ಆಹಾ... ದೇಹಾಕಾರ... ಹೆಣ್ಮಕ್ಕಳೇನು ಎಲ್ಲ ಆಕಾರವನ್ನೂ ಹಾಯ್ದು ಹೋಗುವ ಆಕಾರಭಾಗ್ಯ ಪಡೆದುಬಂದಿರುತ್ತಾರೆ. ಹಾಗೇ ಎಲ್ಲ ಅಳತೆಗಳಲ್ಲೂ ಕಂಗೊಳಿಸಿ ಮೋಹಕವಾಗಿ ಕಾಣುತ್ತಾರೆ. ಅವರು ಬಿಡೀಪಾ, ಯಾವ ವಯಸ್ಸಿನಲ್ಲಿ ನೋಡಿದರೂ ಚೆಂದವೇ. ಆದರೆ ಒಬ್ಬರಿಗೆ ಸೂಕ್ತವಾದ ಉಡುಗೆ ಇನ್ನೊಬ್ಬರಿಗೆ ಒಪ್ಪುವುದಿಲ್ಲ. ರೆಡಿಮೇಡ್‌ ಉಡುಪು ತಯಾರಿಸುವವರು ಒಂದಷ್ಟು ಸ್ಟ್ಯಾಂಡರ್ಡ್‌ ಅಳತೆಯ, ನಿರ್ದಿಷ್ಟ ಆಕಾರಗಳಲ್ಲಿ ತಯಾರಿಸಿ ಮಾರಾಟಕ್ಕೆ ಇಟ್ಟುಬಿಡುತ್ತಾರೆ. ಹೋಗ್ತೀವಿ, ಬಣ್ಣ, ಡಿಸೈನ್‌, ಕುಸುರಿ ಹೆಚ್ಚೆಂದರೆ ಬಟ್ಟೆಯ ಗುಣಮಟ್ಟ ಮುಟ್ಟಿ ಮುಟ್ಟಿ ನೋಡಿ ಕೊಂಡುಬಿಡುತ್ತೀವಿ. ಕನ್ನಡಿ ಎದುರು ನಿಂತು ನೋಡಿಕೊಂಡು, ಹೊರಗೆ ಬಂದು ಅಮ್ಮನಿಗೊ, ಗೆಳತಿಗೊ, ಗಂಡನಿಗೊ ಒಂದ್ಸಲ ತೋರಿಸಿಯೂ ಆಗಿರುತ್ತದೆ. ಆಗಲೂ ಅನುಮಾನ. ಆದರೆ ಎಷ್ಟೂ ಅಂತ ಪಾಸ್‌, ಒಕೆ ಅಂತ ಹೇಳೋಕೆ ಹೊರಗೆ ಕಾಯ್ತಾರೆ ಪಾಪ. ಅವರೂ ಯಾವುದೊ ಒಂದಕ್ಕೆ ಪರವಾಗಿಲ್ಲ ಅಂತ ಸರ್ಟಿಫಿಕೇಟ್‌ ಕೊಟ್ಟು ಮುಗಿದರೆ ಸಾಕು ಅಂತ ಓಡ್ತಾರೆ. ಹೇಗೂ ನಮ್ಮ ಅಳತೆಗೆ ಆಲ್ಟರ್‌ ಮಾಡಿಕೊಡುವ ಭರವಸೆ ಮಳಿಗೆಯವರದ್ದು. ಸರಿ ಖರೀದಿ ನಡೆದುಹೋಗುತ್ತದೆ. ಹಂಗಾಗೇ ಅಲ್ವಾ ನಮ್ ಕಡೆ ಇರೋ ಮೂವತ್ತು ನಲ್ವತ್ತು ಡ್ರೆಸ್‌ಗಳಲ್ಲಿ ನಾವು ಪದೇ ಪದೇ ಹಾಕಿ ಅಪ್ಪಿಕೊಳ್ಳೋದು ನಾಲ್ಕೈದೇ ಡ್ರೆಸ್‌ಗಳನ್ನ. ಕಪಾಟು ತುಂಬಿ ಯಾವುದೊ ವಿಶೇಷ ದಿನ ಧರಿಸಲೆಂದು ಕಾದಿರುವವೇ ಹೆಚ್ಚು. ಕೊಂಡದ್ದು ಎರಡು ವರ್ಷಗಳ ಹಿಂದೆ ಆದರೂ ಹಾಕೋ ಭಾಗ್ಯ ಇನ್ನೂ ಪೋಸ್ಟ್‌ಪೋನ್‌ ಆಗ್ತಾನೇ ಇರುತ್ತೆ. ಡ್ರೆಸ್‌ ಡಿಸೈನರ್‌ ಸಲಹೆ ಏನಂದ್ರೆ ಕೊಳ್ಳುವಾಗ ಡ್ರೆಸ್‌ಗಳ ಕಟ್‌ ಮತ್ತು ನಮ್ಮ ದೇಹದ ಆಕಾರ ಗಮನದಲ್ಲಿಟ್ಟುಕೊಳ್ಳಬೇಕು. ಹೇಗೆ ಸರಿಯಾಗಿ ಡ್ರೆಸ್‌ ಮಾಡಬೇಕು? ವಜ್ರದಾಕಾರ: ವಜ್ರದಾಕಾರದ ದೇಹಿ ಯಾಗಿದ್ದರೆ, ಸೊಂಟದ ಭಾಗ, ಎದೆಯ ಭಾಗ ಮತ್ತು ಭುಜಗಳಿಗಿಂತ ಅಗಲವಾಗಿರುತ್ತದೆ. ತೂಕ ಹೆಚ್ಚಾದರೂ ಸಾಮಾನ್ಯವಾಗಿ ಅದು ಹೊಟ್ಟೆ, ಬೆನ್ನು, ಬೆನ್ನಿನ ಕೆಳಭಾಗದಲ್ಲಿ. ಕನ್ನಡಿ ಮುಂದೆ ನಿಂತು ನಡು ಸಣ್ಣ ಮಾಡಿಕೋಬೇಕು ಅಂತ ಚಿಂತಿಸ್ತಿದೀರಿ ಅಂದ್ರೆ ಇದೇ ನಿಮ್ಮ ದೇಹದಾಕಾರ. ಸ್ಟ್ರಕ್ಚರ್ಡ್‌ ಜಾಕೆಟ್‌ ಅಥವಾ ಪೋಂಚೊ ಹಾಕಿ ನೋಡಿ. ಉದ್ದನೆ ದೇಹ ನಿಮ್ಮದೆಂಬ ಭ್ರಮೆ ಹುಟ್ಟಿಸುತ್ತದೆ. ಈ ಮೂಲಕ ದೇಹ ಪ್ರಮಾಣಬದ್ಧವಾಗಿರುವಂತೆ ತೋರುತ್ತದೆ. ಸೇಬಿನಾಕಾರ: ಆಕಾರದಪ್ಪಿದ ನಡು ಮತ್ತು ಮುಂಚಾಚಿಕೊಂಡ ಹೊಟ್ಟೆ ಇತ್ತೆಂದರೆ ಅದು ಬಹುತೇಕ ಸೇಬಿನಾಕಾರದ ದೇಹ. ಹೀಗಿರುವವರು, ಡ್ರೆಸ್‌ ಧರಿಸಿದಾಗ ದೇಹದ ಮೇಲರ್ಧ ಭಾಗ ಉದ್ದಕಿರುವಂತೆ ನೋಡಿಕೊಳ್ಳಬೇಕು. ಜತೆಗೆ ನಡುವಿನತ್ತ ಗಮನವೇ ಹೋಗುವಂತಿರಕೂಡದು. ಅಂದರೆ ಡ್ರೆಸ್‌ನ ನಡು ಎಲ್ಲೋ ಸೊಂಟದ ಬಳಿ, ಪೃಷ್ಟದ ಎಲುವುಗಳ ಬಳಿ ಇರಬೇಕು. ಅಥವಾ ಎಂಪೈರ್‌ ಡ್ರೆಸ್‌ ಕಟ್‌ ಇದ್ದರೂ ಸರಿ. ಅವುಗಳಲ್ಲಿ ಡ್ರೆಸ್‌ನ ನಡು ನಮ್ಮ ದೇಹದ ನಡುವಿಗಿಂತಲೂ ಮೇಲೆಯೇ ಇರುತ್ತದೆ. ಧರಿಸಿ ನೋಡಿ, ಅದ್ಭುತವಾಗಿ ಕಾಣುತ್ತದೆ. ಕುತ್ತಿಗೆಗೆ ಜೋತುಬಿದ್ದಂತೆ ತೋರುವ ಹಾಲ್ಟರ್‌ ನೆಕ್‌ ಮತ್ತು ಬೋಟ್‌ ನೆಕ್‌ನ ಡ್ರೆಸ್‌ ಬೇಡ. ಅವು ಈಗಾಗಲೇ ಅಗಲವಾಗಿರುವ ಭುಜದ ಭಾಗವನ್ನು ಮತ್ತಷ್ಟು ಅಗಲವಾಗಿರುವಂತೆ ತೋರುತ್ತವೆ. ಟ್ಯೂಬಿನಾಕಾರ: ಎದೆಯ ಭಾಗ ಮತ್ತು ಸೊಂಟದ ಭಾಗ ಒಂದೇ ಅಗಲವಾಗಿದ್ದು, ನಡುವಿನಾಕಾರ ಅಷ್ಟೇನು ಸ್ಪಷ್ಟವಾಗಿ ಗೋಚರಿಸದಂತಿದ್ದರೆ ಅದು ಟ್ಯೂಬಿನಾಕಾರದ ದೇಹಾಕೃತಿ. ನಡು ಮತ್ತು ಭುಜಗಳ ಆಕಾರ ಎದ್ದು ಕಾಣುವಂತಹ ದಿರಿಸು ಧರಿಸಿದರೆ ಚೆನ್ನಾಗಿ ಕಾಣುತ್ತದೆ. ನಡುವಿನ ಬಳಿ ಇಳಿದುಹೋಗುವಂತೆ ನವಿರಾದ ಬಟ್ಟೆಯ, ಸೊಂಟ ಬಳಸಿದಂತೆ ಕಾಣುವ ದಿರಿಸುಗಳು ದೇಹಕ್ಕೆ ಸುಂದರ ಆಕಾರ ನೀಡುತ್ತವೆ. ಮೊಳಕಾಲವರೆಗಿನ ಉದ್ದದ ಡ್ರೆಸ್‌ಗಳೇ ಇರುವಂತೆ ನೋಡಿಕೊಂಡರೆ ಇನ್ನೂ ಚೆಂದ. ಅವರ್‌ಗ್ಲಾಸ್‌: ಎದೆಯ ಭಾಗ ಮತ್ತು ಸೊಂಟದ ಭಾಗ ಎರಡೂ ಹೆಚ್ಚೂ ಕಡಿಮೆ ಒಂದೇ ಅಗಲವಾಗಿದ್ದು ನಡುವಿನಾಕಾರ ಸ್ಪಷ್ಟವಾಗಿ ಕಾಣುವಂತಿದ್ದರೆ ಅದು ಅವರ್‌ಗ್ಲಾಸ್‌ ದೇಹದಾಕಾರ. ಹೀಗಿದ್ದರೆ ಎಂಥ ಡ್ರೆಸ್‌ ಆದರೂ ಚೆನ್ನಾಗಿ ಕಾಣುತ್ತದೆ. ಸಾಂಪ್ರದಾಯಿಕವಾದ ಕಟ್‌ಗಳಿರುವ ಉಡುಪುಗಳು. ಅದರಲ್ಲೂ ಆಳವಾದ ಕತ್ತಿನಾಕಾರದ ಡ್ರೆಸ್‌ಗಳಲ್ಲಿ ಇಂಥ ದೇಹದಾಕಾರ ಇನ್ನೂ ಚೆನ್ನಾಗಿ ಕಾಣುತ್ತದೆ. ಪೇರ್‌ ಹಣ್ಣಿನಾಕಾರ: ದೇಹದಲ್ಲಿ ಸೊಂಟದ ಭಾಗಕ್ಕಿಂತ ಎದೆಯ ಭಾಗ ತುಸು ಸಣ್ಣದೆನಿಸಿದರೆ ಮತ್ತು ದೇಹದ ಹಿಂಭಾಗ ತುಸು ದುಂಡಗಿದ್ದರೆ ಅದು ಪೇರ್‌ ಹಣ್ಣಿನಾಕಾರದ ದೇಹ. ಹಣ್ಣು ನೋಡಿದ್ದರೆ ಈ ವಿವರಗಳನ್ನು ತಕ್ಷಣ ಗ್ರಹಿಸಿರುತ್ತೀರಿ. ಈಗ ಡ್ರೆಸ್‌ ಧರಿಸಿದಾಗ ದೇಹದ ಮೇಲರ್ಧ ಭಾಗ ತುಸು ಅಗಲವಾಗಿರುವಂತೆ ನೋಡಿಕೊಂಡರೆ ಸಮತೋಲನ ಸಾಧಿಸಿದಂತೆ. ಎದೆಯ ಭಾಗವನ್ನು ವೈಭವೀಕರಿಸುವ ದಿರಿಸುಗಳು ಇಂತಹ ಜಾದೂ ಮಾಡಬಲ್ಲವು. ಎ–ಲೈನ್‌ ಡ್ರೆಸ್‌ಗಳು ದೇಹದ ಮೇಲ್ಭಾಗಕ್ಕೆ ಒತ್ತು ಕೊಟ್ಟು ನಡುವಿನಿಂದ ತುಸು ಸಣ್ಣ ಇದ್ದೇವೇನೊ ಎನಿಸುವಂತೆ ಮಾಡುತ್ತವೆ. ಆಯತಾಕಾರ: ನಡು ಸ್ಪಷ್ಟ ಆಕಾರದಲ್ಲಿ ಎದ್ದುಕಾಣುತ್ತಿಲ್ಲ ಎಂದಾದರೆ, ಎದೆಯ ಭಾಗವೂ, ಭುಜದ ಭಾಗದ ಅಗಲವೂ ಒಂದೇ ಆಗಿದ್ದರೆ ಅದು ಆಯತಾಕಾರದ ದೇಹ. ನಡು ಮತ್ತು ಅದಕ್ಕೂ ಮೇಲಿನ ಭಾಗ ಇನ್ನಷ್ಟು ಸಣ್ಣಗೆ ಕಾಣುವಂತೆ ಒತ್ತು ಕೊಡಬೇಕು. ಶಿಫ್ಟ್‌ ಡ್ರೆಸ್‌ಗಳು, ಎಂಪೈರ್‌ ಡ್ರೆಸ್‌ಗಳು ಚೆನ್ನಾಗಿ ಕಾಣುತ್ತವೆ. ಈಗ ಶಾಪಿಂಗ್‌ಗೆ ಹೋದರೆ ನಿಮಗೆ ಬರೀ ಚೆನ್ನಾಗಿರುವ ಡ್ರೆಸ್‌ ಅಲ್ಲ, ನಿಮಗೆ ಒಪ್ಪುವ ಡ್ರೆಸ್‌ ಆರಿಸಿಕೊಳ್ಳಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.