ಸರ್ವತೋಮುಖ ಬೆಳವಣಿಗೆಗೆ ಸಿಎಂಆರ್‌ ವಿಶ್ವವಿದ್ಯಾಲಯ ‘ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಕೂಡದು. ಪ್ರತಿಯೊಂದು ಮಗುವೂ ತನ್ನಲ್ಲಿರುವ ಕೌಶಲದಿಂದಲೇ ಬದುಕುವುದನ್ನು ಕಲಿಯಬೇಕು. ಶಿಕ್ಷಣ ಆ ಮಗುವಿನಲ್ಲಿರುವ ಕಲೆಯನ್ನು ಕೌಶಲವಾಗಿ ಬೆಳೆಸುವಂತಿರಬೇಕು. ಪರಿಣತಿಯನ್ನು ನೀಡುವಂತಿರಬೇಕು. ಎಲ್ಲಿಯೂ ಒತ್ತಡ ಹೇರುವಂತಿರಬಾರದು. ಈ ತತ್ವವನ್ನು ಚಿಕ್ಕ ಮುನಿಯಪ್ಪ ರೆಡ್ಡಿ ಅವರು ಆಗಾಗ ಪ್ರಸ್ತಾಪಿಸುತ್ತಲೇ ಇದ್ದರು. ಇದೇ ಮಾತು ಸಿಎಂಆರ್‌ ನ್ಯಾಶನಲ್‌ ಪಬ್ಲಿಕ್‌ ಸ್ಕೂಲ್‌ ಆರಂಭಿಸಲು ಪ್ರೇರಣೆಯಾಯಿತು ಎಂದು ಸಿ.ಎಂ.ಆರ್‌. ಜ್ಞಾನಧಾರ ಟ್ರಸ್ಟ್‌ನ ಅಧ್ಯಕ್ಷ ಕೆ.ಸಿ. ರಾಮಮೂರ್ತಿ ಅವರು ತಮ್ಮ ಪ್ರತಿಷ್ಠಾನದ ಶೈಕ್ಷಣಿಕ ಸಂಸ್ಥೆಗಳ ಉದ್ದೇಶ ಮತ್ತು ಧೋರಣೆಗಳ ಬಗ್ಗೆ ವಿವರಿಸುತ್ತಾರೆ. ಐಜಿಪಿಯಾಗಿ ನಿವೃತ್ತರಾದ ನಂತರ ಸಿ.ಎಂ.ಆರ್‌ ವಿಶ್ವವಿದ್ಯಾಲಯದ ಆಡಳಿತಕ್ಕೆ ಹೊಸ ದಿಕ್ಸೂಚಿಯನ್ನೇ ತೋರುತ್ತಿರುವ ಅವರು ತಮ್ಮ ವಿಶ್ವವಿದ್ಯಾಲಯದ ವಿಶೇಷಗಳ ಬಗ್ಗೆ ತೆರೆದಿಟ್ಟಿದ್ದು ಇಷ್ಟು. ಬೆಳ್ಳಿ ಹಬ್ಬದ ಅಂಚಿನಲ್ಲಿದ್ದೇವೆ. ನಂಬಲಾಗುತ್ತಿಲ್ಲ, ಒಂದು ಸಣ್ಣ ಕಿಂಡರ್‌ಗಾರ್ಟನ್‌ನಿಂದ ಆರಂಭವಾದ ಪಯಣ, ಇದೀಗ ವಿಶ್ವವಿದ್ಯಾಲಯವಾಗಿ ನಿಂತಿದೆ. ಶಿಕ್ಷಣ ಸಂಸ್ಥೆ ಬೆಳೆಯುತ್ತಿದ್ದಂತೆ ಪೀಳಿಗೆಯೊಂದು ಬೆಳೆದಿದೆ. ಆದರೆ ಗಮ್ಯವಿನ್ನೂ ತಲುಪಿಲ್ಲ. ಇದು ನಿರಂತರ ಪಯಣ. ಇಲ್ಲಿ ಮಕ್ಕಳನ್ನು ಶಿಕ್ಷಿತ ನಾಗರಿಕರನ್ನಾಗಿಸುವ ಪ್ರಕ್ರಿಯೆ ಇದೆಯೇ ಹೊರತು ಅಕ್ಷರಸ್ಥರಾಗಿಸುವ ಕರ್ತವ್ಯ ಇಲ್ಲ. ಇದೇ ಕಾರಣದಿಂದಲೇ ಪ್ರತಿ ವರ್ಷ 15000 ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಿಂದ ಸ್ಪರ್ಧಾತ್ಮಕ ಜಗತ್ತಿಗೆ ಆತ್ಮವಿಶ್ವಾಸದಿಂದ ಕಾಲಿಡುತ್ತಿದ್ದಾರೆ. ಸಿಎಂಆರ್‌ ವಿಶ್ವವಿದ್ಯಾಲಯದಲ್ಲಿ 23 ವಿಷಯಗಳಲ್ಲಿ ಪದವಿ ಹಾಗೂ 22 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯಬಹುದಾಗಿದೆ. ಎಲ್ಲ ವೃತ್ತಿಪರ ಕೋರ್ಸುಗಳೂ, ಸಂಶೋಧನಾ ಶಾಲೆಗಳೂ ಲಭ್ಯ ಇವೆ. ವೈದ್ಯಕೀಯ ಕ್ಷೇತ್ರವೊಂದನ್ನು ಹೊರತು ಪಡಿಸಿದರೆ ಕಾನೂನು, ನರ್ಸಿಂಗ್‌, ಶಿಕ್ಷಣ, ಮ್ಯಾನೇಜ್‌ಮೆಂಟ್‌, ಮಾನವಿಕ, ಮಾಧ್ಯಮ, ಎಂಟೆಕ್‌ ಮುಂತಾದ ಕೋರ್ಸುಗಳನ್ನಿಲ್ಲಿ ಪರಿಚಯಿಸಲಾಗಿದೆ. ಶಿಕ್ಷಣ ಬದುಕಲು ಉಪಾಯವನ್ನು ಅಥವಾ ಅವಕಾಶವನ್ನು ಸೃಷ್ಟಿಸುವ ಕೆಲಸವನ್ನು ಮಾತ್ರ ಮಾಡಬಾರದು. ಬದುಕುವ ಬಗೆಯನ್ನು ಹೇಳಿಕೊಡಬೇಕು. ಆ ಕೆಲಸವನ್ನು ನಮ್ಮ ಸಂಸ್ಥೆಯ ಸಿಬ್ಬಂದಿ ಮಾಡುತ್ತಿದ್ದಾರೆ ಎನ್ನುವುದು ಅವರ ಭರವಸೆಯ ಮಾತಾಗಿದೆ. ಶಿಕ್ಷಣ ಇಂದು ಕೈಗೆಟುಕದ ಬೆಲೆಯಲ್ಲಿದೆ ಎನ್ನುವುದು ಹಲವರ ದೂರು. ಬೆಂಗಳೂರಿನಂಥ ನಗರದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವುದು, ಕಟ್ಟಡ ಬಾಡಿಗೆ, ಕೌಶಲಯುಕ್ತ ಮಾನವ ಸಂಪನ್ಮೂಲ ಇವುಗಳೆಲ್ಲವನ್ನೂ ನಿರ್ವಹಿಸುವುದರಲ್ಲಿ ಶಿಕ್ಷಣ ಸಂಸ್ಥೆಗೆ ಹೊರೆಯಾಗುತ್ತದೆ. ಅದನ್ನು ವಿದ್ಯಾರ್ಥಿಗಳು ಹಂಚಿಕೊಳ್ಳಲೇಬೇಕಾಗುತ್ತದೆ. ಶಿಕ್ಷಣದ ಮಾಧ್ಯಮ, ಪಠ್ಯಕ್ರಮ ಇವೆಲ್ಲಕ್ಕಿಂತಲೂ ಮುಖ್ಯವಾಗಿ ಜೀವನಶೈಲಿ ಮತ್ತು ಸಂಸ್ಕೃತಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಎಲ್ಲರಿಗಾಗಿ ಶಿಕ್ಷಣ: ಅಂಕಗಳಿಗಿಂತ ವಿದ್ಯಾರ್ಥಿಯ ಆಸಕ್ತಿಯನ್ನು ಗಮನಿಸಿ ಪ್ರವೇಶ ನೀಡಲಾಗುತ್ತದೆ. ವಿದ್ಯಾರ್ಥಿಗಳಿಂದ ಶಿಸ್ತು ಮತ್ತು ಬದ್ಧತೆಯನ್ನು ನಿರೀಕ್ಷಿಸಲಾಗುತ್ತದೆ. ಇವೆರಡೂ ಗುಣಗಳಿಂದಲೇ ವ್ಯಕ್ತಿಯೊಬ್ಬ ನಿರಂತರ ಕಲಿಕಾರ್ಥಿಯಾಗಬಹುದು. ಶಿಕ್ಷಣವನ್ನು ಬಲವಂತವಾಗಿ ಅವರ ಮೇಲೆ ಹೇರುವ ಬದಲು, ತಮ್ಮ ಅಧ್ಯಯನದಲ್ಲಿ ಅವರಿಗೆ ಆಸಕ್ತಿ ಕೆರಳುವಂತೆ ಮಾಡಲಾಗುತ್ತದೆ. ಇದಕ್ಕಾಗಿ ಕೇವಲ ಪಠ್ಯಕ್ರಮವಷ್ಟೇ ಅಲ್ಲ, ಕ್ಷೇತ್ರ ಪರಿಣತರೊಂದಿಗೆ ಸಂವಾದವನ್ನು ಏರ್ಪಡಿಸಲಾಗುತ್ತದೆ. ಪ್ರಶ್ನಿಸಿ, ಅರಿಯಲಿ ಎಂಬುದು ನಮ್ಮ ಮುಖ್ಯ ಧ್ಯೇಯವಾಗಿದೆ ಎನ್ನುತ್ತಾರೆ ಅವರು. ಮೊದಲೆಲ್ಲ ಶಾಲೆಯನ್ನು ಹೊರತು ಪಡಿಸಿದರೆ ಅತಿಹೆಚ್ಚು ಸಮಯ ಮನೆಯಲ್ಲಿ ಮಕ್ಕಳು ಕಳೆಯುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಮನೆಗಿಂತಲೂ ಹೆಚ್ಚು ಸಮಯವನ್ನು ಶಾಲೆಯಲ್ಲಿ ಕಳೆಯುವಂತಾಗುತ್ತಿದೆ. ಹಾಗಾಗಿ ನಮ್ಮ ಶಿಕ್ಷಕರು ಎರಡನೇ ಪೋಷಕರ ಪಾತ್ರವನ್ನು ನಿರ್ವಹಿಸಬೇಕಿರುವುದು ಅನಿವಾರ್ಯವಾಗಿದೆ. ವೃತ್ತಿಪರ ಕೋರ್ಸುಗಳಲ್ಲದೆ, ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌, ಸ್ಕೂಲ್‌ ಆಫ್‌ ಲಾ, ಟೀಚರ್‌ ಟ್ರೇನಿಂಗ್‌ ಇನ್ಸ್‌ಟಿಟ್ಯೂಟ್‌, ಸ್ಕೂಲ್‌ ಆಫ್‌ ಎಜುಕೇಷನ್‌ ಮುಂತಾದ ಕೋರ್ಸುಗಳು ಇಲ್ಲಿ ಲಭ್ಯ. ಮ್ಯಾನೇಜ್‌ಮೆಂಟ್‌ ಅಂಡ್‌ ಟೆಕ್ನಾಲಜಿ, ಮೀಡಿಯಾ ಮ್ಯಾನೇಜ್‌ಮೆಂಟ್‌ನಂಥ ಕೋರ್ಸುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇಡೀ ಕ್ಯಾಂಪಸ್‌ನಲ್ಲಿ ವೈಫೈ ಸೌಲಭ್ಯ ಇದೆ. ವಸತಿ ಸೌಲಭ್ಯ ಅಧ್ಯಯನ ಶೀಲರಾಗಲು ಬೇಕಿರುವ ಪರಿಸರವನ್ನು ನೀಡುವಂತಿದೆ. ಪ್ರತಿ ವರ್ಷ ಸಿಬ್ಬಂದಿಗೆ ಪುನಃಶ್ಚೇತನ ತರಬೇತಿ ನೀಡಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಆಧುನಿಕ ಕಾಲದ ಬೇಡಿಕೆಗಳನ್ನು ಈಡೇರಿಸುವಷ್ಟು ಸಮರ್ಥರಾದ ಮಾನವ ಸಂಪನ್ಮೂಲವನ್ನು ಸಿ.ಎಂ.ಆರ್‌ ವಿಶ್ವವಿದ್ಯಾಲಯ ಹೊಂದಿದೆ. ಹೆಚ್ಚಿನ ಮಾಹಿತಿಗೆ: ://... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.