‘ಹಿರಿಯ’ರ ಕ್ರಿಕೆಟ್‌ ಪ್ರೀತಿ... ನಿಮಗೆ ಇಂಗ್ಲೆಂಡ್‌ನ ವಿಲ್‌ಫ್ರೆಡ್‌ ರೋಡ್ಸ್‌ ಗೊತ್ತಿರಬಹುದು. ಹೆಚ್ಚು ವರ್ಷ ಕ್ರಿಕೆಟ್ ಆಡಿದ ಕೀರ್ತಿ ಅವರ ಹೆಸರಿನಲ್ಲಿದೆ. 1877ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ರೋಡ್ಸ್‌ ತಮ್ಮ 52ನೇ ವಯಸ್ಸಿನಲ್ಲಿ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಆಡಿದ್ದರು! ಬಲಗೈ ಬ್ಯಾಟ್ಸ್‌ಮನ್‌ ಹಾಗೂ ಎಡಗೈ ಬೌಲರ್‌ ಆಗಿದ್ದ ರೋಡ್ಸ್‌ ಉತ್ತಮ ದೈಹಿಕ ಸಾಮರ್ಥ್ಯ ಹೊಂದಿದ್ದರು. ಈಚೆಗೆ ಮುಗಿದ ಐಪಿಎಲ್‌ನಲ್ಲಿ ಯುವಕರನ್ನು ನಾಚಿಸುವಂತೆ ಸೊಗಸಾಗಿ ಬೌಲಿಂಗ್‌ ಮಾಡಿದ 43 ವರ್ಷದ ಪ್ರವೀಣ್‌ ತಾಂಬೆ ಆಟ ನೋಡಿದಾಗ ರೋಡ್ಸ್‌ ನೆನಪಾದರು. ರೋಡ್ಸ್‌ ಮಾತ್ರವಲ್ಲ ಆಸ್ಟ್ರೇಲಿಯಾದ ಬೆರ್ಟ್‌ ಐರನ್‌ ಮಂಗರ್‌ ಮತ್ತು ಇಂಗ್ಲೆಂಡ್‌ನ ಜಾರ್ಜ್‌ ಗೂನ್‌ ಕೂಡಾ 50ನೇ ವರ್ಷದಲ್ಲಿ ಅಂತರರಾಷ್ಟ್ರೀಯ ಪಂದ್ಯ ಆಡಿದ್ದರು. ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ‘ವಯಸ್ಸು ಎಂಬುದು ಒಂದು ಸಂಖ್ಯೆಯಷ್ಟೇ’ ಎಂದು ಹೇಳಿದ್ದು ಇದೇ ಕಾರಣಕ್ಕೆ ಇರಬೇಕು. ಇತ್ತೀಚಿನ ತಲೆಮಾರಿನ ಕ್ರಿಕೆಟಿಗರಲ್ಲಿ ಆಸ್ಟ್ರೇಲಿಯಾದ ಆ್ಯಡಮ್‌ ಗಿಲ್‌ಕ್ರಿಸ್ಟ್‌, ಶೇನ್‌ ವಾರ್ನ್‌, ಮೈಕಲ್‌ ಹಸ್ಸಿ, ಬ್ರಾಡ್‌ ಹಾಗ್‌, ಸ್ಪಿನ್‌ ಗಾರುಡಿಗ ಮುತ್ತಯ್ಯ ಮುರಳೀಧರನ್‌, ಪಾಕಿಸ್ತಾನದ ಅಜರ್‌ ಮಹಮೂದ್‌, ಎಡಗೈ ವೇಗಿ ಜಹೀರ್‌ ಖಾನ್‌ 40 ವರ್ಷದ ಆಸುಪಾಸಿನಲ್ಲಿದ್ದಾರೆ. ಕೆಲವರು 40ಕ್ಕಿಂತಲೂ ಹೆಚ್ಚು ವಯಸ್ಸಾದವರೂ ಇದ್ದಾರೆ. ವಿನು ಮಂಕಡ್‌, ಲಾಲಾ ಅಮರನಾಥ್‌, ಸಿ.ಕೆ. ನಾಯ್ಡು, ಸಚಿನ್‌ ತೆಂಡೂಲ್ಕರ್‌, ಸಿ. ರಾಮಸ್ವಾಮಿ, ವಿಜಯ್‌ ಮರ್ಚಂಟ್‌ ಅವರೆಲ್ಲಾ 40 ವರ್ಷದವರೆಗೂ ಕ್ರಿಕೆಟ್‌ ಆಡಿದ್ದಾರೆ. ಪ್ರವೀಣ್‌ ತಾಂಬೆ 43ನೇ ವಯಸ್ಸಿನಲ್ಲೂ ಕೌಂಟಿ ಆಡಲು ತೆರಳಿ ಇವರೆಲ್ಲರನ್ನೂ ಮೀರಿಸಿದ್ದಾರೆ. ಕೌಂಟಿ ಆಡುವುದು ಪ್ರತಿ ಕ್ರಿಕೆಟಿಗನಿಗೂ ಹೆಮ್ಮೆಯ ವಿಷಯವೇ. ಫಾರ್ಮ್‌ ಕಳೆದು ಕೊಂಡಾಗ ಅಥವಾ ತಂಡದಲ್ಲಿ ಸ್ಥಾನ ಸಿಗದೇ ಇದ್ದಾಗ ಕೌಂಟಿ ಆಡಿದ ಸಾಕಷ್ಟು ಉದಾಹರಣೆ ಗಳಿವೆ. ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್ ಸೌರಾಷ್ಟ್ರದ ಚೇತೇಶ್ವರ ಪೂಜಾರ, ಗೌತಮ್‌ ಗಂಭೀರ್‌, ವೀರೇಂದ್ರ ಸೆಹ್ವಾಗ್ ಅವರೂ ಕೌಂಟಿ ಆಡಿದ್ದಾರೆ. ಆದರೆ, 40 ವರ್ಷದ ಆಸುಪಾಸಿನಲ್ಲಿ ಬಹುತೇಕ ಕ್ರಿಕೆಟಿಗರು ಪ್ಯಾಡ್‌ ಬಿಚ್ಚಿಡಲು ಸಜ್ಜಾಗುತ್ತಾರೆ. ಆದರೆ, ಪ್ರವೀಣ್‌ ತಾಂಬೆ ಈ ವಯಸ್ಸಿನಲ್ಲೂ ಕೌಂಟಿ ಆಡುವ ಉತ್ಸಾಹ ತೋರಿರುವುದು ಹೆಮ್ಮೆಯೇ ಸರಿ. ಈ ಕಾರಣಕ್ಕಾಗಿಯೇ ತಾಂಬೆ ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ಎನಿಸುತ್ತಾರೆ. ಸದಾ ಆಡುತ್ತಲೇ ಇರಬೇಕು ಮತ್ತು ಪ್ರತಿದಿನವೂ ಹೊಸದನ್ನು ಕಲಿಯಬೇಕು ಎನ್ನುವ ಅವರ ತುಡಿತದ ಬಗ್ಗೆ ಖುಷಿಯಾಗುತ್ತದೆ. ಸ್ಪಿನ್ನರ್‌ ತಾಂಬೆ 28ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮುಂಬೈ ರಣಜಿ ತಂಡದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ, ಬೇಗನೆ ಅವರಿಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ‘ಆಡಲು ಯಾವ ದರ್ಜೆಯ ಪಂದ್ಯವಾದರೇನು’ ಎನ್ನುವ ದಿಟ್ಟ ಹಠ ಅವರದು. ಪ್ರವೀಣ್‌ ಮುಂಬೈನಲ್ಲಿ ಕ್ಲಬ್‌ ಮಟ್ಟದ ಟೂರ್ನಿಗಳನ್ನು ಆಡಿದ್ದಾರೆ. ಶಿವಾಜಿ ಪಾರ್ಕ್‌ ಜಿಮ್ಖಾನಾ ತಂಡದಲ್ಲೂ ಇದ್ದರು. ಡಿ.ವೈ. ಪಾಟೀಲ್‌ ಸ್ಪೋರ್ಟ್ಸ್‌ ಅಕಾಡೆಮಿಯ ‘ಬಿ’ ತಂಡಕ್ಕೆ ಅವರು ಈಗಲೂ ನಾಯಕ. ಕ್ರಿಕೆಟ್ ಬಗ್ಗೆ ಪ್ರವೀಣ್‌ ಹೊಂದಿರುವ ಪ್ರೀತಿಯನ್ನು ಕಂಡು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್‌ ಪಾಟೀಲ್‌ ಅಚ್ಚರಿಗೊಂಡಿದ್ದರು. ‘ನಿಜವಾದ ಕ್ರಿಕೆಟ್ ಪ್ರೀತಿಯನ್ನು ಪ್ರವೀಣ್‌ ಬಳಿ ಕಂಡೆ’ ಎಂದು ಸಂದೀಪ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಲವು ವರ್ಷಗಳ ಕಾಯುವಿಕೆಯ ನಂತರ ಎರಡು ವರ್ಷಗಳ ಹಿಂದೆ ಪ್ರಥಮ ದರ್ಜೆ ಕ್ರಿಕೆಟ್‌ ಆಡುವ ಅವಕಾಶ ಲಭಿಸಿತು. ಆಗ, ಅವರ ವಯಸ್ಸು 41! ಒಡಿಶಾ ಎದುರು ಅವರು ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ್ದರು. ಪ್ರವೀಣ್‌ಗೆ ದೊಡ್ಡ ಅವಕಾಶಗಳು ಲಭಿಸಿದ್ದು 40 ವರ್ಷ ದಾಟಿದ ಬಳಿಕವೇ. ಇವರಲ್ಲಿನ ಅಪೂರ್ವ ಪ್ರತಿಭೆ ಗುರುತಿಸಿದ ರಾಜಸ್ತಾನ ರಾಯಲ್ಸ್ ತಂಡದ ಸಲಹೆಗಾರ ದ್ರಾವಿಡ್ 2013ರಲ್ಲಿ ತಮ್ಮ ತಂಡದಲ್ಲಿ ಸ್ಥಾನ ನೀಡಿ ಸಾಕಷ್ಟು ಅವಕಾಶಗಳನ್ನು ಕೊಟ್ಟರು. ‘ದ್ರಾವಿಡ್‌ ಯಾವತ್ತೂ ನನ್ನ ವಯಸ್ಸನ್ನು ಕೇಳಲಿಲ್ಲ. ಆದ್ದರಿಂದಲೇ ಗುರುತಿಸಿಕೊಳ್ಳಲು ಸಾಧ್ಯವಾಯಿತು’ ಎಂದು ತಾಂಬೆ ಹಿಂದೊಮ್ಮೆ ಹೇಳಿದ್ದರು. 2004ರಲ್ಲಿ ತಾಂಬೆ ಡಿ.ವೈ. ಪಾಟೀಲ್‌ ಕ್ರೀಡಾಂಗಣದಲ್ಲಿ ಮ್ಯಾನೇಜರ್‌ ಕೂಡ ಆಗಿದ್ದರು. ಅಲ್ಲಿನ ಅಂಗಳದಲ್ಲಿ ಪಂದ್ಯ ನಡೆದಾಗ ಕ್ರಿಕೆಟ್ ತಾರೆಯರ ಹಸ್ತಾಕ್ಷರ ಪಡೆಯಲು ಮುಗಿಬೀಳುತ್ತಿದ್ದರು. ಕೆಲ ಆಟಗಾರರು ಹಸ್ತಾಕ್ಷರ ನೀಡಲು ನಿರಾಕರಿಸಿದಾಗ ಬೇಸರಕ್ಕೆ ಒಳಗಾಗುತ್ತಿದ್ದರು. ಮುಂದಿನ ಐದೇ ವರ್ಷಗಳಲ್ಲಿ ಅವರೇ ಬೇರೆಯವರಿಗೆ ಹಸ್ತಾಕ್ಷರ ಕೊಡುವಷ್ಟರ ಮಟ್ಟಕ್ಕೆ ಬೆಳೆದರು. 2013ರ ಚಾಂಪಿಯನ್ಸ್‌ ಲೀಗ್‌ ಟೂರ್ನಿಯಲ್ಲಿ ಹೆಚ್ಚು ವಿಕೆಟ್‌ ಪಡೆದ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದರು. ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಸಾಧನೆಯೂ ಮಾಡಿದರು. ‘ಚಾಂಪಿಯನ್ಸ್ ಲೀಗ್‌ನಲ್ಲಿ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದಾಗ ಮೂಲ ಬೆಲೆ ಹೆಚ್ಚಿಸಲು ಫ್ರಾಂಚೈಸ್‌ಗಳ ಮೇಲೆ ಒತ್ತಡ ಹೇರುವಂತೆ ಹಲವರು ಹೇಳಿದ್ದರು. ಆದರೆ, ನನಗೆ ಹಣಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡುವುದು ಮುಖ್ಯವಾಗಿತ್ತು’ ಎಂದು ಪ್ರವೀಣ್‌ ‘ಕ್ರಿಕೆಟ್‌ ಇನ್‌ಫೋ’ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಇದೇ ಕಾರಣಕ್ಕಾಗಿ ತಾಂಬೆ ಎಲ್ಲರಿಗೂ ಇಷ್ಟವಾಗು ತ್ತಾರೆ. ಯುವಕರಿಗೆ ಮಾರ್ಗದರ್ಶಕರು ಎನಿಸುತ್ತಾರೆ. ಆದ್ದರಿಂದ ಅವರ ಆಟ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ * ಪ್ರಥಮ ದರ್ಜೆಯಲ್ಲಿ ತಾಂಬೆ ಸಾಧನೆ ಪಂದ್ಯ 2, ಒಟ್ಟು ರನ್‌ 60, ಒಟ್ಟು ವಿಕೆಟ್ 2 ಟ್ವೆಂಟಿ–20ಯಲ್ಲಿ ಸಾಧನೆ ಪಂದ್ಯ39, ಒಟ್ಟು ರನ್‌ 981, ಒಟ್ಟು ವಿಕೆಟ್44 * 52ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಿದ್ದ ರೋಡ್ಸ್‌ ಬಗ್ಗೆ... ತಮ್ಮ 52ನೇ ವಯಸ್ಸಿನಲ್ಲಿ ಕ್ರಿಕೆಟ್‌ ಆಡಿದ್ದ ಇಂಗ್ಲೆಂಡ್‌ನ ವಿಲ್‌ಫ್ರೆಡ್‌ ರೋಡ್ಸ್‌್ 96 ವರ್ಷ ಬದುಕಿದ್ದರು. 1899ರಲ್ಲಿ ಆಸ್ಟ್ರೇಲಿಯಾ ಎದುರು ನಾಟಿಂಗ್‌ಹ್ಯಾಮ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. 1930ರಲ್ಲಿ ಕೊನೆಯ ಟೆಸ್ಟ್ ಆಡಿದ್ದರು. 58 ಟೆಸ್ಟ್‌ಗಳಿಂದ ಒಟ್ಟು 2325 ರನ್ ಗಳಿಸಿದ್ದರು. 1110 ಪ್ರಥಮ ದರ್ಜೆ ಪಂದ್ಯಗಳನ್ನೂ ಆಡಿದ್ದು, 39, 969 ರನ್‌ ಗಳಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇದೇ ಮಾದರಿಯಲ್ಲಿ 4204 ವಿಕೆಟ್‌ ಕಬಳಿಸಿದ್ದಾರೆ. 14 ಟೆಸ್ಟ್‌ಗಳನ್ನಷ್ಟೇ ಆಡಿರುವ ಆಸ್ಟ್ರೇಲಿಯಾದ ಬೆರ್ಟ್‌ ಐರನ್‌ ಮಂಗರ್‌ ಕೊನೆಯ ಟೆಸ್ಟ್‌ ಆಡಿದ್ದಾಗ 50 ವರ್ಷವಾಗಿತ್ತು. * ‘ವಯಸ್ಸು ಮುಖ್ಯವಲ್ಲ’ ‘ಫಿಟ್‌ನೆಸ್‌ ಮತ್ತು ಸ್ಥಿರತೆ ಕಾಪಾಡಿಕೊಂಡರೆ ಎಷ್ಟು ವರ್ಷ ಬೇಕಾದರೂ ಕ್ರಿಕೆಟ್ ಆಡಬಹುದು. ಈ ಕ್ರೀಡೆಗೆ ವಯಸ್ಸಿನ ನಿರ್ಬಂಧ ಇಲ್ಲ’ ಎಂದು ಕ್ರಿಕೆಟಿಗ ಸೈಯದ್‌ ಕಿರ್ಮಾನಿ ಅಭಿಪ್ರಾಯ ಪಟ್ಟಿದ್ದಾರೆ. ‘ಐಪಿಎಲ್‌ನಲ್ಲಿ ಪ್ರವೀಣ್‌ ತಾಂಬೆ ಬೌಲಿಂಗ್‌ ಶೈಲಿ ಗಮನಿಸಿದಾಗ ನನಗೆ ಇಎಎಸ್‌ ಪ್ರಸನ್ನ ಮತ್ತು ವೆಂಕಟರಾಘವನ್‌ ನೆನಪಾದರು. ಪ್ರಸನ್ನ ಕೊನೆಯ ಟೆಸ್ಟ್‌ ಆಡಿದ್ದಾಗ ಅವರಿಗೆ 38 ವರ್ಷವಾಗಿತ್ತು. ರಾಘವನ್‌ 38ನೇ ವರ್ಷದವರಾಗಿದ್ದಾಗ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಏಕೆಂದರೆ ಇವರು ಉತ್ತಮ ದೈಹಿಕ ಸಾಮರ್ಥ್ಯ ಉಳಿಸಿಕೊಂಡಿದ್ದರು’ ಎಂದು ಕಿರ್ಮಾನಿ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು. ಜೊತೆಗೆ, ಈಚೆಗಿನ ಸಂಗತಿಯೊಂದನ್ನು ಅವರು ಉದಾಹರಣೆಯನ್ನಾಗಿ ನೀಡಿದರು. ‘ಆಫ್‌ ಸ್ಪಿನ್ನರ್ ಹರಭಜನ್‌ ಸಿಂಗ್‌ ನಾಲ್ಕು ವರ್ಷಗಳಿಂದ ಒಂದೂ ಏಕದಿನ ಪಂದ್ಯ ಆಡಿಲ್ಲ. ಆದರೆ, ಅವರು ಸತತವಾಗಿ ಉತ್ತಮ ಸಾಮರ್ಥ್ಯ ನೀಡಿ ಸ್ಥಿರತೆ ಉಳಿಸಿಕೊಂಡಿದ್ದರು. ಆದ್ದರಿಂದಲೇ ಬಾಂಗ್ಲದೇಶ ಎದುರಿನ ಸರಣಿಗೆ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿದೆ. ತಾಂಬೆ ಕೂಡಾ ಇನ್ನಷ್ಟು ವರ್ಷ ಕ್ರಿಕೆಟ್‌ ಆಡಬಲ್ಲರು’ ಎಂದು ಅವರು ನುಡಿದರು. ವಿಕೆಟ್‌ ಕೀಪರ್‌ ಕಿರ್ಮಾನಿ ಕೂಡಾ ತಮ್ಮ 45ನೇ ವರ್ಷದಲ್ಲಿ ಕೊನೆಯ ಪ್ರಥಮ ದರ್ಜೆ ಪಂದ್ಯವಾಡಿದ್ದರು! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.