ಅರಿವಿನ ಹೊನಲು ‘ಪ್ರಜಾವಾಣಿ ರಸಪ್ರಶ್ನೆ’ ನನಗೇನು ತಿಳಿದಿದೆ? ನನಗೆಷ್ಟು ತಿಳಿದಿದೆ? ತಿಳಿದಿದ್ದೆಲ್ಲವನ್ನೂ ಸ್ಪಷ್ಟವಾಗಿ ಆತ್ಮವಿಶ್ವಾಸದಿಂದ ಹೇಳಬಲ್ಲೆನೆ? ತ್ವರಿತವಾಗಿ ಅದನ್ನು ಸ್ಮರಣೆಯ ತರಂಗಗಳಿಂದ ಹೆಕ್ಕಿ, ಶಬ್ದತರಂಗಗಳಿಗೆ ಪರಿವರ್ತಿಸಿ, ಎದುರಿಗಿರುವವರಿಗೆ ಉತ್ತರಿಸಬಲ್ಲೆನೆ? ಇಂಥ ಪ್ರಶ್ನೆಗಳಿಗೊಂದು ಸ್ಪಷ್ಟ ಉತ್ತರ ನೀಡಬಹುದಾದ ಕ್ರಿಯೆ ಎಂದರೆ ರಸಪ್ರಶ್ನೆ ಮಾತ್ರ. ನಮ್ಮಲ್ಲಿ ಇನ್ನೆಷ್ಟು ಕಲಿಯಬೇಕು, ಇನ್ನಷ್ಟು ತಿಳಿಯಬೇಕು ಎನ್ನುವ ಹಂಬಲ ಮತ್ತು ಕುತೂಹಲವಿದ್ದಲ್ಲಿ ನಾವಿಂಥ ವೇದಿಕೆಗಳಿಗೆ ಸದಾ ಸಿದ್ಧರಾಗಿರುತ್ತೇವೆ. ಇಂಥ ಜ್ಞಾನದ ಹಸಿವನ್ನು ತಣಿಸುವ ಮುಖ್ಯ ಮಾಧ್ಯಮವೆಂದರೆ ದಿನಪತ್ರಿಕೆ. ಸಾಹಿತ್ಯ, ಸಂಸ್ಕೃತಿ, ಪ್ರಚಲಿತ, ವಿಶ್ವದ ಆಗುಹೋಗು ಎಲ್ಲವನ್ನೂ ಕೆಲವೇ ಪುಟದಲ್ಲಿ ಹೊತ್ತು ತರುವ ಕೆಲಸವನ್ನು ದಿನಪತ್ರಿಕೆಗಳು ಮಾಡುತ್ತವೆ. ಆದರೆ ಓದಿದ್ದು, ಮನನವಾಗಿದೆಯೇ? ಸ್ಮರಣೆಯಲ್ಲಿದೆಯೇ? ನಿಜಕ್ಕೂ ಜಗದೊಂದಿಗೆ ನಾವೂ ಹೆಜ್ಜೆ ಹಾಕುತ್ತಿದ್ದೇವೆಯೇ ಎನ್ನುವುದು ಪತ್ತೆ ಮಾಡುವುದು ಹೇಗೆ? ಓದಿನೊಂದಿಗೆ ಪುನರ್‌ಮನನದ ಈ ಕೆಲಸವನ್ನು ‘ಪ್ರಜಾವಾಣಿ ರಸಪ್ರಶ್ನೆ’ ಕಾರ್ಯಕ್ರಮ ಮಾಡಲಿದೆ. ‘ಪ್ರಜಾವಾಣಿ’ ಇದೀಗ ನಮ್ಮ ವಿದ್ಯಾರ್ಥಿಗಳ ಮಿದುಳಿಗೊಂದಿಷ್ಟು ಕಚಗುಳಿ ಇಡುವ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿದೆ. ಕಲಿಕಾ ಕೌಶಲಗಳೆಂದರೆ ಕೇವಲ ಅಂಕ ಗಳಿಸುವುದಲ್ಲ. ಕಲಿತಿರುವ ಜ್ಞಾನವನ್ನು ಸಕಾಲಿಕವಾಗಿ ಬಳಸುವುದು. ಸಮಯಕ್ಕೆ ಅಗತ್ಯವಿರುವಂತೆ ಸ್ಪಂದಿಸುವುದು. ತ್ವರಿತಗತಿಯಲ್ಲಿ ನಮ್ಮ ಮಸ್ತಿಶ್ಕದಲ್ಲಿರುವ ತಿಳಿವನ್ನು ಬಳಸುವುದು. ಇವೆಲ್ಲವೂ ಕೌಶಲವೆನಿಸಿಕೊಳ್ಳುತ್ತವೆ. ಚಿತ್ರ ನೋಡಿದೊಡನೆ ಏನದು, ಯಾರದ್ದು? ಏನು ಕೇಳಬಹುದು? ಎಷ್ಟು ಹೇಳಬೇಕು? ಹೇಗೆ ಹೇಳಬೇಕು? ಇಷ್ಟೆಲ್ಲ ಪ್ರಕ್ರಿಯೆಗಳು ಕ್ಷಣಾರ್ಧದಲ್ಲಿ ನಮ್ಮ ಅರಿವಿಗೆ ಬರುವ ಮುಂಚೆಯೇ ಉತ್ತರ ಹೊರಟಿರಬೇಕು. ಅದು ಜಾಣ್ಮೆ. ಅದು ಸಮಯಕ್ಕೆ ಸ್ಪಂದಿಸುವ ಚಾಣಕ್ಷ್ಯತನ. ಇವೆಲ್ಲವನ್ನು ಒರೆಗೆ ಹಚ್ಚುವ ಉದ್ದೇಶವೇ ‘ಪ್ರಜಾವಾಣಿ ರಸಪ್ರಶ್ನೆ’ ಸ್ಪರ್ಧೆಯದ್ದು. ಸಾಮಾನ್ಯವಾಗಿ ನಮ್ಮ ತಿಳಿವಿನ ಶಕ್ತಿ ಇನ್ನೊಬ್ಬರು ಪರಾಮರ್ಶಿಸುವವರೆಗೂ ನಮ್ಮರಿವಿಗೆ ಇರುವುದಿಲ್ಲ. ಒಂದೋ ಎಲ್ಲ ತಿಳಿದಿರುವೆವು ಎನ್ನುವ ಅಹಂಭಾವ, ಇಲ್ಲವೇ ಏನೂ ಗೊತ್ತಿಲ್ಲ ಎನ್ನುವ ಕೀಳರಿಮೆ... ಇವೆರಡನ್ನೂ ತೊಡೆದು ಹಾಕುವ ಯತ್ನ ಮಾಡುತ್ತವೆ ಇಂಥ ಕಾರ್ಯಕ್ರಮಗಳು. ರಸಪ್ರಶ್ನೆಯನ್ನು ನಡೆಸಿಕೊಡುತ್ತಿರುವ ವಾಲ್‌ನಟ್‌ ನಾಲೆಡ್ಜ್‌ ಸಲ್ಯೂಷನ್ಸ್‌ ಸಂಸ್ಥೆಯ ರಾಘವ್‌ ಚಕ್ರವರ್ತಿ ಎನ್.ಸಿ ಹಾಗೂ ಸಚಿನ್‌ ರವಿ ರಾಜ್ಯಾದಾದ್ಯಂತ 6 ಪ್ರಾದೇಶಿಕ ಕೇಂದ್ರಗಳಲ್ಲಿ ಸಂಚರಿಸಲಿದ್ದಾರೆ. ಪ್ರತಿ ಕೇಂದ್ರದಿಂದಲೂ ತಲಾ ಎರಡು ವಿದ್ಯಾರ್ಥಿಗಳ 6 ತಂಡಗಳನ್ನು ಪ್ರಾದೇಶಿಕ ಸುತ್ತಿಗೆಆಯ್ಕೆ ಮಾಡಲಿದ್ದಾರೆ. ಈ ಆರು ತಂಡಗಳಲ್ಲಿ ಎರಡು ತಂಡಗಳನ್ನು ಬೆಂಗಳೂರಿನಲ್ಲಿ ನಡೆಯಲಿರುವ ಸೆಮಿಫೈನಲ್‌ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಪ್ರತಿ ಸ್ಪರ್ಧೆಯಲ್ಲಿಯೂ 6 ಸುತ್ತಿನ ಸ್ಪರ್ಧೆಗಳಿರುತ್ತವೆ. ಕೊನೆಗೆ ಕಣದಲ್ಲಿ ಉಳಿಯುವವರು ತಮ್ಮ ಬಜಲ್‌ನೊಂದಿಗೆ ಜುಗಲ್‌ಬಂಧಿಗೆ ಇಳಿದವರು ಮಾತ್ರ. ಪ್ರಶ್ನೆಗೆ ಪ್ರತ್ಯುತ್ತರಗಳನ್ನು ಪ್ರತಿಸ್ಫರ್ಧಿಗಳಿಗಿಂತ ಮೊದಲು ಹೇಳುವ ರೇಸಿನಲ್ಲಿ ಗೆಲ್ಲುವವರೇ ಅಧಿಕ ಅಂಕಗಳನ್ನು ಗಳಿಸಲು ಸಾಧ್ಯ. ದೃಶ್ಯಾಧಾರಿತ ಪ್ರಶ್ನೆಗಳು, ಸುಳಿವು ಆಧಾರಿತ ಪ್ರಶ್ನೆಗಳನ್ನು ನೀಡಲಾಗುತ್ತದೆ. ಇದೆಲ್ಲಕ್ಕೂ ಬಲು ಬೇಗ ಸ್ಪಂದಿಸಿದವರು ಮಾತ್ರ ಕೊನೆಯ ಹಣಾಹಣಿಗೆ ಅರ್ಹರಾಗಬಲ್ಲರು. ಈ ಇಡೀ ಪ್ರಕ್ರಿಯೆಯಲ್ಲಿ ವಿಶ್ವದ, ಕರ್ನಾಟಕದ ಆಗುಹೋಗುಗಳನ್ನು ಗಮನದಲ್ಲಿರಿಸಿಕೊಂಡು ಪ್ರಶ್ನೆಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ಪಠ್ಯಾಧಾರಿತ ರಸಪ್ರಶ್ನೆ ಅಲ್ಲವೇ ಅಲ್ಲ. ವಿದ್ಯಾರ್ಥಿಗಳು, ಜಗತ್ತಿನ ಆಗುಹೋಗುಗಳ ಬಗ್ಗೆ ಎಷ್ಟು ಬಲ್ಲರು? ಅವರಲ್ಲಿ ಇನ್ನಷ್ಟು ತಿಳಿಯಬೇಕು ಎಂಬ ಜ್ಞಾನ ದಾಹ ಹುಟ್ಟಿಸುವುದು ಈ ರಸಪ್ರಶ್ನೆಯ ಉದ್ದೇಶ ಎನ್ನುತ್ತಾರೆ ರಾಘವ್‌ ಚಕ್ರವರ್ತಿ. ಕೇವಲ ಪ್ರಶ್ನೋತ್ತರಗಳನ್ನು ಕೇಳುವುದು ಹೇಳುವುದಷ್ಟೆ ಅಲ್ಲ, ಆ ಕ್ಷಣಕ್ಕೆ ಅವರು ಸ್ಪಂದಿಸುವ ಕೌಶಲ ಬೆಳೆಸಿಕೊಳ್ಳುತ್ತಾರೆ. ಇನ್ನಷ್ಟು ಅರಿಯಬೇಕು ಎನ್ನುವ ದಾಹ ಅವರಲ್ಲಿ ಹೆಚ್ಚುತ್ತದೆ. ಈ ಅರಿವಿನದಾಹ ತಣಿಸುವಲ್ಲಿ ‘ಪ್ರಜಾವಾಣಿ ರಸಪ್ರಶ್ನೆ’ ಸ್ಪರ್ಧೆಯು ಒಂದು ನೂತನ ಪ್ರಯೋಗವಾಗಲಿದೆ. ಆತ್ಮವಿಶ್ವಾಸ ಹೆಚ್ಚಿಸುತ್ತಲೇ ಓದಿನಲ್ಲಿ ಆಸಕ್ತಿ ಕೆರಳಿಸುವ, ಓದಿದ್ದು ಮನವರಿಕೆ ಮಾಡಿಕೊಳ್ಳುವ, ಮನನ ಮಾಡಿಕೊಳ್ಳುವ, ಸ್ಮರಣೆಯಲ್ಲಿರುವುದನ್ನು ತ್ವರಿತವಾಗಿ ಅಭಿವ್ಯಕ್ತಿ ಮಾಡುವುದು ಒಟ್ಟೊಟ್ಟಿಗೆ ಆಗುವುದರಿಂದ ವಿದ್ಯಾರ್ಥಿಗಳಲ್ಲಿ ‘ಪ್ರಜಾವಾಣಿ ರಸಪ್ರಶ್ನೆ’ ಖಂಡಿತವಾಗಿಯೂ ಸಂಚಲನೆ ಮೂಡಿಸುತ್ತದೆ ಎನ್ನುವುದು ಅವರ ಭರವಸೆ. ಸ್ಪರ್ಧೆಯ ವಿವರ ಮಂಗಳೂರು ವಲಯ: ಜ.8ರಂದು ಸುಧೀಂದ್ರ ಸಭಾಂಗಣ, ಕೆನರಾ ಗರ್ಲ್ಸ್‌ ಹೈಸ್ಕೂಲ್‌, ಡೊಂಗರಕೇರಿ, ಕೊಡಿಯಾಲಬೈಲ್‌ ಮಂಗಳೂರು, ಮಾಹಿತಿಗೆ 8792721121 ಮೈಸೂರು ವಲಯ: ಜ.9 ರಂದು ಪ್ಲಾಟಿನಂ ಜುಬಿಲೀ ಸಭಾಂಗಣ, ಜೆ.ಕೆ ಗ್ರೌಂಡ್ಸ್‌ ಸಿಟಿ ರೈಲ್ವೆ ಸ್ಟೇಷನ್‌ ಹತ್ತಿರ, ಮೈಸೂರು. ಮಾಹಿತಿಗೆ: 81399 00021 ಬೆಂಗಳೂರು ವಲಯ: ಜ.10ರಂದು ಕುವೆಂಪು ಕಲಾಕ್ಷೇತ್ರ, ಒಕ್ಕಲಿಗರ ಸಂಘ, ವಿ.ವಿ. ಪುರಂ, ಬೆಂಗಳೂರು. ಮಾಹಿತಿಗೆ: 080 25880204 ಹುಬ್ಬಳ್ಳಿ ವಲಯ: ಜ.12ರಂದು ಸೃಜನ ರಂಗಮಂದಿರ, ಕರ್ನಾಟಕ ಕಾಲೇಜು ಆವರಣ, ಧಾರವಾಡ. ಮಾಹಿತಿಗೆ: 99458 88738 ಗುಲ್ಬರ್ಗ ವಲಯ: ಜ.13ರಂದು ಸೇಂಟ್‌ ಮೇರೀಸ್‌ ಚರ್ಚ್‌ ಸಭಾಂಗಣ, ಎಸ್‌.ಬಿ.ಟೆಂಪಲ್‌ ರಸ್ತೆ, ಗುಲ್ಬರ್ಗ ಮಾಹಿತಿಗೆ: 97392 79225 ದಾವಣಗೆರೆ ವಲಯ: ಜ.14ರಂದು ಗುಂಡಿಮಹಾದೇವಪ್ಪ ಕಲ್ಯಾಣ ಮಂಟಪ, ಗುಂಡಿ ಸರ್ಕಲ್‌, ಎಂಸಿಸಿ ‘ಬಿ’ ಬ್ಲಾಕ್‌ ದಾವಣಗೆರೆ. ಮಾಹಿತಿಗೆ: 99458 88738 ಸಮಯ: ಎಲ್ಲೆಡೆ ಬೆಳಿಗ್ಗೆ 8.30. * * * ವಾಲ್‌ನಟ್‌ ನಾಲೆಡ್ಜ್‌ ಸಲ್ಯೂಷನ್ಸ್‌ ಸಂಸ್ಥೆ ರಸಪ್ರಶ್ನೆಗಳನ್ನು ಆಯೋಜಿಸುತ್ತ, ಆಯೋಜಿಸಲು ಕಾರ್ಯಾಗಾರ ನಡೆಸುತ್ತಿರುವ ಸಂಸ್ಥೆ ವಾಲ್‌ನಟ್‌ ನಾಲೆಡ್ಜ್‌ ಸಲ್ಯೂಷನ್ಸ್‌. ಇದು ವೃತ್ತಿಯಿಂದ ವಕೀಲರಾಗಿರುವ ರಾಘವ ಚಕ್ರವರ್ತಿ ಹಾಗೂ ಸಚಿನ್‌ ರವಿ ಅವರ ಕನಸಿನ ಕೂಸು. ಇವರಿಬ್ಬರೂ ಐಸಿಐಸಿಐ ಬ್ಯಾಂಕ್‌ಗೆ ಲೀಗಲ್‌ ಮ್ಯಾನೆಜರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುಣೆಯ ಸಿಂಬಾಯಸಿಸ್‌ ಲಾ ಸ್ಕೂಲ್‌ನಿಂದ ಕಾನೂನು ಪದವಿ ಪಡೆದಿದ್ದಾರೆ. ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಹವ್ಯಾಸವಾಗಿತ್ತು. ಗೆಲ್ಲುವುದು ಅಭ್ಯಾಸವಾಗುವಷ್ಟು ಯಶಸ್ವಿಯಾಗಿದ್ದು 2009ರಿಂದೀಚೆಗೆ. ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ಅಷ್ಟೇ ಅಲ್ಲ ಭುವನೇಶ್ವರದ ಸ್ಕೂಲ್‌ ಆಫ್‌ ಲಾ, ಲಖನೌನ ಡಾ. ರಾಮ್‌ಮನೋಹರ್‌ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಸಿಂಬಾಯಸಿಸ್‌ ಲಾ ಸ್ಕೂಲ್‌ ಪುಣೆ, ಕುಮಾರನ್ಸ್‌ ಹೈಸ್ಕೂಲ್‌ ಬೆಂಗಳೂರು ಮುಂತಾದ ಸಂಸ್ಥೆಗಳಿಗೆ ರಸಪ್ರಶ್ನೆಗಳನ್ನು ಆಯೋಜಿಸಿದ ಅನುಭವ ಅವರಿಗಿದೆ. ರಸಪ್ರಶ್ನೆಯ ಬಗೆಗಿನ ಅವರ ಪ್ರೀತಿ, ಕಲಿಕಾರ್ಥಿಗಳ ಬಗೆಗಿನ ಕಾಳಜಿಯಿಂದಾಗಿ ‘ವಾಲ್‌ನಟ್‌ ನಾಲೆಡ್ಜ್‌ ಸಲ್ಯೂಷನ್ಸ್‌’ ಸಂಸ್ಥೆಯನ್ನು ಅವರು ಹುಟ್ಟು ಹಾಕಿದರು. ಕ್ವಿಜ್‌ ಶಾಲಾ ಎಂಬ ಹೆಸರಿನಲ್ಲಿ ಕಾರ್ಯಾಗಾರಗಳನ್ನೂ ಆಯೋಜಿಸುತ್ತಾರೆ. ಮಾಹಿತಿಗೆ: ://.../. ಕ್ವಿಜ್ ಮಾಸ್ಟರ್ ರಮೇಶ್ ಪ್ರಾದೇಶಿಕ ಸುತ್ತುಗಳಲ್ಲಿ ಗೆದ್ದವರು ಅಂತಿಮವಾಗಿ ಜ.16ರಂದು ಬೆಂಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆಯುವ ಎರಡು ಸೆಮಿಫೈನಲ್‌ ಸುತ್ತಿನಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆಯುತ್ತಾರೆ. ಇದರಲ್ಲಿ ಗೆದ್ದವರು ಅಂತಿಮ ಸುತ್ತಿಗೆ ಆಯ್ಕೆಯಾಗುತ್ತಾರೆ. ಅಂತಿಮ ಹಣಾಹಣಿಗೆ ಚಲನಚಿತ್ರ ನಟ ಹಾಗೂ ನಿರ್ದೇಶಕ ರಮೇಶ್‌ ಅರವಿಂದ ಕ್ವಿಜ್‌ ಮಾಸ್ಟರ್‌ ಆಗಿ ಪಾಲ್ಗೊಳ್ಳಲಿದ್ದಾರೆ. ಬಹುಮಾನ ಏನು? ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದ ಇಬ್ಬರೂ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಎರಡನೆಯ ಬಹುಮಾನ ಗೆದ್ದವರಿಗೆ ಕ್ಯಾಮೆರಾ ಹಾಗೂ ಮೂರನೆಯ ಬಹುಮಾನ ಗೆದ್ದವರಿಗೆ ಟ್ಯಾಬ್‌ಗಳನ್ನು ನೀಡಲಾಗುತ್ತದೆ. ಈ ಬಹುಮಾನಗಳಿಗಿಂತಲೂ ಮುಖ್ಯವಾಗಿ ಸ್ಪರ್ಧೆ, ಜ್ಞಾನದ ಅನನ್ಯ ಅನುಭವಕ್ಕೆ ಅವರು ತೆರೆದುಕೊಳ್ಳಲಿದ್ದಾರೆ, ‘ಪ್ರಜಾವಾಣಿ ರಸಪ್ರಶ್ನೆ’ಯಿಂದ. ದೀಕ್ಷಾ ನೆಟ್‌ವರ್ಕ್‌ ಈ ಕಾರ್ಯಕ್ರಮವನ್ನು ಪ್ರಾಯೋಜಿಸುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.