ಮೌಲ್ಯಮಾಪನ ಹೊಸ ವಿಧಾನ ‘ಟ್ರ್ಯಾಕ್‌ ಮಾರ್ಕ್ಸ್‌’ ಪರೀಕ್ಷೆ ಅಕ್ರಮ ಸೇರಿದಂತೆ, ಸಮಯ, ಹಣದ ಉಳಿತಾಯ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂಥ ‘ಟ್ರ್ಯಾಕ್‌ ಮಾರ್ಕ್ಸ್‌’ (ಆನ್‌ಸ್ಕ್ರೀನ್‌ ಮಾರ್ಕಿಂಗ್‌ ಸಲ್ಯೂಷನ್ಸ್) ಸಾಫ್ಟ್‌ವೇರ್‌ ಅನ್ನು ಮೆರಿಟ್‌ ಟ್ರ್ಯಾಕ್‌ ಕಂಪೆನಿ ಪರಿಚಯಿಸಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಾಗ ಶಿಕ್ಷಕರಿಂದ ಆಗುವ ಕೆಲವು ಲೋಪದೋಷಗಳನ್ನು ಸರಿಪಡಿಸಲು ನೆರವಾಗುವಂತೆ ಈ ಸಾಫ್ಟ್‌ವೇರ್‌ ಸಿದ್ಧಪಡಿಸಲಾಗಿದೆ. ಈ ವಿಧಾನದಲ್ಲಿ ಉತ್ತರ ಪತ್ರಿಕೆಯನ್ನು ಸ್ಕ್ಯಾನ್‌ ಮಾಡಿ ಕಂಪ್ಯೂಟರ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ನಂತರ ಶಿಕ್ಷಕರು ಮೌಲ್ಯಮಾಪನ ಮಾಡುತ್ತಾರೆ. ಕೊನೆಗೆ ಈ ಸಾಫ್ಟ್‌ವೇರ್‌ ಸಹಾಯದಿಂದ ಅಂಕಗಳನ್ನು ಕೂಡಿಸಿ ಲೆಕ್ಕಹಾಕಲಾಗುತ್ತದೆ. ವಿದ್ಯಾರ್ಥಿಯು ಉತ್ತರ ಪತ್ರಿಕೆಯ ಮಧ್ಯದ ಎರಡು ಪುಟವನ್ನು ಖಾಲಿ ಬಿಟ್ಟು, ಕೊನೆಯ ಪುಟಗಳಲ್ಲಿ ಉತ್ತರ ಬರೆದಿದ್ದರೆ, ಅಂಥ ಪುಟಗಳಲ್ಲಿನ ಉತ್ತರಗಳನ್ನು ಹುಡುಕುವ ಕೆಲಸವನ್ನು ಈ ಸಾಫ್ಟ್‌ವೇರ್‌ ನೆರವಿನಿಂದ ಮಾಡಬಹುದು. ಅಲ್ಲದೇ ಅಂಕಗಳ ಸಂಕಲನದಲ್ಲೂ ಎಡವಟ್ಟುಗಳಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಶಿಕ್ಷಕರು 3 ಅಂಕದ ಪ್ರಶ್ನೆಗಳಿಗೆ 2 ಅಂಕ ಕೊಟ್ಟಿರುತ್ತಾರೆ. ಇಂಥ ತಪ್ಪುಗಳನ್ನು ಸರಿಪಡಿಸಲು ಈ ಸಾಫ್ಟ್‌ವೇರ್‌ ಸಹಾಯವಾಗುತ್ತದೆ. ಮೆರಿಟ್ ಟ್ರ್ಯಾಕ್ 14 ವರ್ಷಗಳಿಂದ ಕಾರ್ಪೊರೇಟ್, ಸರ್ಕಾರಿ ಮತ್ತು ಶಿಕ್ಷಣ ಕ್ಷೇತ್ರಗಳ ವಿವಿಧ ಅಗತ್ಯಗಳಿಗಾಗಿ ವೈಜ್ಞಾನಿಕ ಪರೀಕ್ಷೆ ಮತ್ತು ಮೌಲ್ಯಮಾಪನ ಸೇವೆ ಒದಗಿಸುವ ಕಂಪೆನಿಯಾಗಿದೆ. ಕಾಗದ ಆಧಾರಿತ ಪರೀಕ್ಷೆಗಳನ್ನು ಕಂಪ್ಯೂಟರ್ ಆಧಾರಿತ ವಿಧಾನವಾಗಿ ಬದಲಾಯಿಸುವ ಗುರಿಯನ್ನು ಇದು ಹೊಂದಿದೆ. ಪರೀಕ್ಷೆ ನಡೆಸಿ ಮೌಲ್ಯಾಂಕ ನೀಡುವ ಕೆಲಸವನ್ನೂ ಮಾಡುತ್ತದೆ. ಮೌಲ್ಯಮಾಪನ ಕೆಲಸಕ್ಕೆ ಶಿಕ್ಷಕರು ಬೇಕು ಹಾಗೂ ಸಮಯ ಹೆಚ್ಚು ಹಿಡಿಯುತ್ತದೆ. ವಿವರಣಾತ್ಮಕ ಉತ್ತರಗಳನ್ನು ನಿಖರವಾಗಿ, ಪಾರದರ್ಶಕವಾಗಿ, ಸಮಯ ಮಿತಿಯೊಳಗೆ ಮತ್ತು ಎಲ್ಲರಿಗೂ ಅನುಕೂಲವಾಗುವಂತೆ ಮೌಲ್ಯಮಾಪನ ಮಾಡುವ ಪರಿಹಾರವನ್ನು ಈ ವಿಧಾನದ ಮೂಲಕ ಮೆರಿಟ್‌ ಟ್ರ್ಯಾಕ್‌ ಹುಡುಕಿದೆ. 2011ರಲ್ಲಿ ಬ್ರಿಟನ್‌ನ ಆರ್.ಎಂ ಎಜುಕೇಶನ್ ಶಿಕ್ಷಣ ಸಂಸ್ಥೆ ಸಹಭಾಗಿತ್ವದಲ್ಲಿ ಮೆರಿಟ್ ಟ್ರ್ಯಾಕ್ ‘ಟ್ರ್ಯಾಕ್ ಮಾರ್ಕ್ಸ್’ ಸಾಫ್ಟ್‌ವೇರ್‌ಅನ್ನು ಭಾರತದಲ್ಲೂ ಪರಿಚಯಿಸಿದೆ. ಕಳೆದ ವರ್ಷ ಸಿಬಿಎಸ್‌ಸಿ ಪರೀಕ್ಷೆಗೆ ಈ ಸಾಫ್ಟ್‌ವೇರ್‌ ಬಳಕೆ ಮಾಡಲಾಗಿದೆ. ಇದು ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್ನಿನ ಸಮೂಹ ಸಂಸ್ಥೆ. ‘ಇಂದು ಬಹಳಷ್ಟು ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಿದೆ. ನಿಗದಿತ ದಿನಾಂಕಕ್ಕಿಂತ ಮುಂಚೆಯೇ ಪ್ರಶ್ನೆ ಪತ್ರಿಕೆಗಳೇ ಬಯಲಾಗುತ್ತಿವೆ. ಅಂಕ ನೀಡುವಲ್ಲಿಯೂ ತಪ್ಪುಗಳಾಗುತ್ತಿವೆ. ಬೋರ್ಡ್‌ ಪರೀಕ್ಷೆ ನಡೆದ ನಂತರ ಉತ್ತರ ಪತ್ರಿಕೆ ಕಾಯಲು ಭದ್ರತೆ ಒದಗಿಸಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ‘ಟ್ರ್ಯಾಕ್‌ ಮಾರ್ಕ್ಸ್‌’ ನೆರವಾಗುತ್ತದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳ ವಿವರ, ಅಂಕಗಳು ಕಂಪ್ಯೂಟರ್‌ನಲ್ಲಿ ದಾಖಲಾಗಿರುತ್ತವೆ. ಲೋಪವಾಗುವ ಮಾತೇ ಇಲ್ಲ. ಸರ್ಕಾರದ ವಿವಿಧ ಇಲಾಖೆಗಳ ಪ್ರವೇಶ ಪರೀಕ್ಷೆಯನ್ನು ಈ ಸಾಫ್ಟ್‌ವೇರ್‌ ಮೂಲಕ ನಡೆಸಬಹುದು. ಉತ್ತರ ಪತ್ರಿಕೆಯ ಮೊದಲ ಪುಟವನ್ನು ಕಿತ್ತು ಮೌಲ್ಯಮಾಪನ ಮಾಡುವ ಸಂದರ್ಭಗಳಲ್ಲಿ ಕೆಲವೊಮ್ಮೆ ಅದಲುಬದಲಾಗುವ ಸಂಭವವಿರುತ್ತದೆ. ಇಂಥ ವೇಳೆ ಈ ಸಾಫ್ಟ್‌ವೇರ್‌ ನೆರವಿಗೆ ಬರುತ್ತದೆ. ಹತ್ತು ಕಡೆ ಪರೀಕ್ಷಾ ಕೇಂದ್ರಗಳಿದ್ದರೆ ಅಲ್ಲಿ ಭದ್ರೆತೆ ಒದಗಿಸಬೇಕು. ಈ ವಿಧಾನವಾದರೆ ಪರೀಕ್ಷಾ ಕೇಂದ್ರದಲ್ಲೇ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಬಹುದು. ಇದರಿಂದ ಅಕ್ರಮ ನಡೆಯುವುದನ್ನು ತಪ್ಪಿಸಬಹುದು ಹಾಗೂ ಸಮಯವೂ ಉಳಿತಾಯವಾಗುತ್ತದೆ’ ಎನ್ನುತ್ತಾರೆ ಮೆರಿಟ್‌ಟ್ಯ್ರಾಕ್‌ ಕಾರ್ಯಕಾರಿ ಉಪಾಧ್ಯಕ್ಷ ನಾಗೇಂದ್ರನ್ ಸುಂದರರಾಜನ್‌. ಯಾವುದೇ ಪರೀಕ್ಷೆಯಲ್ಲಾದರೂ ನಿಖರ ಮೌಲ್ಯಮಾಪನ ಪ್ರಮುಖ ಅಂಶವಾಗಿದೆ. ಅಂಕಗಳನ್ನು ಒಟ್ಟುಗೂಡಿಸುವಾಗ ಅಥವಾ ಅಂಕ ನೀಡುವಾಗಲೂ ಲೋಪವಾಗುವ ಸಂಭವ ಇರುತ್ತದೆ. ಟ್ರ್ಯಾಕ್ ಮಾರ್ಕ್ಸ್ ಉಪಯೋಗಿಸಿದರೆ, ಅಂಕಪಟ್ಟಿ ಮಾಡುವಾಗ ಆಗುವ ತಪ್ಪುಗಳು ಅಥವಾ ಮೌಲ್ಯಮಾಪನ ದೋಷದಂತಹ ಯಾವುದೇ ಸಾಧ್ಯತೆ ತಪ್ಪುತ್ತವೆ. ಮೌಲ್ಯಮಾಪನದ ಸುಧಾರಿತ ಗುಣಮಟ್ಟವು ವಿದ್ಯಾರ್ಥಿಯು ಅರ್ಹ ಅಂಕಗಳನ್ನು ಪಡೆಯಲು ಹಾಗೂ ಪರೀಕ್ಷಾ ವ್ಯವಸ್ಥೆ ಮೇಲೆ ಹೆಚ್ಚಿನ ವಿಶ್ವಾಸವಿಡಲು ನೆರವಾಗುತ್ತದೆ. ತ್ವರಿತವಾಗಿ ಅಂಕಗಳನ್ನು ಪ್ರಕಟಿಸಲು ಸಹಾಯವಾಗುತ್ತದೆ. ಇದರಿಂದ ವಿದ್ಯಾರ್ಥಿಯು ಮರುಮೌಲ್ಯಮಾಪನಕ್ಕೆ ಹೋಗುವ ತೊಂದರೆ ತಪ್ಪಿಸಬಹುದು. ಈ ಸಾಫ್ಟ್ವೇರ್ ಆರ್ಕೈವ್‌ ಮತ್ತು ಅಂಕಪ್ರತಿಯಲ್ಲಿ ಮೌಲ್ಯಮಾಪಕರ ಗುರುತನ್ನು ಬಹಿರಂಗಪಡಿಸುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಮರು ಎಣಿಕೆ, ಮರು ಮೌಲ್ಯ ಮಾಪನಕ್ಕಾಗಿ ಅಥವಾ ತಾಳೆ ನೋಡುವ ಸಲುವಾಗಿ ಉತ್ತರ ಪ್ರತಿಗಳನ್ನು ಕೇಳಿದರೆ ಯಾರು ಮೌಲ್ಯಮಾಪನ ಮಾಡಿದ್ದಾರೆ ಎಂಬ ಸಂಗತಿಯನ್ನು ಹೊರಗೆಡಹದೆ, ಉತ್ತರ ಪ್ರತಿ ನೀಡಲು ಸಾಧ್ಯವಾಗುತ್ತದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ಪರೀಕ್ಷೆಗಳಿಗೆ ಈ ವಿಧಾನ ಅನುಕೂಲಕರವಾಗಲಿದೆ. ಮಾಹಿತಿಗೆ: .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.