ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಪ್ರತಿಷ್ಠೆಯ ಕಣ ‘ವೃತ್ತಿಜೀವನದಲ್ಲಿ ಒಮ್ಮೆಯಾದರೂ ವಿಶ್ವ ಚಾಂಪಿಯನ್‌ ಷಿಪ್‌ನಲ್ಲಿ ಪದಕ ಗೆಲ್ಲಬೇಕೆಂಬುದು ಪ್ರತಿಯೊಬ್ಬ ಬ್ಯಾಡ್ಮಿಂಟನ್‌ ಆಟಗಾರನ ಕನಸಾಗಿರುತ್ತದೆ. ಅಲ್ಲಿ ಘಟಾನುಘಟಿ ಸ್ಪರ್ಧಿಗಳ ಸವಾಲು ಮೆಟ್ಟಿ ನಿಲ್ಲಬೇಕು ...’ ಕಾಮನ್‌ವೆಲ್ತ್‌ ಕ್ರೀಡಾಕೂಟದ ಪುರುಷರ ಸಿಂಗಲ್ಸ್‌ ನಲ್ಲಿ ಸ್ವರ್ಣದ ಸಾಧನೆ ಮಾಡಿರುವ ಭಾರತದ ಪರುಪಳ್ಳಿ ಕಶ್ಯಪ್‌ ಕೆಲ ದಿನಗಳ ಹಿಂದೆ ಸಂದರ್ಶನದಲ್ಲಿ ಹೇಳಿದ್ದ ಮಾತುಗಳಿವು. ಕಶ್ಯಪ್‌ ಅವರ ಮಾತುಗಳನ್ನು ಗಮನಿಸಿದರೆ ಈ ಚಾಂಪಿಯನ್‌ಷಿಪ್‌ನ ಮಹತ್ವದ ಅರಿವಾಗುತ್ತದೆ. ಕ್ರಿಕೆಟ್‌, ಫುಟ್‌ಬಾಲ್ ಕ್ರೀಡೆಗಳಂತೆ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಇಲ್ಲಿ ಪ್ರಶಸ್ತಿ ಗೆದ್ದವರು ಇತರ ಟೂರ್ನಿ ಗಳಿಗಿಂತಲೂ ಹೆಚ್ಚು ರ‍್ಯಾಂಕಿಂಗ್‌ ಪಾಯಿಂಟ್ಸ್‌ ಪಡೆಯುತ್ತಾರೆ. ಜತೆಗೆ ವಿಶ್ವ ಚಾಂಪಿಯನ್‌ ಪಟ್ಟವನ್ನೂ ಮುಡಿಗೇರಿಸಿಕೊಳ್ಳುತ್ತಾರೆ. ಹೀಗಾಗಿ ಪ್ರತಿಯೊಬ್ಬ ಸ್ಪರ್ಧಿಯೂ ಇದರಲ್ಲಿ ಆಡಲು ಹಾತೊರೆಯುತ್ತಾರೆ. ಆರಂಭದ ಹಾದಿ... 1977ರಲ್ಲಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಫೆಡರೇಷನ್‌ (ಐಬಿಎಫ್‌) ಮೊದಲ ಬಾರಿಗೆ ಚಾಂಪಿಯನ್‌ಷಿಪ್‌ ಆಯೋಜಿಸಿತ್ತು. ಆಗ ಇದನ್ನು ಮೂರು ವರ್ಷಕ್ಕೊಮ್ಮೆ ನಡೆಸಲು ತೀರ್ಮಾನಿಸಲಾಗಿತ್ತು. ಚೊಚ್ಚಲ ಚಾಂಪಿಯನ್‌ ಷಿಪ್‌ ಯಶಸ್ವಿಯಾಯಿತಾದರೂ ಬಳಿಕದ ಎರಡು (1980 ಮತ್ತು 1983) ಚಾಂಪಿಯನ್‌ಷಿಪ್‌ಗಳನ್ನು ನಡೆಸುವಲ್ಲಿ ಐಬಿಎಫ್‌ ಸಾಕಷ್ಟು ಅಡ್ಡಿ ಆತಂಕಗಳನ್ನು ಎದುರಿಸಬೇಕಾಯಿತು. ಐಬಿಎಫ್‌ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಜತೆ ವಿಲೀನಗೊಂಡ ಬಳಿಕ 1985ರಿಂದ ಎರಡು ವರ್ಷಕ್ಕೊಮ್ಮೆ ಚಾಂಪಿಯನ್‌ಷಿಪ್‌ ನಡೆಸಲು ನಿರ್ಧರಿಸಲಾಯಿತು. 1985ರಿಂದ 2005ರ ಅವಧಿಯಲ್ಲಿ 11 ಚಾಂಪಿಯನ್‌ಷಿಪ್‌ಗಳು ಸುಸೂತ್ರವಾಗಿ ಜರುಗಿದವು. ಈ ಯಶಸ್ಸಿನಿಂದ ಪ್ರೇರಿತವಾದ ಬಿಡಬ್ಲ್ಯುಎಫ್‌ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯುವ ವರ್ಷವನ್ನು ಹೊರತು ಪಡಿಸಿದಂತೆ 2006ರಿಂದ ವರ್ಷಕ್ಕೊಮ್ಮೆ ಚಾಂಪಿಯನ್‌ ಷಿಪ್‌ ನಡೆಸಿಕೊಂಡು ಬರುತ್ತಿದೆ. ಯಾವ್ಯಾವ ವಿಭಾಗಗಳಲ್ಲಿ ಸ್ಪರ್ಧೆ ವಿಶ್ವ ಚಾಂಪಿಯನ್‌ಷಿಪ್‌ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ಮತ್ತು ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಜರುಗುತ್ತದೆ. ಇದರಲ್ಲಿ ಚಾಂಪಿಯನ್‌ ಆಗುವ ಆಟಗಾರರಿಗೆ ಬಂಗಾರದ ಪದಕ ಸಿಗಲಿದ್ದು, ಎರಡನೇ ಸ್ಥಾನ ಪಡೆದವರಿಗೆ ಬೆಳ್ಳಿ ಹಾಗೂ ಸೆಮಿಫೈನಲ್‌ ಪ್ರವೇಶಿಸಿದವರಿಗೆ ಕಂಚಿನ ಪದಕ ನೀಡಲಾಗುತ್ತದೆ. ಇತರ ಟೂರ್ನಿಗಳಂತೆ ಇಲ್ಲಿ ಯಾವುದೇ ನಗದು ಬಹುಮಾನ ಕೊಡಲಾಗುವುದಿಲ್ಲ. ಇದುವರೆಗಿನ ಚಾಂಪಿಯನ್‌ಷಿಪ್‌ಗಳು ಈ ಬಾರಿಯೂ ಸೇರಿದಂತೆ ಇದುವರೆಗೆ ಒಟ್ಟು 22 ಚಾಂಪಿಯನ್‌ಷಿಪ್‌ಗಳು ನಡೆದಿವೆ. ಡೆನ್ಮಾರ್ಕ್‌ ನಾಲ್ಕು ಬಾರಿ ಇದರ ಆತಿಥ್ಯ ವಹಿಸಿದೆ. ಇಂಗ್ಲೆಂಡ್‌ ಮತ್ತು ಇಂಡೊ ನೇಷ್ಯಾದಲ್ಲಿ ತಲಾ ಮೂರು ಬಾರಿ ಚಾಂಪಿಯನ್‌ಷಿಪ್‌ ನಡೆದಿದೆ. ಚೀನಾ ಮತ್ತು ಸ್ಪೇನ್‌ನಲ್ಲಿ ತಲಾ ಎರಡು ಬಾರಿ ಜರುಗಿದ್ದರೆ ಭಾರತಕ್ಕೆ ಒಮ್ಮೆ ಮಾತ್ರ ಆತಿಥ್ಯ ವಹಿಸುವ ಅವಕಾಶ ಲಭಿಸಿತ್ತು. 2009ರಲ್ಲಿ ಹೈದರಾಬಾದ್‌ನಲ್ಲಿ ಚಾಂಪಿಯನ್‌ಷಿಪ್‌ ನಡೆದಿತ್ತು. ಸ್ವೀಡನ್‌, ಕೆನಡಾ, ಸ್ವಿಟ್ಜರ್‌ ಲೆಂಡ್‌, ಸ್ಕಾಟ್ಲೆಂಡ್‌, ಅಮೆರಿಕ, ಮಲೇಷ್ಯಾ ಮತ್ತು ಫ್ರಾನ್ಸ್‌ ಕೂಡಾ ತಲಾ ಒಮ್ಮೆ ಆತಿಥ್ಯ ವಹಿಸಿವೆ. ಮುಂದಿನ ವರ್ಷ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಒಲಿಂಪಿಕ್ಸ್‌ ಜರುಗು ವುದರಿಂದ ಚಾಂಪಿಯನ್‌ಷಿಪ್‌ ನಡೆಯುವುದಿಲ್ಲ. ಚೀನಾ ಸ್ಪರ್ಧಿಗಳ ಪ್ರಾಬಲ್ಯ ಚಾಂಪಿಯನ್‌ಷಿಪ್‌ನಲ್ಲಿ ಚೀನಾ ಹೆಚ್ಚು ಪದಕಗಳನ್ನು ಗೆದ್ದ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಈ ರಾಷ್ಟ್ರದ ಸ್ಪರ್ಧಿಗಳು 50 ಬಂಗಾರ, 40 ಬೆಳ್ಳಿ ಮತ್ತು 63 ಕಂಚಿನ ಪದಕಗಳನ್ನು ಬೇಟೆಯಾಡಿದ್ದಾರೆ. ಇಂಡೊನೇಷ್ಯಾ (67) ನಂತರದ ಸ್ಥಾನದಲ್ಲಿದ್ದು ಭಾರತ 16ನೇ ಸ್ಥಾನ ಹೊಂದಿದೆ. ಆರಂಭದಲ್ಲಿ ಚೀನಾ, ದಕ್ಷಿಣ ಕೊರಿಯಾ, ಡೆನ್ಮಾರ್ಕ್‌, ಇಂಡೊನೇಷ್ಯಾ ಮತ್ತು ಮಲೇಷ್ಯಾ ದೇಶಗಳು ಮಾತ್ರ ಪದಕ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದವು. 2005ರಲ್ಲಿ ದಾಖ ಲೆಯ ಹತ್ತು ರಾಷ್ಟ್ರಗಳು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಇದುವರೆಗೂ 20 ರಾಷ್ಟ್ರಗಳು ಮಾತ್ರ ಕನಿಷ್ಠ ಕಂಚು ಗೆದ್ದ ಸಾಧನೆ ಮಾಡಿವೆ. ಈ ಪೈಕಿ ಏಷ್ಯಾ ಖಂಡದ 10, ಯೂರೋಪ್‌ನ ಎಂಟು, ಉತ್ತರ ಅಮೆರಿಕ ಮತ್ತು ಒಸೀನಿಯಾದ ತಲಾ ಒಂದು ರಾಷ್ಟ್ರಗಳು ಪದಕ ಮಡಿಲಿಗೆ ಹಾಕಿಕೊಂಡಿವೆ. ಆಫ್ರಿಕಾ ಖಂಡದ ರಾಷ್ಟ್ರಗಳಿಗೆ ಇನ್ನೂ ಪದಕ ಗೆಲ್ಲಲಾಗಿಲ್ಲ. ಭಾರತದ ಸಾಧನೆ ಭಾರತ ಚಾಂಪಿಯನ್‌ಷಿಪ್‌ನಲ್ಲಿ ಇದುವರೆಗೂ ನಾಲ್ಕು ಕಂಚಿನ ಪದಕಗಳನ್ನು ಮಾತ್ರ ಗೆಲ್ಲಲು ಶಕ್ತವಾಗಿದೆ. ಕರ್ನಾ ಟಕದ ಪ್ರಕಾಶ್‌ ಪಡುಕೋಣೆ 1983ರಲ್ಲಿ ಡೆನ್ಮಾರ್ಕ್‌ನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಕಂಚು ಗೆದ್ದಿದ್ದರು. 2011ರ ಚಾಂಪಿಯನ್‌ಷಿಪ್‌ನ ಮಹಿಳೆ ಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಕಂಚು ಜಯಿಸಿದ್ದರು. ಆ ನಂತರ ಭಾರತಕ್ಕೆ ಸತತ ಎರಡು ಕಂಚು ಒಲಿದಿದೆ. 2013ರಲ್ಲಿ ಚೀನಾ ಮತ್ತು 2014ರಲ್ಲಿ ಡೆನ್ಮಾರ್ಕ್‌ನಲ್ಲಿ ಜರುಗಿದ್ದ ಚಾಂಪಿಯನ್‌ಷಿಪ್‌ಗಳಲ್ಲಿ ಪಿ.ವಿ.ಸಿಂಧು ಅವರಿಂದ ಈ ಸಾಧನೆ ಮೂಡಿಬಂದಿತ್ತು. ಈ ಬಾರಿ ಸೈನಾ ನೆಹ್ವಾಲ್‌ ಫೈನಲ್‌ ಪ್ರವೇಶಿಸಿ (ಶನಿವಾರದ ಅಂತ್ಯಕ್ಕೆ) ಬೆಳ್ಳಿ ಖಚಿತಪಡಿಸಿಕೊಂಡಿದ್ದರು. ಚಿನ್ನ ಗೆದ್ದ ಕಿರಿಯ ಸ್ಪರ್ಧಿ ರಚಾನೊಕ್‌ ಥಾಯ್ಲೆಂಡ್‌ನ ರಚಾನೊಕ್‌ ಇಂಟಾನೊನ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಕಿರಿಯ ಸ್ಪರ್ಧಿ ಎಂಬ ಹಿರಿಮೆ ಹೊಂದಿದ್ದಾರೆ. ರಚಾನೊಕ್‌ ತಮ್ಮ 18ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. 2013ರಲ್ಲಿ ಚೀನಾದ ಗುವಾಂಗ್‌ಜೌನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ರಚಾನೊಕ್‌ 22–20, 18–21, 21–14ರಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಚೀನಾದ ಲಿ ಕ್ಸುರುಯ್‌ ಅವರನ್ನು ಮಣಿಸಿ ಸ್ವರ್ಣಕ್ಕೆ ಕೊರಳೊಡ್ಡಿದ್ದರು.1995ರಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ದಕ್ಷಿಣ ಕೊರಿಯಾದ ಜಾಂಗ್‌ ಹೈ ಒಕ್‌ ಈ ಸಾಧನೆ ಮಾಡಿದ್ದರು. ಆಗ ಅವರಿಗೆ 18 ವರ್ಷ ಮೂರು ತಿಂಗಳು ವಯಸ್ಸಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.