ಕನ್ನಡಿಗನಿಗೆ ವೃತ್ತಿಪರತೆಯ ಕನಸು ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿದ್ದ ಧಾರವಾಡದ ವರೇ ಆದ ರಾಜೇಶ ಉಪ್ಪಾರ, ಈಗ ತ್ರಿ–ಆನ್‌–ತ್ರಿ ಬ್ಯಾಸ್ಕೆಟ್‌ಬಾಲ್‌ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈಚೆಗೆ ಶ್ರೀಲಂಕಾದ ಕೊಲೊಂಬೊದಲ್ಲಿ ನಡೆದ ದಕ್ಷಿಣ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿ ಆಡಿದ ಕನ್ನಡಿಗ ಇವರು. ಈ ಪ್ರಶಸ್ತಿ ಮುಡಿಗೇರಿಸಿಕೊಂಡ ತಂಡ ಬೀಜಿಂಗ್‌ನಲ್ಲಿ ಇದೇ ತಿಂಗಳ 15 ಮತ್ತು 16ರಂದು ನಡೆಯಲಿರುವ ವಿಶ್ವ ಟೂರ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದೆ. ಇದಕ್ಕಾಗಿ ಬೆಂಗಳೂರು ಮತ್ತು ನಿಟ್ಟೆಯಲ್ಲಿ ತಯಾರಿ ನಡೆಸುತ್ತಿರುವ ಉಪ್ಪಾರ ಜೊತೆ ಪ್ರಜಾವಾಣಿ ನಡೆಸಿದ ಮಾತುಕತೆ ಇಲ್ಲಿದೆ. * ಬ್ಯಾಸ್ಕೆಟ್‌ಬಾಲ್ ಕ್ರೀಡೆಗೆ ನಿಮ್ಮ ಪ್ರವೇಶ ಹೇಗಾಯಿತು? ಧಾರವಾಡದ ಕರ್ನಾಟಕ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾಗಲೇ ಈ ಆಟದ ಬಗ್ಗೆ ಆಸಕ್ತಿ ಮೂಡಿತ್ತು. ಕಿಟೆಲ್‌ ಕಲಾ ಕಾಲೇಜಿನಲ್ಲಿದ್ದಾಗ ರೋವರ್ಸ್‌ ಕ್ಲಬ್‌ನಲ್ಲಿ ತರಬೇತಿ ಲಭಿಸಿತು. ನಂತರ ಸಾಯಿ ಕೇಂದ್ರದಲ್ಲಿ ಪ್ರವೇಶ ಪಡೆದೆ. ಪದವಿ ಓದುತ್ತಿದ್ದಾಗ ವಿಜಯ ಬ್ಯಾಂಕ್ ಉದ್ಯೋಗಿಯಾಗಿ ಬೆಂಗಳೂರು ಸೇರಿದೆ. ಭಾರತೀಯ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಬಿಎಫ್‌ಐ) ಅಧ್ಯಕ್ಷ ಕೆ.ಗೋವಿಂದರಾಜು ಅವರ ಕಣ್ಣಿಗೆ ಬಿದ್ದ ನಂತರ ಬದುಕಿನ ದಿಕ್ಕು ಬದಲಾಯಿತು. ಅವರು ತ್ರಿ ಆನ್‌ ತ್ರಿ ತಂಡದಲ್ಲಿ ಅವಕಾಶ ಕಲ್ಪಿಸಿದರು. * ತಂಡದಲ್ಲಿ ನಿಮ್ಮ ಜವಾಬ್ದಾರಿ ? ನಾನು ತಂಡದ ಪಾಯಿಂಟ್‌ ಗಾರ್ಡ್‌. ಬಾಲ್‌ ಹ್ಯಾಂಡ್ಲಿಂಗ್‌ ನನ್ನ ಜವಾಬ್ದಾರಿ. ಇದನ್ನು ಚೆನ್ನಾಗಿ ನಿಭಾಯಿಸುತ್ತಿದ್ದೇನೆ. * ತ್ರಿ ಆನ್ ತ್ರಿ ಮಾದರಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದು ಕ್ರಿಕೆಟ್‌ನಲ್ಲಿ ಟ್ವೆಂಟಿ–20 ಮಾದರಿ ಇದ್ದಂತೆ. ಕೇವಲ ಹತ್ತು ನಿಮಿಷದ ಆಟ. ಆರಂಭವೇ ಇದರಲ್ಲಿ ಬಹುಮುಖ್ಯ. ಮೊದಲು ಮುನ್ನಡೆ ಗಳಿಸಲು ಸಾಧ್ಯವಾದರೆ ಗೆಲುವು ಸುಲಭವಾಗುತ್ತದೆ. ಈ ಅಂಶವನ್ನು ಗಮನದಲ್ಲಿರಿಸಿ ಆಡುತ್ತಿರುವುದೇ ಭಾರತ ತಂಡದ ಯಶಸ್ಸಿಗೆ ಕಾರಣ. ಕೇವಲ ಮೂರೇ ಮಂದಿ ಇರುವುದರಿಂದ ಸಾಂಘಿಕ ಪ್ರಯತ್ನಕ್ಕೆ ಇಲ್ಲಿ ಮಹತ್ವ. * ಕರ್ನಾಟಕದಲ್ಲಿ ಈ ಮಾದರಿ ಯಶಸ್ಸು ಕಾಣಬಹುದೇ? ಬೆಂಗಳೂರಿನಲ್ಲಿ ಈ ಮಾದರಿ ಹೆಚ್ಚು ಪ್ರಚಲಿತದಲ್ಲಿದೆ. ಬೇರೆ ನಗರ, ಜಿಲ್ಲೆಗಳಿಗೂ ಪಸರಿಸಬೇಕಾಗಿದೆ. ಆದರೆ ಇದಕ್ಕೆ ಆಟಗಾರರ ಅರ್ಪಣಾ ಭಾವ ಮುಖ್ಯ. ಕಾಟಾಚಾರಕ್ಕೆ ಆಡಿದರೆ ಇದರಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. * ತ್ರಿ ಆನ್ ತ್ರಿಯಲ್ಲಿ ಆಟಕ್ಕಿಂತ ಮೋಜು ಹೆಚ್ಚು ಎನ್ನುತ್ತಾರಲ್ಲ? ಸಣ್ಣ ಅಂಗಣ, ಕಡಿಮೆ ಆಟಗಾರರು, ಕಡಿಮೆ ಅವಧಿಯ ಆಟವಾದ್ದರಿಂದ ಪ್ರೇಕ್ಷಕರಿಗೆ ಇಲ್ಲಿ ಹೆಚ್ಚು ರೋಚಕತೆ ಸಿಗುತ್ತದೆ. ಆದರೆ ಆಟದಲ್ಲಿ ಸಾಮರ್ಥ್ಯ ಪ್ರದರ್ಶನಕ್ಕೆ ಸಾಕಷ್ಟು ಅವಕಾಶವಿದೆ. ತ್ರಿ ಆನ್ ತ್ರಿ ಬ್ಯಾಸ್ಕೆಟ್‌ಬಾಲ್‌ ಕುರಿತು... ತ್ರಿ ಆನ್ ತ್ರಿ, ತ್ರಿ ಬೈ ತ್ರಿ ಅಥವಾ ತ್ರಿ ಇಂಟೂ ತ್ರಿ ಎಂಬಿತ್ಯಾದಿ ಹೆಸರಿನಿಂದ ಕರೆಯಲಾಗುವ ಈ ಆಟಕ್ಕೆ ಅರ್ಧ ಅಂಗಣವನ್ನು ಬಳಸಲಾಗುತ್ತದೆ; ಒಂದೇ ಬ್ಯಾಸ್ಕೆಟ್‌ ಇರುತ್ತದೆ. ಪ್ರತಿ ತಂಡದಲ್ಲಿ ಒಬ್ಬ ಬದಲಿ ಆಟಗಾರ ಸೇರಿದಂತೆ ಒಟ್ಟು ನಾಲ್ಕು ಮಂದಿ ಇರುತ್ತಾರೆ. ಪಂದ್ಯವನ್ನು ಜಂಪ್‌ ಬಾಲ್‌ ಮೂಲಕ ಆರಂಭಿಸಲಾಗುವುದಿಲ್ಲ. ಬದಲಿಗೆ ನಾಣ್ಯವನ್ನು ಚಿಮ್ಮಲಾಗುತ್ತದೆ. ಪಂದ್ಯವನ್ನು 21 ಪಾಯಿಂಟ್‌ಗಳಿಗೆ ನಿಗದಿ ಮಾಡಲಾಗುತ್ತದೆ. 10 ನಿಮಿಷಗಳೊಳಗೆ ಯಾವುದೇ ತಂಡ 21 ಪಾಯಿಂಟ್ ಗಳಿಸದಿದ್ದರೆ ಹೆಚ್ಚು ಪಾಯಿಂಟ್‌ ಗಳಿಸಿದ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ. ಪ್ರತಿ ತಂಡಕ್ಕೆ ಒಂದು ಬಾರಿ ಟೈಮ್‌ ಔಟ್‌ ಅವಕಾಶವಿದೆ. ಸ್ಟ್ರೀಟ್‌ ಬಾಲ್‌ ಅಥವಾ ಸ್ಟ್ರೀಟ್‌ ಬ್ಯಾಸ್ಕೆಟ್‌ ಬಾಲ್‌ ಎಂದೂ ಈ ಆಟವನ್ನು ಕರೆಯಲಾಗುತ್ತದೆ. ಅಮೆರಿಕಾದಲ್ಲಿ 1989ಕ್ಕಿಂತ ಮೊದಲೇ ಹೆಸರು ಮಾಡಿದ್ದ ಆಟ 1992ರಿಂದ ಹೆಚ್ಚು ಪ್ರಚಾರಕ್ಕೆ ಬಂತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.