ಶಿಸ್ತು ಶಿಕ್ಷೆಯ ನಡುವೆ... ಮಗುವಿನಲ್ಲಿ ಶಿಸ್ತನ್ನು ರೂಢಿಸುವಲ್ಲಿ ಶಿಕ್ಷೆಯ ಪಾತ್ರವೇನು? ಶಿಕ್ಷೆ ಬೇಕೇ? ಬೇಡವೇ? ಎಂಬ ಪ್ರಶ್ನೆಗೆ ಸಮಯೋಚಿತ ಶಿಕ್ಷೆ ನೀಡುವ ‘ಮಧ್ಯಮ ಮಾರ್ಗ’ ಸರಿ ಉತ್ತರ ಎನಿಸುತ್ತದೆ. ಕೋಲನ್ನು ದೂರವಿಟ್ಟರೆ ಮಗು ಹಾಳಾಗುತ್ತದೆ (‘ಸ್ಪೇರ್‌ ದ ರಾಡ್‌ ಸ್ಪಾಯಿಲ್‌ ದ ಚೈಲ್ಡ್‌’) ಎಂಬ ಆಂಗ್ಲ ಉಕ್ತಿ ಮುಂಚೆ ಪ್ರಚಲಿತವಾಗಿತ್ತು. ನಮ್ಮಲ್ಲಿಯೂ ‘ಛಡಿ ಛಂ ಛಂ ವಿದ್ಯಾ ಘಂ ಘಂ’ ಎಂಬ ಮಾತು ಹಾಗೂ ಕೃತಿ ರೂಢಿಯಲ್ಲಿತ್ತು. ಈಚೆಗೆ ಶಾಲಾ ಹಂತದಲ್ಲಿ ಮಗುವಿಗೆ ಶಿಕ್ಷೆ ನೀಡಬೇಕೋ ಅಥವಾ ಬೇಡವೋ? ಎಂಬುದರ ಕುರಿತು ಚರ್ಚೆ ತುಸು ಜೋರಾಗಿಯೇ ನಡೆಯುತ್ತಿದೆ. ಮಾಧ್ಯಮಗಳಲ್ಲಿ ಆಗಾಗ ವರದಿಯಾಗುವಂತೆ ಕೆಲ ಶಾಲೆಗಳಲ್ಲಿ ಮಕ್ಕಳ ಕೈ ಮುರಿಯುವಂತೆ, ಬೆನ್ನ ಮೇಲೆ ಬಾಸುಂಡೆ ಬರುವಂತೆ, ಕೆನ್ನೆ ಊದಿಕೊಳ್ಳುವಂತೆ ಶಿಕ್ಷಿಸುವ ಶಿ(ಕ್ಷೆ)ಕ ರಿಂದ ಈ ಚರ್ಚೆ ಮತ್ತೆ ರಂಗೇರುತ್ತದೆ. ಆಗ ‘ಮಕ್ಕಳನ್ನು ಶಿಕ್ಷಿಸಬಾರದು’ ಎಂಬ ನಿಲುವು ಹೊಂದಿರುವ ‘ಮಗು’ವಾದಿಗಳು ಹೋರಾಟಕ್ಕಿಳಿಯುತ್ತಾರೆ. ಈ ಪ್ರಹಸನಗಳು ಮೇಲಿಂದ ಮೇಲೆ ಪುನರಾವರ್ತನೆ ಆಗುತ್ತಿರುತ್ತವೆ. ಶಿಕ್ಷಣದಲ್ಲಿ ಶಿಕ್ಷೆ ಅಂದು– ಇಂದು: ಭಾರತದ ಸಾಂಪ್ರದಾಯಿಕ ಗುರುಕುಲ ಶಿಕ್ಷಣ ವ್ಯವಸ್ಥೆಯನ್ನು ಪರಿಶೀಲಿಸಿದಾಗ ಅಲ್ಲಿ ಶಿಕ್ಷೆ ಎನ್ನುವುದು ಶಿಕ್ಷಣದಷ್ಟೇ ಸಹಜವಾಗಿತ್ತು. ತಪ್ಪು ಮಾಡಿದ ಶಿಷ್ಯರಿಗೆ ‘ತಪ್ಪಿನ ಅರಿವಾಗುವ’ ಶಿಕ್ಷೆ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳೂ ಗುರು ನೀಡುವ ಶಿಕ್ಷೆಯನ್ನು ವರವೆಂದು ಭಾವಿಸಿ ಅನುಭವಿಸುತ್ತಿದ್ದರು. ತಪ್ಪನ್ನು ತಿದ್ದಿಕೊಳ್ಳುತ್ತಿದ್ದರು. ತಮ್ಮ ಮಕ್ಕಳು ‘ಗುರುವಿನ ಗುಲಾಮರಾಗಬೇಕು’ ಎಂಬುದು ಆಗಿನ ಪೋಷಕರ ಆನತಿಯೂ ಆಗಿತ್ತು. ಸಮಾಜದಲ್ಲಿ ತಪ್ಪಿತಸ್ಥ ಅಪರಾಧಿಗಳಿಗೆ ಕಾನೂನಿನ ಮೂಲಕ ಶಿಕ್ಷೆ ವಿಧಿಸುವಂತೆ ಶಾಲೆಯಲ್ಲಿ ತಪ್ಪು ಮಾಡಿದ ವಿದ್ಯಾರ್ಥಿಗೆ ಶಿಕ್ಷೆ ವಿಧಿಸಬೇಕೆಂಬ ಭಾವನೆ ಇತ್ತು. ‘ಶಿಕ್ಷೆಯ ಭಯ ತಪ್ಪು ತಡೆಯಲು ಸಹಕಾರಿ’ ಎಂಬ ಅಭಿಪ್ರಾಯವಿತ್ತು. ಒಂದು ಶಿಲೆ ಶಿಲ್ಪವಾಗಬೇಕಾದರೆ, ಅದಕ್ಕೆ ಶಿಲ್ಪಿಯ ಉಳಿಯೇಟು ಬೀಳಲೇಬೇಕು. ಅಂತೆಯೇ, ಅಪ್ರಬುದ್ಧ ವಿದ್ಯಾರ್ಥಿ ಗುರುವಿನ ಶಿಕ್ಷೆಯಿಂದ ಪ್ರಬುದ್ಧನಾಗುತ್ತಾನೆ ಎಂಬ ನಂಬಿಕೆ ಇತ್ತು. ಹೆಚ್ಚು–ಕಡಿಮೆ ಇದೇ ಮಾದರಿಯ ಶಿಕ್ಷಣ– ಶಿಕ್ಷೆ ವ್ಯವಸ್ಥೆ ಮಧ್ಯಕಾಲೀನ ಹಂತದಲ್ಲೂ ಮುಂದುವರಿದಿತ್ತು. ಬ್ರಿಟೀಷರ ಅವಧಿಯಲ್ಲಿ ಔಪಚಾರಿಕವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಆರಂಭಿಸಲಾಯಿತು. ನಂತರ ಹೆಚ್ಚು ಕಡಿಮೆ 90ರ ದಶಕದವರೆಗೂ ಗುರು– ಶಿಷ್ಯ ಬಾಂಧವ್ಯದಲ್ಲಿ ‘ಶಿಕ್ಷೆ’ಗೆ ಅನಧಿಕೃತವಾಗಿ ‘ಅಧಿಕೃತ’ ಸ್ಥಾನವಿತ್ತು. ಶಿಕ್ಷಿಸುವ ‘ನೈತಿಕತೆ’ ಹೊಂದಿದ್ದ ಆಗಿನ ಶಿಕ್ಷಕರನ್ನು ಕಂಡರೆ ನಮಗೆ ಗೌರವವಿತ್ತು, ಭಯವಿತ್ತು. ಈಗಲೂ ಆ ಮೇಷ್ಟ್ರು ಎದುರಿಗೆ ಬಂದರೆ ಅದೇ ಗೌರವ ಹಾಗೂ ಅಳುಕಿನಿಂದ ನಾವು ನಮಸ್ಕರಿಸುತ್ತೇವೆ. ಶಿಕ್ಷೆಯ ಸ್ವರೂಪ: ಕೋಲಿನಿಂದ ಹೊಡೆಯುವುದು, ಕಿವಿ ಹಿಡಿದು ಬಗ್ಗಿ ನಿಲ್ಲಿಸುವುದು, ಭಾರವನ್ನು ಹೊತ್ತು ನಿಲ್ಲಲು ಹೇಳುವುದು, ಗೋಡೆಯಲ್ಲಿರುವ ಗೂಟಕ್ಕೆ ಕೈಕಟ್ಟಿ ನೇತು ಹಾಕುವುದು, ತರಗತಿಯ ಮೂಲೆಯಲ್ಲಿ ನಿಲ್ಲಿಸುವುದು, ಬೆಂಚು ಮೇಲೆ ನಿಲ್ಲಿಸುವುದು, ಬಸ್ಕಿ ಹೊಡೆಸುವುದು, ಸಹಪಾಠಿಗಳಿಂದ ಮೂಗು ಹಿಡಿದು ಕಪಾಳಕ್ಕೆ ಹೊಡೆಸುವುದು, ತಲೆಗೆ ಕುಟುಕುವುದು, ಚಿಗುಟುವುದು, ಮೈದಾನದಲ್ಲಿ ಓಟದ ಶಿಕ್ಷೆ, ಶಾಲೆಯ ಕೈತೋಟವನ್ನು ಸ್ವಚ್ಛಗೊಳಿಸುವ ಶಿಕ್ಷೆ, ಗಿಡಗಳಿಗೆ ನೀರು ಹಾಕುವ ಶಿಕ್ಷೆ, ಶಾಲಾವರಣದ ಕಸಗುಡಿಸುವ ಶಿಕ್ಷೆ, ಮನೆಗೆಲಸದ ಒಂದು ಪುಟ ಬರೆದುಕೊಂಡು ಬರದಿದ್ದರೆ ಹತ್ತು ಪುಟ ಬರೆಯುವ ಶಿಕ್ಷೆ, ದಿನಕ್ಕೊಂದು ಒಳ್ಳೆಯ ಕೆಲಸ ಮಾಡಿ ಅದನ್ನು ವಹಿಯಲ್ಲಿ ಬರೆದಿಡುವ ಶಿಕ್ಷೆ... ಹೀಗೆ ವೈವಿಧ್ಯಮಯ ಶಿಕ್ಷೆಗಳನ್ನು ತಪ್ಪು ಮಾಡಿದ ಶಿಷ್ಯರು ಅನುಭವಿಸಬೇಕಿತ್ತು. ಕಾಲ ಬದಲಾಗಿದೆ ನಿಜ, ಹಾಗೆಂದ ಮಾತ್ರಕ್ಕೆ ನಮ್ಮ ಸಾಂಪ್ರದಾಯಿಕ, ಸಂಸ್ಕಾರಯುತ ಮನಸ್ಸುಗಳೂ ಬದಲಾಗಿವೆಯೇ? ಒಂದೊಮ್ಮೆ ಪೋಷಕರೇ ತಮ್ಮ ಮಗು ತಪ್ಪು ಮಾಡಿದಾಗ ಶಿಕ್ಷಿಸಿದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳುತ್ತಿದ್ದರು. ಆದರೆ, ಈಗಿನ ಪೋಷಕರು ತಮ್ಮ ಮಗುವನ್ನು ಶಿಕ್ಷಿಸಿದ ಶಿಕ್ಷಕರ ವಿರುದ್ಧ ಯುದ್ಧ ಸಾರುತ್ತಾರೆ! ಇಂದಿನ ಕಾರ್ಪೊರೇಟ್‌ ಯುಗದಲ್ಲಿ ಶಿಕ್ಷಕರು ಮತ್ತು ಶಾಲೆಯ ಜವಾಬ್ದಾರಿ ಹೆಚ್ಚಿದೆ. ಶಿಕ್ಷಕ– ಶಿಕ್ಷಕಿಯರು ಇಂದು ತಂದೆ–ತಾಯಿಯಾಗಿ, ಗೆಳೆಯ–ಗೆಳತಿಯಾಗಿ, ಅಜ್ಜ–ಅಜ್ಜಿಯಾಗಿ ಮಕ್ಕಳ ಅಗತ್ಯಗಳಿಗೆ ಸ್ಪಂದಿಸಬೇಕಿದೆ. ಇಂಥದರಲ್ಲಿ ಅಮಾನವೀಯ ಶಿಕ್ಷೆಗೆ ಖಂಡಿತ ವಿರೋಧವಿರಲಿ. ಆದರೆ, ತಪ್ಪನ್ನು ತಿದ್ದುವ, ಶಿಸ್ತನ್ನು ಬೆಳೆಸುವ ಸಮಯೋಚಿತ ಶಿಕ್ಷೆಯನ್ನು ವಿರೋಧಿಸುವುದು ಎಷ್ಟರ ಮಟ್ಟಿಗೆ ಸರಿ? ನೈತಿಕತೆ ಪಾಠ ಅಗತ್ಯ ಶಿಕ್ಷಣ ಸಮಾಜದ ಕನ್ನಡಿ. ಸಮಾಜ ಬದಲಾದಂತೆ ಶಿಕ್ಷಣದ ಗುರಿಯೂ ಬದಲಾಗಿದೆ. ಇಂದು ನೈತಿಕತೆಯನ್ನು ಬೆಳೆಸುವ ಗುಣಾತ್ಮಕ ಶಿಕ್ಷಣಕ್ಕಿಂತ, ಅಂಕ ಗಳಿಸುವ ಸಂಖ್ಯಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಸಾಮಾಜಿಕ ಆರೋಗ್ಯ ಹಾಗೂ ನಿಸರ್ಗ ನಿಯಮ ಪಾಲನೆಯ ದೃಷ್ಟಿಯಿಂದ ಶಿಸ್ತನ್ನು ವೃದ್ಧಿಸಲು ತಪ್ಪಿತಸ್ಥರಿಗೆ ಯೋಗ್ಯ ಶಿಕ್ಷೆ ನೀಡುವುದು ಅಪೇಕ್ಷಣೀಯ. – ಡಾ.ಬಿ.ಎನ್‌. ರವೀಶ್‌ ವಿಭಾಗ ಮುಖ್ಯಸ್ಥ, ಮನೋವೈದ್ಯ ವಿಭಾಗ ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಅತಿ ಮುದ್ದು ಅಪಾಯಕಾರಿ ಮಕ್ಕಳನ್ನು ಅತಿಯಾಗಿ ಮುದ್ದು ಮಾಡುವುದು ಅಪಾಯಕಾರಿ. ಸಮಯೋಚಿತವಾಗಿ ತಪ್ಪು ತಿದ್ದಿಕೊಳ್ಳಲು ಪೂರಕವಾಗುವ ಶಿಕ್ಷೆ ವಿಧಿಸಬೇಕು. ಆದರೆ, ಶಿಸ್ತು ವೃದ್ಧಿಗೆ ಶಿಕ್ಷೆಯೊಂದೇ ಸಾಧನವಾಗಬಾರದು. ಅಗತ್ಯಕ್ಕೆ ತಕ್ಕಂತೆ ಮಗುವಿಗೆ ಬಹುಮಾನ ಮತ್ತು ಪ್ರಶಂಸೆಯನ್ನು ತಪ್ಪದೆ ನೀಡಬೇಕು. – ಡಾ.ಎಂ. ಪುಷ್ಪಾ ಸಹಾಯಕ ಪ್ರಾಧ್ಯಾಪಕಿ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗ ಮೈಸೂರು ವಿಶ್ವವಿದ್ಯಾಲಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.