ಖೇಲ್‌ರತ್ನ ಪ್ರಶಸ್ತಿ ವಿವಾದ ‘ನಿಯಮಗಳ ಉಲ್ಲಂಘನೆ’ 2015ರ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯ ಆಯ್ಕೆಗೆ ಸಂಬಂಧಿಸಿದಂತೆ ಈಗ ಅಪಸ್ವರ ಎದ್ದಿದೆ. ರಾಜ್ಯದ ಅಂಗವಿಕಲ ಕ್ರೀಡಾಪಟು ಎಚ್.ಎನ್‌.ಗಿರೀಶ್‌ ಈ ಕುರಿತಂತೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಒಲಿಂಪಿಕ್ಸ್‌ ಮತ್ತು ಅಂಗವಿಕಲರ ಪ್ಯಾರಾಲಿಂಪಿಕ್ಸ್‌ ಎರಡನ್ನೂ ಸಮಾನ ದೃಷ್ಟಿಕೋನದಿಂದ ಪರಿಗಣಿಸುವಲ್ಲಿ ಕ್ರೀಡಾ ಸಚಿವಾಲಯ ಎಡವಿದೆ ಎಂಬುದು ಗಿರೀಶ್‌ ಅಳಲು. ಇದೀಗ ಗಿರೀಶ್‌ ಅಭಿಮಾನಿಗಳು ನ್ಯಾಯಾಲಯದತ್ತ ಮೊಗ ಮಾಡಿದ್ದಾರೆ. ಗಿರೀಶ್‌ ಅವರೊಡನೆ ‘ಪ್ರಜಾವಾಣಿ’ ನಡೆಸಿದ ಮಾತುಕತೆ ಇಲ್ಲಿದೆ. * ಖೇಲ್ ರತ್ನ ನೀಡಿಕೆಯಲ್ಲಿ ಅನ್ಯಾಯ ಆಗಿದೆ ಎಂದು ಹೇಗೆ ಹೇಳುತ್ತೀರಿ? 2015ರ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕ್ರೀಡಾ ನಿರ್ದೇಶನಾಲಯವು ಈ ವರ್ಷದ ಮಾರ್ಚ್‌ 4ರಂದು ಹೊರಡಿಸಿರುವ ಅಧಿಸೂಚನೆಯ ನಿಯಮಗಳಿಗೆ ಅನುಸಾರವಾಗಿ ಖೇಲ್‌ ರತ್ನ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ನಿಯಮಗಳೇ ಮಾನದಂಡವಾಗಿದ್ದರೆ ಸಾನಿಯಾ ಮಿರ್ಜಾ ಅವರಿಗೆ ಈ ಬಾರಿಯ ಖೇಲ್‌ ರತ್ನ ನೀಡುವುದಕ್ಕೆ ಯಾವುದೇ ರೀತಿಯಲ್ಲೂ ಕಾನೂನು ಮಾನ್ಯತೆ ಇಲ್ಲ. * ಅದು ಹೇಗೆ ? ಅಧಿಸೂಚನೆಯ ಅನುಸಾರ ಅರ್ಹತೆಗಳ ಅಡಿಯಲ್ಲಿ ನನಗೆ 90 ಅಂಕಗಳು ಇದ್ದರೆ, ಸಾನಿಯಾ ಮಿರ್ಜಾ ಅವರಿಗೆ ಅಬ್ಬಬ್ಬಾ ಎಂದರೆ 30 ಅಂಕಗಳು ಮಾತ್ರವೇ ದೊರೆಯುತ್ತವೆ. ಹೀಗಿರುವಾಗ ನಾನು ಸಹಜವಾಗಿಯೇ ಈ ಬಾರಿಯ ಖೇಲ್‌ ರತ್ನ ಪ್ರಶಸ್ತಿಗೆ ಹಕ್ಕುದಾರ ತಾನೆ. ಕಳೆದ ನಾಲ್ಕು ವರ್ಷಗಳಲ್ಲಿ ನಾನು ಮಾಡಿರುವ ಸಾಧನೆಗಳು ಮತ್ತು ಸಾನಿಯಾ ಮಿರ್ಜಾ ಅವರ ಸಾಧನೆಗಳನ್ನು ಅಕ್ಕಪಕ್ಕ ಇಟ್ಟು ನೋಡಿದರೆ ಯಾರಿಗಾದರೂ ಇದು ಗೊತ್ತಾಗುತ್ತದೆ. ಈ ಪಟ್ಟಿಯಲ್ಲಿ ಹೆಚ್ಚಿನ ಅರ್ಹತೆ ನಿಸ್ಸಂದೇಹವಾಗಿ ನನಗೇ ಇದೆ. * ಹಾಗಾದರೆ ಈ ಅನ್ಯಾಯ ಸರಿಪಡಿಸಿ ಎಂದು ನೀವು ಯಾರಲ್ಲಾದರೂ ಕೇಳಿದ್ದೀರಾ? ನಾನೇನೊ ಮೌಖಿಕವಾಗಿ ಈ ನೋವನ್ನು ಕೆಲವರಲ್ಲಿ ತೋಡಿಕೊಂಡಿದ್ದೇನೆ. ಆದರೆ ಭಾರತೀಯ ಒಲಿಂಪಿಕ್ಸ್‌ ಸ್ಪೋರ್ಟ್ಸ್‌ ಅಕಾಡೆಮಿ ಎಂಬ ಸಂಘಟನೆಯು ವಿಷಯವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲು ಸಿದ್ಧವಾಗಿದೆ. ಅದಕ್ಕೂ ಮೊದಲು ಸಂಬಂಧಿಸಿದ ಸಕ್ಷಮ ಪ್ರಾಧಿಕಾರಗಳಲ್ಲಿ ಮನವಿ ನೀಡಲಾಗುತ್ತಿದೆ. ಆ ಸಂಸ್ಥೆಗಳಿಂದ ಯಾವ ಉತ್ತರ ಬರುತ್ತದೆಯೋ ಕಾದು ನೋಡಬೇಕು. ನಂತರವೇ ಮುಂದಿನ ಹೆಜ್ಜೆ ಇರಿಸಲಾಗುವುದು. ನನ್ನ ಅಭಿಮಾನಿಗಳು ಈ ಬಗ್ಗೆ ದಾಪುಗಾಲು ಇಡಲು ಕಾತರದಿಂದಿದ್ದಾರೆ. * ಈ ಕುರಿತು ಸಂಬಂಧಿಸಿದವರಲ್ಲಿ ನೀವು ಏನಾದರೂ ಆಕ್ಷೇಪಣೆ ವ್ಯಕ್ತಪಡಿಸಿದ್ದೀರಾ? ಇನ್ನೂ ಇಲ್ಲ. ಆಯ್ಕೆ ಸಮಿತಿಯು ನನ್ನ ಕಡತವನ್ನೇ ಪರಿಶೀಲಿಸಿಲ್ಲ. ಹೀಗಾಗಿ ಮೊದಲಿಗೆ ಯಾರಲ್ಲಿ ಈ ದೂರು ಸಲ್ಲಿಸುವುದು ಎಂಬ ಗೊಂದಲದಲ್ಲಿದ್ದೇನೆ. ಒಂದು ವೇಳೆ ನನ್ನ ಕಡತವನ್ನು ಪರಿಶೀಲಿಸಿದ್ದರೆ ಎಲ್ಲಿ ನನಗೆ ಮೆರಿಟ್‌ ಆಧಾರದಲ್ಲಿ ಪ್ರಶಸ್ತಿ ಕೊಡಬೇಕಾಗುತ್ತದೆಯೋ ಎಂದು ಕ್ರೀಡಾ ಪ್ರಾಧಿಕಾರವು ಈ ಕಡತವನ್ನೇ ಬಚ್ಚಿಟ್ಟಿದೆ. ಇಷ್ಟಕ್ಕೂ ನಾನೊಬ್ಬ ಅಂಗವಿಕಲ. ಗ್ರಾಮೀಣ ಪ್ರದೇಶದವನು. ನನಗೆ ಯಾವುದೇ ಗ್ಲಾಮರ್‌ ಇಲ್ಲ. ಹೀಗಾಗಿ ನಮ್ಮಂಥವರನ್ನು ಈ ರೀತಿ ಶೋಷಣೆ ಮಾಡಲಾಗುತ್ತಿದೆ. * ಸಾನಿಯಾ ಮಿರ್ಜಾ ಕೂಡಾ ದೇಶದ ಹೆಮ್ಮೆಯಲ್ಲವೇ? ನೋಡಿ, ಸಾನಿಯಾ ಮಿರ್ಜಾ ಪಾಕಿಸ್ತಾನದ ಸೊಸೆ. ಅವರಿಗೆ ಪ್ರಶಸ್ತಿ ಕೊಡುವುದರಿಂದ ಎರಡೂ ದೇಶಗಳಲ್ಲಿ ಈ ವಿಷಯ ಎಲ್ಲರ ಗಮನ ಸೆಳೆಯುತ್ತದೆ ಎಂಬುದೇ ಇದರ ಹಿಂದಿರುವ ಉದ್ದೇಶ. ಇದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ. * ಸರ್ಕಾರ ಈ ತನಕ ನಿಮಗೆ ನೀಡಬೇಕಾದ ಗೌರವ, ಸೌಲಭ್ಯಗಳನ್ನೆಲ್ಲಾ ನೀಡಿದೆಯಲ್ಲಾ? ಹೌದು, ನಾನೀಗ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಉದ್ಯೋಗಿಯಾಗಿ ಕೈತುಂಬಾ ಸಂಬಳ ಪಡೆಯುತ್ತಿದ್ದೇನೆ. ಈ ಹಿಂದೆ ಲಂಡನ್‌ನಲ್ಲಿ ಪ್ರಶಸ್ತಿ ಪಡೆದಾಗ ಮತ್ತು ಇತರೆ ಪ್ರಶಸ್ತಿಗಳನ್ನು ಗಳಿಸಿದಾಗ ನನಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾವ ಮರ್ಯಾದೆ ನೀಡಬೇಕಿತ್ತೊ ಅವನ್ನೆಲ್ಲಾ ನೀಡಿವೆ. ಆದರೆ ಈ ಬಾರಿಯ ಖೇಲ್‌ ರತ್ನ ಪ್ರಶಸ್ತಿ ಆಯ್ಕೆಯಲ್ಲಿ, ಅಂಗವಿಕಲರನ್ನು ಮಲತಾಯಿ ಧೋರಣೆಯಿಂದ ಕಂಡಿದೆ. ಕಾನೂನನ್ನು ನಿರ್ದಾಕ್ಷಿಣ್ಯವಾಗಿ ಉಲ್ಲಂಘಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.