ರ‍್ಯಾಲಿಯಲ್ಲಿ ವೇಗದ ದಾರಿಯ ವೈಶಿಷ್ಟ್ಯಗಳು ಬೆಂಗಳೂರಿನ ರಾಜಶೇಖರ್ ಗೌಡರು ತಮ್ಮ ಮಗಳು ಎಂಜಿನಿಯರ್ ಅಥವಾ ಡಾಕ್ಟರ್ ಅಗಬೇಕು ಎಂಬ ಕನಸನ್ನು ಯಾವತ್ತೂ ಕಾಣಲಿಲ್ಲ. ಆದರೆ, ತಮ್ಮ ಪುತ್ರಿ ದೊಡ್ಡ ಕಾರ್‌ ರೇಸ್ ಡ್ರೈವರ್ ಆಗಬೇಕೆಂದು ಕಂಡ ಕನಸಿನ ಹಾದಿಯ ಬಹುತೇಕ ಭಾಗವನ್ನು ನನಸು ಮಾಡಿಕೊಂಡಿದ್ದಾರೆ. ತಮ್ಮ ಮಗಳು ಹರ್ಷಿತಾ ಗೌಡ ಅವರನ್ನು ದೇಶದ ಕೆಲವೇ ಕೆಲವು ಮಹಿಳಾ ರೇಸ್ ಡ್ರೈವರ್‌ಗಳಲ್ಲಿ ಒಬ್ಬರನ್ನಾಗಿ ರೂಪಿಸಿದ್ದಾರೆ. ಅಷ್ಟೇ ಅಲ್ಲ. ಹರ್ಷಿತಾ ಭಾಗವಹಿಸುವ ಪ್ರತಿಯೊಂದು ಸ್ಪರ್ಧೆಯಲ್ಲಿ ಸಹ ಚಾಲಕರಾಗಿ ಪಕ್ಕದಲ್ಲಿಯೇ ಇರುತ್ತಾರೆ. ಆಗಸ್ಟ್‌ 3 ರಿಂದ 8ರವರೆಗೆ ಬೆಂಗಳೂರಿನಿಂದ ಹೈದರಾಬಾದ್‌ವರೆಗೆ ನಡೆದ 7ನೇ ಮಾರುತಿ ಸುಜುಕಿ ದಕ್ಷಿಣ್ ಡೇರ್ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಅಪ್ಪ–ಮಗಳ ಜೋಡಿಯು ಗಮನ ಸೆಳೆಯಿತು. ಚಿತ್ರದುರ್ಗ, ಗದಗ, ಬಳ್ಳಾರಿ ಜಿಲ್ಲೆಗಳ ಗುಡ್ಡಗಳ ಅಪಾಯಕಾರಿ ಹಾದಿಗಳಲ್ಲಿ 21 ವರ್ಷದ ಹರ್ಷಿತಾ ಕಾರು ಓಡಿಸಿದ ಪರಿಗೆ ಉತ್ತರ ಭಾರತದ ಅಗ್ರಗಣ್ಯ ಚಾಲಕರೂ ನಿಬ್ಬೆರಗಾದರು.ಕಳೆದ ಒಂದು ವಾರ ನಡೆದ ಈ ರ್‍್ಯಾಲಿಯಲ್ಲಿ ಇಂತಹ ಅಚ್ಚರಿ ಮೂಡಿಸುವ ಛಲದ ಕತೆಗಳು ಹಲವಾರಿದ್ದವು. ಬಿದ್ದು ಎದ್ದವರು: ರಭಸದ ಗಾಳಿ ಬೀಸುವ (ಪವನ ಯಂತ್ರದ ಟನ್‌ಗಟ್ಟಲೇ ತೂಕದ ಪಂಖಗಳು ಗಿರಗಿರನೆ ತಿರುಗಿಸುವ ಗಾಳಿ) ಕಪ್ಪತಗುಡ್ಡದ ನೆತ್ತಿಯ ಮೇಲೆ ಕಲ್ಲು ಮುಳ್ಳು ತುಂಬಿರುವ ರಸ್ತೆಗಳಲ್ಲಿ ನಡೆದಾಡುವುದೇ ಕಷ್ಟ. ಅಂತದ್ದರಲ್ಲಿ ದೆಹಲಿಯ ಅನು ರಾಣಾ ನೂರು ಕಿಲೋಮೀಟರ್ ವೇಗದಲ್ಲಿ ಚಾಲನೆ ಮಾಡುತ್ತಿದ್ದ ಜಿಪ್ಸಿ ವಾಹನ ಪಲ್ಟಿ ಹೊಡೆದಿತ್ತು. ಅವರಿಗೆ ಒಂದಿಷ್ಟು ಸಣ್ಣಪುಟ್ಟ ಗಾಯಗಳಾದವು. ಆದರೆ, ಅವರ ಸಹ ಚಾಲಕ, ನೇವಿಗೇಟರ್ ರೆಹಾನ್ ಭಾರದ್ವಾಜ್ ಎಡಗೈ ಮೂಳೆ ಮುರಿದು ಯಮಯಾತನೆ ನೀಡುತ್ತಿತ್ತು. ಆದರೆ, ಅಲ್ಲಿದ್ದ ಸುರಕ್ಷತಾ ದಳ ಮತ್ತು ವೈದ್ಯರ ತಂಡವು ಗಾಡಿಯನ್ನು ಎತ್ತಿಕೊಟ್ಟಿದ್ದೇ ತಡ, ತಮ್ಮ ಗಾಯಗಳನ್ನು ಮರೆತು ಗುರಿಯತ್ತ ವಾಹನ ನುಗ್ಗಿಸಿದರು. ನಂತರದ ಮೂರು ದಿನದ ಸ್ಪರ್ಧೆಯಲ್ಲಿಯೂ ಭಾಗವಹಿಸಿದರು. ‘ಅಕ್ಟೋಬರ್‌ನಲ್ಲಿ ರೆಡ್‌ ಹಿಮಾಲಯ ರೇಸ್ ಇದೆ. ಅದರಲ್ಲಿ ಭಾಗವಹಿಸುತ್ತೇನೆ. ಇಲ್ಲಿಯ ರೇಸ್ ಒಳ್ಳೆಯ ಅನುಭವ ನೀಡಿದೆ. ಅಪಘಾತಗಳು ಸಾಮಾನ್ಯ. ದೇವರ ದಯೆಯಿಂದ ನಮ್ಮ ಜಿಪ್ಸಿಗೆ ಏನೂ ಆಗಿಲ್ಲ. ನಾವೂ ಸುರಕ್ಷಿತವಾಗಿದ್ದೇವೆ’ ಎಂದು ಅನು ರಾಣಾ ನಕ್ಕರು. ಆ. 6ರ ನಸುಕಿನ ಜಾವದ ಕತ್ತಲಲ್ಲಿಯೇ ನಡೆದಿದ್ದ ಸ್ಪರ್ಧೆಯಲ್ಲಿ ಅಪಘಾತಕ್ಕೊಳಗಾಗಿದ್ದ ಬಾನಿ ಯಾದವ್ ಎಂಬ ಮಹಿಳೆಯದ್ದು ಇದೇ ಮಾತು. ಕಳೆದ ವರ್ಷ ರೆಡ್ ಹಿಮಾಲಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿರುವ ಬಾನಿ ಪಲ್ಟಿ ಹೊಡೆದ ಗಾಡಿಯನ್ನು ಸುಮ್ಮನೆ ನೋಡುತ್ತ ನಿಲ್ಲಲಿಲ್ಲ. ತಮ್ಮ ಮೆಕ್ಯಾನಿಕ್‌ಗಳು ದುರಸ್ತಿ ಮಾಡಿಕೊಟ್ಟ ಮರುಕ್ಷಣವೇ ಟ್ರ್ಯಾಕ್‌ಗೆ ಮರಳಿದ್ದರು. ಬೈಕ್ ಸವಾರರ ಸಾಹಸ: ದಕ್ಷಿಣ್ ಡೇರ್ ಬೈಕ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಕೆ.ಪಿ. ಅರವಿಂದ್ ಅವರ ಬೈಕ್ ರೇಸಿಂಗ್ ಪ್ರೀತಿಯನ್ನು ಅವರ ಮೈಕೈ ತುಂಬಾ ಇರುವ ಗಾಯದ ಗುರುತುಗಳೇ ಹೇಳುತ್ತವೆ. ಆದರೂ ವೃತ್ತಿಪರ ಬೈಕ್ ರೇಸಿಂಗ್‌ ತಮ್ಮ ಉಸಿರಾಗಿಸಿಕೊಂಡಿದ್ದಾರೆ. ಟಿವಿಎಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದೇ ಪ್ರಥಮ ಬಾರಿಗೆ ದಕ್ಷಿಣ ಡೇರ್‌ನಲ್ಲಿ ಭಾಗವಹಿಸಿದ್ದ ಡಿ. ವಿಶ್ವಾಸ್ ಖಾಸಗಿ ಕಂಪೆನಿಯೊಂದರ ಉದ್ಯೋಗಿ. ಬೆಂಗಳೂರಿನ ಈ ಯುವಕ ರೇಸ್‌ನಲ್ಲಿ ಓಡಿಸುತ್ತಿದ್ದ ಕೆಟಿಎಂ ಬೈಕ್ ಮುಂಡರಗಿಯ ಕಪ್ಪತಗುಡ್ಡದಲ್ಲಿ ಪಂಕ್ಚರ್ ಆಯಿತು. ಅಲ್ಲಿಯ ಗ್ರಾಮಸ್ಥರ ನೆರವಿನಿಂದ ಕೆಲವು ನಿಮಿಷಗಳಲ್ಲಿ ಸರಿಪಡಿಸಿಕೊಂಡು ಮತ್ತೆ ಕಣಕ್ಕೆ ಧುಮುಕಿದ್ದರು. ಮೊದಲ ಮೂರು ಸ್ಥಾನಗಳಲ್ಲಿ ಅವರು ಬರದಿದ್ದರೂ ರೇಸ್ ಮುಕ್ತಾಯಗೊಳಿಸಿದರು. ಅಲ್ಲದೇ ಮುಂದೆ ಇನ್ನೂ ಹಲವು ರೇಸ್‌ಗಳಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳುವ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದಾರೆ. ಇದು ಚಿಗುರುಮೀಸೆ ಯುವಕರ ಕತೆಯಾಗಿರಬಹುದು. ಆದರೆ, ಬೈಕ್‌ ರೇಸಿಂಗ್‌ನಲ್ಲಿ ತಾವೇನೂ ಕಮ್ಮಿಯಿಲ್ಲ ಎಂದು ತೋರಿಸಿಕೊಟ್ಟಿದ್ದು 46 ವರ್ಷದ ಬೀನು ಜಾನ್. ಆರಡಿ ಎತ್ತರದ ಬೀನುಗೆ ಈ ಕ್ರೀಡೆಗಳಲ್ಲಿ ಎರಡು ದಶಕಗಳ ಅನುಭವ ಇದೆ. ಈ ಸ್ಪರ್ಧೆಯಲ್ಲಿಯೂ ಅವರ ಸಾಮರ್ಥ್ಯ ಬೆರಗು ಮೂಡಿಸಿತು. ಒಟ್ಟು 43 ಸ್ಪರ್ಧಿಗಳಲ್ಲಿ ಅವರು ಅಗ್ರ ಹತ್ತು ಸ್ಥಾನಗಳಲ್ಲಿದ್ದರು. ಒಟ್ಟು ಎರಡು ಸಾವಿರ ಕಿಲೋಮೀಟರ್‌ ದೂರ ನಡೆದ ಈ ಸ್ಪರ್ಧೆಯಲ್ಲಿ ಇಂತಹ ಹಲವು ರೋಚಕ ಸಂಗತಿಗಳು ಇದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಈ ಬಾರಿ ಆಯ್ಕೆ ಮಾಡಿದ್ದ ಮಾರ್ಗವೇ ಅತ್ಯಂತ ಕ್ಲಿಷ್ಟಕರ ಮತ್ತು ರುದ್ರರಮಣೀಯವಾಗಿತ್ತು. ಮೊದಲ ಮೂರು ದಿನಗಳ ಸ್ಪರ್ಧೆ ಮುಗಿಯುವ ಹೊತ್ತಿಗೆ ಬಹುತೇಕ ಎಲ್ಲರ ವಾಹನಗಳು ಜಖಂಗೊಂಡು ಕಿರುಗುಡುತ್ತಿದ್ದವು. ಕೊನೆಯ ಎರಡು ದಿನ ಸ್ಪರ್ಧಿಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಡೇರ್ (ಧೈರ್ಯ) ಇದ್ದವರು ಕೊನೆಯವರೆಗೂ ಸಾಗಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.