ಅವಕಾಶಗಳ ಬೆನ್ನಟ್ಟಿ... ಅವಕಾಶಗಳು ಯಾರಿಗೂ ಕಾಯುವುದಿಲ್ಲ. ಅವಕಾಶ ಗಳಿಗಾಗಿ ಕಾಯುವವರಿಗೆ ಯಶಸ್ಸು ಸಿಗುವುದೂ ಇಲ್ಲ. ಕ್ರೀಡಾಲೋಕದಲ್ಲಿ ಇದು ವಾಸ್ತವದ ಮಾತು. ಚೆನ್ನೈ ಓಪನ್‌ನ ಸಿಂಗಲ್ಸ್‌ನಲ್ಲಿ ಸೋಮದೇವ್ ದೇವವರ್ಮನ್‌ ಅವರನ್ನು ಸೋಲಿಸಿ ಅಚ್ಚರಿ ಫಲಿತಾಂಶಕ್ಕೆ ಕಾರಣವಾಗಿದ್ದ ರಾಮಕುಮಾರ್ ರಾಮನಾಥನ್ ಭಾರತದ ಟೆನಿಸ್‌ನಲ್ಲಿ ಸದ್ಯ ಸಂಚಲನ ಮೂಡಿಸುತ್ತಿರುವ ಆಟಗಾರ. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಪ್ರತಿಭೆ. ಭಾರತ ಡೇವಿಸ್‌ ಕಪ್‌ ತಂಡದ ಪ್ರಮುಖ ಸದಸ್ಯರಾಗಿರುವ ಅವರು ವಿಶ್ವ ಟೆನಿಸ್‌ ರ‍್ಯಾಂಕಿಂಗ್‌ನಲ್ಲಿ 246ನೇ ಸ್ಥಾನದಲ್ಲಿದ್ದಾರೆ. ಚಾಂಪಿಯನ್‌ ಟೆನಿಸ್‌ ಲೀಗ್‌ನಲ್ಲಿ ಬೆಂಗಳೂರು ರ‍್ಯಾಪ್ಟರ್ಸ್‌ ತಂಡ ಪ್ರತಿನಿಧಿಸುತ್ತಾರೆ. 20 ವರ್ಷ ವಯಸ್ಸಿನ ರಾಮನಾಥನ್‌ ಕೆಲ ದಿನಗಳ ಹಿಂದೆ ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಆಡಿ ಬಂದಿದ್ದಾರೆ. ಮೈಸೂರಿನಲ್ಲಿ ನಡೆದ ಐಟಿಎಫ್‌ ಟೂರ್ನಿ ವೇಳೆ ರೋಲ್ಯಾಂಡ್‌ ಗ್ಯಾರೋಸ್‌ನ ತಮ್ಮ ಅನುಭವವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರು. *ಫ್ರೆಂಚ್ ಓಪನ್‌ ಟೆನಿಸ್‌ ಟೂರ್ನಿಯ ಅರ್ಹತಾ ಸುತ್ತಿನ ಅನುಭವ ಹೇಗಿತ್ತು? ರೋಲ್ಯಾಂಡ್‌ ಗ್ಯಾರೋಸ್‌ನ ವಾತಾವರಣವೇ ಹೊಸ ವಿಚಾರ ಕಲಿಸುತ್ತದೆ. ಬೇರೆ ಬೇರೆ ದೇಶದ ಆಟಗಾರರು ಅಭ್ಯಾಸ ನಡೆಸುವ ರೀತಿ, ಪಂದ್ಯಕ್ಕೆ ಸಿದ್ಧರಾಗುವ ಪರಿ, ಫಿಟ್‌ನೆಸ್‌ ವೈಖರಿ ಸೇರಿದಂತೆ ಹಲವು ವಿಚಾರ ಕಲಿಯಬಹುದು. ಇದೇ ಮೊದಲ ಬಾರಿ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಆಡಲು ನನಗೆ ಅವಕಾಶ ಲಭಿಸಿತ್ತು. ಮೊದಲ ಪಂದ್ಯದಲ್ಲಿ ಸುಲಭವಾಗಿ ಗೆದ್ದೆ. ಆದರೆ, ಎರಡನೇ ಸುತ್ತಿನ ಪಂದ್ಯ ಸವಾಲಿನಿಂದ ಕೂಡಿತ್ತು. 2–6, 0–6ರಲ್ಲಿ ಅಮೆರಿಕದ ಜೇರ್ಡ್‌ ಡೊನಾಲ್ಡ್‌ಸನ್‌ ಎದುರು ಸೋಲು ಕಂಡೆ. *ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಇತರ ಆಟಗಾರರನ್ನು ಭೇಟಿಯಾಗಲು ಅವಕಾಶ ಲಭಿಸಿತೇ? ಹೆಚ್ಚಿನ ಆಟಗಾರರ ಅಭ್ಯಾಸವನ್ನು ಸನಿಹದಿಂದ ವೀಕ್ಷಿಸಿದೆ. ಕೆಲವರೊಂದಿಗೆ ಮಾತನಾಡಿದೆ. ಅದಕ್ಕಿಂತ ಮಿಗಿಲಾಗಿ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಆಡಲು ಅವಕಾಶ ಸಿಕ್ಕಿದ್ದೆ ನನ್ನ ಅದೃಷ್ಟ. ಟೆನಿಸ್ ಆಡುವ ಪ್ರತಿಯೊಬ್ಬರ ಕನಸು ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ ಆಡಬೇಕು ಎಂಬುದು. ನನ್ನ ಕನಸು ಕೂಡ ಇದೇ ಆಗಿದೆ. ಈಗ ಅರ್ಹತಾ ಸುತ್ತಿನಲ್ಲಿ ಆಡಿದ್ದೇನೆ. ಮುಂದೆ ರ್‌್ಯಾಂಕಿಂಗ್‌ ಸುಧಾರಿಸಿಕೊಂಡು ನೇರ ಪ್ರವೇಶ ಗಿಟ್ಟಿಸುವ ವಿಶ್ವಾಸವಿದೆ. *ಗ್ರ್ಯಾಂಡ್‌ಸ್ಲಾಮ್‌ ಸಿಂಗಲ್ಸ್‌ನಲ್ಲಿ ಪ್ರಧಾನ ಹಂತಕ್ಕೆ ಅರ್ಹತೆ ಪಡೆಯಲು ಭಾರತದ ಆಟಗಾರರಿಗೆ ಈಗ ಏಕೆ ಸಾಧ್ಯವಾಗುತ್ತಿಲ್ಲ? ವಿದೇಶಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಹೆಚ್ಚು ಹೆಚ್ಚು ಆಡಬೇಕು. ಆಗ ಮಾತ್ರ ಇಂಥ ಉನ್ನತ ಟೂರ್ನಿಗಳಲ್ಲಿ ಪಾಲ್ಗೊಂಡು ಉತ್ತಮ ಪ್ರದ ರ್ಶನ ತೋರಲು ಸಾಧ್ಯವಾಗು ತ್ತದೆ. ಭಾರತದ ಆಟಗಾರರ ಪ್ರಮುಖ ಸಮಸ್ಯೆ ಎಂದರೆ ಸ್ವಂತ ಖರ್ಚು ಮಾಡಿಕೊಂಡು ಪ್ರವಾಸ ಕೈಗೊಳ್ಳಬೇಕಾಗುತ್ತದೆ. ಎಷ್ಟು ಜನರಿಗೆ ಇದು ಸಾಧ್ಯ ಹೇಳಿ? *ಐಟಿಎಫ್‌ ಮೈಸೂರು ಓಪನ್‌ ಟೂರ್ನಿ ಬಗ್ಗೆ ಹೇಳಿ? ಪ್ರಶಾಂತವಾದ ಸ್ಥಳದಲ್ಲಿ ಈ ಬಾರಿಯ ಟೂರ್ನಿ ಆಯೋಜಿಸಿದ್ದರು. ವಾತಾವರಣವೂ ಚೆನ್ನಾಗಿತ್ತು. ಆದರೆ. ಪ್ರೇಕ್ಷಕರು ಇಲ್ಲದ್ದು ಬೇಸರ ತರಿಸಿತು. *ಭಾರತದ ಟೆನಿಸ್‌ನಲ್ಲಿ ಪೇಸ್‌, ಭೂಪತಿ ಯುಗ ಮುಗಿಯುತ್ತಾ ಬಂದಿದೆ. ಮುಂದೇನು? ಪೇಸ್, ಭೂಪತಿ ಭಾರತದ ಟೆನಿಸ್‌ಗೆ ನೀಡಿದ ಕೊಡುಗೆ ಅಪಾರ. ಅವರಿಂದ ನಾನು ಹಲವು ವಿಚಾರ ಕಲಿತಿದ್ದೇನೆ. ಅವರ ಸ್ಥಾನ ತುಂಬುವುದು ಕಷ್ಟ. ಆದರೆ, ನನಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ. *ತಮಿಳುನಾಡಿನಲ್ಲಿ ಟೆನಿಸ್‌ ಆಟಗಾರರಿಗೆ ಪ್ರೋತ್ಸಾಹ ಹೇಗಿದೆ? ‌ತಮಿಳುನಾಡು ಟೆನಿಸ್‌ ಸಂಸ್ಥೆಯಿಂದ ಸಿಗುತ್ತಿರುವ ಪ್ರೋತ್ಸಾಹದಿಂದಾಗಿ ನಾನು ಈ ಹಂತಕ್ಕೇರಲು ಸಾಧ್ಯವಾಗಿದೆ. ಏಕೆಂದರೆ ವಿದೇಶಿ ಪ್ರವಾಸ ಕೈಗೊಂಡಾಗ ಪ್ರಾಯೋಜಕತ್ವ ಏರ್ಪಾಟು ಮಾಡು ವುದು ಸಂಸ್ಥೆ. ಆದರೆ, ಉದ್ಯಮಿಗಳು ಹಾಗೂ ಇನ್ನಿತರ ಸಂಸ್ಥೆಗಳಿಂದ ನೆರವು ಲಭಿಸುತ್ತಿಲ್ಲ. *ಯುವ ಆಟಗಾರರಿಂದ ಕೂಡಿರುವ ಭಾರತದ ಟೆನಿಸ್‌ನ ಭವಿಷ್ಯದ ಬಗ್ಗೆ ಹೇಳಿ? ಹೆಚ್ಚಿನ ಆಟಗಾರರು ಕಠಿಣ ಪ್ರಯತ್ನ ಹಾಕಿ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ, ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದೇ ಕಷ್ಟವಾಗಿದೆ. ವಿದೇಶಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಹೆಚ್ಚು ಆಡಿದರೆ ಮಾತ್ರ ಆಟದಲ್ಲಿ ಸುಧಾರಣೆ ಕಾಣಬಹುದು. ನಾನು ಈಗಾಗಲೇ ಒಂದೂವರೆ ವರ್ಷ ಬಾರ್ಸಿಲೋನದಲ್ಲಿ ತರಬೇತಿ ಪಡೆದಿದ್ದೇನೆ. ಹೆಚ್ಚಿನ ತರಬೇತಿಗಾಗಿ ಮತ್ತೆ ವಿದೇಶಕ್ಕೆ ಹೋಗುತಿದ್ದೇನೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.