ರಂಗ ನಿರ್ವಹಣೆ ತರಬೇತಿ ನಾಟಕವನ್ನು ಒಂದು ಇವೆಂಟ್‌ ಎಂದು ನೋಡಿದರೆ ಅದರ ನಿರ್ವಹಣೆಗೆ ಇರುವ ಮಹತ್ವ ಗೊತ್ತಾಗುತ್ತದೆ. ಇಂದಿನ ಎಷ್ಟೋ ರಂಗಚಟುವಟಿಕೆಗಳು ವಿಫಲವಾಗುತ್ತಿರುವುದು ಅವುಗಳ ದುರ್ಬಲ ನಿರ್ವಹಣೆಯಿಂದಲೇ. ಈ ವಿಫಲತೆಗೆ ಕಾರಣ ನಮ್ಮಲ್ಲಿ ರಂಗಭೂಮಿಯ ನಿರ್ವಹಣೆಗೆ ನಿರ್ದಿಷ್ಟ ತರಬೇತಿ ಇಲ್ಲದಿರುವುದು. ರಂಗಭೂಮಿ ಜೀವಂತ ಕಲೆ. ಅದರ ಜೀವಂತಿಕೆ ಇರುವುದು ಬದಲಾದ ಕಾಲಮಾನಕ್ಕೆ ತಕ್ಕಂತೆ ಬೆಳೆಯುತ್ತಿರುವುದರಲ್ಲಿ. ರಂಗಭೂಮಿ ಎಂದರೆ ವೇದಿಕೆ ಮೇಲಿನ ನಟನೆ ಎಂದು ಭಾವಿಸುವವರೇ ಹೆಚ್ಚು. ಆದರೆ ರಂಗಭೂಮಿಯನ್ನು ಹತ್ತಿರದಿಂದ ನೋಡಿದವರಿಗೆ ಗೊತ್ತಿರುತ್ತದೆ, ನಾಟಕವೆಂಬುದು ನೇಪಥ್ಯದಲ್ಲಿ ತನ್ನನ್ನು ತಾನು ಕಟ್ಟಿಕೊಳ್ಳುವ ಪ್ರಕ್ರಿಯೆ ಎಂಬುದು. ವೇದಿಕೆ ಮೇಲೆ ಕಾಣುವುದು ಆ ಪ್ರಕ್ರಿಯೆಯ ಫಲ. ನೇಪಥ್ಯ ಎಂದರೆ ಬರೀ ತರಬೇತಿ ಅಲ್ಲ. ಅದೊಂದು ಇವೆಂಟ್‌. ನಾಟಕವನ್ನು ಒಂದು ಇವೆಂಟ್‌ ಎಂದು ನೋಡಿದರೆ ಅದರ ನಿರ್ವಹಣೆಗೆ ಇರುವ ಮಹತ್ವ ಗೊತ್ತಾಗುತ್ತದೆ. ಇಂದಿನ ಎಷ್ಟೋ ರಂಗಚಟುವಟಿಕೆಗಳು ವಿಫಲವಾಗುತ್ತಿರುವುದು ಅವುಗಳ ದುರ್ಬಲ ನಿರ್ವಹಣೆಯಿಂದಲೇ. ಈ ವಿಫಲತೆಗೆ ಕಾರಣ ನಮ್ಮಲ್ಲಿ ರಂಗಭೂಮಿಯ ನಿರ್ವಹಣೆಗೆ ನಿರ್ದಿಷ್ಟ ತರಬೇತಿ ಇಲ್ಲದಿರುವುದು. ಈ ಕೊರತೆಯನ್ನು ಕಂಡುಕೊಂಡಿರುವ ಇಂಡಿಯನ್ ಥಿಯೇಟರ್ ಫೋರಂ, ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಮತ್ತು ಜುನೂನ್ ಸಂಸ್ಥೆ ಒಟ್ಟುಗೂಡಿ ‘ಸ್ಮಾರ್ಟ್’ (ಸ್ಟ್ರಾಟೆಜಿಕ್ ಮ್ಯಾನೇಜ್‌ಮೆಂಟ್ ಇನ್ ದಿ ಆರ್ಟ್‌ ಆಫ್ ಥಿಯೇಟರ್) ಎಂಬ ರಂಗಭೂಮಿ ನಿರ್ವಹಣಾ ತರಬೇತಿ ಆರಂಭಿಸಿದೆ. ಎರಡು ವರ್ಷಗಳ ಹಿಂದೆ ಹೀಗೊಂದು ಹೊಸ ಚಿಂತನೆಗೆ ರೆಕ್ಕೆ ಮೂಡಿತ್ತು. ಜುನೂನ್‌ನ ಸಮೀರಾ ಐಯಂಗಾರ್, ಸಂಜನಾ ಕಪೂರ್, ಜನ ನಾಟ್ಯ ಮಂಚ್‌ನ ಸುಧನ್ವಾ ದೇಶಪಾಂಡೆ, ಐಎಫ್‌ಎನ ಅರುಂಧತಿ ಘೋಷ್, ಸ್ವಾತಿ ಆಪ್ಟೆ ಮುಂತಾದ ಸಮಾನ ಮನಸ್ಕ ರಂಗಕರ್ಮಿಗಳು ಈ ತರಬೇತಿ ಕುರಿತು ಚಿಂತಿಸಿದರು. ಸಮಕಾಲೀನ ಭಾರತೀಯ ರಂಗಭೂಮಿಯ ಅವಶ್ಯಕತೆಗಳು, ಅದರ ಆಯಾಮಗಳನ್ನು ಗುರುತಿಸಿ ಈ ತರಬೇತಿ ಕಾರ್ಯರೂಪಕ್ಕೆ ಬಂದಿದೆ. ಆನ್‌ಲೈನ್‌ ಮೂಲಕ ಬಂದ 72 ಗುಂಪುಗಳ ಅರ್ಜಿಗಳನ್ನು ಪರಿಶೀಲಿಸಿ ದೇಶದಾದ್ಯಂತ 17 ಗುಂಪುಗಳನ್ನು ಆಯ್ಕೆ ಮಾಡಲಾಗಿದೆ. ಮೂರು ಹಂತಗಳಲ್ಲಿ ನಡೆಯುವ ಈ ತರಬೇತಿಯ ಮೊದಲ ಹಂತ ಇತ್ತೀಚೆಗೆ ಬೆಂಗಳೂರಿನಲ್ಲಿ ಮುಗಿಯಿತು. ಅಲ್ಲಿ ರಂಗ ತಂಡಗಳ ಸಮರ್ಪಕ ಕಾರ್ಯವೈಖರಿ, ತಂಡ ನಿರ್ವಹಣೆ, ಪ್ರೇಕ್ಷಕರ ಅಗತ್ಯಗಳು, ಆರ್ಥಿಕ ವಿಷಯಗಳ ಸಂಭಾಳಿಕೆ, ಸಂವಹನ ಕೌಶಲ, ಸಂಪನ್ಮೂಲಗಳ ಸಮರ್ಪಕ ನಿರ್ವಹಣೆ, ಒಟ್ಟಾರೆ ಕ್ರಮಬದ್ಧ ಆಡಳಿತದ ಅಂಶಗಳ ಕುರಿತು ಹತ್ತು ದಿನಗಳ ಕಾಲ ಚರ್ಚೆ, ಸಂವಾದಗಳು ನಡೆದವು. ಇದೇ ಗುಂಪುಗಳಿಗೆ ಆರು ತಿಂಗಳ ಅವಧಿ ಎರಡನೇ ಹಂತ ಮುಂದುವರೆಯುತ್ತದೆ. ತಮ್ಮ ತಂಡಕ್ಕೆ ಮರಳಿ, ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಆನ್‌ಲೈನ್ ಮೂಲಕ ಸಂವಹನ ನಡೆಸಿ ನಿರಂತರ ದಾಖಲಿಸುವುದು ಇದರ ಮುಖ್ಯ ಕೆಲಸ. ಕೊನೆಯ ಹಂತ ಎರಡು ದಿನಗಳದ್ದು. ಮಾಹಿತಿಗೆ: @.comಗೆ ಮೇಲ್ ಮಾಡಬಹುದು. ಸ್ಮಾರ್ಟ್ ಅಗತ್ಯ ‘ಭಾರತೀಯ ರಂಗತಂಡಗಳಲ್ಲಿ ಮೂಲ ಸೌಕರ್ಯಗಳ ಕೊರತೆಯದ್ದು ಹೆಚ್ಚಿನ ಪಾಲು. ಅದೂ ಅಲ್ಲದೆ ಆ ತಂಡಗಳಲ್ಲಿ ನಾಟಕದ ಪಾತ್ರಧಾರಿಗಳೇ ಅದರ ಆಡಳಿತವನ್ನೂ ನಿರ್ವಹಿಸುತ್ತಾರೆ. ಇದು ನಿರೀಕ್ಷಿತ ಮಟ್ಟಕ್ಕೆ ಕೆಲಸಗಳು ನಡೆಯಲು ಅಡ್ಡಿ. ನಿರ್ವಹಣೆ ಕೌಶಲದ ಅನಿವಾರ್ಯತೆ ಇದ್ದರೂ ಈ ಕುರಿತು ಯಾರೂ ಗಂಭೀರವಾಗಿ ಯೋಚಿಸುವುದಿಲ್ಲ. ಹಾಗೆ ಯೋಚಿಸಿ ಆ ಕೊರತೆ ತುಂಬುವುದು ನಮ್ಮ ಪ್ರಯತ್ನ. ಕ್ರಮಬದ್ಧವಾಗಿ ಕೆಲಸ ನಿರ್ವಹಿಸುವ ಅರ್ಹತೆಯನ್ನು ಆ ತಂಡದ ಸದಸ್ಯರಲ್ಲಿ ಹುಟ್ಟುಹಾಕುವ ಕೆಲಸವೇ ಈ ತರಬೇತಿಯದ್ದು’. -ಸಮೀರಾ ಐಯಂಗಾರ್ಜು ನೂನ್ ಸಹ ಸಂಸ್ಥಾಪಕಿ ರೋಡ್ ಮ್ಯಾಪ್ ಬೇಕು ‘ಯಾವುದೇ ಕೆಲಸಕ್ಕೆ ಯೋಜನೆ ಇದ್ದರೆ ಸರಳವಾಗಿ ಕೆಲಸ ಮುಗಿಸಬಹುದು. ರಂಗಭೂಮಿಯಲ್ಲಿ ನಿರ್ದಿಷ್ಟ ಕೆಲಸವನ್ನು ನಿರ್ದಿಷ್ಟ ರೀತಿಯಲ್ಲಿ ಮಾಡಬೇಕೆಂದು ತಿಳಿದಿದ್ದರೆ ಪ್ರೇಕ್ಷಕರನ್ನು ತಲುಪಲು ನೆರವಾಗುತ್ತದೆ. ಅತಿ ಪರಿಣಾಮಕಾರಿಯಾಗಿ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರುವುದು ಇದರ ಮುಖ್ಯ ಉದ್ದೇಶ. ಇದಕ್ಕೆ ರೋಡ್ ಮ್ಯಾಪ್ ಅನ್ನು ಸ್ಮಾರ್ಟ್‌ ತರಬೇತಿ ಹಾಕಿಕೊಡುತ್ತದೆ. –ಅರುಂಧತಿ ಘೋಷ್ ಐಎಫ್ಎ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.