕಂಪೆನಿಯ ಪ್ರಮುಖರ ಜತೆಗೆ ಮುಖಾಮುಖಿ ಸಂದರ್ಶನ ಏರ್ಪಡಿಸಬಹುದು. ಇದು ಒಟ್ಟಾರೆ ಮಾನವ ಸಂಪನ್ಮೂಲದ ಗುಣಮಟ್ಟ ಹೆಚ್ಚಿಸುತ್ತದೆ. ಕೆಲವು ಅಭ್ಯರ್ಥಿಗಳಂತೂ ಎಲ್ಲ ಹುದ್ದೆಗಳಿಗೂ ಅರ್ಜಿ ಸಲ್ಲಿಸುತ್ತಲೇ ಇರುತ್ತಾರೆ. ಇಂಥ - ಗಳನ್ನು ಹೊರಗಿಡಲು ಸಹ ಈ ಸಾಫ್ಟ್‌ವೇರ್‌ ಸಹಾಯಕ. ಉದ್ಯೋಗಾಕಾಂಕ್ಷಿಗಳು 24x7 ಮಾದರಿಯಲ್ಲಿ ಉದ್ಯೋಗ ಮಾಹಿತಿ ಹುಡುಕಬಹುದು, ಅರ್ಜಿ ಸಲ್ಲಿಸಬಹುದು ಎನ್ನುತ್ತಾರೆ ಬೆಂಗಳೂರಿನ ಶಾನ್‌ಟೆಕ್‌ ಕನ್ಸಲ್ಟನ್ಸಿ ಸಂಸ್ಥೆಯ ಹಿರಿಯ ಅಧಿಕಾರಿ ಅರೂಪ್‌ ಚೌಧರಿ. ಸಾಮಾಜಿಕ ತಾಣಗಳ ಪಾತ್ರ ಸಾಮಾಜಿಕ ಜಾಲ ತಾಣಗಳು ಸಹ ಆನ್‌ಲೈನ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಈಗೀಗ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ಅಭ್ಯರ್ಥಿಗಳ ವ್ಯಕ್ತಿತ್ವ /ಸಾಮರ್ಥ್ಯ ಪರೀಕ್ಷೆ () ಮಾಡಲಾಗುತ್ತದೆ. ಹಲವು ಕಂಪೆನಿಗಳು ಈ ಪರೀಕ್ಷೆಯ ಭಾಗವಾಗಿ ಸಾಮಾಜಿಕ ತಾಣಗಳಲ್ಲಿರುವ ಅಭ್ಯರ್ಥಿಗಳ ಪ್ರೊಫೈಲ್‌ ಜಾಲಾಡಿದ ನಂತರವೇ ನೇಮಕಕ್ಕೆ ಅಂತಿಮ ನಿಶಾನೆ ತೋರುತ್ತವೆ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ಕಂಪೆನಿಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಬ­ಹುದು. ತಾವು ಅರ್ಜಿ ಸಲ್ಲಿಸುತ್ತಿರುವ ಕಂಪೆನಿ ನೋಂದಾಯಿತ ಕಂಪೆನಿಯೇ, ಎಷ್ಟು ಉದ್ಯೋಗಿಗಳಿದ್ದಾರೆ, ವಾರ್ಷಿಕ ಪ್ರಗತಿ ಇತ್ಯಾದಿ ಮಾಹಿತಿ ಪಡೆದುಕೊಳ್ಳಬಹುದು. ಸಮಯ ಉಳಿಕೆ, ವೆಚ್ಚ ಕಡಿಮೆ ಜತೆಗೆ ನೇಮಕಾತಿ ಹೆಚ್ಚು ಪಾರದರ್ಶಕವಾಗಿ ನಡೆಯುತ್ತದೆ ಎನ್ನುವುದು ಆನ್‌ಲೈನ್‌ ನೇಮಕಾತಿಯ ಹೆಚ್ಚುಗಾರಿಕೆ. ಉದ್ಯೋಗಾಕಾಂಕ್ಷಿ ಮತ್ತು ಉದ್ಯೋಗದಾತ ಕಂಪೆನಿಗಳ ನಡುವೆ ನೇರ ಸಂಪರ್ಕ ಕಲ್ಪಿಸುತ್ತದೆ ಎನ್ನವುದೂ ಮತ್ತೊಂದು ಸಾಧ್ಯತೆ. ಕೆಲವು ಕಾರ್ಪೊರೇಟ್‌ ಕಂಪೆನಿಗಳಂತೂ ಅರ್ಜಿ ಸಲ್ಲಿಸುವುದರಿಂದ ಹಿಡಿದು ಸಂದರ್ಶನದವರೆಗೆ ಒಟ್ಟಾರೆ ನೇಮಕ ಪ್ರಕ್ರಿಯೆನ್ನು ಆನ್‌ಲೈನ್‌ ಮೂಲಕವೇ ನಿರ್ವಹಿಸುತ್ತಿವೆ. ಕರ್ನಾಟಕ ಲೋಕಸೇವಾ ಆಯೋಗದಂತಹ (ಕೆಪಿಎಸ್‌ಸಿ) ಸಂಸ್ಥೆಗಳು ನೇಮಕಾತಿಯ ಮೊದಲೆರಡು ಹಂತಗಳನ್ನು (ಅರ್ಜಿ ಸಲ್ಲಿಸಿ ಶುಲ್ಕ ತುಂಬುವುದು, ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳುವುದು) ಆನ್‌ಲೈನ್‌ ಮೂಲಕ ನಿರ್ವಹಿಸುತ್ತಿವೆ. ಇವೆಲ್ಲವೂ ಸಂಪೂರ್ಣ ಆನ್‌ಲೈನ್‌ ವ್ಯವಸ್ಥೆಗೆ ಬದಲಾಗುವ ಕಾಲ ದೂರವಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.