ಸತ್ಯಾರ್ಥಿಗೆ ನೊಬೆಲ್‌, ಆರ್ಕುಟ್‌ ಸ್ಥಗಿತ * ಅ.1: ಭಾರತದ ಮಹಿಳಾ ಬಾಕ್ಸರ್‌ ಮೇರಿ ಕೋಮ್‌ ಏಷ್ಯಾನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಮೇರಿ ಕೋಮ್‌ ಏಷ್ಯಾನ್‌ ಗೇಮ್ಸ್‌ನಲ್ಲಿ ಪಡೆದ ಮೊದಲ ಚಿನ್ನದ ಪದಕ ಇದಾಗಿದೆ. * ಅ. 2: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗಾಂಧಿ ಜಯಂತಿ ದಿನ ದೇಶದಾದ್ಯಂತ ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಚಾಲನೆ ನೀಡಿದರು. ದೆಹಲಿಯ ಕೊಳೆಗೇರಿ ಪ್ರದೇಶದಲ್ಲಿ ಕಸ ಗುಡಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. * ಅ. 3: ಬಿಹಾರದ ರಾಜಧಾನಿ ಪಟ್ನಾದ ಗಾಂಧಿ ಮೈದಾನದಲ್ಲಿ ದಸರಾ ಪ್ರಯುಕ್ತ ಏರ್ಪಡಿಸುವ ದೇವತೆಗಳ ಉತ್ಸವ ಸಂದರ್ಭದಲ್ಲಿ ಕಾಲ್ತುಳಿತದಿಂದ 32 ಜನರು ಮೃತಪಟ್ಟು 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. * ಅ. 4 : ಗೂಗಲ್‌ನ ಸಾಮಾಜಿಕ ಜಾಲತಾಣವಾಗಿದ್ದ ‘ಆರ್ಕುಟ್‌’ಅನ್ನು ಸ್ಥಗಿತಗೊಳಿಸುವುದಾಗಿ ಗೂಗಲ್‌ ಕಂಪೆನಿ ಘೋಷಿಸಿತು. ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ ಜನಪ್ರಿಯವಾದ ಹಿನ್ನೆಲೆಯಲ್ಲಿ ‘ಆರ್ಕುಟ್‌’ ಬಳಸುವವರ ಸಂಖ್ಯೆ ಕಡಿಮೆಯಾದ್ದರಿಂದ ಸ್ಥಗಿತಗೊಳಿಸಲಾಯಿತು ಎಂದು ಕಂಪೆನಿ ತಿಳಿಸಿತು. * ಅ. 5: ಮಹೇಂದ್ರ ಸಿಂಗ್‌ ದೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 2014 ರ ಚಾಂಪಿಯನ್‌ ಲೀಗ್‌ ಕ್ರಿಕೆಟ್‌ ಟ್ರೋಪಿಯನ್ನು ಗೆದ್ದುಕೊಂಡಿತು. ಬೆಂಗಳೂರಿನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಕೆಕೆಆರ್‌ ತಂಡವನ್ನು ಮಣಿಸಿತು. * ಅ.5: ರಾಜಸ್ತಾನದ ಬಿಕನೇರ್‌ ಸಮೀಪದಲ್ಲಿ ‘ಆಲಿವ್‌’ ಮರದ ಎಣ್ಣೆ ತಯಾರಕ ಘಟಕವನ್ನು ರಾಜಸ್ತಾನ ಸರ್ಕಾರ ಆರಂಭಿಸಿತು. ಆ ಮೂಲಕ ಭಾರತದಲ್ಲೇ ಆಲಿವ್‌ ಮರದ ಎಣ್ಣೆ ಘಟಕ ಆರಂಭಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. * ಅ. 6: ಸೈಕಲಾಜಿ ಅಥವಾ ಔಷಧಿ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮೂವರು ವಿಜ್ಞಾನಿಗಳಿಗೆ 2014 ನೇ ಸಾಲಿನ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಲಾಯಿತು. ಜಾನ್ ಓ ಕೀಫೆ, ಬ್ರಿಟ್‌ ಮೋಸರ್‌ ಮತ್ತು ಎಡ್ವರ್ಡ್‌ ಐ ಈ ಪ್ರಶಸ್ತಿ ಪಡೆದಿದ್ದಾರೆ. * ಅ.6: ಭಾರತದ ಯಶಸ್ವಿ ಮಂಗಳಯಾನ ಯೋಜನೆ ಕುರಿತಂತೆ ಅಮೆರಿಕದ ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ಆಕ್ಷೇಪಾರ್ಹ ವ್ಯಂಗ್ಯ ಚಿತ್ರ ಪ್ರಕಟಿಸಿದ್ದಕ್ಕಾಗಿ ಪತ್ರಿಕೆ ಭಾರತದ ಕ್ಷಮೆಯಾಚಿಸಿತು. * ಅ.9: ರಾಷ್ಟ್ರೀಯ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಲೀಲಾ ಸ್ಯಾಮ್ಸನ್‌ ರಾಜೀನಾಮೆ ನೀಡಿದರು. ಅವರ ರಾಜೀನಾಮೆಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಅಂಗೀಕರಿಸಿತು. * ಅ.9: ಫ್ರಾನ್ಸ್‌ನ ಹಿರಿಯ ಲೇಖಕ ಹಾಗೂ ಜನಪ್ರಿಯ ಕಾದಂಬರಿಕಾರರಾದ ಪ್ಯಾಟ್ರಿಕ್‌ ಮೊಡಿಯಾನೊ 2014 ನೇ ಸಾಲಿನ ಸಾಹಿತ್ಯ ನೊಬೆಲ್‌ ಪ್ರಶಸ್ತಿಯನ್ನು ಪಡೆದರು. ಅವರ ಒಟ್ಟು ಸಾಹಿತ್ಯ ಸೇವೆಗೆ ಈ ಪ್ರಶಸ್ತಿ ಸಂದಿದೆ. * ಅ,10: 2014 ನೇ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. ಭಾರತದ ಕೈಲಾಶ್‌ ಸತ್ಯಾರ್ಥಿ ಮತ್ತು ಪಾಕಿಸ್ತಾನದ ಅತಿ ಕಿರಿಯ ಸಮಾಜ ಸೇವಕಿ ಮಲಾಲಗೆ ಜಂಟಿಯಾಗಿ ಈ ಪ್ರಶಸ್ತಿ ನೀಡಲಾಯಿತು. * ಅ 11: ಅಮೆರಿಕದ ವೈದ್ಯಕೀಯ ವಿಜ್ಞಾನಿಗಳ ತಂಡವು ಎಚ್‌ಐವಿ ವೈರಾಣುವನ್ನು ನೋಡಬಹದಾದ ಅತಿ ಸೂಕ್ಷ್ಮ ಸಾಧನವನ್ನು ಅಭಿವೃದ್ಧಿಪಡಿಸಿರುವುದಾಗಿ ಪ್ರಕಟಿಸಿದೆ. * ಅ. 13: ಅರ್ಥಶಾಸ್ತ್ರ ವಿಭಾಗಕ್ಕೆ ನೀಡುವ 2014 ಸಾಲಿನ ನೊಬೆಲ್‌ ಪ್ರಶಸ್ತಿ ಫ್ರಾನ್ಸ್ ದೇಶದ ಆರ್ಥಿಕ ತಜ್ಞ ಜಿನ್‌ ಟಿರೋಲ್‌ ಅವರಿಗೆ ಸಂದಿದೆ. * ಅ. 14 : ಬಾಲಿವುಡ್‌ನ ಖ್ಯಾತ ಚಿತ್ರ ಸಾಹಿತಿ ’ಸಮೀರ್‌’ ಅವರಿಗೆ 2013ನೇ ಸಾಲಿನ ರಾಷ್ಟ್ರೀಯ ಕಿಶೋರ್‌ ಕುಮಾರ್‌ ಪ್ರಶಸ್ತಿ ಲಭಿಸಿತು. * ಅ.14 : ಯಮನ್‌ ದೇಶದ ಪ್ರಧಾನಿಯಾಗಿ ಖಲೇದ ಬ್ಹಾ ಅವರನ್ನು ನೇಮಕ ಮಾಡಲಾಯಿತು. * ಅ.15: ಆಸ್ಟ್ರೇಲಿಯಾದ ಲೇಖಕ ರಿಚರ್ಡ್‌ ಪ್ಲಾನಗನ್‌ ಅವರಿಗೆ 2014 ನೇ ಸಾಲಿನ ಮ್ಯಾನ್‌ ಆಫ್‌ ದಿ ಬೂಕರ್‌ ಪ್ರಶಸ್ತಿ ಲಭಿಸಿದೆ. ಅವರ ಯುದ್ಧಕಾಲಿನ ಕಾದಂಬರಿ ‘ ದಿ ನ್ಯಾರೊ ರೋಡ್‌ ಟು ದಿ ಡೀಪ್‌ ನಾರ್ತ್‌’ ಕೃತಿಗೆ ಈ ಪುರಸ್ಕಾರ ಸಂದಿದೆ. * ಅ. 15: ತೆಲುಗಿನ ಖ್ಯಾತ ಬರಹಗಾರ್ತಿ ತುರಗ ಜಾನಕಿ ರಾಣಿ ನಿಧನರಾದರು. ಇವರು ಆಂಧ್ರಪ್ರದೇಶದ ಬಾನುಲಿಯಲ್ಲಿ ಸುದ್ದಿ ನಿರೂಪಕಿಯಾಗಿ ಭಾರೀ ಜನಪ್ರಿಯತೆ ಪಡೆದಿದ್ದರು. * ಅ. 17: ಕರ್ನಾಟಕ ರಾಜ್ಯದ 12 ನಗರಗಳ ಮರು ನಾಮಕರಣಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿತು. ನಗರಗಳ ಹೆಸರು ಬದಲಾವಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ್ದರು. * ಅ. 18: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಾಗಿ ವಿಶೇಷ ಆರೋಗ್ಯ ಯೋಜನೆಯನ್ನು ಪ್ರಕಟಿಸಿತು. ಅದನ್ನು ಜಮ್ಮು ಕಾಶ್ಮೀರ ಆರೋಗ್ಯ ಗ್ರಾಮ ಯೋಜನೆ ಎಂದು ಕರೆಯಲಾಗುವುದು. ಇದನ್ನು ಕೇಂದ್ರ ಆರೋಗ್ಯ ಸಚಿವರು ಮತ್ತು ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಲೋಕಾರ್ಪಣೆ ಮಾಡಿದರು. * ಅ. 22: ತಿಹರ್‌ ಜೈಲಿನಲ್ಲಿ ಮಹಿಳಾ ಕೈದಿಗಳಿಗಾಗಿ ಇ–ಗ್ರಂಥಾಲಯವನ್ನು ಆರಂಭಿಸಲಾಯಿತು. * ಅ. 27: ಹರಿಯಾಣ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ಪ್ರಮಾಣ ವಚನ ಸ್ವೀಕರಿಸಿದರು. ಹರಿಯಾಣದಲ್ಲಿ ಮೊದಲ ಸಲ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. * ಅ. 29: ಪ್ರಸಾರ ಭಾರತೀಯ ಮುಖ್ಯಸ್ಥರಾಗಿ ಸೂರ್ಯ ಪ್ರಕಾಶ್‌ ಅಧಿಕಾರ ಸ್ವೀಕರಿಸಿದರು. ಇವರ ಅಧಿಕಾರ ಅವಧಿ ಮೂರು ವರ್ಷಗಳವರೆಗೆ ಇರಲಿದೆ. * ಅ. 30: ಕೇಂದ್ರ ಸರ್ಕಾರ ವಿದೇಶದಲ್ಲಿ ಕಪ್ಪು ಹಣ ಇಟ್ಟಿರುವ 615 ಜನರ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತು. * ಅ. 31: ದೇವೇಂದ್ರ ಫಡ್ನವೀಸ್‌ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಪಕ್ಷಗಳ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.