ಬಿಎಫ್‌ಸಿ ಯಶಸ್ಸಿನ ಹೆಜ್ಜೆ ಐ–ಲೀಗ್‌ ಚಾಂಪಿಯನ್‌ ಬೆಂಗಳೂರು ಫುಟ್‌ಬಾಲ್‌ ಕ್ಲಬ್ ತಂಡ ಮತ್ತೊಂದು ಸಾಧನೆಯತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಎಎಫ್‌ಸಿ ಕಪ್‌ ಟೂರ್ನಿಯ ನಾಕೌಟ್‌ ಹಂತಕ್ಕೆ ಅರ್ಹತೆ ಪಡೆದಿರುವ ಈ ತಂಡ ಭಾರತದ ಫುಟ್‌ಬಾಲ್‌ ಪ್ರೇಮಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಹೋದ ಋತುವಿನ ಐ–ಲೀಗ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಬಿಎಫ್‌ಸಿ ಇದೀಗ ಏಷ್ಯಾ ಮಟ್ಟದಲ್ಲೂ ತನ್ನ ಛಾಪು ಮೂಡಿಸಲು ಪ್ರಯತ್ನಿಸುತ್ತಿದೆ. ಈ ಬಾರಿಯ ಎಎಫ್‌ಸಿ ಕಪ್‌ನಲ್ಲಿ ಆಡಲು ಭಾರತದಿಂದ ಬಿಎಫ್‌ಸಿ ಮತ್ತು ಈಸ್ಟ್‌ ಬೆಂಗಾಲ್‌ ತಂಡಗಳಿಗೆ ಅವಕಾಶ ಲಭಿಸಿದ್ದವು. ಬಿಎಫ್‌ಸಿ ಐ–ಲೀಗ್‌ನಲ್ಲಿ ಚಾಂಪಿಯನ್‌ ಆಗುವ ಮೂಲಕ ಈ ಟೂರ್ನಿಗೆ ಅರ್ಹತೆ ಗಿಟ್ಟಿಸಿತ್ತು. 2013-14 ಫೆಡರೇಷನ್‌ ಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಚರ್ಚಿಲ್‌ ಬ್ರದರ್ಸ್‌ ಹಿಂದೆ ಸರಿದ ಕಾರಣ ಈಸ್ಟ್‌ ಬೆಂಗಾಲ್‌ ತಂಡಕ್ಕೆ ಅವಕಾಶ ದೊರೆತಿತ್ತು. ಸುನಿಲ್‌ ಚೆಟ್ರಿ ನೇತೃತ್ವದ ಬಿಎಫ್‌ಸಿ ಈ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ಯಶ ಕಂಡಿದೆ. ಆದರೆ ಈಸ್ಟ್ ಬೆಂಗಾಲ್‌ ತಂಡ ಗುಂಪು ಹಂತವನ್ನು ದಾಟಲು ವಿಫಲವಾಗಿದೆ. ‘ಇ’ ಗುಂಪಿನಲ್ಲಿದ್ದ ಬಿಎಫ್‌ಸಿ ಆಡಿದ ಮೊದಲ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಇಂಡೊನೇಷ್ಯಾದ ಪೆರ್ಸಿಪುರ ಜಯಪುರ, ಮಾಲ್ಡೀವ್ಸ್‌ನ ಮಜಿಯಾ ಮತ್ತು ಸಿಂಗಪುರದ ವಾರಿಯರ್ಸ್‌ ತಂಡಗಳು ಇದೇ ಗುಂಪಿನಲ್ಲಿದ್ದವು. ಆ್ಯಶ್ಲೆ ವೆಸ್ಟ್‌ವುಡ್‌ ಗರಡಿ ಯಲ್ಲಿ ಪಳಗಿರುವ ಬಿಎಫ್‌ಸಿಗೆ ನಾಕೌಟ್‌ ಹಂತದಲ್ಲಿ ಪ್ರಬಲ ಸವಾಲು ಎದುರಾಗುವುದು ಖಚಿತ. ಅದನ್ನು ಮೆಟ್ಟಿ ನಿಲ್ಲುವುದೇ ಎಂಬುದನ್ನು ನೋಡಬೇಕು. ಈ ತಂಡದವರು ಅತ್ಯುತ್ತಮ ಫಾರ್ಮ್‌ನಲ್ಲಿರುವ ಕಾರಣ ಅಚ್ಚರಿ ನಿರೀಕ್ಷಿಸಬಹುದು. ಭಾರತಕ್ಕೆ ಬಾರದ ಪ್ರಶಸ್ತಿ: ಭಾರತದ ಹಲವು ಕ್ಲಬ್‌ಗಳು ಎಎಫ್‌ಸಿ ಕಪ್‌ನಲ್ಲಿ ಆಡಿವೆ. ಆದರೆ ಯಾವುದೇ ತಂಡ ಇದುವರೆಗೆ ಪ್ರಶಸ್ತಿ ಜಯಿಸಿಲ್ಲ. ಡೆಂಪೊ ಮತ್ತು ಈಸ್ಟ್‌ ಬೆಂಗಾಲ್‌ ಸೆಮಿಫೈನಲ್‌ವರೆಗೆ ತಲುಪಿದ್ದು ಭಾರತದ ತಂಡದ ಈವರೆಗಿನ ಉತ್ತಮ ಸಾಧನೆ ಎನಿಸಿದೆ. 2008ರ ಟೂರ್ನಿಯಲ್ಲಿ ಸೆಮಿ ಪ್ರವೇಶಿಸಿದ್ದ ಡೆಂಪೊ ತಂಡ ಲೆಬನಾನ್‌ನ ಸಫಾ ಕ್ಲಬ್‌ ಎದುರು ಸೋತಿತ್ತು. ಈಸ್ಟ್‌ ಬೆಂಗಾಲ್‌ 2013 ರ ಟೂರ್ನಿಯ ನಾಲ್ಕರಘಟ್ಟದ ಪಂದ್ಯದಲ್ಲಿ ‘ಅಲ್‌ ಕುವೈಟ್‌’ ತಂಡದ ಕೈಯಲ್ಲಿ ಪರಾಭವಗೊಂಡಿತ್ತು. ಈಸ್ಟ್‌ ಬೆಂಗಾಲ್‌ 2004 ರಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ದ್ದರೆ, ಮಹೀಂದ್ರಾ 2007 ರಲ್ಲಿ ಇಂತಹದೇ ಸಾಧನೆ ಮಾಡಿತ್ತು. ಕುವೈತ್‌ ಕ್ಲಬ್‌ಗಳ ಪ್ರಾಬಲ್ಯ: ಎಎಫ್‌ಸಿ ಕಪ್‌ನಲ್ಲಿ ಅರಬ್‌ ರಾಷ್ಟ್ರಗಳ ಕ್ಲಬ್‌ಗಳು ಹೆಚ್ಚಿನ ಯಶಸ್ಸು ಸಾಧಿಸಿವೆ. ಅದರಲ್ಲೂ ಕುವೈತ್‌ ದೇಶದ ಕ್ಲಬ್‌ಗಳು ಪ್ರಾಬಲ್ಯ ಮೆರೆದಿವೆ. ‘ಅಲ್‌ ಕುವೈತ್‌’ ಕ್ಲಬ್‌ ಮೂರು ಸಲ ಚಾಂಪಿಯನ್‌ ಆಗಿದೆ. ಈ ದೇಶದ ಇನ್ನೊಂದು ಕ್ಲಬ್‌ ‘ಅಲ್‌ ಖಾದ್ಸಿಯಾ’ ಹೋದ ಋತುವಿನಲ್ಲಿ ಕಿರೀಟ ಮುಡಿಗೇರಿಸಿಕೊಂಡಿತ್ತು. ಇವೆರಡು ತಂಡಗಳು ಈ ಬಾರಿಯೂ ನಿರೀಕ್ಷೆಯಂತೆಯೇ ನಾಕೌಟ್‌ ಹಂತ ಪ್ರವೇಶಿಸಿವೆ. ಉಳಿದಂತೆ ಜೋರ್ಡಾನ್‌ ಮತ್ತು ಲೆಬನಾನ್‌ನ ಕ್ಲಬ್‌ಗಳೂ ಉತ್ತಮವಾಗಿ ಆಡುತ್ತಿವೆ. ಬಿಎಫ್‌ಸಿಯ ಪ್ರಶಸ್ತಿಯ ಹಾದಿಯಲ್ಲಿ ಈ ತಂಡಗಳು ದೊಡ್ಡ ತಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ. * ಏನಿದು ಎಎಫ್‌ಸಿ ಕಪ್‌ ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್ ಆಯೋಜಿಸುವ ಟೂರ್ನಿ ಇದು. ಇದನ್ನು ಏಷ್ಯಾದ ಎರಡನೇ ಡಿವಿಷನ್‌ ಕ್ಲಬ್‌ಗಳ ಫುಟ್‌ಬಾಲ್‌ ಟೂರ್ನಿ ಎನ್ನುವರು. ಇದೀಗ 12ನೇ ವರ್ಷದ ಟೂರ್ನಿ ನಡೆಯುತ್ತಿದೆ. ಎಎಫ್‌ಸಿ ರ‍್ಯಾಕಿಂಗ್‌ ಪಟ್ಟಿಯಲ್ಲಿ 14 ಸ್ಥಾನಗಳಿಗಿಂತ ಕೆಳಗಿನ ಕ್ರಮಾಂಕದಲ್ಲಿರುವ ದೇಶಗಳ ಕ್ಲಬ್‌ಗಳು ಈ ಟೂರ್ನಿಯಲ್ಲಿ ಆಡುತ್ತವೆ. ಅಗ್ರ 14 ಸ್ಥಾನಗಳಲ್ಲಿರುವ ದೇಶಗಳ ಕ್ಲಬ್‌ಗಳಿಗಾಗಿ ‘ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌’ ಎಂಬ ಮತ್ತೊಂದು ಟೂರ್ನಿಯನ್ನು ನಡೆಸಲಾಗುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.