ಲಠಕನ್‌... ಧಡಕನ್‌... ಈ ಲಠಕನ್‌ಗೂ ಧಡಕನ್‌ಗೂ ಭಾಳ ಸಮೀಪದ ಸಂಬಂಧ... ಹೌದು.. ಅದೇನಂತ ಹೇಳೂದಕ್ಕಿಂತ ಮೊದಲು ಲಠಕನ್‌ ಅಂದ್ರ ಏನಂತ ಹೇಳಿಬಿಡ್ತೇನಿ... ರೈತಾಪಿ ಮನಿಯೊಳಗ ಇರುವ ಎತ್ತಿನ ಕೋಡುಗಳಿಗೆ ಕಟ್ಟುವ ಝೂಮರ್‌ಗಳು, ಬಣ್ಣಬಣ್ಣದ ರಿಬ್ಬನ್‌ಗಳಿಗೆ ಲಠಕನ್‌ ಅಂತಿದ್ರು. ಅವಕ್ಕ ಬೆಂಡಿನ ಸಿಂಗಾರ ಮಾಡೋದು ರೂಢಿಗೆ ಬಂತು. ಅವಕ್ಕೇ ತಮಗಿಷ್ಟದ ಬಣ್ಣಾ ಬಳಿಯೂದು, ಒಂದೀಟು ಮುತ್ತಿನ ಕುಚ್ಛು ಕಟ್ಟೂದು ಶುರು ಆಯಿತು. ಇಂಥಾ ಸೊಬಗಿನ ಸಿಂಗಾರ ಎತ್ತಿಗಷ್ಟೇ ಯಾಕೇಂತ ಹಸುಗೂ ಹಬ್ಬ, ಹರಿದಿನಗಳಿಗೆ ಕಟ್ಟೋದು ಸಿಂಗಾರದ ಸಂಪ್ರದಾಯವಾಯಿತು. ಆದ್ರೆ ಅದ್ಹೆಂಗೆ, ಯಾವ ಡಿಸೈನರ್‌ ಯಾವ ಗೋದೂಳೀ ಮುಹೂರ್ತದೊಳಗ ಈ ಲಠಕನ್‌ ನೋಡಿದ್ಲೋ, ನೋಡಿದ್ನೋ.... ಹೆಣ್ಮಕ್ಕಳ ಬ್ಲೌಸಿನ ಸಿಂಗಾರಕ್ಕೂ ಬಂತು ನೋಡ್ರಿ.. ಈ ಮುತ್ತು ಮಣಿ. ಇವನ್ನು ಧರಿಸಿದವರೆಲ್ಲ ಮಣಿಮೇಖಲೆಯಂತೆ ಮಿಂಚುಳ್ಳಿ ಗಳಾದರು. ಬೆನ್ನುಡಿ ಬರಿಯೋವಂತೆ ಲಠಕನ್‌ಗಳು ಹುಡುಗಿಯ ನಡಿಗೆಯನ್ನು ಅವಲಂಬಿಸಿ ರವಿಕೆಗೂ ಲವಲವಿಕೆ ಬಂತು. ಬೆನ್ನು ಮುಚ್ಚಿದ್ರ ಈ ಲಠಕನ್‌ಗಳಿಗೆ ಆಸ್ಪದವೇ ಇಲ್ಲ. ಇವುಗಳ ನರ್ತನ ನೋಡಬೇಕೂಂದ್ರೆ ಬೆನ್ನು ತೆರೆಯಲೇಬೇಕು. ತೆರೆದ ಬೆನ್ನಿನ ಬಯಲ ಮೇಲೆ ಮಿನುಗುಮಿಂಚಿನಂತೆ ಬಳಕುವ ಬಳ್ಳಿಗಳು ಈ ಲಠಕನ್‌ಗಳು. ರಾಜಸ್ತಾನ್‌ ಹಾಗೂ ಪಹಾಡಿ ಹೆಣ್ಣುಮಕ್ಕಳು ತಮ್ಮ ರವಿಕೆಯನ್ನು ಕಟ್ಟಲು ಕುಲಾವಿ ವಿನ್ಯಾಸದ ಕಸಿಗಳನ್ನು ಇಳಿಬಿಡುತ್ತಿದ್ದರು. ಅದು ಹಾರಿ ಬರದಿರಲಿ, ಎದೆಗಪ್ಪಿ ಕೂತಿರಲಿ, ಭುಜದಿಂದಿಳಿಯ ದಿರಲಿ ಎಂದು ಭಾರವಾಗಲೆಂದೇ ಕನ್ನಡಿ, ಮಣಿಗಳನ್ನು ಬಳಸಿದರು. ಈಗೀಗ ಎಲ್ಲ ರವಿಕೆಗಳಿಗೂ ಈ ಕಸಿಗಳನ್ನು ‘ಕಸಿ’ಮಾಡಿಯಾಗಿದೆ. ರವಿಕೆ ಹೊಲಿಗೆಯ ಕೂಲಿಗಿಂತಲೂ ಈ ಕಸಿಮಾಡುವ ಕುಸುರಿತನಕ್ಕೇ ಹೆಚ್ಚು ಹಣ ತೆರಬೇಕಾಗುತ್ತದೆ. ಅದರಿಂದಾಗಿಯೂ ಒಂದು ರವಿಕೆಯನ್ನು ಸಿದ್ಧಪಡಿಸುವಾಗ ಬೆಲೆ ಸಾವಿರ ರೂಪಾಯಿಗಳ ಗಡಿ ದಾಟಿ ಅದೆಷ್ಟೋ ಮುಂದೆ ಹೋಗಿದೆ. ಒಂದು ಸೀರೆಯ ಮೌಲ್ಯಕ್ಕಿಂತಲೂ ಹೆಚ್ಚು ಹಣ ಇಂಥ ರವಿಕೆಗಳಿಗೆ ಸುರಿಯಬೇಕಾಗಿದೆ. ಸುಂದರ ಕಸಿ ಇರದಿದ್ದರೆ ಕಸಿವಿಸಿ ಎಂದು ಕನವರಿಸುವಂತೆ ಮಾಡಿವೆ ಈ ಲಠಕನ್‌ಗಳು. ಇದರಲ್ಲೂ ಒಂದೆರಡು ಬಗೆಗಳಲ್ಲ, ಹಲವಾರು, ನೂರಾರು, ಸಾವಿರಾರು... ಹುಡುಗಿಯರಿದ್ದಷ್ಟು... ಮುತ್ತು, ಹವಳ, ರತ್ನ. ಪಚ್ಚೆ... ಇನ್ನೂ ಹಣವಿದ್ದರೆ ಸರ್ವೋಸ್ಕಿ ಹರಳುಗಳನ್ನೂ ಬೆನ್ನಮೇಲೆ ನರ್ತಿಸುವಂತೆ ಮಾಡಬಹುದು. ಬೆಳಕಿನ ಪ್ರತಿಫಲನಕ್ಕೆ ನಿಮ್ಮ ಲಠಕನ್‌ ಮಿನುಗಿದರೆ ನೀವು ಮಿಂಚುವಿರಿ ಎನ್ನುವಷ್ಟು ಇವು ಬಳಕೆಗೆ ಬಂದವು. ಇದೀಗ ರೇಷ್ಮೆಯಂತೆ ನುಣುಪಾದ ಬೆನ್ನನ್ನು ಸವರುವ ಈ ಕಸಿಗೆ ರೇಷ್ಮೆನೂಲಿನೆಳೆಯ ಉಂಡೆಗಳನ್ನೇ ಬಿಡುತ್ತಾರೆ. ಇನಿಯನ ನವಿರು ಸ್ಪರ್ಶದಂತೆ ಆಗಾಗ ಬೆನ್ನಿಗೆ ಸೋಕುವ ಇವು ಹೆಂಗಳೆಯ ಮೊಗದಲ್ಲಿ ತಿಳಿಗುಲಾಬಿ ಬಣ್ಣ ಆವರಿಸುವಂತೆ ಮಾಡುತ್ತವೆ. ಅದು ಬಣ್ಣ, ಒಲುಮೆ ಹಾಗೂ ನಲುಮೆ ಅಲ್ಲಲ್ಲ ನೂಲುಮೆಯ ಹಿರಿಮೆಯ ಮಾತಿದು. ಮುಗಿಸುವ ಮುನ್ನ ಲಠಕನ್‌ ಹಾಗೂ ಧಡಕನ್‌ಗೂ ಇರುವ ವ್ಯತ್ಯಾಸ, ಲಠಕನ್‌ ಬೆನ್ನಮೇಲೆ ಹೊರಳಾಡಿದಾಗಲೆಲ್ಲ ಎದೆಯೊಳಗಿನ ಮಿಡಿತ ನಮಗೇ ಕೇಳತೊಡಗುತ್ತದೆ. ನುಸ್ರತ್‌ ಫತೇ ಅಲಿ ಖಾನ್‌ ಅವರ ಹಾಡು ಧಡಕನ್‌... ಧಡಕನ್‌... ಲಠಕನ್‌ ಲಠಕನ್‌... ಅಂತ! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.