ಹೊಸ ದಿಕ್ಕಿನತ್ತ ದೃಷ್ಟಿ ... ‘ಇತ್ತೀಚಿನ ವರ್ಷಗಳಲ್ಲಿ ಸ್ಕ್ವಾಷ್‌ ಕ್ರೀಡೆ ಸಾಕಷ್ಟು ಪ್ರಗತಿ ಸಾಧಿಸಿದೆ. ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಕ್ರೀಡಾಕೂಟಗಳಲ್ಲೂ ಮೆಚ್ಚುಗೆ ಪಡೆದಿದೆ. ಆದರೆ, ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಿಲ್ಲ ಎನ್ನುವುದೇ ಬೇಸರ ಉಂಟು ಮಾಡಿದೆ. ಸ್ಥಾನ ಲಭಿಸಿದರೆ ಯುವ ಪೀಳಿಗೆಯು ಈ ಕ್ರೀಡೆಯತ್ತ ಹೆಚ್ಚು ಆಸಕ್ತಿ ತೋರಿಸಬಹುದು. ಜೊತೆಗೆ ಕ್ರೀಡೆಯೂ ಜನಪ್ರಿಯವಾಗಲಿದೆ’ –ಭಾರತದ ಹೆಸರಾಂತ ಆಟಗಾರ ಸೌರವ್‌ ಘೋಷಾಲ್‌ ಹೇಳಿದ ಈ ಮಾತಿನಲ್ಲಿ ಅರ್ಥವಿದೆ. ಘೋಷಾಲ್‌ ಮಾತ್ರವಲ್ಲ; ವಿಶ್ವದ ಬಹುತೇಕ ಆಟಗಾರರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಫುಟ್‌ಬಾಲ್‌, ಅಥ್ಲೆಟಿಕ್ಸ್‌, ಹಾಕಿ ಆಟಗಾರರು ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೌದು, 2020ರಲ್ಲಿ ನಡೆಯುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಕ್ವಾಷ್‌ ಕ್ರೀಡೆಯನ್ನು ಸೇರಿಸಲು ಕಸರತ್ತು ನಡೆದಿದೆ. ಸಂಭಾವ್ಯ ಪಟ್ಟಿಯಲ್ಲಿ ಸ್ಕ್ವಾಷ್‌ ಈಗಾಗಲೇ ಸ್ಥಾನ ಪಡೆದಿದೆ. ಗ್ಲಾಸ್ಗೊ ಕಾಮನ್‌ವೆಲ್ತ್‌ ಕ್ರೀಡಾಕೂಟದ ವೇಳೆ ವ್ಯಕ್ತವಾದ ಅದ್ಭುತ ಪ್ರತಿಕ್ರಿಯೆ ಬಳಿಕ ಒಲಿಂಪಿಕ್ಸ್‌ನಲ್ಲಿ ಈ ಕ್ರೀಡೆಗೆ ಸ್ಥಾನ ನೀಡಬೇಕು ಎಂಬ ಕೂಗು ಎದ್ದಿದೆ. ಈ ಕೂಟದ ವೇಳೆ ಸ್ಕ್ವಾಷ್‌ ಕೋರ್ಟ್‌ನ ಗ್ಯಾಲರಿಯಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಭಾರತ ಒಲಿಂಪಿಕ್‌ ಸಂಸ್ಥೆ ಮುಖ್ಯಸ್ಥರೂ ಆಗಿರುವ ಅಂತರರಾಷ್ಟ್ರೀಯ ಸ್ಕ್ವಾಷ್‌ ಫೆಡರೇಷನ್‌ನ ಅಧ್ಯಕ್ಷ ಎನ್‌. ರಾಮಚಂದ್ರನ್‌ ಈಗಾಗಲೇ ಒಲಿಂಪಿಕ್ಸ್‌ ಸಂಘಟನಾ ಸಮಿತಿಗೆ ಸ್ಕ್ವಾಷ್‌ ಕ್ರೀಡೆಯಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಮನದಟ್ಟು ಮಾಡಿದ್ದಾರೆ. ಅಗ್ರ ಆಟಗಾರರೊಂದಿಗೆ ತೆರಳಿ ಪ್ರಾತ್ಯಕ್ಷಿಕೆ ಕೂಡ ನೀಡಿದ್ದಾರೆ. ಸ್ಕ್ವಾಷ್‌ ಕ್ರೀಡೆಯು 175 ದೇಶಗಳಲ್ಲಿ ಜನಪ್ರಿಯತೆ ಹೊಂದಿದೆ. ಒಲಿಂಪಿಕ್ಸ್‌ನಲ್ಲಿ ಸ್ಥಾನ ನೀಡಲೇಬೇಕೆಂದು ಈ ದೇಶಗಳಲ್ಲಿ ಅಭಿಯಾನ ನಡೆಯುತ್ತಿದೆ. ವಿಶ್ವದ ಅಗ್ರ ಆಟಗಾರರು ಸಹಿ ಆಂದೋಲನ ಹಮ್ಮಿಕೊಂಡಿದ್ದಾರೆ. ‘ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರೆ ಕ್ರೀಡೆಯು ಖಂಡಿತ ಜನಪ್ರಿಯವಾಗಲಿದೆ. ಜನರಿಗೂ ಕ್ರೀಡೆಯ ಮೇಲೆ ಆಸಕ್ತಿ ಬೆಳೆಯುತ್ತದೆ. ಸುಭದ್ರ ಅಡಿಪಾಯ ಲಭಿಸಲಿದೆ. ಅಷ್ಟೇ ಅಲ್ಲ; ಒಲಿಂಪಿಕ್ಸ್‌ ಕ್ರೀಡಾಕೂಟ ವೀಕ್ಷಿಸುವವರ ಸಂಖ್ಯೆಯೂ ಹೆಚ್ಚಾಗಲಿದೆ’ ಎಂಬುದು ಆಡಳಿತಗಾರರ ಇರಾದೆ. ನಿಜ, ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಬೇಕು ಎಂಬುದು ಪ್ರತಿ ಕ್ರೀಡಾಪಟುಗಳ ಕನಸು. ಅದಕ್ಕೆ ಸ್ಕ್ವಾಷ್‌ ಆಟಗಾರರು ಹೊರತೇನಲ್ಲ. ಯುವ ಪೀಳಿಗೆಯು ಹೆಚ್ಚು ಇಷ್ಟಪಡುವ ಕ್ರೀಡೆಗೆ ಸ್ಥಾನ ನೀಡಲು ಒಲಿಂಪಿಕ್ಸ್‌ ಸಂಘಟನಾ ಸಮಿತಿ ನಿರ್ಧರಿಸಿದೆ. ಸ್ಕ್ವಾಷ್‌ ಅಲ್ಲದೆ, ಸರ್ಫಿಂಗ್, ಟೆನ್‌ಪಿನ್‌ ಬೌಲಿಂಗ್ ಕ್ರೀಡೆಗಳು ಕೂಡ ಸ್ಪರ್ಧೆಯಲ್ಲಿವೆ. ಭಾರತದ ಹೆಜ್ಜೆಗಳು... ವಿಶ್ವ ಸ್ಕ್ವಾಷ್‌ನಲ್ಲಿ ಇತ್ತೀಚೆಗೆ ಭಾರತ ಇಡುತ್ತಿರುವ ಹೆಜ್ಜೆಗಳು ಹೊಸ ಭರವಸೆ ಮೂಡಿಸಿವೆ. ಏಷ್ಯಾದಲ್ಲೂ ಪ್ರಬಲ ಶಕ್ತಿಯಾಗಿ ಬೆಳೆಯುತ್ತಿದೆ. ದೀಪಿಕಾ ಪಳ್ಳಿಕಲ್‌, ಜೋಷ್ನಾ ಚಿಣ್ಣಪ್ಪ, ಸೌರವ್‌ ಘೋಷಾಲ್, ಹರೀಂದರ್‌ ಪಾಲ್‌ ಸಂಧು, ಅನಕಾ ಅಲಂಕಾಮೊನಿ, ಅಪರಾಜಿತಾ ಒಂದಿಲ್ಲೊಂದು ಟೂರ್ನಿಯಲ್ಲಿ ಮಿಂಚು ಹರಿಸುತ್ತಿದ್ದಾರೆ. 20 ವರ್ಷ ವಯಸ್ಸಿನ ಮಹೇಶ್‌ ಮನಗಾಂವ್ಕರ್‌ ಹಾಗೂ ಕುಶ್‌ ಕುಮಾರ್‌ ಜೂನಿಯರ್‌ ವಿಭಾಗದಲ್ಲಿ ಭರವಸೆ ಮೂಡಿಸಿದ್ದಾರೆ. ಕುಶ್‌ ಇತ್ತೀಚೆಗೆ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ತಲುಪಿದ್ದರು. ‘ಈ ಯಶಸ್ಸು ಒಂದೆರಡು ದಿನ ಗಳಲ್ಲಿ ಬಂದಿದ್ದಲ್ಲ. ಈ ಸಾಧನೆ ಹಿಂದೆ ಹತ್ತಾರು ವರ್ಷಗಳ ಬೆವರ ಹನಿ ಇದೆ. ಕ್ರೀಡಾಪಟುಗಳು, ಪೋಷಕರು ಹಾಗೂ ಕೋಚ್‌ಗಳ ತ್ಯಾಗವಿದೆ’ ಎಂದು ಇಂಚೆನ್‌ ಏಷ್ಯನ್‌ ಕ್ರೀಡಾಕೂಟದ ತಂಡ ವಿಭಾಗದಲ್ಲಿ ಚಿನ್ನ ಗೆದ್ದಾಗ ಘೋಷಾಲ್‌ ಹೇಳಿದ್ದರು. ಭಾರತದ ಸ್ಕ್ವಾಷ್‌ ಪಾಲಿಗೆ ಯಶಸ್ಸಿನ ಬುತ್ತಿಯನ್ನು ಕಟ್ಟಿಕೊಟ್ಟ ವರ್ಷವೆಂದರೆ 2014. ಇಂಚೆನ್‌ನಲ್ಲಿ ಭಾರತ ತೋರಿದ ಸಾಧನೆಗೆ ಇಡೀ ವಿಶ್ವವೇ ನಿಬ್ಬೆರಗಾಯಿತು. ಈ ಕ್ರೀಡಾಕೂಟಕ್ಕೆ ಮುಂಚೆ ಭಾರತ ಕೇವಲ ನಾಲ್ಕು ಕಂಚಿನ ಪದಕ ಜಯಿಸಿತ್ತು. ಬ್ಯಾಂಕಾಕ್‌ನಲ್ಲಿ ನಡೆದ 1998ರ ಏಷ್ಯನ್‌ ಕೂಟದಲ್ಲಿ ಸ್ಕ್ವಾಷ್‌ ಕ್ರೀಡೆಗೆ ಮೊದಲ ಬಾರಿ ಸ್ಥಾನ ನೀಡಲಾಗಿತ್ತು. ಆದರೆ, ಇಂಚೆನ್‌ನಲ್ಲಿ ನಡೆದ ಕೂಟ ಭಾರತದ ಸ್ಕ್ವಾಷ್‌ಗೆ ಹೊಸ ತಿರುವು ನೀಡಿತು. ಒಂದೇ ಕೂಟದಲ್ಲಿ ನಾಲ್ಕು ಪದಕಗಳನ್ನು ಗೆದ್ದಿದ್ದು ಅಮೋಘ ಸಾಧನೆ. ಇದರಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಸೇರಿವೆ. ದೀಪಿಕಾ ವಿಶ್ವ ರ‍್ಯಾಂಕಿಂಗ್‌ನಲ್ಲಿ ಹತ್ತರೊಳಗಿನ ಸ್ಥಾನದಲ್ಲಿದ್ದರೆ, ಘೋಷಾಲ್‌ 16ನೇ ಸ್ಥಾನ ಹೊಂದಿದ್ದಾರೆ. ಇವರೆಲ್ಲಾ ಚೆನ್ನೈನಲ್ಲಿರುವ ಸ್ಕ್ವಾಷ್‌ ಅಕಾಡೆಮಿಯಲ್ಲಿ ತರಬೇತಿ ಪಡೆದವರು. ವಿಶೇಷವೆಂದರೆ 14–15ನೇ ವಯಸ್ಸಿನಲ್ಲೇ ಇವರು ಈ ಅಕಾಡೆಮಿ ಸೇರಿದ್ದರು. ಇಲ್ಲಿ ತರಬೇತಿ ಪಡೆಯುತ್ತಿರುವ ಜೂನಿಯರ್‌ ಆಟಗಾರರು ಕೂಡ ವಿವಿಧ ಟೂರ್ನಿಗಳಲ್ಲಿ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ. ಈ ಅಕಾಡೆಮಿ ಶುರುವಾದ ಮೇಲೆ ಭಾರತದಲ್ಲಿ ಸ್ಕ್ವಾಷ್‌ನ ಹಣೆಬರಹವೂ ಬದಲಾಗಿದೆ. ಈ ಮಾತನ್ನು ರಾಷ್ಟ್ರೀಯ ಕೋಚ್‌ ಸೈರಸ್‌ ಪೋಂಚ ಕೂಡ ಒಪ್ಪಿಕೊಳ್ಳುತ್ತಾರೆ. ಅಷ್ಟೇ ಏಕೆ? 10 ವರ್ಷಗಳಿಂದ ಅಗ್ರಪಟ್ಟದಲ್ಲಿರುವ ಮಲೇಷ್ಯಾದ ಆಟಗಾರ್ತಿ ನಿಕೋಲಾ ಡೇವಿಡ್‌ ಕೂಡ ಸ್ಕ್ವಾಷ್‌ನಲ್ಲಿ ಭಾರತದ ಏಳಿಗೆಯನ್ನು ಇತ್ತೀಚೆಗೆ ಕೊಂಡಾಡಿದ್ದರು. ‘ಕಳೆದ ಕೆಲ ವರ್ಷಗಳಿಂದ ಭಾರತದ ಆಟಗಾರ್ತಿಯರೊಂದಿಗೆ ಪೈಪೋಟಿ ನಡೆಸುತ್ತಿದ್ದೇನೆ. ದೀಪಿಕಾ ಹಾಗೂ ಜೋಷ್ನಾ ಎದುರು ಆಡಿದ್ದೇನೆ. ಆದರೆ, ಇತ್ತೀಚೆಗೆ ಅವರನ್ನು ಎದುರಿಸುವುದು ಸವಾಲಾಗಿ ಪರಿಣಮಿಸಿದೆ. ದೀಪಿಕಾ ಏಕಾಏಕಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 10ರೊಳಗೆ ಸ್ಥಾನ ಪಡೆದಿಲ್ಲ. ಆ ಸ್ಥಾನ ಪಡೆಯಲು ಅನುಭವಿಸಿದ ಕಷ್ಟ ಅವರೊಬ್ಬರಿಗೆ ಗೊತ್ತಿದೆ. ಅಗ್ರ ಆಟಗಾರ್ತಿಯರನ್ನು ಸೋಲಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ’ ಎಂದು ನಿಕೋಲಾ ಬಣ್ಣಿಸುತ್ತಾರೆ. ಸ್ಕ್ವಾಷ್‌ ಅಂಗಳದ ಕೊರತೆ... ದೇಶದಲ್ಲಿ ಚೆನ್ನೈ ಹೊರತುಪಡಿಸಿದರೆ ಬೇರೆ ರಾಜ್ಯಗಳಲ್ಲಿ ಸ್ಕ್ವಾಷ್‌ ಕ್ರೀಡೆಗೆ ಸಂಬಂಧಿಸಿದ ಸೌಲಭ್ಯಗಳೇ ಇಲ್ಲ. ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆಂದು ರಾಜಧಾನಿ ನವದೆಹಲಿಯಲ್ಲಿ ನಿರ್ಮಿಸಲಾದ ಸೌಲಭ್ಯವೂ ಸರಿಯಾಗಿ ಬಳಕೆಯಾಗುತ್ತಿಲ್ಲ. ಸೌಲಭ್ಯ ದೊರೆತಲ್ಲಿ ಬೇರೆ ರಾಜ್ಯಗಳಿಂದಲೂ ಆಟಗಾರರು ಉದಯಿಸಬಹುದು. ಅಷ್ಟೇ ಅಲ್ಲ; ದೇಶದಲ್ಲಿ ಸ್ಕ್ವಾಷ್‌ ಬಗ್ಗೆ ಆಸಕ್ತಿಯನ್ನೂ ಹೆಚ್ಚಿಸಬಹುದು. ಈ ಆಟ ವೀಕ್ಷಿಸುವವರ ಸಂಖ್ಯೆಯೂ ಕಡಿಮೆ. ಗ್ರಾಮೀಣ ಪ್ರದೇಶದ ಹೆಚ್ಚಿನವರಿಗೆ ಸ್ಕ್ವಾಷ್‌ ಕ್ರೀಡೆ ಇರುವ ಬಗ್ಗೆಯೇ ಮಾಹಿತಿ ಇಲ್ಲ. ಬೆಂಗಳೂರಿನಲ್ಲಿಯೇ ಸರಿಯಾದ ಸೌಲಭ್ಯವಿಲ್ಲ. ಕೆಲ ಕ್ಲಬ್‌ಗಳಲ್ಲಿ ಮಾತ್ರ ಸ್ಕ್ವಾಷ್‌ ಕೋರ್ಟ್‌ಗಳು ಇವೆ. ಭಾರತದವರೇ ಅಂತರರಾಷ್ಟ್ರೀಯ ಸ್ಕ್ವಾಷ್‌ ಫೆಡರೇಷನ್‌ನ ಅಧ್ಯಕ್ಷರಾಗಿದ್ದಾರೆ. ಆದರೂ ಸೌಲಭ್ಯದ ವಿಚಾರದಲ್ಲಿ ಭಾರತ ಹಿಂದುಳಿದಿದೆ. ಪ್ರತಿ ವರ್ಷ ರಾಷ್ಟ್ರೀಯ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ ಆಯೋಜಿಸಲಾಗುತ್ತದೆ. ಆದರೆ, ಶೂಟಿಂಗ್‌ ಹಾಗೂ ಬಾಕ್ಸಿಂಗ್ ಸ್ಪರ್ಧೆಗಳಿಗೆ ಸಿಗುವಷ್ಟು ಪ್ರಚಾರ ಕೂಡ ಈ ಕ್ರೀಡೆಗೆ ಲಭಿಸುತ್ತಿಲ್ಲ. ಸದ್ಯ ಸ್ಕ್ವಾಷ್‌ನ ದೈತ್ಯ ಶಕ್ತಿಗಳು ಎನಿಸಿರುವ ಮಲೇಷ್ಯಾ, ಈಜಿಪ್ಟ್‌ ಹಾಗೂ ಇಂಗ್ಲೆಂಡ್‌ನಲ್ಲಿ ನೂರಾರು ಕ್ಲಬ್‌ಗಳಿವೆ. ದೊಡ್ಡ ದೊಡ್ಡ ಅಕಾಡೆಮಿಗಳಿವೆ. ಹೆಸರಾಂತ ಕೋಚ್‌ಗಳಿದ್ದಾರೆ. ಭಾರತ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳ ಆಟಗಾರರು ತರಬೇತಿ ಪಡೆಯಲು ಮಲೇಷ್ಯಾ ಹಾಗೂ ಇಂಗ್ಲೆಂಡ್‌ಗೆ ಹೋಗುತ್ತಾರೆ. ಮಲೇಷ್ಯಾದಲ್ಲಿ ಫುಟ್‌ಬಾಲ್‌ ಹಾಗೂ ಬ್ಯಾಡ್ಮಿಂಟನ್‌ನ ಪ್ರಸಿದ್ಧಿ ನಡುವೆಯೂ ಸ್ಕ್ವಾಷ್‌ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. 185 ದೇಶಗಳು ಸ್ಕ್ವಾಷ್‌ ಕ್ರೀಡೆಯಲ್ಲಿ ಸ್ಪರ್ಧಿಸುತ್ತಿವೆ. ಘೋಷಾಲ್‌ ಎಂಟು ವರ್ಷ ಇಂಗ್ಲೆಂಡ್‌ನಲ್ಲಿ ತರಬೇತಿ ಪಡೆದಿದ್ದರು. ಪಳ್ಳಿಕಲ್‌ ಹಾಗೂ ಜೋಷ್ನಾ ಕೂಡ ಇಂಗ್ಲೆಂಡ್‌ನಲ್ಲಿ ತರಬೇತಿ ಪಡೆದು ಬಂದಿದ್ದಾರೆ. ರಾಜ್ಯದಲ್ಲೂ ಹಿಂದೆ... ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಬೇರೆ ಯಾವುದೇ ನಗರಿಯಲ್ಲಿ ಸ್ಕ್ವಾಷ್‌ ಚಟುವಟಿಕೆಗಳೇ ನಡೆಯುತ್ತಿಲ್ಲ. ಟೂರ್ನಿಗಳು ಕೂಡ ನಡೆಯುವುದಿಲ್ಲ. ಹೆಸರಿಸಲು ಆಟಗಾರರೂ ಇಲ್ಲ. ಸೌಲಭ್ಯವಂತೂ ಇಲ್ಲವೇ ಇಲ್ಲ ಬಿಡಿ. ಅಷ್ಟರ ಮಟ್ಟಿಗೆ ರಾಜ್ಯದಲ್ಲಿ ಸ್ಕ್ವಾಷ್‌ ಕ್ರೀಡೆ ಹಿಂದುಳಿದಿದೆ. ದೇಶದಲ್ಲಿ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತದಲ್ಲಿ ಮಾತ್ರ ಸ್ಕ್ವಾಷ್‌ ಸಕ್ರಿಯವಾಗಿದೆ. ಈಗ ಹೆಸರು ಮಾಡಿರುವ ದೀಪಿಕಾ ಪಳ್ಳಿಕಲ್‌, ಜೋಷ್ನಾ ಚಿಣ್ಣಪ್ಪ ಸೇರಿದಂತೆ ಹೆಚ್ಚಿನವರು ಚೆನ್ನೈ ನಿವಾಸಿಗಳು. ಹೆಸರಾಂತ ಅಕಾಡೆಮಿ ಇರುವುದು ಇಲ್ಲಿಯೇ. ಹಾಗಾಗಿ ಚೆನ್ನೈ ನಗರಿಯು ಭಾರತ ಸ್ಕ್ವಾಷ್‌ನ ತವರು ಎನಿಸಿದೆ. ಸ್ಕ್ವಾಷ್‌ಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳು ಇಲ್ಲಿ ನಡೆಯುತ್ತವೆ. ಒಲಿಂಪಿಕ್ಸ್‌ನಲ್ಲಿ ಸ್ಥಾನ ಲಭಿಸಿದರೆ ಎಲ್ಲೆಡೆ ಜನಪ್ರಿಯವಾಗಬಹುದು ಎಂಬುದು ಸ್ಕ್ವಾಷ್‌ ಪ್ರಿಯರ ವಾದ. * ಸೌರವ್‌ ಘೋಷಾಲ್: ಇಂಚೆನ್‌ ಏಷ್ಯನ್‌ ಕ್ರೀಡಾಕೂಟದ ಪುರುಷರ ತಂಡ ವಿಭಾಗದಲ್ಲಿ ಚಿನ್ನ ಗೆಲ್ಲಲು ಮುಖ್ಯ ಕಾರಣ ಕೋಲ್ಕತ್ತದ ಸೌರವ್‌. ಅಷ್ಟೇ ಅಲ್ಲ; ಸಿಂಗಲ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಜೂನಿಯರ್‌ ವಿಭಾಗದ ವಿಶ್ವ ರ‍್ಯಾಂಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದರು. ವಿಶ್ವ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದ ಅವರು 2006 ಹಾಗೂ 2010ರ ಏಷ್ಯನ್‌ ಕೂಟದ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. * ದೀಪಿಕಾ ಪಳ್ಳಿಕಲ್‌: ಇಂಚೆನ್‌ ಏಷ್ಯನ್‌ ಕ್ರೀಡಾಕೂಟದ ಸಿಂಗಲ್ಸ್‌ನಲ್ಲಿ ಕಂಚು ಜಯಿಸಿದ್ದು ಐತಿಹಾಸಿಕ ಸಾಧನೆ. ಇದಕ್ಕೂ ಮುನ್ನ ಈ ಕ್ರೀಡೆ ಯಲ್ಲಿ ಭಾರತದ ಯಾವ ಆಟಗಾರ್ತಿಯೂ ಈ ಸಾಧನೆ ಮಾಡಿರಲಿಲ್ಲ. ತಂಡ ವಿಭಾಗದಲ್ಲಿ ಬೆಳ್ಳಿ ಗೆಲ್ಲಲು ಕಾರಣರಾಗಿದ್ದರು. ಟೆಕ್ಸಾಸ್‌ ಓಪನ್‌ನಲ್ಲಿ ರನ್ನರ್‌ ಅಪ್‌ ಆಗಿದ್ದರು. ಅಷ್ಟೇ ಅಲ್ಲ; ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದು ವಿಶೇಷ. 2014ರ ಕಾಮನ್‌ವೆಲ್ತ್‌ ಕೂಟದಲ್ಲಿ ಜೋಷ್ನಾ ಜೊತೆಗೂಡಿ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಅಂತರರಾಷ್ಟ್ರೀಯ ಮಹಿಳಾ ಸ್ಕ್ವಾಷ್‌ ಸಂಸ್ಥೆ ನೀಡುವ ‘ವರ್ಷದ ಆಟಗಾರ್ತಿ’ ಗೌರವ ಪಡೆದಿದ್ದಾರೆ. 23 ವರ್ಷದ ದೀಪಿಕಾ ಅವರಿಗೆ ಅರ್ಜುನ ಹಾಗೂ ಪದ್ಮಶ್ರೀ ಪುರಸ್ಕಾರ ಲಭಿಸಿದೆ. * ಜೋಷ್ನಾ ಚಿಣ್ಣಪ್ಪ: ಅತಿ ಕಿರಿಯ ರಾಷ್ಟ್ರೀಯ ಚಾಂಪಿಯನ್ ಎನಿಸಿರುವ ಕೊಡಗು ಮೂಲದ ಜೋಷ್ನಾ 2003ರಲ್ಲಿ ಬ್ರಿಟಿಷ್‌ ಓಪನ್‌ ಚಾಂಪಿಯನ್‌ ಆದಾಗ ಬೆಳಕಿಗೆ ಬಂದರು. 2012ರಲ್ಲಿ ನಡೆದ ಚೆನ್ನೈ ಓಪನ್‌ನಲ್ಲಿ ಇಂಗ್ಲೆಂಡ್‌ನ ಜೇನ್‌ ಪೆರ್ರಿ ಅವರನ್ನು ಮಣಿಸಿ ಚಾಂಪಿಯನ್‌ ಆಗಿದ್ದು ವಿಶೇಷ. ಹೋದ ವರ್ಷ ಕೆನಡದಲ್ಲಿ ವರ್ಲ್ಡ್‌ ಟೂರ್‌ ಪ್ರಶಸ್ತಿ ಹಾಗೂ ಕಾಮನ್‌ವೆಲ್ತ್‌ ಕೂಟದ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಇಂಚೆನ್‌ನಲ್ಲಿ ತಂಡ ವಿಭಾಗದಲ್ಲಿ ಬೆಳ್ಳಿ ಗೆಲ್ಲಲು ಜೋಷ್ನಾ ಆಟವೂ ಕಾರಣ. 28 ವರ್ಷದ ಅವರು ಕೆಲ ದಿನಗಳ ಹಿಂದೆ ಮೆಲ್ಬರ್ನ್‌ನಲ್ಲಿ ನಡೆದ ವಿಕ್ಟೋರಿಯಾ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಇದು ಅವರ ವೃತ್ತಿ ಜೀವನದ 10ನೇ ಪ್ರಶಸ್ತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.