ಕಥೆ ಕೇಳೋಣ ಬನ್ನಿ... ಅಳುವ ಮಕ್ಕಳಿಗೆ ಕಥೆ ಹೇಳಿ, ಹಾಡು ಹಾಡಿ ಉಣಿಸುವ, ತಿನಿಸುವ ದಿನಗಳು ಅಪರೂಪವಾಗುತ್ತಿವೆ. ಮಗು ಅತ್ತರೆ ಟಿವಿ ಮುಂದೆ ಕೂಡಿಸುವ ತಾಯಂದಿರಿಗೇ ಕಥೆ ಹೇಳಲು ಬರುವುದಿಲ್ಲ, ಹಾಡು ಬರುವುದಿಲ್ಲ. ಹೀಗಿದ್ದಾಗ, ಕಥೆ ಹೇಳಬೇಕಾದ ಅಜ್ಜ, ಅಜ್ಜಿಯರು ಹತ್ತಿರದಲ್ಲಿರುವುದಿಲ್ಲ. ಹಳ್ಳಿಗಳಲ್ಲಿ, ವೃದ್ಧಾಶ್ರಮಗಳಲ್ಲಿರುವ ಅಜ್ಜ, ಅಜ್ಜಿಯರಿಂದ ಕಥೆ ಕೇಳಿಸಿಕೊಳ್ಳದೆ ಮಕ್ಕಳು ವಂಚಿತರಾಗುತ್ತಿದ್ದಾರೆ. ಹೀಗೆ, ವ್ಯಥೆ ಪಡುತ್ತ ದಿನದೂಡಬೇಕೆ? ದೊಡ್ಡವರಾದ ಹಾಗೆ ನರ್ಸರಿ, ಎಲ್‌ಕೆಜಿ. ಯುಕೆಜಿ ಹೀಗೆ ಮನೆಯಿದ ಶಾಲೆಗೆ, ಶಾಲೆಯಿಂದ- ಮನೆಗೆ ಅಲೆದಾಟ ಶುರುವಾಗುತ್ತದೆ. ಇದರೊಂದಿಗೆ ಕೋಚಿಂಗ್ ತರಗತಿಗಳು, ಹೋಂವರ್ಕ್, ಮನೋರಂಜನೆ ಎಂದರೆ ಟಿ.ವಿ. ಹೀಗಾಗಿ ಎಲ್ಲರೊಂದಿಗೆ ಆಟವಾಡುವ, ಕಥೆ ಕೇಳುವ ಅಭ್ಯಾಸವೇ ಇಲ್ಲದಂತಾಗಿದೆ. ಹೆತ್ತವರಿಗೆ ಸಮಯವಿಲ್ಲ. ಇಂಥ ವ್ಯವಸ್ಥೆಯಲ್ಲಿ ಮಕ್ಕಳು ಸೂಕ್ತ ಮಾರ್ಗದರ್ಶನದಿಂದ ವಂಚಿತರಾಗಿ, ಮೌಲ್ಯಗಳಿಂದ ದೂರವಾಗಿ ಬೆಳೆಯುತ್ತಿದ್ದಾರೆ. ಈ ಕೊರತೆಗಳಿಂದ ಮುಕ್ತರನ್ನಾಗಿಸುವ ಸಲುವಾಗಿ ಮೈಸೂರಿನಲ್ಲಿ ‘ಕಥೆ ಕೇಳೋಣ ಬನ್ನಿ’ ಎನ್ನುವ ವಿಶಿಷ್ಟ ಕಾರ್ಯಕ್ರಮ ಎಂಟು ವರ್ಷಗಳಿಂದ ನಡೆಯುತ್ತಿದೆ. ಮೈಸೂರಿನ ಕುವೆಂಪುನಗರದ ಚಿತ್ರಭಾನು ರಸ್ತೆಯ ಕುವೆಂಪು ಕಾಂಪ್ಲೆಕ್ಸ್ ಬಳಿಯಿರುವ ಡಾ.ಸಿಂಧುವಳ್ಳಿ ಅನಂತಮೂರ್ತಿ ಅವರ ಸುರುಚಿ ರಂಗಮನೆಯಲ್ಲಿ ಪ್ರತಿ ಶನಿವಾರ ಸಂಜೆ 4.30ರಿಂದ ಒಂದು ಗಂಟೆಯವರೆಗೆ ಕಥೆಯನ್ನು ಹೇಳಲಾಗುತ್ತದೆ. ಇದುವರೆಗೆ ಸಾಹಿತಿಗಳು, ಚಿಂತನಶೀಲರು, ಶಿಕ್ಷಕರು, ವಕೀಲರು, ವೈದ್ಯರು, ವಿಜ್ಞಾನಿಗಳು, ಕಲಾವಿದರು, ಪೊಲೀಸ್ ಅಧಿಕಾರಿಗಳು, ಸಮಾಜ ಸೇವಕರು, ಗೃಹಿಣಿಯರು...- ಹೀಗೆ ವಿವಿಧ ಕ್ಷೇತ್ರದಲ್ಲಿರುವ, ಕಥೆ ಹೇಳುವ ಕೌಶಲ -ಇರುವ 400 ಹೆಚ್ಚು ಗಣ್ಯರು ಮಕ್ಕಳಿಗೆ ಕಥೆ ಹೇಳಿದ್ದಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಜಾನಪದ, ವೈಜ್ಞಾನಿಕ, ಶೌರ್ಯ, ಸಾಹಸ ಪ್ರಧಾನ, ಕಾಲ್ಪನಿಕ, ಅದ್ಭುತ, ರಮ್ಯ ಕಥೆಗಳನ್ನು ಮಕ್ಕಳಿಗೆ ಹೇಳಲಾಗುತ್ತದೆ. ಇಂಥ ಅಪರೂಪದ ಚಟುವಟಿಕೆಗಳಲ್ಲಿ ಭಾಗವಹಿಸಲು 15 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ. ಇದರ ಪರಿಕಲ್ಪನೆ ಪ್ರಧಾನ ಸಂಚಾಲಕರಾದ ಶಶಿಧರ ಡೋಂಗ್ರೆ ಅವರದು. ಮುಖ್ಯಸ್ಥರು ವಿಜಯಾ ಸಿಂಧುವಳ್ಳಿ. ಮುಖ್ಯ ಸಂಚಾಲಕರು ಡಾ ಎಚ್.ಕೆ. ರಾಮನಾಥ್, ಸಹಸಂಚಾಲಕರಾಗಿ ಕೆ. ನಾಗರಾಜ್‌ ಇದ್ದಾರೆ. ನೆರವು ಸುಮನಾ ಡೋಂಗ್ರೆ ಅವರದು. ಕಲಾಸುರುಚಿಯ ರೂವಾರಿ ಡಾ.ಸಿಂಧುವಳ್ಳಿ ಅನಂತಮೂರ್ತಿ. ನಾಟಕ ಪ್ರದರ್ಶನ, ರಂಗಕಾರ್ಯಾಗಾರಗಳು, ರಂಗಸಂಗೀತ, ರಂಗಗೋಷ್ಠಿಗಳು ಮಾತ್ರವಲ್ಲದೆ ಶಾಸ್ತ್ರೀಯ ಸಂಗೀತ, ಹರಿಕಥೆ, ಜಾನಪದ ಮೊದಲಾದ ಕಲಾ ಪ್ರದರ್ಶನಗಳು ಇಲ್ಲಿ ನಡೆಯುತ್ತವೆ. ಜೊತೆಗೆ ಮಕ್ಕಳ ನಾಟಕಗಳು, ಚಿತ್ರಕಲಾ ಶಿಬಿರಗಳೂ ಸೇರಿ ಇದುವರೆಗೆ 250ಕ್ಕೂ ಮಿಕ್ಕಿ ಕಾರ್ಯಕ್ರಮಗಳು ನಡೆದಿವೆ. 2010ರಲ್ಲಿ ಕಲಾಸುರುಚಿ ರಜತೋತ್ಸವವನ್ನು ಆಚರಿಸಿಕೊಂಡಿದೆ. ‘ಕಥೆ ಕೇಳೋಣ ಬನ್ನಿ’ ಕಾರ್ಯಕ್ರಮದ ಜತೆಗೆ, ‘ಸಾಹಿತ್ಯ ಚಾವಡಿ’ (ಮಾಸಿಕ) ಹಾಗೂ ನಾಟಕ ವಾಚನ (ದ್ವೈಮಾಸಿಕ) ಎಡೆಬಿಡದೆ ನಡೆಯುತ್ತಿವೆ. ‘ಕಥೆ ಕೇಳೋಣ ಬನ್ನಿ ಕಾರ್ಯಕ್ರಮಕ್ಕೆ ಈ ಫೆಬ್ರುವರಿಗೆ ಎಂಟು ವರ್ಷಗಳಾಯಿತು. ಇದುವರೆಗೆ 420 ಕಂತುಗಳಾಗಿವೆ. ಇದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತೇವೆ’ ಎನ್ನುತ್ತಾರೆ ಸಹಸಂಚಾಲಕರಾದ ಕೆ. ನಾಗರಾಜ್. ಹೀಗೆ, ಕಥೆ ಕೇಳಿಸು ಮೂಲಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಂಸ್ಕಾರ ನೀಡುತ್ತಿದೆ ಕಲಾಸುರುಚಿ. ಹೊರಗಿನಿಂದ ಮಕ್ಕಳೂ ಪ್ರತಿ ಶನಿವಾರ ಸಂಜೆ ಕಥೆ ಕೇಳಬಹುದು. ಮಾಹಿತಿಗೆ 0821– 2541795 ಇಲ್ಲವೆ ಮೊ: 99728 29130/92435 81097 ಸಂಪರ್ಕಿಸಬಹುದು. ಉದ್ದೇಶಗಳು– *ಮಕ್ಕಳಲ್ಲಿ ಆಲಿಸುವ ಸಾಮರ್ಥ್ಯವನ್ನು ಬೆಳೆಸುವುದು *ಧೈರ್ಯದಿಂದ ಸ್ಪಷ್ಟವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಉತ್ತೆಜಿಸುವುದು *ಪ್ರಶ್ನಿಸುವ ಕೌಶಲವನ್ನು ವೃದ್ಧಿಸುವುದು *ಅವರಲ್ಲಿ ಹಾಸ್ಯಪ್ರವೃತ್ತಿ ಉಂಟು ಮಾಡುವುದು *ಕಲ್ಪನಾಶಕ್ತಿ ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸುವುದು *ಭಾಷಾ ಬೆಳವಣಿಗೆಗೆ ಅನುಕೂಲ ಮಾಡಿಕೊಡುವುದು *ಸಾರ್ವಕಾಲಿಕ ಮೌಲ್ಯಗಳನ್ನು ಪರಿಚಯಿಸುವುದು *ನಮ್ಮ ಸಂಸ್ಕೃತಿಯ ಬಗೆಗೆ ಆಸಕ್ತಿ ಮೂಡಿಸುವುದು *ಸದಭಿರುಚಿಯನ್ನು ಹಾಗೂ ದೇಶಭಕ್ತಿಯನ್ನು ಬೆಳೆಸಿ, ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುವುದು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.