ವಾಹ್! ರೇವಾ..! ಕಟ್ಟಡ ನಿರ್ಮಾಣ ಕ್ಷೇತ್ರದಿಂದ ಶಿಕ್ಷಣ ಕ್ಷೇತ್ರದತ್ತ ಹೆಜ್ಜೆ ಹಾಕಿದ್ದು ರುಕ್ಮಿಣಿ ಎಜುಕೇಶನಲ್‌ ವೀಶ್ನರಿ ಅಕಾಡೆಮಿ (ರೇವಾ). ತಮ್ಮ ಕ್ಷೇತ್ರದಲ್ಲಿ ಪರಿಣತರ ಮಾನವ ಸಂಪನ್ಮೂಲಗಳ ಕೊರತೆಯನ್ನು ನೀಗಿಸಲು ತಾವೇ ಆ ಗುರುತರ ಜವಾಬ್ದಾರಿ ಹೊತ್ತಿರುವುದಾಗಿ ಈ ಸ್ವಾಯತ್ತ ವಿಶ್ವವಿದ್ಯಾಲಯದ ಚಾನ್ಸೆಲರ್‌ಪಿ. ಶ್ಯಾಮರಾಜು ಅವರು ಹೇಳುತ್ತಾರೆ. ಅವರ ಸಂಸ್ಥೆಯ ಗುರಿ ಉದ್ದೇಶಗಳ ಬಗ್ಗೆ ಅವರಿಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ‘ಈ ಸಂಸ್ಥೆಯನ್ನು ಆರಂಭಿಸುವಾಗ ಒಂದೇ ಒಂದು ದಶಕದ ಅವಧಿಯಲ್ಲಿ ವಿಶ್ವವಿದ್ಯಾಲಯವಾಗಿ ಬೆಳೆಯಬಹುದು ಎಂದು ಕೊಂಡಿರಲಿಲ್ಲ. ಆದರೆ ನಮ್ಮ ನಿರೀಕ್ಷೆಗೆ ತಕ್ಕಂತೆ ನಿಧಾನವಾಗಿಯಾದರೂ ಸದೃಢ ಹೆಜ್ಜೆ ಇಡುವಲ್ಲಿ ಎಲ್ಲೂ ಎಡುವಲಿಲ್ಲ ಎಂಬ ಸಮಾಧಾನ ಇದೆ.’ ಎನ್ನುತ್ತ ಪಿ.ಶ್ಯಾಮರಾಜು ಅವರು ರೇವಾ ವಿಶ್ವವಿದ್ಯಾಲಯದ ಆಡಳಿತ ಕಚೇರಿಯಲ್ಲಿ ಕೆಲ ಕ್ಷಣ ಸುಮ್ಮನಾದರು. 38 ಎಕರೆ ವಿಸ್ತೀರ್ಣದಲ್ಲಿ ಕಣ್ಣು ಹಾಯಿಸಿದೆಡೆಯೆಲ್ಲ ಹಸಿರು, ಹಸಿರ ನಡುವೆ ಕರಿಕಲ್ಲಿನ ಕಟ್ಟಡಗಳು. ಗಾಳಿ ಬೆಳಕಿಗೆ ಸಾಕಷ್ಟು ಅವಕಾಶವಿರುವ ಆವಾರಗಳು. ಬೆಂಗಳೂರಿನಲ್ಲಿದ್ದೇವೆಯೇ ಎಂದು ಸಂಶಯ ಮೂಡಿಸುವಂಥ ಆವರಣ. ಆಡಳಿತ ಕಚೇರಿ ಇರುವ ಆವರಣದಲ್ಲಿಯೂ ಔಷಧೀಯ ಸಸ್ಯಗಳನ್ನು ಸಾಲುಸಾಲಾಗಿ ಬೆಳೆಸಿದ್ದಾರೆ. ಪ್ರತಿ ಸಾಲಿನಲ್ಲಿಯೂ ಯಾವ ಸಸಿ ಇದೆ, ಅದರ ಕುಟುಂಬದ ಮಾಹಿತಿಯನ್ನೂ ನೀಡಿದ್ದಾರೆ. ಆವರಣದ ಸುತ್ತ ಶ್ರೀಗಂಧ, ಓಕ್‌ ಹಾಗೂ ಸಿಲ್ವರ್‌ ಓಕ್‌ ಮರಗಳನ್ನು ನೆಟ್ಟಿರುವುದರಿಂದ ಎಲ್ಲ ಮರಗಳೂ ತಲೆತೂಗಿ ಸ್ವಾಗತಿಸುತ್ತವೆ. ಈ ಸಂಸ್ಥೆಯು ಆರಂಭವಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸುವ ದೃಷ್ಟಿಯಿಂದ. ಆದರೆ ಎಂಜಿನಿಯರಿಂಗ್‌ನ ಎಲ್ಲ ಶಾಖೆಗಳೂ, ಶಿಕ್ಷಣ, ವಾಣಿಜ್ಯ ಕ್ಷೇತ್ರಗಳತ್ತಲೂ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿತು. ಸದ್ಯ ಪಿಯುಸಿಯಿಂದ ಪಿಎಚ್‌.ಡಿಯವರೆಗೂ ಕಲಿಯಲು ಇಲ್ಲಿ ಸೌಲಭ್ಯ ಇದೆ. ‘ಒಮ್ಮೆ ಆವರಣದಲ್ಲಿ ಕಾಲಿಟ್ಟರೆ ಹದಿಹರೆಯದ ಹುಡುಗ ಸುಶಿಕ್ಷಿತ ನಾಗರಿಕನಾಗಿಯೇ ಆಚೆ ಹೋಗುತ್ತಾನೆ. ಕೇವಲ ಅಕ್ಷರಸ್ಥರನ್ನಾಗಿಸುವುದು ನಮ್ಮ ಉದ್ದೇಶ ಅಲ್ಲವೇ ಅಲ್ಲ. ಅವರಲ್ಲಿ ಜೀವನಪ್ರೀತಿ ಬೆಳೆಸುವುದು, ಸಂಸ್ಕಾರಗಳನ್ನು ನೀಡುವುದು ನಮ್ಮ ಉದ್ದೇಶವಾಗಿದೆ’ ಎನ್ನುತ್ತಾರೆ ಅವರು. ವಿಶ್ವವಿದ್ಯಾಲಯದ ಆವರಣದಲ್ಲಿಯೇ ವಿದ್ಯಾರ್ಥಿನಿಲಯಗಳೊಂದಿಗೆ ಬೋಧಕರಿಗೂ, ಇತರ ಸಹಾಯಕ ಸಿಬ್ಬಂದಿಗೂ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಸಮಯದ ಉಳಿತಾಯದೊಂದಿಗೆ ಶಿಕ್ಷಕರ ಸಾಮೀಪ್ಯ ಮತ್ತು ಸಾನಿಧ್ಯದಿಂದ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗುತ್ತದೆ ಎನ್ನುವ ದೂರದೃಷ್ಟಿ ಅವರದ್ದು. ಬೆಂಗಳೂರಿನ ಕೆಲವು ಪಾಲಕರು ಒಂದೇ ಊರಿನಲ್ಲಿರುವಾಗ ವಸತಿನಿಲಯವೇಕೆ ಎಂದು ಪ್ರಶ್ನಿಸುತ್ತಿದ್ದರು. ಸುವರ್ಣ ಸಮಯಕ್ಕಾಗಿ ಎನ್ನುವ ಉತ್ತರ ನೀಡುತ್ತಿದ್ದೆವು. ಮಕ್ಕಳು ಏಕಾಗ್ರ ಚಿತ್ತದಿಂದ ಓದಲು ಅನುಕೂಲವಾಗುವ ಬ್ರಾಹ್ಮೀ ವೇಳೆ, ಸೂರ್ಯೋದಯದ ಮೊದಲು ಹಾಗೂ ನಂತರ. ದಣಿದ ದೇಹ ಮತ್ತು ಮನಸು ಪುನಃಶ್ಚೇತನಗೊಳಿಸುವ ಸಮಯವೆಂದರೆ ಗೋದೂಳಿ ಸಮಯ. ಆಗ ಆಟವಾಡಬೇಕು. ಕಸರತ್ತು ಮಾಡಬೇಕು. ಇವೆರಡೂ ದೇಹ, ಮನಸು ಹಾಗೂ ಮಿದುಳನ್ನು ಸ್ವಸ್ಥವಾಗಿಡುವ ಸಮಯ. ಅಂಥ ಸುವರ್ಣ ಸಮಯವನ್ನು ಮನೆಯಿಂದ ಕಾಲೇಜಿಗೆ, ಕಾಲೇಜಿನಿಂದ ಮನೆಗೆ ತಲುಪುವುದರಲ್ಲಿಯೇ ಕಳೆದುಕೊಂಡರೆ ಇನ್ನೆಂಥ ಬದಲಾವಣೆ ಅಥವಾ ಬೆಳವಣಿಗೆ ತರಬಹುದು? ಈ ಆಲೋಚನೆಯಿಂದ ಬಹುತೇಕ ಪಾಲಕರು ಮನಃಪೂರ್ತಿಯಾಗಿ ವಿದ್ಯಾರ್ಥಿ ನಿಲಯದ ಸೌಲಭ್ಯವನ್ನು ಒಪ್ಪಿಕೊಂಡರು. ಪರಿಣಾಮವಾಗಿ ನಮ್ಮ ವಿದ್ಯಾರ್ಥಿಗಳು ಓದಿನಲ್ಲಿಯೂ ಮುಂದಾದರು. ಆಟೋಟದಲ್ಲಿಯೂ ಮುಂದಾದರು. ಕ್ರೀಡೆಗೆ ಪ್ರತಿ ವಿಶ್ವವಿದ್ಯಾಲಯಕ್ಕೂ ಒಂದೊಂದು ಕ್ರಮಾಂಕವನ್ನು ನೀಡಲಾಗುತ್ತದೆ. ಕಳೆದೆರಡು ಮೂರು ವರ್ಷಗಳ ಹಿಂದೆ ನಮ್ಮ ಸಂಸ್ಥೆ 137ನೇ ಕ್ರಮಾಂಕದಲ್ಲಿತ್ತು. ಇದೀಗ 7ನೇ ಕ್ರಮಾಂಕಕ್ಕೆ ಏರಿಕೆ ಕಂಡಿದೆ. ಇಂಥ ಸಕಾರಾತ್ಮಕ ಬೆಳವಣಿಗೆಗಳಿಂದಾಗಿ ವಿಶ್ವವಿದ್ಯಾಲಯಕ್ಕೆ ಖ್ಯಾತಿ ಬಂದರೆ, ನಮಗೆ ಸಂತೃಪ್ತಿ ತಂದಿದೆ’ ಎನ್ನುತ್ತಾರೆ ಅವರು. ‘ಕ್ರೀಡಾಪಟುಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತೇವೆ. ಅವರಿಗೆಂದೇ ಮೀಸಲಾತಿಯೂ ಇದೆ. ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಪಾಠದಲ್ಲಿ ಹಿಂಬೀಳದಂತೆ ನೋಡಿಕೊಳ್ಳಲು ಬೋಧಕ ವರ್ಗವೂ ಸಹಕರಿಸುತ್ತದೆ. ವಿದ್ಯಾರ್ಥಿ ನಿಲಯ ಗಳ ಬಳಿಯೇ ಬೋಧಕರ ವಸತಿ ಸಮುಚ್ಚಯವನ್ನೂ ನಿರ್ಮಿಸಿರುವುದು ಇದೇ ಕಾರಣಕ್ಕಾಗಿ. ವಿದ್ಯಾರ್ಥಿಗಳ ಮೇಲೆ ನಿಗಾ ಇಟ್ಟು, ಅವರನ್ನು ಯಶಸ್ವೀಪಥದತ್ತ ಕರೆದೊಯ್ಯುವ ಕೆಲಸ ಮಾಡಲಾಗುತ್ತದೆ’ ಎನ್ನುತ್ತಾರೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಆಗಿರುವ ಡಾ. ಎಂ. ಧನಂಜಯ ಅವರು. ನಮ್ಮಲ್ಲಿ ಓದಿದವರಿಗೆ ಉದ್ಯೋಗಾವಕಾಶಗಳಂತೂ ಸಾಕಷ್ಟಿವೆ. ಆದರೆ ಉದ್ಯೋಗದಾತರಾಗಿ, ನಾಯಕರಾಗಿ ಅವರು ಇಲ್ಲಿಂದ ಹೊರಹೋಗಲಿ ಎಂಬ ಆಶಯ ನಮ್ಮದು. ಅದೇ ಕಾರಣಕ್ಕೆ ಮೂರನೆಯ ಸೆಮ್‌ನಿಂದಲೇ ವಿಶೇಷ ಕೌಶಲಗಳನ್ನು ನೀಡಲಾಗುತ್ತದೆ. ಯಾವುದೇ ಕ್ಷೇತ್ರದಲ್ಲಿರಲಿ ಪರಿಣತಿ, ನೈಪುಣ್ಯ ಹಾಗೂ ದೂರದೃಷ್ಟಿತ್ವ ಗುಣಗಳಿದ್ದರೆ ಯಶಸ್ವಿಯಾಗುವುದು ಕಷ್ಟವೇನಾಗದು. ಅದೇ ನಿಟ್ಟಿನಲ್ಲಿ ‘ರೇವಾ’ ಶ್ರಮಿಸುತ್ತಿದೆ ಎನ್ನುತ್ತ ಮಾತಿಗೆ ಪೂರ್ಣವಿರಾಮ ಹಾಕಿದರು. ಯಾವ ಯಾವ ಕೋರ್ಸುಗಳಿವೆ? 25 ವಿವಿಧ ಸ್ನಾತಕೋತ್ತರ ಕೋರ್ಸುಗಳು, ಎಂಜಿನಿಯರಿಂಗ್‌ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ವಾಸ್ತು ಶಿಲ್ಪ ವಾಣಿಜ್ಯ, ಕಲೆ, ಮ್ಯಾನೇಜ್ಮೆಂಟ್‌ ಸ್ಟಡೀಸ್‌ ಜೊತೆಗೆ ಕಾನೂನು ಸಹ ಈ ಶೈಕ್ಷಣಿಕ ವರ್ಷದಿಂದ ಪರಿಚಯಿಸಲಾಗಿದೆ. ಇದಲ್ಲದೆ ಫ್ರೆಂಚ್‌ ಭಾಷೆಯೂ ಸೇರಿದಂತೆ ಹಲವಾರು ಪಿಜಿಡಿಸಿ ಕೋರ್ಸುಗಳನ್ನೂ ಪರಿಚಯಿಸಲಾಗಿದೆ. ಮಧ್ಯರಾತ್ರಿಯವರೆಗೂ ಗ್ರಂಥಾಲಯ ತೆರೆದಿರುತ್ತದೆ. ಸ್ವಾತಂತ್ರ್ಯದೊಂದಿಗೆ ಜವಾಬ್ದಾರಿಯನ್ನೂ ಕಲಿಸಿಕೊಡುವ ತಂತ್ರವಿದು ಎನ್ನುತ್ತಾರೆ ಅವರು. ಮಾಹಿತಿಗೆ: ಡಾ. ಎಂ. ಧನಂಜಯ್‌ @..; 9845185445/ ಡಾ. ಎನ್. ರಮೇಶ .@..; 9880514718/ ಡಾ. ಎನ್. ರಾಣಾಪ್ರತಾಪ್ ರೆಡ್ಡಿ @..; 9592510211 / 080– 6622 6622 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.