ನವಚೈತನ್ಯದತ್ತ ಪಾಕ್‌ ಕ್ರಿಕೆಟ್‌... ‘ಜಿಂಬಾಬ್ವೆ ತಂಡಕ್ಕೆ ಸ್ವಾಗತ. ನಾವು ಶಾಂತಿಯನ್ನು ಪ್ರೀತಿಸುತ್ತೇವೆ’ ಪಾಕಿಸ್ತಾನದ ಲಾಹೋರ್‌ನ ಗಡಾಫಿ ಮೈದಾನದಲ್ಲಿ ಕಳೆದ ಮಂಗಳವಾರ ನಡೆದ ಏಕದಿನ ಪಂದ್ಯದಲ್ಲಿ ಪ್ರೇಕ್ಷಕರೊಬ್ಬರ ಕೈಯಲ್ಲಿದ್ದ ಪ್ಲೇಕಾರ್ಡ್‌ ಸಂದೇಶ ಇದು. ಆರು ವರ್ಷಗಳ ನಂತರ ಪಾಕ್ ನೆಲದಲ್ಲಿ ನಡೆದ ಅಂತರರಾಷ್ಟ್ರೀಯ ಏಕದಿನ ಪಂದ್ಯ ಅದು. ಅಂದು ಬಂದೂಕುಗಳ ಸದ್ದಿಗೆ ನಲುಗಿ ಹೋಗಿದ್ದ ಪಾಕಿಸ್ತಾನದ ಕ್ರಿಕೆಟ್ ಈಗ ಅದೇ ಬಂದೂಕುಗಳ ನೆರಳಿನಲ್ಲಿ ಮತ್ತೆ ಚಿಗುರುತ್ತಿದೆ. 2009ರಲ್ಲಿ ಕ್ರಿಕೆಟ್ ಸರಣಿ ಆಡಲು ಪಾಕಿಸ್ತಾನಕ್ಕೆ ಬಂದಿದ್ದ ಶ್ರೀಲಂಕಾ ತಂಡದ ಬಸ್ ಮೇಲೆ ಭಯೋತ್ಪಾದಕರು ನಡೆಸಿದ್ದ ಗುಂಡಿನ ದಾಳಿಯ ನಂತರ ಈ ನೆಲದಲ್ಲಿ ಕ್ರಿಕೆಟ್ ಚಟುವಟಿಕೆಗಳಿಗೆ ಗ್ರಹಣ ಹಿಡಿದಿತ್ತು. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ತಂಡವೂ ಪಾಕಿಸ್ತಾನಕ್ಕೆ ಬಂದು ಕ್ರಿಕೆಟ್ ಆಡಲು ಒಪ್ಪಿರಲಿಲ್ಲ. ಅಪಾರ ದುಡ್ಡು, ಜನಪ್ರಿಯತೆ ಎರಡನ್ನೂ ಗಳಿಸಿ ಕೊಡುವ ಐಪಿಎಲ್‌ನಲ್ಲಿ ಯಾವ ಫ್ರಾಂಚೈಸ್ ಕೂಡ ಪಾಕ್ ಆಟಗಾರರನ್ನು ಖರೀದಿ ಮಾಡಲಿಲ್ಲ. ಶಾಹಿದ್ ಅಫ್ರಿದಿ, ಮಿಸ್ಬಾ ಉಲ್ ಹಕ್, ಶೋಯೆಬ್ ಮಲಿಕ್ ಅವರಂತಹ ಬ್ಯಾಟ್ಸ್‌ಮನ್‌ಗಳು, ಶೋಯೆಬ್ ಅಖ್ತರ್, ಇಮ್ರಾನ್, ವಹಾಬ್ ರಿಯಾಜ್‌ ಅವರಂತಹ ಪ್ರತಿಭಾವಂತ ವೇಗಿಗಳಿಗೂ ಅವಕಾಶ ಒದಗಲಿಲ್ಲ. ಭಯೋತ್ಪಾದನಾ ದಾಳಿಯ ಕರಿನೆರಳು ಪಾಕ್ ಕ್ರಿಕೆಟ್ ಪ್ರತಿಭೆಗಳ ಅವಕಾಶವನ್ನೂ ಕಸಿದುಕೊಂಡಿತ್ತು. ಅದರ ಪರಿಣಾಮ ಕಳೆದ ವಿಶ್ವಕಪ್ ಮತ್ತು ಇತ್ತೀಚೆಗೆ ಬಾಂಗ್ಲಾದಲ್ಲಿ ನಡೆದ ಸರಣಿಯಲ್ಲಿ ಬಹಿರಂಗವಾಯಿತು. ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತಕ್ಕೆ ಮಣಿದ ಪಾಕ್ ತಂಡ, ಎಂಟರಘಟ್ಟ ಮುಟ್ಟುವಷ್ಟರಲ್ಲಿ ಹೈರಾಣಾಗಿತ್ತು. ಆತಿಥೇಯ ಆಸ್ಟ್ರೇಲಿಯಾ ತಂಡದ ಮುಂದೆ ಸೋತ ಪಾಕ್, ಟೂರ್ನಿಯಿಂದ ನಿರ್ಗಮಿಸಿತು. ಈಚೆಗೆ ಬಾಂಗ್ಲಾದಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಮಾಜಿ ಕ್ರಿಕೆಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅವರ ಚಾಟಿಯೇಟಿಗೆ ಪಿಸಿಬಿ ತಡಬಡಾಯಿಸು ವಂತಾಯಿತು. ತರಾತುರಿಯಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಯೋಜನೆ ರೂಪಿಸಲಾರಂಭಿಸಿತು. ಅಂತೂ ಇಂತೂ ಜಿಂಬಾಬ್ವೆ ತಂಡವನ್ನು ಒಪ್ಪಿಸಿದ್ದಾಯ್ತು. ಟೆಸ್ಟ್ ಕ್ರಮಾಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಜಿಂಬಾಬ್ವೆಗೂ ಇಂತಹದೊಂದು ಅವಕಾಶದ ಅಗತ್ಯವಿತ್ತು. ಪಾಕ್, ಎರಡು ಟ್ವೆಂಟಿ-20 ಪಂದ್ಯಗಳ ಸರಣಿಯನ್ನು ಯಶಸ್ವಿಯಾಗಿ ಮುಗಿಸಿದೆ. ಏಕದಿನ ಸರಣಿಯ ಒಂದು ಪಂದ್ಯವೂ ಮುಗಿದಿದೆ. ಪಾಕ್ ತಂಡ ಗೆದ್ದು ಬೀಗುತ್ತಿದೆ. ಇದರೊಂದಿಗೆ ಪಿಸಿಬಿಯು ಹೊಸ ಪರ್ವದ ಕನಸು ಕಾಣುತ್ತಿದೆ. ಭಾರತ-ಪಾಕ್ ಸರಣಿ ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಕ್ಕೆ ಇರುವಷ್ಟು ರೋಚಕತೆ ಮತ್ತು ಮಹತ್ವ ಬೇರೆ ಯಾವುದೇ ಪಂದ್ಯಕ್ಕೂ ಇರುವುದಿಲ್ಲ. ಹಿಂದಿನ ಒಂದು ವರ್ಷದಿಂದ ಭಾರತ ಮತ್ತು ಪಾಕ್ ನಡುವೆ ಸರಣಿ ನಡೆಸಲು ಪ್ರಯತ್ನಗಳು ನಡೆದಿವೆ. ಆದರೆ, ಭದ್ರತೆಯ ಕಾರಣಕ್ಕೆ ಪಾಕಿಸ್ತಾನಕ್ಕೆ ಹೋಗಿ ಆಡಲು ಬಿಸಿಸಿಐ ಒಪ್ಪಿಗೆ ನೀಡಿಲ್ಲ. ಅದಕ್ಕಾಗಿ ಪಿಸಿಬಿಯು ತಟಸ್ಥ ಸ್ಥಳದಲ್ಲಿ ಸರಣಿ ನಡೆಸಲು ಒತ್ತಾಯಿಸುತ್ತಿದೆ. ಯುಎಇಯಲ್ಲಿ ಸರಣಿ ಆಯೋಜನೆಗೆ ಪಾಕ್ ಉತ್ಸುಕವಾಗಿದೆ. ಅದಕ್ಕಾಗಿ ಪಿಸಿಬಿ ಅಧ್ಯಕ್ಷ ಶಹರ್ಯಾರ್‌ ಖಾನ್ ಇತ್ತೀಚೆಗೆ ಭಾರತಕ್ಕೆ ಬಂದು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಮತ್ತು ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿದ್ದಾರೆ. ಆದರೆ, ಟಿವಿ ಪ್ರಸಾರದ ಹಕ್ಕುಗಳ ವಿಷಯಕ್ಕೆ ಸಂಬಂಧಪಟ್ಟ ಜಟಾಪಟಿ ಇನ್ನೂ ಮುಗಿದಿಲ್ಲ. ಆದ್ದರಿಂದಾಗಿ ಭಾರತವೂ ಬಿಗಿಪಟ್ಟು ಸಡಿಲಿಸಿಲ್ಲ. ಇದರಿಂದಾಗಿ ಪಿಸಿಬಿ ನಿರಾಸೆಗೊಂಡಿದೆ. ಈ ಕಾರಣಕ್ಕಾಗಿ ಜಿಂಬಾಬ್ವೆ ಎದುರಿನ ಸರಣಿಯನ್ನು ನಡೆಸಿ, ಜಗತ್ತಿಗೆ ತನ್ನ ಸಾಮರ್ಥ್ಯವನ್ನು ತೋರಿಸುವತ್ತ ಚಿತ್ತ ನೆಟ್ಟಿದೆ. ಏನೇ ಆದರೂ ಭಾರತದ ಎದುರಿಗೆ ಆಡಿದಾಗ ಸಿಗುವ ಜನಸ್ಪಂದನೆ, ಖ್ಯಾತಿ, ಅಂತರರಾಷ್ಟ್ರೀಯ ವರ್ಚಸ್ಸು ಬೇರೆ ತಂಡಗಳ ಮುಂದೆ ಸಿಗುವುದಿಲ್ಲ ಎನ್ನುವ ಸತ್ಯ ಪಿಸಿಬಿಗೆ ಗೊತ್ತು. 2011-12ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಸ್ನೇಹಸರಣಿಯ ನಂತರ ಉಭಯ ತಂಡಗಳು ಸರಣಿ ಆಡಿಲ್ಲ. ಒಂದು ಬಾರಿ ವಿಶ್ವಕಪ್ ಗೆದ್ದ ಬಲಿಷ್ಠ ತಂಡ ಪಾಕಿಸ್ತಾನ ಈಗ ನೆಲಕಚ್ಚಿದ ಸ್ಥಿತಿಯಲ್ಲಿದೆ. ಅದರ ಪುನರ್ಜನ್ಮಕ್ಕೆ ಪಾಕ್ ಪ್ರತಿಭೆಗಳಿಗೆ ಸೂಕ್ತ ವೇದಿಕೆಯ ಅಗತ್ಯವಿದೆ. ಅದಕ್ಕಾಗಿ ಹೆಚ್ಚು ಕ್ರಿಕೆಟ್ ಪಂದ್ಯಗಳು ಬೇಕು. ಅದಕ್ಕಾಗಿ ಪಿಸಿಬಿ ತಡವಾಗಿಯಾದರೂ ಮುನ್ನುಡಿ ಬರೆದಿದೆ. ಬದಲಾದ ಆಧುನಿಕ ಜಗತ್ತಿನೊಂದಿಗೆ ಹೆಜ್ಜೆ ಹಾಕುವತ್ತ ಪಾಕಿಸ್ತಾನ ಮನಸ್ಸು ಮಾಡಿದೆ. * ‘ರಾಜಕೀಯ ಬೇಡ’ ‘ಕ್ರಿಕೆಟ್ ಮತ್ತು ರಾಜಕೀಯ ಬೇರೆ ಬೇರೆ. ಬಿಸಿಸಿಐ ಇವೆರಡನ್ನೂ ಬೆರೆಸಬಾರದು. ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಮೈದಾನವನ್ನು ಅಗೆದು ಪಾಕ್ ತಂಡಕ್ಕೆ ಬಹಿಷ್ಕಾರ ಹಾಕಿದಾಗಲೂ ನಾವು ಹೋಗಿ ಆಡಿದ್ದೇವೆ. ಈಗ ನಾವು ತಟಸ್ಥ ಸ್ಥಳದಲ್ಲಿ ಆಹ್ವಾನಿಸಿದರೂ ಭಾರತ ಸಮ್ಮತಿಸದಿರುವುದು ಸರಿಯಲ್ಲ’ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮುಖ್ಯಸ್ಥ ಶಹರ್ಯಾರ್‌ ಖಾನ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.