ಮತ್ತೆ ಫೆಲ್ಫ್ಸ್‌ ಹೊಳಪು ಏಳನೇ ವಯಸ್ಸಿಗೆ ಈಜುಕೊಳಕ್ಕೆ ಮೊದಲ ಬಾರಿಗೆ ಇಳಿದಿದ್ದ ಬಾಲಕ ಎಲ್ಲರಂತೆಯೇ ಮುಖವನ್ನು ನೀರಿನೊಳಗೆ ಮುಳುಗಿಸಲು ಭಯಪಡುತ್ತಿದ್ದ. ಅದಕ್ಕೆ ತರಬೇತುದಾರ ನೀಡಿದ್ದು ಹಿಮ್ಮುಖ ಚಲನೆಯ ಪಾಠ. ಈ ಪಾಠ ಆತನ ಪಾಲಿಗೆ ಮುಂದೆ ವರವಾಗುತ್ತದೆ ಎಂದು ತರಬೇತುದಾರನೂ ಊಹಿಸಿರಲಿಕ್ಕಿಲ್ಲ. ಆತನ ಮನಸ್ಸಿನಲ್ಲಿ ಈಜು ಕಲಿಯುವ ಗುರಿಯಷ್ಟೇ ಇತ್ತು. ನಿಧಾನವಾಗಿ ಕೈಕಾಲು ಬಡಿಯುತ್ತಾ, ಹಿಮ್ಮುಖ ಚಲನೆ ಅಭ್ಯಸಿಸುತ್ತಿದ್ದ ಬಾಲಕನಲ್ಲಿ ‘ಅಟೆನ್ಷನ್‌ ಡಿಫಿಸಿಟ್‌ ಹೈಪರ್‌ಆ್ಯಕ್ಟಿವಿಟಿ ಡಿಸಾರ್ಡರ್‌’ ಎಂಬ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ ಆತನಿಗದು ಸವಾಲು ಎಂದೆನಿಸಲಿಲ್ಲ. ಇಬ್ಬರು ಅಕ್ಕಂದಿರು ಆತನಿಗೆ ಸ್ಫೂರ್ತಿ ತುಂಬುತ್ತಿದ್ದರು. ಹಿರಿಯಕ್ಕ ಹಿಲರಿ ಉತ್ತಮ ಈಜುಗಾರ್ತಿಯಾಗಿದ್ದರೂ ಕ್ರೀಡೆಯಿಂದ ದೂರವುಳಿದಳು. ಮತ್ತೊಬ್ಬ ಅಕ್ಕ ವಿಟ್ನಿ 1996ರಲ್ಲಿ ಅಟ್ಲಾಂಟಾ ಒಲಿಂಪಿಕ್‌ನಲ್ಲಿ ಅರ್ಹತೆ ಪಡೆಯುವವರೆಗೂ ಪೈಪೋಟಿ ನಡೆಸಿದ್ದಳು. ಆದರೆ ಇವರಿಬ್ಬರ ಆಸೆಗಳನ್ನು ಪೂರೈಸಿದ್ದು ಬಾಲಕ ಮೈಕಲ್ ಫೆಲ್ಫ್ಸ್‌. ಕಜಾನ್‌ನಲ್ಲಿ ಈಚೆಗೆ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ನಡೆದ 100 ಮೀಟರ್ಸ್‌ ಬಟರ್‌ಫ್ಲೈ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಚಾಡ್‌ ಲೆ ಕ್ಲೊಸ್‌ ಚಿನ್ನ ಗೆದ್ದರು. ‘ಇತ್ತೀಚಿನ ದಿನಗಳಲ್ಲಿ ಬಟರ್‌ಫ್ಲೈ ವಿಭಾಗದಲ್ಲಿ ಈಜು ಎಷ್ಟು ನಿಧಾನ ವಾಗುತ್ತಿವೆ ಎಂದು ಫೆಲ್ಫ್ಸ್‌ ಹೇಳುತ್ತಿದ್ದರು. ನಾಲ್ಕು ವರ್ಷಗಳಲ್ಲಿ ಆತ ಮಾಡ ದ್ದನ್ನು ನಾನು ಸಾಧಿಸಿದ್ದೇನೆ. ಆತ ಈಗ ಬಾಯಿ ಮುಚ್ಚಿಕೊಂಡು ಸುಮ್ಮನಾಗ ಬಹುದು’ ಎಂದು ಅವರು ಕೆಲವು ಸಮಯದ ಹಿಂದೆ ಕಿಚಾಯಿಸಿದ್ದರು. ಅದಕ್ಕೆ ಫೆಲ್ಫ್ಸ್‌ ಮಾತಿನಲ್ಲಿ ಪ್ರತಿಕ್ರಿಯೆ ನೀಡಲಿಲ್ಲ. ಅಮೆರಿಕ ರಾಷ್ಟ್ರೀಯ ಸ್ಪರ್ಧೆಯಲ್ಲಿ 100 ಮೀಟರ್ಸ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಚಾಡ್‌ಗಿಂತಲೂ ವೇಗವಾಗಿ ಗುರಿಮುಟ್ಟಿ ದಾಖಲೆ ನಿರ್ಮಿಸಿ ಉತ್ತರ ನೀಡಿದರು. ದಾಖಲೆಗಳ ಸರದಾರ ಫೆಲ್ಫ್ಸ್‌ ಹೆಸರಿನಲ್ಲಿಯೇ ದಾಖಲೆಗಳನ್ನು ನಿರ್ಮಿಸುವ ತಾಕತ್ತು ಇದೆ. ಒಟ್ಟು 39 ವಿಶ್ವದಾಖಲೆಗಳನ್ನು ನಿರ್ಮಿಸಿರುವುದು ಇದಕ್ಕೆ ಸಾಕ್ಷಿ. ಇದರಲ್ಲಿ 29 ವೈಯಕ್ತಿಕ ಮತ್ತು 10 ಬಾರಿ ರಿಲೆ ತಂಡದೊಂದಿಗೆ ನಿರ್ಮಿಸಿದ ದಾಖಲೆಗಳಿವೆ. ಒಲಿಂಪಿಕ್ಸ್‌ ಪದಕಗಳ ಪಟ್ಟಿ ನೋಡಿದರೂ ಅದರಲ್ಲಿ ಫೆಲ್ಫ್ಸ್ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಒಲಿಂಪಿಕ್ಸ್‌ನಲ್ಲಿಯೇ 18 ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಅವರದು. ಒಂದೇ ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನದ ಪದಕಗಳನ್ನೂ ಫೆಲ್ಫ್ಸ್‌ ಜಯಿಸಿದ್ದಾರೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ಪದಕ ಗೆದ್ದ ಈಜುಪಟು ಫೆಲ್ಫ್ಸ್‌. ಸವಾಲು ಮತ್ತು ಬದುಕು ಫೆಲ್ಫ್ಸ್‌ ತಂದೆ ಫ್ರೆಡ್‌ ಫೆ ಲ್ಫ್ಸ್‌ ಅಮೆರಿಕದಲ್ಲಿ ಭದ್ರತಾ ಅಧಿಕಾರಿಯಾಗಿದ್ದರು. ತನ್ನಂತೆಯೇ ಮಕ್ಕಳೂ ಸದೃಢ ದೇಹ ಹೊಂದಿರಬೇಕು ಎನ್ನುವ ಸಲುವಾಗಿ ಇಬ್ಬರು ಹೆಣ್ಣುಮಕ್ಕಳು ಮತ್ತು ಮಗನನ್ನು ಬಾಲ್ಯದಲ್ಲಿಯೇ ಈಜಿಗೆ ಸೇರಿಸಿದ್ದರು. ಕಾಯಿಲೆಯಿಂದ ಬಳಲುತ್ತಿದ್ದ ಮಗ ಫೆಲ್ಫ್ಸ್‌ ಮುಂದೆ ಈ ರೀತಿ ಬೆಳೆಯುತ್ತಾನೆ ಎಂಬ ಕಲ್ಪನೆ ಅವರಲ್ಲಿಯೂ ಇರಲಿಲ್ಲ. ಕಠಿಣ ಅಭ್ಯಾಸಕ್ಕೆ ಒಡ್ಡಿಕೊಂಡ ಫೆಲ್ಫ್ಸ್‌ ಮೊದಲಿಗೆ ಅಮೆರಿಕದ ರಾಷ್ಟ್ರೀಯ ಬಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ ಕೆಲವು ದಾಖಲೆ ಮುರಿದು 2000ರ ಒಲಿಂಪಿಕ್ಸ್‌ಗೆ ಪ್ರವೇಶಿಸಿದ ಫೆಲ್ಫ್ಸ್‌ 68 ವರ್ಷಗಳಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವ ಅತಿ ಕಿರಿಯ ಸ್ಪರ್ಧಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸಾಧನೆಗಳ ಹಾದಿ 2000ದ ಒಲಿಂಪಿಕ್ಸ್‌ ಬಳಿಕ ಫೆಲ್ಫ್ಸ್‌ ಈಜುವ ಗತಿ ಬದಲಾಯಿತು. ಪ್ರತಿ ಟೂರ್ನಿಯಲ್ಲಿಯೂ ಆಕ್ರಮಣಶೀಲತೆ, ಉತ್ಸಾಹ ಹೆಚ್ಚುತ್ತಿತ್ತು. 2001ರಲ್ಲಿ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ವಿಶ್ವ ದಾಖಲೆ ಮುರಿದರು. ಆಗ ಫೆಲ್ಫ್ಸ್‌ ವಯಸ್ಸು 15 ವರ್ಷ! ಮುಂದೆ ಅದೇ ದಾಖಲೆಯನ್ನು ಫುಕೊವೊಕಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತಾವೇ ಇನ್ನಷ್ಟು ಉತ್ತಮ ಪಡಿಸಿದರು. ಪ್ಯಾನ್‌ ಪೆಸಿಫಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳೊಂದಿಗೆ ಹಲವು ವಿಶ್ವ ದಾಖಲೆ ಮಾಡಿದರು. 2003ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 200 ಮೀ. ಫ್ರೀಸ್ಟೈಲ್‌, 200 ಮೀ. ಬ್ಯಾಕ್‌ಸ್ಟ್ರೋಕ್‌ ಮತ್ತು 100 ಮೀ. ಬಟರ್‌ಫ್ಲೈಗಳಲ್ಲಿ ಚಿನ್ನ ಜಯಿಸಿ, ಮೂರು ವಿಭಿನ್ನ ವಿಭಾಗ ಗಳಲ್ಲಿ ಸ್ವರ್ಣ ಗೆದ್ದ ಅಮೆರಿಕದ ಮೊದಲ ಈಜುಪಟು ಎಂದೆನಿಸಿಕೊಂಡರು. 2004ರ ಒಲಿಂಪಿಕ್ಸ್‌ನಲ್ಲಿ ಆರು ಚಿನ್ನ ಮತ್ತು ಎರಡು ಕಂಚು ಫೆಲ್ಫ್ಸ್‌ ಖಾತೆಗೆ ಜಮೆ ಆದವು. 2007ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಫೆಲ್ಫ್ಸ್‌ ಏಳು ವಿಭಾಗಗಳಲ್ಲಿ ಸ್ಪರ್ಧಿಸಿ, ಎಲ್ಲದರಲ್ಲಿಯೂ ಚಿನ್ನ ಗೆದ್ದರು. ಅದರಲ್ಲಿ ಐದು ಗೆಲುವು ವಿಶ್ವ ದಾಖಲೆಗೆ ಕಾರಣವಾದವು. 2008ರ ಬೀಜಿಂಗ್‌ ಒಲಿಂಪಿಕ್ಸ್‌ಗೆ ಎಲ್ಲಾ ಎಂಟು ವಿಭಾಗಗಳಲ್ಲಿಯೂ ಫೆಲ್ಫ್ಸ್‌ ಅರ್ಹತೆ ಗಿಟ್ಟಿಸಿದ್ದರು. ಅದರಲ್ಲಿ ಎಂಟು ಚಿನ್ನದ ಪದಕ ಗೆದ್ದು ಮತ್ತೊಂದು ದಾಖಲೆ ನಿರ್ಮಿಸಿದರು. 2010ರಲ್ಲಿ ರಿಯಾನ್‌ ಲೊಕ್ಟೆ 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಗೆದ್ದಾಗ ಫೆಲ್ಫ್ಸ್‌ಗೆ ಪೈಪೋಟಿ ನೀಡಬಲ್ಲ ಈಜುಪಟು ಅಮೆರಿಕಕ್ಕೆ ದಕ್ಕಿದ ಎಂದು ಹಲವರು ಭಾವಿಸಿದರು. ಫೆಲ್ಫ್ಸ್‌ ಅದೊಂದೆ ಸಲ ಲೊಕ್ಟೆ ಎದುರು ಸೋತಿದ್ದು. ವಿವಾದಗಳೂ, ನಿಷೇಧಗಳೂ 2004ರಲ್ಲಿ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ದಾಖಲೆಗಳ ಸರಮಾಲೆಯನ್ನೇ ನಿರ್ಮಿಸಿ ದೇಶಕ್ಕೆ ಮರಳಿದ್ದ ಫೆಲ್ಫ್ಸ್‌ ಕೆಲವೇ ವಾರಗಳಲ್ಲಿ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಕಾರಣಕ್ಕೆ ಬಂಧನಕ್ಕೆ ಒಳಗಾದರು. ಫೆಲ್ಫ್ಸ್‌ 18 ತಿಂಗಳು ಸ್ಪರ್ಧಿಸದಂತೆ ನಿಷೇಧ ಹೇರಲಾಯಿತು. 2012ರ ಒಲಿಂಪಿಕ್ಸ್‌ ಬಳಿಕ ನಿವೃತ್ತಿಯಾಗುವುದಾಗಿ ಫೆಲ್ಫ್ಸ್‌ ಪ್ರಕಟಿಸಿದ್ದರು. ಜಗತ್ತು ಚಿನ್ನದ ಬೇಟೆಯಾಡುವ ಮೀನಿಗೆ ವಿದಾಯವನ್ನೂ ಹೇಳಿತ್ತು. ಫೆಲ್ಫ್ಸ್‌ ಮಾದಕ ವಸ್ತು ಸೇವಿಸುವ ಚಿತ್ರವೊಂದು ಪತ್ರಿಕೆಯಲ್ಲಿ ಪ್ರಕಟವಾಗಿ ಮತ್ತೆ ವಿವಾದ ಸೃಷ್ಟಿಸಿತು. ಫೆಲ್ಫ್ಸ್‌ಅದಕ್ಕಾಗಿ ಕ್ಷಮೆಯನ್ನೂ ಕೋರಿದರು. ಈ ವಿವಾದದಿಂದಾಗಿ ಅವರು ಮತ್ತೆ ಆರು ತಿಂಗಳ ನಿಷೇಧ ಅನುಭವಿಸುವಂತಾಯಿತು. 2014ರಲ್ಲಿ ಮೆಸಾ ಗ್ರಾಂಡಾದಲ್ಲಿ ಸ್ಪರ್ಧಿಸುವ ಮೂಲಕ ನಿವೃತ್ತಿ ನಿರ್ಧಾರವನ್ನು ಫೆಲ್ಫ್ಸ್‌ ವಾಪಸು ಪಡೆದರು. ಈಗ ಅಮೆರಿಕ ರಾಷ್ಟೀಯ ಸ್ಪರ್ಧೆಯಲ್ಲಿ ಮತ್ತೊಂದು ದಾಖಲೆಯೊಂದಿಗೆ ಮತ್ತೆ ಸುದ್ದಿ ಮಾಡಿದ್ದಾರೆ. 100 ಮೀ ಬಟರ್‌ಫ್ಲೈನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 2016ರಲ್ಲಿ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಫೆಲ್ಫ್ಸ್‌ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಅವರ ಕೋಚ್‌ ಬಾಬ್‌ ಬೋಮನ್‌ ಏನೂ ಹೇಳುತ್ತಿಲ್ಲ. ವಾರದ ಹಿಂದೆ ಅಚ್ಚರಿ... ಮೈಕೆಲ್‌ ಫೆಲ್ಫ್ಸ್‌ ವಿಶ್ವ ಈಜುಲೋಕ ಕಂಡ ಅದ್ವಿತೀಯ ಸಾಧಕ. ಸರಿಯಾಗಿ ಒಂದು ವಾರದ ಹಿಂದೆ ಅಮೆರಿಕ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಇವರು 200 ಮೀಟರ್ಸ್‌ ಮೆಡ್ಲೆಯಲ್ಲಿ 54.75 ಸೆಕೆಂಡುಗಳಲ್ಲಿ ಈಜಿ ದಾಖಲೆ ಸಾಮರ್ಥ್ಯ ತೋರಿದ್ದಾರೆ. 100 ಮೀಟರ್ಸ್‌ ಮತ್ತು 200 ಮೀಟರ್ಸ್‌ ಬಟರ್‌ಫ್ಲೈ ಪೈಪೋಟಿಯಲ್ಲಿಯೂ ಬಂಗಾರದ ಸಾಧನೆ ಮಾಡಿದ್ದಾರೆ. ಈಜುಗಾರನೊಬ್ಬ ತನ್ನ 30ನೇ ವಯಸ್ಸಿನಲ್ಲಿ ಇಂತಹ ಸಾಮರ್ಥ್ಯ ತೋರುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸುವಂತಹದ್ದು. ಬ್ಯಾಕ್‌ಸ್ಟ್ರೋಕ್‌, ಬಟರ್‌ಫ್ಲೈ, ಫ್ರೀಸ್ಟೈಲ್‌, ವೈಯಕ್ತಿಕ ಮೆಡ್ಲೆ ಸ್ಪರ್ಧೆಗಳಲ್ಲಿ ನುರಿತಿರುವ ಫೆಲ್ಫ್ಸ್‌ಕೇವಲ ಒಂದು ವರ್ಷದ ಹಿಂದೆ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ಅಚ್ಚರಿ ಮೂಡಿಸಿದ್ದರು. ಅಥೆನ್ಸ್‌, ಬೀಜಿಂಗ್‌ ಮತ್ತು ಲಂಡನ್‌ ನಗರಗಳಲ್ಲಿ ಕ್ರಮವಾಗಿ 2004, 2008 ಮತ್ತು 2012ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ಗಳಲ್ಲಿ ಒಟ್ಟು 18 ಚಿನ್ನ ಗೆದ್ದ ಮಹಾ ಸಾಧಕ ಇವರು. ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ 26 ಚಿನ್ನ ಗೆದ್ದಿರುವ ಇವರು ಪ್ಯಾನ್‌ ಪೆಸಿಫಿಕ್‌ ಚಾಂಪಿಯನ್‌ಷಿಪ್‌ನಲ್ಲಿ 16 ಸ್ವರ್ಣದ ಪದಕ ಗಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.