ಕ್ರಿಕೆಟ್‌ ಮತ್ತು ಓದು ‘ಸರ್‌, ನಮ್ಮ ಮನೆಯಲ್ಲಿ ನಾನು ನನ್ನ ಹೆಂಡತಿ ಪಿಯು ಓದುತ್ತಿರುವ ಮಗ ಹಾಗೂ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಮಗಳು ಇದ್ದೇವೆ. ನಾನು ಕ್ರಿಕೆಟ್‌ ಅಭಿಮಾನಿ... ಈ ಬಾರಿ ವಿಶ್ವಕಪ್‌ನಲ್ಲಿ ಕೊನೆ ಪಕ್ಷ ಭಾರತ ಆಡುವ ಪ್ರತಿ ಮ್ಯಾಚ್‌ ವೀಕ್ಷಿಸಲೇಬೇಕೆಂಬುದು ನನ್ನ ತುಡಿತ. ನನ್ನ ಮಕ್ಕಳಿಗೂ ಕ್ರಿಕೆಟ್‌ ಅಂದರೆ ಪಂಚಪ್ರಾಣ. ಆದರೆ, ಅವರ ಪರೀಕ್ಷೆಗಳು ಸಮೀಪಿಸುತ್ತಿವೆ. ಮಕ್ಕಳ ಪರೀಕ್ಷೆಗೆ ಆದ್ಯತೆ ನೀಡಿ ಮನೆಯಲ್ಲಿನ ಟಿವಿಯನ್ನು ಮೂಲೆಗಟ್ಟಬೇಕೋ? ಮಕ್ಕಳಿಗೆ ಓದಲೆಂದೇ ಪ್ರತ್ಯೇಕ ಮನೆ ಮಾಡಬೇಕೋ? ಅಥವಾ ಮನೆಯಲ್ಲಿನ ಟಿವಿ ಕೇಬಲ್‌ ಸಂಪರ್ಕ ಕಡಿತಗೊಳಿಸಿ ಕ್ರಿಕೆಟ್‌ ವೀಕ್ಷಣೆಗೆ ನಾನೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೋ ಎಂಬ ಗೊಂದಲದಲ್ಲಿದ್ದೇನೆ’ ಇದು ಮೈಸೂರಿನ ಗುತ್ತಿಗೆದಾರ ವಿನೋದ್‌ ಜೈನ್‌ ಅವರ ಅಭಿಪ್ರಾಯ. ‘ನಂಗ ಕ್ರಿಕೆಟ್‌ ಬಗ್ಗೆ ಏನೂ ಗೊತ್ತಿಲ್ಲ. ಆದ್ರ ನನ್ನ ಮಗನಿಗೆ ಕ್ರಿಕೆಟ್‌ ಆಡೋ ಮತ್ತು ನೋಡೋ ಹುಚ್ಚ ಐತಿ. ಆಂವಾ ಡಿಪ್ಲೊಮಾ ಓದಾತಾನು. ಹೋದ ಸಾರಿ ಎರಡ ವಿಷಯದಾಗ ಫೇಲ್‌ ಆಗ್ಯಾನು. ಈಗ ಬರೇ ಕ್ರಿಕೆಟ್‌... ಕ್ರಿಕೆಟ್‌ ಅನ್ನಾಕತಾನು. ಅಭ್ಯಾಸ ಮಾಡಕೋರ್ಲಾ ಅಂದ್ರ. ‘ನೋಡಕೊಂಡರ ಆತ ಬಿಡವಾ, ನೀ ತಲಿ ಕೆಡಿಸಿಕೋಬ್ಯಾಡಾ. ನೆಸ್ಟ್‌ ಸೆಮ್ಮನ್ಯಾಗ ಪಾಸ್‌ ಮಾಡ್ಕೋತಿನಿ ಅಂತಾನ’ ಹಿಂಗಾದ್ರ ಅವನ ಬಾಳೇ ಹ್ಯಾಂಗ ಅಂತ ನಂಗ ಹೆದ್ರಿಕಿ ಆಗಾತೈತಿ’ ಇದು ಮಗನ ಭವಿಷ್ಯ ಕುರಿತು ಚಿಂತಾಕ್ರಾಂತರಾಗಿರುವ ಬೆಳಗಾವಿಯ ಭಾರತಿ ಅವರ ಅಳಲು. ಈ ಬಾರಿ ಪರೀಕ್ಷಾ ವೇಳೆಯಲ್ಲಿಯೇ ವಿಶ್ವಕಪ್‌ ಕ್ರಿಕೆಟ್‌ ನಡೆಯುತ್ತಿದೆ. ಫೆ. 14ರಿಂದ ಆರಂಭವಾಗಿರುವ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಮಾ. 29ರವೆಗೆ ನಡೆಯಲಿದೆ. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ. 30ರಿಂದ, ಪಿಯು ಪರೀಕ್ಷೆ ಮಾ. 12ರಿಂದ ಹಾಗೂ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಮಾ. 2ರಿಂದ ಆರಂಭವಾಗಲಿವೆ! ಅದರಲ್ಲೂ ಭಾರತದ ಪಂದ್ಯವಿರುವ ದಿನವಂತೂ ಕ್ರಿಕೆಟ್‌ ಪ್ರಿಯ ವಿದ್ಯಾರ್ಥಿಗಳ ‘ಅವಧಾನ ಅಪಕರ್ಷಣೆ’ಯ (ಅಧ್ಯಯನದತ್ತ ಚಿತ್ತ ಕೇಂದ್ರೀಕೃತವಾಗದಿರುವ ಸ್ಥಿತಿ) ಸಾಧ್ಯತೆ ಅಧಿಕವಾಗಿರುತ್ತದೆ. ಕ್ರಿಕೆಟ್‌ ಬಹುತೇಕ ಭಾರತೀಯರ ನೆಚ್ಚಿನ ಕ್ರೀಡೆ. ಇಲ್ಲಿ ಕ್ರಿಕೆಟ್‌ಗೆ ದೇಶಾಭಿಮಾನ ತಗಲಿಕೊಂಡಿದೆ. ಇವೆಲ್ಲದರ ನಡುವೆ ಬೆಟ್ಟಿಂಗ್‌ ಭೂತಗಳಿಗೂ ಕಮ್ಮಿ ಇಲ್ಲ. ತಮ್ಮ ಅಲ್ಪಸ್ವಲ್ಪ ‘ಪಾಕೆಟ್‌ಮನಿ’ಯನ್ನು ಪಣಕ್ಕೊಡ್ಡಿ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. 2014ರ ಐಪಿಎಲ್‌ ಟೂರ್ನಿ ಅವಧಿಯಲ್ಲಿ ಬೆಟ್ಟಿಂಗ್‌ ಸುಳಿಗೆ ಸಿಲುಕಿ ಮೈಸೂರಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆಯನ್ನು ನಾವಿಲ್ಲಿ ಸ್ಮರಿಸಬಹುದು. ಕ್ರಿಕೆಟ್‌ ಟೂರ್ನಿ ನಡೆಯುವ ವೇಳೆ ವಿದ್ಯುತ್‌ ಕಡಿತಗೊಳಿಸದಂತೆ ಒತ್ತಾಯಿಸಿ ನಡೆಯುವಷ್ಟು ಲಾಬಿ ಹಾಗೂ ಪ್ರತಿಭಟನೆಗಳು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವಾಗ ನಡೆಯುವುದಿಲ್ಲ! ಇದು ನಮ್ಮ ದೇಶದ ವ್ಯಂಗ್ಯ. ಕ್ರಿಕೆಟ್‌ನಲ್ಲಿರುವಂತೆ ಪರೀಕ್ಷೆಯಲ್ಲಿ ಪ್ರ್ಯಾಕ್ಟಿಸ್‌ ಮ್ಯಾಚ್‌, ಕ್ವಾಟರ್‌ಫೈನಲ್‌, ಸೆಮಿಫೈನಲ್‌ ಇರುವುದಿಲ್ಲ. ರಿಪ್ಲೇಗಳು ಇರುವುದಿಲ್ಲ. ಮ್ಯಾಚ್‌ ಮುಗಿದರೆ ಮರು ಪ್ರಸಾರವಿದ್ದೇ ಇರುತ್ತದೆ. ಪರೀಕ್ಷೆಗೆ ಮತ್ತೆ ಆ ಅವಕಾಶ ಇರದು. ಇರುವುದೊಂದೇ ‘ಫೈನಲ್‌’. ಅದರಲ್ಲಿ ಪಾಸ್‌ ಆದರೆ ಪಾಸ್‌. ಫೇಲ್‌ ಆದ್ರೆ ‘ಗೇಟ್‌ಪಾಸ್‌’! ಈ ಸತ್ಯವನ್ನು ಪೋಷಕರು ಹಾಗೂ ವಿದ್ಯಾರ್ಥಿಗಳು ಅರಿಯಬೇಕು. ಅತ್ಯಮೂಲ್ಯವಾದ ‘ವೇಳೆ’ ಮತ್ತು ‘ಅವಕಾಶ’ಗಳೆರಡನ್ನು ಕಳೆದುಕೊಂಡರೆ ಅವು ಮತ್ತೆಂದೂ ಸಿಗಲಾರವು. ಇರುವ ವೇಳೆಯನ್ನು ಸದ್ವಿನಿಯೋಗ ಮಾಡಿಕೊಂಡು ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಉನ್ನತ ಸಾಧನೆ ಮಾಡುವುದು ವಿದ್ಯಾರ್ಥಿಗಳ ಧ್ಯೇಯವಾಗಬೇಕು. ಯುದ್ಧಕಾಲದಲ್ಲಿ ಮನರಂಜನೆ ಬೇಡ ಪರೀಕ್ಷಾ ಸಮಯವೆಂದರೆ ವಿದ್ಯಾರ್ಥಿಗಳಿಗೆ ಯುದ್ಧಕಾಲವಿದ್ದಂತೆ. ಈ ಹೊತ್ತಿನಲ್ಲಿ ಅವರು ಮನರಂಜನೆ ನೀಡುವ ಕ್ರಿಕೆಟ್‌ ನೋಡುತ್ತ ಕುಳಿತರೆ ಯುದ್ಧದಲ್ಲಿ ಸೋಲುವ ಭೀತಿ ಇದೆ. ಈಗ ಅವರ ಗಮನ ಓದಿನತ್ತ ಕೇಂದ್ರಿತವಾಗಬೇಕು. ಈ ಕುರಿತು ಪೋಷಕರು ಸಹಕರಿಸಬೇಕು. ವಿದ್ಯಾರ್ಥಿಗಳು ಮನೆಯಲ್ಲಿರುವಾಗ ಕ್ರಿಕೆಟ್‌ಗೆ ಅವಕಾಶ ಕೊಡಬಾರದು. ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಿದ್ಧತೆಗೆ ಸೂಕ್ತ ತಿಳಿವಳಿಕೆ ನೀಡಬೇಕು. ಚಿಕ್ಕೋಡಿ ಜಿಲ್ಲೆ ಸತತ ಮೂರು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಈ ನಿಟ್ಟಿನಲ್ಲಿ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತಕ್ಕೆ ಕಾರಣವಾಗದಂತೆ ನಾವು ಎಚ್ಚರವಹಿಸಬೇಕಿದೆ. – ಗಜಾನನ ಮನ್ನಿಕೇರಿ, ಡಿಡಿಪಿಐ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ತಜ್ಞರ ಸಲಹೆ * ಕ್ರಿಕೆಟ್‌ ಬಗ್ಗೆ ಪ್ರೀತಿ, ದೇಶದ ಕುರಿತು ಅಭಿಮಾನ ಇರಲಿ. ಆದರೆ, ಕ್ರಿ‘ಕೆಟ್‌’ ಹುಚ್ಚಿಗೆ ನಿರ್ಣಾಯಕವಾಗಿರುವ ಪರೀಕ್ಷೆಯನ್ನು ನಿರ್ಲಕ್ಷಿಸಿ ನಿಮ್ಮ ಜೀವನವನ್ನು ಬಲಿಕೊಡಬೇಡಿ. * ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಅಂಕಕ್ಕೂ ತನ್ನದೇ ಮೌಲ್ಯವಿದೆ. ಮುಂದೊಂದು ದಿನ ‘ಜಸ್ಟ್‌ ಒಂದು ಮಾರ್ಕ್ಸ್‌ನಲ್ಲಿ ಅವಕಾಶ ಕಳ್ಕೊಂಡೆ’ ಎಂದು ವ್ಯಥೆ ಪಡುವಾಗ ಕ್ರಿ‘ಕೆಟ್‌’ ನಿಮ್ಮ ನೆರವಿಗೆ ಬರುವುದಿಲ್ಲ. ಪೂರ್ಣ ಪರಿಶ್ರಮವೊಡ್ಡಿ ಆ ಅಂಕವನ್ನು ಈಗಲೇ ಗಳಿಸಿಕೊಳ್ಳಿ. * ಆರು ಗಂಟೆಯ ಕ್ರಿಕೆಟ್‌ ಪಂದ್ಯ ವೀಕ್ಷಿಸಿದರೆ ಸಿಗುವುದು ಒಂದಷ್ಟು ಮನರಂಜನೆ, ಸ್ವಲ್ಪ ರೋಚಕತೆ. ಅದೇ ಮೂರು ಗಂಟೆಯ ಪರೀಕ್ಷೆಯಲ್ಲಿ ಇಡೀ ವರ್ಷದ ಪರಿಶ್ರಮವನ್ನು ಒರೆ ಹಚ್ಚಿ ಉತ್ತಮವಾಗಿ ಬರೆದರೆ ನಿಮಗೆ ಸಿಗುವುದು ಉಜ್ವಲ ಭವಿಷ್ಯ ಹಾಗೂ ಸುಭದ್ರ ಜೀವನ ಎಂಬುದನ್ನು ಮರೆಯಬೇಡಿ. * ವಿದ್ಯಾರ್ಥಿಗಳು ತಮ್ಮ ಅವಧಾನ, ಆಸಕ್ತಿಗಳನ್ನು ಕೇಂದ್ರೀಕರಿಸಲು, ಧಾರಣ ಹಾಗೂ ಸ್ಮರಣ ಶಕ್ತಿಗಳನ್ನು ಹೆಚ್ಚಿಸಿಕೊಳ್ಳಲು ಯೋಗ ಹಾಗೂ ಧ್ಯಾನಮಾರ್ಗ ಅನುಸರಿಸುವುದು ಸೂಕ್ತ. ಪರಿಸ್ಥಿತಿ ಕೈಮೀರುತ್ತಿದೆ ಅನಿಸಿದರೆ, ಪಾಲಕರು ತಮ್ಮ ಮಕ್ಕಳಿಗೆ ಮನೋವೈದ್ಯರಿಂದ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಮಾಡಿಸುವುದು ಒಳಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.