ಮುದ್ದು ಪ್ರಾಣಿಗೆ ಟೆಕ್‌ಪೆಟ್ ಆರೈಕೆ ಮನೆಯಲ್ಲಿ ನಾಯಿ, ಬೆಕ್ಕು ಇನ್ನಿತರ ಪ್ರಾಣಿಗಳನ್ನು ಸಾಕುವುದು ಈಗ ಮಾಮೂಲು. ಅವುಗಳನ್ನು ಮನೆ ಮಂದಿಯಲ್ಲಿ ಒಬ್ಬರಂತೆ ತುಂಬಾ ಅಕ್ಕರೆಯಿಂದ ಆರೈಕೆ ಮಾಡುವವರೂ ಹೆಚ್ಚು ಜನರಿದ್ದಾರೆ. ಆದರೆ ಸಮಸ್ಯೆ ಎದುರಾಗುವುದು, ಮನೆಯಲ್ಲಿರುವವರು ಎಲ್ಲಾದರೂ ದೂರದ ಊರಿಗೆ ಹೋಗುವ ಸಂದರ್ಭ ಬಂದಾಗ. ಪಿಕ್‌ನಿಕ್, ಕೆಲಸದ ಮೇಲೆ, ಊರಿಗೆ ಹೋಗುವ ಸಂದರ್ಭಗಳಲ್ಲಿ ಎರಡು ಮೂರು ದಿನ ಅವುಗಳನ್ನೂ ಕರೆದುಕೊಂಡು ಹೋಗುವುದು ಸಾಧ್ಯವಿಲ್ಲ. ಅಷ್ಟು ಮುದ್ದಾಗಿ ಸಾಕಿದ ಪ್ರಾಣಿಗಳನ್ನು ಮನೆಯಲ್ಲೇ ಒಂಟಿಯಾಗಿ ಬಿಟ್ಟು ಹೋಗಲೂ ಆಗುವುದಿಲ್ಲ. ಅವಕ್ಕೆ ಸಮಯಕ್ಕೆ ತಕ್ಕಂತೆ ಆಹಾರ ಕೊಡುವುದೂ ಕಷ್ಟವೇ. ಇಂಥ ಸಮಯದಲ್ಲಿ ಗೊತ್ತಿರುವವರ ಮನೆಯಲ್ಲಿ ಬಿಡುವ ಆಯ್ಕೆಯಿದ್ದರೂ, ಪ್ರತಿ ಸಾರಿಯೂ ಬಿಟ್ಟು ಹೋಗಲು ಆಗುವುದಿಲ್ಲ. ಇಂಥದ್ದೇ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಸಾಕು ಪ್ರಾಣಿಗಳ ಹಾಗೂ ಅವುಗಳ ಮಾಲೀಕರಿಗೆ ಅನುಕೂಲವಾಗುವಂಥ ತಂತ್ರಜ್ಞಾನದ ಮಾದರಿಯನ್ನು ವಿದ್ಯಾರ್ಥಿಗಳು ಕಂಡುಹಿಡಿದಿದ್ದಾರೆ. ಅದರ ಹೆಸರು ‘ಟೆಕ್‌ಪೆಟ್‌’ (ಆಟೊಮೇಟೆಡ್ ಅನಿಮಲ್ ಫೀಡರ್). ಬೆಂಗಳೂರಿನ ಸಂಭ್ರಮ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸುಶಾಂತ್ ರಂಜನ್, ಶ್ವೇತಾ, ಅಭಯ್, ಸುಮಿತ್, ಸುಜಾತಾ, ದೀಕ್ಷಿತ್ ಮೊನ್ನಪ್ಪ, ಐಶ್ವರ್ಯ ಎಂಬ ವಿದ್ಯಾರ್ಥಿಗಳು ಈ ಮಾದರಿಯನ್ನು ಕಂಡುಕೊಂಡವರು. ಎರಡು ತಿಂಗಳ ಅವಧಿಯಲ್ಲಿ ಈ ಮಾದರಿ ತಯಾರಿಸಿದ್ದಾರೆ. ಟೆಕ್‌ಪೆಟ್ ಎಂಬ ಈ ಮಾದರಿ ಯಂತ್ರ ಸ್ವಯಂ ಚಾಲಿತದ್ದು. ಎಂಬ ಮೈಕ್ರೋ ಕಂಟ್ರೋಲರ್ ಸಾಧನವನ್ನು ಇದರಲ್ಲಿ ಅಳವಡಿಸಲಾಗಿದೆ. ಸ್ವಯಂ ಸಮಯ ನಿಯಂತ್ರಣವಿದ್ದು, ಮಾಲೀಕರು ನಿಗದಿ ಪಡಿಸಿದ ಸಮಯಕ್ಕೆ ತಕ್ಕಂತೆ ಕೆಲಸ ನಿರ್ವಹಿಸುವುದು ವಿಶೇಷ. ಪ್ರಾಣಿಗೆ ಆಹಾರ ಕೊಡುವ ಸಮಯ ಬಂದಾಗ, ಈ ಟೆಕ್‌ಪೆಟ್ ಐದು ನಿಮಿಷಕ್ಕೊಮ್ಮೆ ಐದು ಬಾರಿ ಕರೆಯಲು ಆರಂಭಿಸುತ್ತದೆ. ಮೊದಲೇ ಇದರಲ್ಲಿ ಮಾಲೀಕರ ಅಥವಾ ಪ್ರಾಣಿ ನೋಡಿಕೊಳ್ಳುವವರ ಧ್ವನಿಯನ್ನು ರೆಕಾರ್ಡ್ ಮಾಡಿ ಅಳವಡಿಸಬೇಕು. ಆಗ ಆ ಧ್ವನಿ ಮೂಲಕ ಅದು ಕರೆಯುತ್ತದೆ. ಪ್ರಾಣಿಯು ಅದರ ಬಳಿ ಬಂದಾಕ್ಷಣ ಅದಕ್ಕೆ ಊಟವನ್ನು ನೀಡುತ್ತದೆ ಈ ಯಂತ್ರ. ಪ್ರಾಣಿಗೆ ನೀಡಬೇಕಾದ ಆಹಾರದ ತೂಕ ಅನುಸರಿಸಲು ಲೋಡ್‌ ಸೆಲ್‌ ಅನ್ನು ಅಳವಡಿಸಲಾಗಿದೆ. ತಟ್ಟೆಯಲ್ಲಿ ಉಳಿದ ಆಹಾರದ ಪ್ರಮಾಣವನ್ನೂ ಇದು ಲೆಕ್ಕ ಇಟ್ಟುಕೊಳ್ಳುತ್ತದೆ. ಸಾಮಾನ್ಯವಾಗಿ ಪ್ರಾಣಿಗಳಿಗೆ ಊಟ ಹಾಕುವ ಜಾಗದಲ್ಲೇ ಇದನ್ನು ಇಟ್ಟರೆ, ಸಾಕು ನಾಯಿಗಳು, ಬೆಕ್ಕಿಗೆ ಸಮಯಕ್ಕೆ ತಕ್ಕಂತೆ ಆಹಾರ ನೀಡುತ್ತದೆ. ‘ವಿದ್ಯಾರ್ಥಿಗಳಿಗೆ ದಿನನಿತ್ಯದ ಜೀವನದಲ್ಲಿ ಜನರಿಗೆ ಅನುಕೂಲವಾಗುವಂಥ ಉಪಕರಣ ತಯಾರಿಸಲು ಪ್ರೇರೇಪಿಸಲಾಯಿತು. ಈ ಪ್ರಾಜೆಕ್ಟ್ ಪ್ರಾಯೋಗಿಕವಾಗಿ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕೆಂಬ ಉದ್ದೇಶ ನಮ್ಮದಾಗಿತ್ತು’ ಎನ್ನುತ್ತಾರೆ ಪ್ರಾಂಶುಪಾಲರಾದ ಡಾ.ಚಂದ್ರಕಾಂತ್. ಸೆನ್ಸಾರ್ ಬಳಕೆ ಈ ಯಂತ್ರ ಬ್ಯಾಟರಿ ಹಾಗೂ ವಿದ್ಯುತ್ ಎರಡರ ಮೂಲಕವೇ ಕಾರ್ಯ ನಿರ್ವಹಿಸುತ್ತದೆ. ವಿದ್ಯುತ್ ಇಲ್ಲದ ಸಮಯದಲ್ಲಿ ಬ್ಯಾಟರಿ ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದು ಬಳಸಿಕೊಳ್ಳುವ ವಿದ್ಯುತ್ ಪ್ರಮಾಣವೂ ಕಡಿಮೆ. ಮಾಲೀಕರಿಗೂ ಪ್ರಾಣಿ ಎಷ್ಟು ಆಹಾರ ಸೇವಿಸಿದೆ, ಅದರ ಇರುವಿಕೆ, ಆಹಾರ ಉಳಿದಿರುವುದು ಎಲ್ಲ ಮಾಹಿತಿಯ ಕುರಿತು ಸಂದೇಶ ನೀಡುತ್ತದೆ. ಥೇಟ್ ಮನುಷ್ಯರಂತೆ ಕೆಲಸ ನಿರ್ವಹಿಸುವ ಇದರಲ್ಲಿ ಸೆನ್ಸಾರ್ ಇದೆ. ಪ್ರಾಣಿ ಹತ್ತಿರ ಬಂದಾಗ ಊಟದ ತಟ್ಟೆ ತಂತಾನೇ ಹೊರಗೆ ಬರುತ್ತದೆ. ಅದರಲ್ಲಿಟ್ಟಿರುವ ಆಹಾರವನ್ನೂ ಇಂತಿಷ್ಟು ಪ್ರಮಾಣ ಎಂದು ಮೊದಲೇ ನಿಗದಿ ಪಡಿಸಿದಂತೆ ನೀಡುತ್ತದೆ. ಇದನ್ನು ಹೊರಗಿಟ್ಟರೆ ಬೇರೆ ಪ್ರಾಣಿಗಳೂ ಬರುವ ಸಾಧ್ಯತೆ ಇರುತ್ತದೆ, ಆದರೆ ಎಲ್ಲ ಮನೆಗಳಲ್ಲೂ ಪ್ರಾಣಿಗಳಿಗೆಂದು ಪ್ರತ್ಯೇಕ ಸ್ಥಾನ ಇರುವುದರಿಂದ ಸಮಸ್ಯೆ ಇಲ್ಲ’ ಎನ್ನುತ್ತಾರೆ ಪ್ರಾಧ್ಯಾಪಕ ರವಿಶಂಕರ್. ‘ಈಗ ಹಲವು ಕುಟುಂಬಗಳು ಸಾಕುಪ್ರಾಣಿಗಳನ್ನು ಹೊಂದಿರುತ್ತವೆ. ಆದರೆ ಹೊರಗೆ ಹೋಗುವುದೇ ಕಷ್ಟ. ನಮ್ಮ ಗೆಳೆಯರಲ್ಲೂ ಕೆಲವರಿಗೆ ಇಂಥದ್ದೇ ಅನುಭವವಾಗಿತ್ತು. ಆದ್ದರಿಂದ ಈ ಆಟೊಮೇಟಿಕ್ ಅನಿಮಲ್ ಫೀಡರ್ ಯೋಜನೆಗೆ ಕೈ ಹಾಕಿದೆವು. ಇದು ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಮುಂದೆ ಇನ್ನೂ ಹಲವು ಸೌಲಭ್ಯಗಳನ್ನು ನೀಡಿ, ಸಂಪೂರ್ಣ ಯಂತ್ರದಂತೆ ಮಾಡಬೇಕಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳು. ತಯಾರಿಕೆಗೆ ಕೇವಲ ಮೂರು ಸಾವಿರ ರೂಪಾಯಿ ತಗುಲಿದ್ದು, ಪೌಲ್ಟ್ರಿ ಮತ್ತು ಫಾರ್ಮ್‌ಗಳಿಗೆ ಇದನ್ನು ದೊಡ್ಡ ಮಟ್ಟದಲ್ಲಿ ತಯಾರಿಸಿದರೆ ದರ ಸ್ವಲ್ಪ ಹೆಚ್ಚಾಗಬಹುದು. ಬೆಂಗಳೂರಿನ ಅಂತರ ಕಾಲೇಜು ಸ್ಪರ್ಧೆಯಲ್ಲಿ ಈ ಪ್ರಾಜೆಕ್ಟ್ ಪ್ರಥಮ ಬಹುಮಾನ ಪಡೆದುಕೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.