ಭಾರತ– ಬಾಂಗ್ಲಾ ಕುತೂಹಲದ ಸರಣಿ ‘ನಮಗೀಗ ವಿಶ್ವದ ಯಾವುದೇ ತಂಡವನ್ನಾದರೂ ಮಣಿಸುವ ಸಾಮರ್ಥ್ಯವಿದೆ’. ಹೋದ ತಿಂಗಳು ಪಾಕಿಸ್ತಾನ ಎದುರಿನ ಏಕದಿನ ಸರಣಿ ಗೆದ್ದಾಗ ಬಾಂಗ್ಲಾದೇಶದ ತಮೀಮ್ ಇಕ್ಬಾಲ್‌ ಹೀಗೆ ಭಾರಿ ಉತ್ಸಾಹದಿಂದ ಹೇಳಿದ್ದರು. ಒಂದು ಬಾರಿ ಏಕದಿನ ವಿಶ್ವಕಪ್ ಗೆದ್ದಿರುವ ಪಾಕ್ ಎದುರಿನ ಸರಣಿ ಜಯ ‘ಬಾಂಗ್ಲಾ ಹುಲಿ’ಗಳಲ್ಲಿ ಹೊಸಚೈತನ್ಯ ಮೂಡಿಸಿದೆ. ಇದೇ ಉತ್ಸಾಹದಿಂದ ಬಾಂಗ್ಲಾ ತಂಡ ಈಗ ವಿಶ್ವ ಏಕದಿನ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಹೊಂದಿರುವ ಭಾರತದ ಸವಾಲನ್ನು ಎದುರಿಸಲು ಸಜ್ಜಾಗುತ್ತಿದೆ. ಒಂದು ಟೆಸ್ಟ್‌ ಮತ್ತು ಮೂರು ಪಂದ್ಯಗಳ ಏಕದಿನ ಸರಣಿ ಆಡಲು ಭಾರತ ತಂಡ ಮುಂದಿನ ತಿಂಗಳು ಬಾಂಗ್ಲಾಕ್ಕೆ ತೆರಳಲಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಜಂಟಿ ಆತಿಥ್ಯದಲ್ಲಿ ಜರುಗಿದ ಹನ್ನೊಂದನೇ ಏಕದಿನ ವಿಶ್ವಕಪ್‌ ವೇಳೆ ನಡೆದ ಘಟನೆಯ ಬಳಿಕವೂ ಬಿಸಿಸಿಐ ಭಾರತ ತಂಡವನ್ನು ಬಾಂಗ್ಲಾಕ್ಕೆ ಕಳುಹಿಸಲು ಒಪ್ಪಿದ್ದು ಅಚ್ಚರಿಗೆ ಕಾರಣವಾಗಿದೆ. ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ತಂಡಕ್ಕೆ ಪ್ರತಿ ಬಾರಿಯೂ ಐಸಿಸಿ ಅಧ್ಯಕ್ಷರೇ ಟ್ರೋಫಿ ನೀಡುತ್ತಾರೆ. ಆದರೆ, ಈ ಬಾರಿ ಶಿಷ್ಟಾಚಾರವನ್ನು ಮುರಿದ ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ಐಸಿಸಿ ಮುಖ್ಯಸ್ಥ ಎನ್‌. ಶ್ರೀನಿವಾಸನ್‌ ಟ್ರೋಫಿ ಪ್ರದಾನ ಮಾಡಿದ್ದರು. ಇದರಿಂದ ಐಸಿಸಿ ಅಧ್ಯಕ್ಷ ಬಾಂಗ್ಲಾದೇಶದ ಮುಸ್ತಫಾ ಕಮಲ್‌ ಬೇಸರಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಮಾಜಿ ಅಧ್ಯಕ್ಷರೂ ಆದ ಮುಸ್ತಫಾ ಮತ್ತು ಶ್ರೀನಿವಾಸನ್‌ ನಡುವಿನ ಆಂತರಿಕ ಕಚ್ಚಾಟ ಈಗ ಗುಟ್ಟಾಗಿ ಉಳಿದಿಲ್ಲ. ಐಸಿಸಿಯಲ್ಲಿ ಬಿಸಿಸಿಐ ಮಾತನ್ನು ತೆಗೆದು ಹಾಕುವ ಧೈರ್ಯ ಯಾವ ಕ್ರಿಕೆಟ್‌ ಮಂಡಳಿಗಳಿಗೂ ಇಲ್ಲ. ಒಂದು ವೇಳೆ ಯಾವುದಾದರೂ ದೊಡ್ಡ ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳದೇ ಹೋದರೆ ಆ ಟೂರ್ನಿ ನಡೆದದ್ದೇ ಗೊತ್ತಾಗುವುದಿಲ್ಲ. ಇದಕ್ಕೆ ಐಪಿಎಲ್‌ಗಿಂತ ಇನ್ನೊಂದು ಉದಾಹರಣೆ ಬೇಕಿಲ್ಲ. ಬಾಂಗ್ಲಾದೇಶ, ಕೆರಿಬಿಯನ್, ಶ್ರೀಲಂಕಾ ಹೀಗೆ ವಿವಿಧ ದೇಶಗಳಲ್ಲಿ ಐಪಿಎಲ್ ಮಾದರಿಯಲ್ಲಿಯೇ ಲೀಗ್‌ಗಳು ಪ್ರತಿ ವರ್ಷವೂ ನಡೆಯುತ್ತವೆ. ಆ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಭಾರತದ ಆಟಗಾರರಿಗೆ ಬಿಸಿಸಿಐ ಅನುಮತಿಯೇ ನೀಡುವುದಿಲ್ಲ. ಒಂದು ವೇಳೆ ಅವಕಾಶ ಕೊಟ್ಟರೆ ಐಪಿಎಲ್‌ ನೆಲಕಚ್ಚಬಹುದು ಎನ್ನುವ ಆತಂಕ ಕ್ರಿಕೆಟ್‌ ಜಗತ್ತಿನ ದೊಡ್ಡಣ್ಣನದ್ದು. ಆದ್ದರಿಂದಲೇ ಐಪಿಎಲ್‌ಗೆ ಈಗಲೂ ಭಾರಿ ಬೇಡಿಕೆ. ವಿದೇಶಗಳಲ್ಲಿಯೂ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಈ ಕಾರಣಕ್ಕಾಗಿಯೇ ಐಪಿಎಲ್‌ ಟೂರ್ನಿ ‘ಮಿಲಿಯನ್‌ ಡಾಲರ್‌ ಬೇಬಿ’ ಎನಿಸಿಕೊಂಡಿದೆ. ಆದರೆ, ಬೇರೆ ದೇಶಗಳಲ್ಲಿಯೂ ಪ್ರೀಮಿಯರ್‌ ಲೀಗ್‌ಗಳು ನಡೆಯುತ್ತವೆ ಎಂಬುದು ಅದೆಷ್ಟು ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತು? ಮುಸ್ತಫಾ ರಾಜೀನಾಮೆ ಕೊಟ್ಟಿದ್ದು ಒಂದು ರೀತಿಯಲ್ಲಿ ಶ್ರೀನಿವಾಸನ್‌ ಖುಷಿಗೂ ಕಾರಣವಾಗಿದೆ. ಏಕೆಂದರೆ, ಐಸಿಸಿ ಸಭೆಗಳಲ್ಲಿ ಶ್ರೀನಿವಾಸನ್‌ ನಿರ್ಧಾರಗಳನ್ನು ಪ್ರಶ್ನಿಸುವ ಧೈರ್ಯ ತೋರುವವರು ಬೆರಳೆಣಿಕೆಯ ಸದಸ್ಯರಷ್ಟೇ. ಅದರಲ್ಲಿ ಮುಸ್ತಫಾ ಕೂಡಾ ಒಬ್ಬರು. ಇಷ್ಟೆಲ್ಲಾ ಮುಸುಕಿನ ಗುದ್ದಾಟಗಳಿದ್ದರೂ ಭಾರತ ತಂಡವನ್ನು ಬಾಂಗ್ಲಾಕ್ಕೆ ಕಳುಹಿಸಲು ಒಪ್ಪಿಕೊಂಡಿದ್ದು ಅಚ್ಚರಿಯೇ ಸರಿ. ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಗೆ ಭಾರತ ತಮ್ಮ ದೇಶಕ್ಕೆ ಬರುತ್ತಿರುವುದೇ ಹೆಮ್ಮೆ ಎನಿಸುತ್ತಿದೆ. ಇದರ ಹಿಂದೆ ಆರ್ಥಿಕ ಲೆಕ್ಕಾಚಾರವೂ ಇದೆ. ಬಾಂಗ್ಲಾ ಮಂಡಳಿ ಆರ್ಥಿಕವಾಗಿ ಬಲಿಷ್ಠವಾಗಿಲ್ಲ. ವಿಶ್ವದ ಯಾವುದೇ ಮೂಲೆಯಲ್ಲಿ ಭಾರತ ಸರಣಿ ಆಡಿದರೂ ಟಿವಿ ಜಾಹೀರಾತುಗಳು, ಪ್ರಾಯೋಜಕರು ಸಾಲುಗಟ್ಟಿ ಬರುತ್ತಾರೆ. ಇದರಲ್ಲಿ ಬಾಂಗ್ಲಾಕ್ಕೂ ಪಾಲು ಹೋಗುತ್ತದೆ. ಈ ಅವಕಾಶವನ್ನು ಕಳೆದುಕೊಳ್ಳಲು ಯಾರು ತಾನೆ ಇಷ್ಟಪಡುತ್ತಾರೆ? ಈಗ ಆಟದ ವಿಷಯಕ್ಕೆ ಬರೋಣ. ಬಾಂಗ್ಲಾ ತಂಡದ ಟೆಸ್ಟ್ ಇತಿಹಾಸ ಆರಂಭವಾಗುವುದೇ ಭಾರತದ ಮೂಲಕ. ಬಾಂಗ್ಲಾ 2000ರಲ್ಲಿ ಚೊಚ್ಚಲ ಟೆಸ್ಟ್‌ ಆಡಿದ್ದು ಭಾರತದ ವಿರುದ್ಧವೇ. ಈ ಮಾದರಿಯಲ್ಲಿ ಬಾಂಗ್ಲಾ ದೊಡ್ಡ ಸಾಧನೆಯನ್ನೇನು ಮಾಡಿಲ್ಲ. ಇಲ್ಲಿಯವರೆಗೆ 89 ಟೆಸ್ಟ್ ಆಡಿದೆ. ಗೆದ್ದಿದ್ದು ಏಳರಲ್ಲಿ ಮಾತ್ರ. ಬಾಂಗ್ಲಾ ತಂಡ ಭಾರತದ ಎದುರು ಒಟ್ಟು ಏಳು ಟೆಸ್ಟ್ ಆಡಿದ್ದು ಆರರಲ್ಲಿ ಸೋಲು ಕಂಡಿದೆ. ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದೇ ದೊಡ್ಡ ಸಾಧನೆ. ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಾಗ ಬಾಂಗ್ಲಾ ಅಂತರರಾಷ್ಟ್ರೀಯ ಕ್ರಿಕೆಟ್‌ ಹತ್ತಿರವೂ ಸುಳಿದಿರಲಿಲ್ಲ. ಆದರೂ, ಭಾರತದ ಆಟಗಾರರು ಈ ಸರಣಿಯನ್ನು ಲಘುವಾಗಿ ಪರಿಗಣಿಸಿಲ್ಲ. ಏಕೆಂದರೆ ಬಾಂಗ್ಲಾ ಈಗ ಮೊದಲಿನಷ್ಟು ದುರ್ಬಲವಲ್ಲ. ಪಾಕ್‌ ಎದುರಿನ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ್ದು ಮತ್ತು ವಿಶ್ವಕಪ್‌ನಲ್ಲಿ ಮೊದಲ ಸಲ ಕ್ವಾರ್ಟರ್‌ ಫೈನಲ್‌ ತಲುಪಿದ್ದು ಇದಕ್ಕೆ ಸಾಕ್ಷಿ. 2004, 2007 ಮತ್ತು 2012ರಲ್ಲಿ ಮಾತ್ರ ಬಾಂಗ್ಲಾ ತಂಡ ಭಾರತದ ಎದುರು ಏಕದಿನ ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಉಳಿದ 25 ಪಂದ್ಯಗಳಲ್ಲಿ ಭಾರತವೇ ವಿಜೃಂಭಿಸಿದೆ. ಈ ಬಾರಿಯ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋಲು ಕಂಡ ಬಳಿಕ ಭಾರತದ ಆಟಗಾರರು ಐಪಿಎಲ್‌ನಲ್ಲಿ ತಲ್ಲೀನರಾಗಿದ್ದಾರೆ. ಮೇ ಅಂತ್ಯದ ವೇಳೆಗೆ ಚುಟುಕು ಕ್ರಿಕೆಟ್‌ ಮುಗಿಯಲಿದೆ. ಆ ನಂತರ ಬಾಂಗ್ಲಾಕ್ಕೆ ತೆರಳಲಿದ್ದಾರೆ. ನಿರಂತರ ಟೂರ್ನಿಗಳಿಂದಾಗಿ ಕೆಲ ಹಿರಿಯ ಆಟಗಾರರಿಗೂ ಸಾಕು ಸಾಕಾಗಿದೆ. ಆದ್ದರಿಂದ ಮಹೇಂದ್ರ ಸಿಂಗ್‌ ದೋನಿ ಸೇರಿದಂತೆ ಕೆಲವರು ಬಾಂಗ್ಲಾ ಸರಣಿಯಿಂದ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಒಂದು ವೇಳೆ ದೋನಿ ವಿಶ್ರಾಂತಿ ಪಡೆದರೆ, ಟೆಸ್ಟ್‌ ಮತ್ತು ಏಕದಿನ ಎರಡೂ ಮಾದರಿಯ ನಾಯಕತ್ವ ಜವಾಬ್ದಾರಿ ವಿರಾಟ್‌ ಕೊಹ್ಲಿ ಹೆಗಲಿಗೆ ಬೀಳಲಿದೆ. ದಿನೇಶ್ ಕಾರ್ತಿಕ್‌, ವೃದ್ಧಿಮಾನ್‌ ಸಹಾ ಹಾಗೂ ಕರ್ನಾಟಕದ ರಾಬಿನ್‌ ಉತ್ತಪ್ಪ ಅವರಿಗೆ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ಲಭಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಎದುರು ಆಡಲು ಬಾಂಗ್ಲಾ ಆಟಗಾರರು ಭಾರಿ ಉತ್ಸುಕರಾಗಿದ್ದಾರೆ. ಶ್ರೇಷ್ಠ ಸಾಮರ್ಥ್ಯ ನೀಡುತ್ತಿರುವ ತಮೀಮ್ ಇಕ್ಬಾಲ್‌, ಮುಷ್ಫೀಕರ್‌ ರಹೀಮ್‌, ಸೌಮ್ಯ ಸರ್ಕಾರ್‌, ಶಕೀಬ್‌ ಅಲ್ ಹಸನ್, ತೈಜುಲ್‌ ಇಸ್ಲಾಮ್‌, ಮಹಮ್ಮದ್ ಶಾಹಿದ್ ಅವರಂಥ ಪ್ರತಿಭಾನ್ವಿತ ಆಟಗಾರರು ಬಾಂಗ್ಲಾ ತಂಡದಲ್ಲಿದ್ದಾರೆ. ಭಾರತದ ಎದುರಿನ ಸರಣಿ ಬಾಂಗ್ಲಾಕ್ಕೆ ದೊಡ್ಡ ಸವಾಲು ಎನಿಸಿದೆ. ಏಕೆಂದರೆ ಈ ತಂಡ ಹಿಂದೆ ಟೆಸ್ಟ್‌ನಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ. ಕಳಪೆ ಆಟ ಹೀಗೆಯೇ ಮುಂದುವರಿದರೆ ಐಸಿಸಿಯಿಂದ ಟೆಸ್ಟ್‌ ಆಡುವ ಮಾನ್ಯತೆ ಕಳೆದುಕೊಳ್ಳುವ ಸಂಕಷ್ಟಕ್ಕೆ ಸಿಲುಕಬಹುದು. ಅಷ್ಟೇ ಅಲ್ಲದೇ ಹೊಸ ಸಹ ಸದಸ್ಯ ರಾಷ್ಟ್ರಗಳಿಗೆ ಟೆಸ್ಟ್ ಸ್ಥಾನಮಾನ ನೀಡಲು ಐಸಿಸಿ ಅಂತರ ಖಂಡ ಕ್ರಿಕೆಟ್‌ ಕಪ್‌ ಸರಣಿ ಆಯೋಜಿಸಿದೆ. ಆಫ್ಘಾನಿಸ್ತಾನ, ಹಾಂಕಾಂಗ್‌, ಹಾಲೆಂಡ್‌, ಐರ್ಲೆಂಡ್‌, ನಮೀಬಿಯಾ, ಯುಎಇ ಮತ್ತು ಪಪುವಾ ನ್ಯೂಗಿನಿ ಈ ಸರಣಿಯಲ್ಲಿ ಆಡಲಿವೆ. ಆದ್ದರಿಂದ ಭಾರತದ ಎದುರಿನ ‘ಟೆಸ್ಟ್‌್’ ಬಾಂಗ್ಲಾ ಪಾಲಿಗೆ ಅವಕಾಶವೂ ಹೌದು, ಅಗ್ನಿಪರೀಕ್ಷೆಯೂ ಹೌದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.