ಆರ್‌ಟಿಇ ಈ ಬಾರಿ ಆನ್‌ಲೈನ್ ಪ್ರವೇಶ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಖಾಸಗಿ ಶಾಲೆಗಳಲ್ಲಿನ ಶೇ 25ರಷ್ಟು ಸೀಟುಗಳ ಭರ್ತಿಯಲ್ಲಿ ಪಾರದರ್ಶಕತೆ ಇರಬೇಕು ಎಂಬ ಉದ್ದೇಶದಿಂದ ಮೊದಲ ಬಾರಿಗೆ ಆನ್‌ಲೈನ್ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. 2015-16ನೇ ಸಾಲಿನ ಪ್ರವೇಶ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಶೇ 25ರಷ್ಟು ಸೀಟುಗಳ ಪಟ್ಟಿಯನ್ನು ಪ್ರಕಟಿಸಿದ್ದು, ಜನವರಿ 18ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಫೆ.19ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಮೂರು ವರ್ಷಗಳ ಹಿಂದೆ ಜಾರಿಗೆ ಬಂದಿರುವ ಶಿಕ್ಷಣ ಹಕ್ಕು ಕಾಯ್ದೆ ಬಡವರು, ದುರ್ಬಲ ವರ್ಗದವರು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿದ್ದು, ನರ್ಸರಿ ಅಥವಾ ಒಂದನೇ ತರಗತಿಯಿಂದ 8ನೇ ತರಗತಿವರೆಗೆ ಉಚಿತವಾಗಿ ವ್ಯಾಸಂಗ ಮಾಡಲು ಅವಕಾಶ ಇದೆ. ಆರ್‌ಟಿಇ ಕೋಟಾದಡಿ ಒಂದು ಲಕ್ಷಕ್ಕೂ ಅಧಿಕ ಸೀಟುಗಳು ಲಭ್ಯವಿವೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಉಚಿತ ಕೋಟಾದ ಸೀಟುಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲದಿರುವುದು, ಕೆಲವು ಖಾಸಗಿ ಶಾಲೆಗಳ ಅಸಹಕಾರ ಇತ್ಯಾದಿ ಕಾರಣಗಳಿಂದಾಗಿ ಶಿಕ್ಷಣ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಆರ್‌ಟಿಇ ಕೋಟಾ ಸೀಟುಗಳ ಪ್ರವೇಶದ ಬಗ್ಗೆ ಸಾಕಷ್ಟು ಮೋದಲೇ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಪ್ರಕಟಿಸಿ, ಯಾವ ರೀತಿ ಪ್ರವೇಶ ಪ್ರಕ್ರಿಯೆ ನಡೆಯಲಿದೆ ಎಂಬ ಮಾಹಿತಿಯನ್ನು ಪ್ರಕಟಿಸಿದೆ. ನೆರೆಹೊರೆ ಶಾಲೆಗಳ ಪಟ್ಟಿ, ಪ್ರವೇಶಕ್ಕೆ ಅನುಸರಿಸುವ ಮಾನದಂಡ, ಪ್ರವೇಶಕ್ಕೆ ಯಾರು ಅರ್ಹರು, ಯಾವ ರೀತಿ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ ಇತ್ಯಾದಿ ಮಾಹಿತಿಯನ್ನು ನೀಡಿದೆ. ಆ ಪ್ರಕಾರ ಸಿಬಿಎಸ್‌ಇ/ಐಸಿಎಸ್‌ಇ ಶಾಲೆಗಳು ಸೇರಿದಂತೆ ಖಾಸಗಿ ಶಾಲೆಗಳು (ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ) ಆರ್‌ಟಿಇ ಕಾಯ್ದೆ ಪ್ರಕಾರ ಶೇ 25ರಷ್ಟು ಸೀಟುಗಳನ್ನು ಉಚಿತವಾಗಿ ನೀಡಬೇಕು. ಇದನ್ನು ಉಲ್ಲಂಘಿಸಿದರೆ ಅಂತಹ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಲಾಗುತ್ತದೆ. ಯಾವುದಾದರೂ ಖಾಸಗಿ ಶಾಲೆ ಪ್ರವೇಶ ನಿರಾಕರಿಸಿದರೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಉಪನಿರ್ದೆಶಕರಿಗೆ ದೂರು ನೀಡಬಹುದು. ಪೂರ್ವ ಪ್ರಾಥಮಿಕ (ನರ್ಸರಿ) ಅಥವಾ ಒಂದನೇ ತರಗತಿಗೆ ಆರ್‌ಟಿಇ ಕೋಟಾದಡಿ ಶೇ 25ರಷ್ಟು ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ. ಈ ಕೋಟಾದಡಿ ಪ್ರವೇಶ ಪಡೆಯುವ ಮಕ್ಕಳ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಖಾಸಗಿ ಶಾಲೆಯಲ್ಲಿ ನರ್ಸರಿ ಇದ್ದರೆ, ನರ್ಸರಿ ಪ್ರವೇಶದಲ್ಲಿ ಶೇ 25ರಷ್ಟು ಸೀಟುಗಳನ್ನು ಆರ್‌ಟಿಇ ಕೋಟಾದಡಿ ಭರ್ತಿ ಮಾಡಲಾಗುತ್ತದೆ. ಶಾಲೆಯಲ್ಲಿ ನರ್ಸರಿ ಇಲ್ಲದೆ ಇದ್ದರೆ ಒಂದನೇ ತರಗತಿ ಪ್ರವೇಶದಲ್ಲಿ ಶೇ 25ರಷ್ಟು ಸೀಟುಗಳನ್ನು ಆರ್‌ಟಿಇ ಕೋಟಾದಡಿ ಭರ್ತಿ ಮಾಡಬೇಕಾಗುತ್ತದೆ. ಯಾರು ಅರ್ಹರು: ವಾರ್ಷಿಕ 3.5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಪೋಷಕರ ಮಕ್ಕಳು ಆರ್‌ಟಿಇ ಕೋಟಾದಡಿ ಪ್ರವೇಶ ಪಡೆಯಲು ಅರ್ಹರು. ಆದರೂ, ಒಂದು ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಪೋಷಕರ ಮಕ್ಕಳ ಪ್ರವೇಶಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದಾದ ಬಳಿಕ ಉಳಿಯುವ ಸೀಟುಗಳನ್ನು ಒಂದರಿಂದ 3.5 ಲಕ್ಷ ಒಳಗೆ ಆದಾಯವುಳ್ಳ ಪೋಷಕರ ಮಕ್ಕಳಿಗೆ ನೀಡಲಾಗುತ್ತದೆ. ನಿಗದಿತ ಸೀಟುಗಳಿಗಿಂತ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರೆ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಪೋಷಕರಿಗೆ ಆದಾಯದ ಮಿತಿ ಅನ್ವಯವಾಗುವುದಿಲ್ಲ. ಆರ್‌ಟಿಇ ಕೋಟಾದಡಿ ಮಕ್ಕಳನ್ನು ಶಾಲೆಗೆ ಸೇರಿಸಲು ಬಯಸುವ ಪೋಷಕರು ಮಕ್ಕಳ ಭಾವಚಿತ್ರ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ವೈದ್ಯಕೀಯ ಪ್ರಮಾಣ ಪತ್ರ ಸೇರಿದಂತೆ ಸುತ್ತೋಲೆಯಲ್ಲಿ ತಿಳಿಸಿರುವ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದುಕೊಂಡಿರಬೇಕು. ನೆರೆಹೊರೆ: ಇದುವರೆಗೂ ಗ್ರಾಮಾಂತರ ಪ್ರದೇಶದಲ್ಲಿ ಶಾಲೆಯಿಂದ 1ಕಿ.ಮೀ. ವ್ಯಾಪ್ತಿಯಲ್ಲಿನ ಎಲ್ಲ ಜನವಸತಿ ಪ್ರದೇಶಗಳನ್ನು ನೆರೆಹೊರೆ ಎಂದು ಗುರುತಿಸಲಾಗಿತ್ತು. ಆದರೆ, ಈ ಬಾರಿ ಬದಲಾವಣೆ ಮಾಡಿದ್ದು, ಗ್ರಾಮೀಣ ಭಾಗದಲ್ಲಿ ನೆರೆಹೊರೆ ವ್ಯಾಪ್ತಿ ಕಂದಾಯ ಗ್ರಾಮಕ್ಕೆ ಮಾತ್ರ ಸೀಮಿತವಾಗಿರುತ್ತದೆ. ನಗರ ಪ್ರದೇಶದಲ್ಲಿ ವಾರ್ಡ್ ಅನ್ನು ನೆರೆಹೊರೆ ಪ್ರದೇಶ ಎಂದು ಪರಿಗಣಿಸಲಾಗುತ್ತದೆ. ಇದುವರೆಗೆ ನೆರೆಹೊರೆ ಹೊರಗಿನ ಶಾಲೆಗೂ ಅರ್ಜಿ ಸಲ್ಲಿಸಲು ಅವಕಾಶ ಇತ್ತು. ಆದರೆ, ಈ ಬಾರಿ ನೆರೆಹೊರೆ ಒಳಗಿನ ಗರಿಷ್ಠ ಐದು ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ, ಆಯ್ಕೆ ಪ್ರಕ್ರಿಯೆ ಕೇಂದ್ರೀಕೃತ ಆನ್‌ಲೈನ್ ಲಾಟರಿ ಮೂಲಕ ನಡೆಯಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆ ಲಭ್ಯವಿದೆ. ಆಫ್‌ನೈಲ್‌ನಲ್ಲಿ ಅರ್ಜಿ ಸಲ್ಲಿಸುವವರು ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಲ್ಲದೆ ಇಲಾಖೆಯ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನರ್ಸರಿ, ಒಂದನೇ ತರಗತಿಗೆ ಒಂದೇ ಅರ್ಜಿ ನಮೂನೆ ಇರುತ್ತದೆ. ಅನಾಥ ಮಗು, ಮಂಗಳಮುಖಿ ಮಗು, ವಲಸೆ ಮಗು, ಬೀದಿ ಮಗು, ಅಂಗವಿಕಲ/ವಿಶೇಷ ಆದ್ಯತೆವುಳ್ಳ ಮಗು, ಎಚ್‌ಐವಿ ಪೀಡಿತ ಮಗು ಕೋಟಾದಡಿ ಪ್ರವೇಶ ಬಯಸುವವರು ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು. ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿರುವ ಮಾದರಿಯಲ್ಲೇ ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು. ಅಗತ್ಯ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪಡೆಯಲು ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುವವರೆಗೂ ಕಾಯದೆ ಈಗಲೇ ಅಗತ್ಯ ದಾಖಲೆಗಳನ್ನು ಪಡೆದು ಇಟ್ಟುಕೊಳ್ಳುವುದು ಒಳ್ಳೆಯದು. ಇಲಾಖೆ ಕೇಳಿರುವ ಅಗತ್ಯ ದಾಖಲೆಗಳನ್ನು ನೀಡದೆ ಇದ್ದರೆ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ವಹಿಸಿ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸುವುದು ಸೂಕ್ತ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ವೆಬ್‌ಸೈಟ್‌ ವಿಳಾಸ:.... ಅಗತ್ಯವಿರುವ ದಾಖಲೆಗಳು *ಜನ್ಮದಿನಾಂಕದ ದಾಖಲೆ *ಮಗುವಿನ ಭಾವಚಿತ್ರ *ವಾಸಸ್ಥಳದ ದೃಢೀಕರಣ ಪತ್ರ *ಜಾತಿ ಮತ್ತು ಆದಾಯ ಪ್ರಮಾಣ ಪತ್ರ *ಅನಾಥ ಮಗು, ವಲಸೆ ಮಗು, ಬೀದಿ ಮಗು, ಅಂಗವಿಕಲ/ವಿಶೇಷ ಆದ್ಯತೆವುಳ್ಳ ಮಗು, ಎಚ್‌ಐವಿ ಪೀಡಿತ ಮಗು ಆಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ ಪ್ರಮಾಣ ಪತ್ರ ಪ್ರವೇಶ ವೇಳಾಪಟ್ಟಿ *ಜ.18ರಿಂದ ಫೆ.19: ಪ್ರವೇಶ ಕೋರಿ ಅರ್ಜಿ ಸಲ್ಲಿಕೆ *ಫೆ.26: ಅರ್ಹ ಮಕ್ಕಳ ಪಟ್ಟಿ ಪ್ರಕಟ *ಮಾ.3: ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನ *ಮಾ.9: ಆನ್‌ಲೈನ್ ಲಾಟರಿ ಮೂಲಕ ಆಯ್ಕೆಯಾದ ಮಕ್ಕಳ ಪಟ್ಟಿ ಪ್ರಕಟ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.