ಚಾವಣಿ ಕುಸಿಯುವ ಭೀತಿ... ಕಣ್ಗಾವಲಿಗೆ ಸಿಸಿ ಕ್ಯಾಮರಾಗಳಿವೆ. ಆದರೆ ಶಿಥಿಲಗೊಳ್ಳುತ್ತಿರುವ ಕಟ್ಟಡಕ್ಕೆ ಯಾವ ಕಾವಲೂ ಇಲ್ಲ. ಯಾವಾಗ ಬೇಕಾದರೂ ಮೇಲ್ಚಾವಣಿ ಕುಸಿಯುವಂತಿದೆ. ಬಳ್ಳಾರಿಯ ರೇಡಿಯೋ ಪಾರ್ಕ್ ಪ್ರದೇಶದಲ್ಲಿರುವ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯದ ಮುಂದೆ ನಿಂತರೆ, ಹೊರಗೊಂದು ಸುತ್ತು ಹಾಕಿದರೆ, ಒಳ ಹೊಕ್ಕು ಓಡಾಡಿದರೆ ಈ ಪ್ರಶ್ನೆಗಳು ಮೂಡುತ್ತವೆ. ಹೊರನೋಟಕ್ಕೆ ಇದು ಸುಂದರವಾಗಿ ಕಾಣುವ ಕಲ್ಲಿನಿಂದ ಕಟ್ಟಿದ ಸರ್ಕಾರಿ ಕಟ್ಟಡ. ಸುತ್ತಮುತ್ತಲಿನ ವಿದ್ಯಾರ್ಥಿ ನಿಲಯಗಳ ಮಂದಿಯೂ ಇಲ್ಲಿನ ನೆರಳಲ್ಲಿ ಕುಳಿತು ಓದಿಕೊಳ್ಳುತ್ತಾರೆ. ಆದರೆ ಯಾರೂ ಕಟ್ಟಡದ ಹತ್ತಿರ ಸುಳಿಯುವುದಿಲ್ಲ. ಕಾರಣ ಇಷ್ಟೆ ಕಟ್ಟಡದ ಮೇಲ್ಚಾವಣಿ ಅಲ್ಲಲ್ಲಿ ಕುಸಿದಿದೆ. ಕಿಟಕಿಗಳ ಸಜ್ಜೆಗಳು ಕೂಡ ಕುಸಿದಿವೆ. ಇಲ್ಲಿ ಎಲ್ಲರಿಗೂ ಮೇಲ್ಚಾವಣಿ ಕುಸಿಯುವ ಭಯ, ಆತಂಕ. ಹಳೆಯದಾಗಿರುವ ನಿಲಯದ ಕಟ್ಟಡದಲ್ಲಿ 52 ಕೊಠಡಿಗಳಿವೆ. ಮೇಲಂತಸ್ತಿನ ಚಾವಣಿ ಕುಸಿಯುವ ಸ್ಥಿತಿಯಲ್ಲಿದೆ. ಹೀಗಾಗಿ ಕೆಳ ಅಂತಸ್ತಿನಲ್ಲಿರುವ 23 ಕೊಠಡಿ ಗಳಲ್ಲಷ್ಟೇ ವಿದ್ಯಾರ್ಥಿಗಳನ್ನು ಇರಿಸಲಾಗುತ್ತದೆ. ಮೇಲಂತ ಸ್ತಿನ ಕೊಠಡಿಗಳಿಗೆ ಯಾರಿಗೂ ಪ್ರವೇಶವಿಲ್ಲ. ಮೇಲಂ ತಸ್ತು ಕುಸಿದರೆ ಕೆಳ ಅಂತಸ್ತಿನಲ್ಲಿರುವವರಿಗೆ ಅಪಾಯವಾ ಗುವ ಸಾಧ್ಯತೆ ಬಗ್ಗೆ ಯಾರೂ ಗಮನವನ್ನೂ ಹರಿಸಿಲ್ಲ. ಮಾಸಲು ಗೋಡೆ ಕಲ್ಲು ಕಟ್ಟಡದ ಎಲ್ಲ ಒಳಗೋಡೆಗಳಿಗೆ ಸುಣ್ಣ–ಬಣ್ಣ ಬಳಿದು ಹಲವು ವರ್ಷಗಳಾಗಿವೆ. ಹೀಗಾಗಿ ಗೋಡೆಗಳು ಮಸುಕಾಗಿವೆ. ವಿದ್ಯುತ್‌ದೀಪದ ಬೆಳಕು ಎಷ್ಟೇ ಹಬ್ಬಿದರೂ ಮಸುಕು ಮರೆಯಾಗುವುದಿಲ್ಲ. ಹಳೆಯ ಗೋಡೆಗಳು ಸೂಸುವ ವಾಸನೆಯನ್ನು ತಡೆಯುವುದೂ ಕಷ್ಟ. ಗಾಳಿ ಮತ್ತು ಬೆಳಕು ಸರಾಗವಾಗಿ ಒಳಬಂದು ಹೊರ ಹೋಗುವ ಅನುಕೂಲ ಇಲ್ಲಿ ಕಡಿಮೆ. ಬಹಳಷ್ಟು ಕಿಟಕಿ ಗಳು ಸರಿಯಾಗಿ ಮುಚ್ಚಿ ತೆರೆಯುವ ಸ್ಥಿತಿಯಲ್ಲಿ ಇಲ್ಲ. ಕೆಲ ವೆಡೆ ಕಿಟಕಿಗಳ ಮೇಲಿನ ಸಜ್ಜೆಯ ಕಾಂಕ್ರಿಟ್‌ ಉದುರಿ ಬಿದ್ದಿರುವುದರಿಂದ ಆ ಕಿಟಕಿಗಳನ್ನು ಮುಟ್ಟುವಂತೆಯೇ ಇಲ್ಲ. ಮೇಲ್ಚಾವಣಿಯನ್ನು ಸಂಪೂರ್ಣ ತೆಗೆದು ಹೊಸದಾಗಿ ಅಳವಡಿಸುವ ಅಥವಾ ಇರುವುದನ್ನೇ ದುರಸ್ತಿ ಮಾಡುವ ಎರಡೂ ಸಾಧ್ಯತೆಯ ಕಡೆಗೆ ಇಲಾಖೆ ಇನ್ನು ಗಮನ ಹರಿಸಿಲ್ಲ. ಬಾಲಕಿಯರಿಲ್ಲ ಈ ನಿಲಯದಲ್ಲಿ ಬಾಲಕಿಯರಿಲ್ಲ. ಒಂದೇ ಕಟ್ಟಡದಲ್ಲಿ ಬಾಲಕರು–ಬಾಲಕಿಯರಿಗೆ ವಸತಿ ಸೌಕರ್ಯ ನೀಡಲು ಸಾಧ್ಯವಿಲ್ಲ ಎಂಬುದೇ ಕಾರಣ. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಕಟ್ಟಡ ಸೌಕರ್ಯ ದೊರಕಿದರೆ ಮಾತ್ರ ಇಪ್ಪತ್ತು ಬಾಲಕಿಯರನ್ನು ದಾಖಲಿಸಿಕೊಳ್ಳುವ ಉದ್ದೇಶವಿದೆ. ಭದ್ರ ಕಟ್ಟಡ ಮತ್ತು ಅಭದ್ರ ಮೇಲ್ಚಾವಣಿಯ ನಡುವೆ ಕಡೆಗೆ ಆತಂಕದಿಂದ ನೋಡುತ್ತಲೆ ಹಾಕಿ ತರಬೇತುದಾರ ಎಂ.ಜಾಕಿರ್‌ ಮತ್ತು ಅಥ್ಲೆಟಿಕ್‌ ತರಬೇತುದಾರ ಕೆ.ಎನ್.ರಾಮಸ್ವಾಮಿ ತರಬೇತಿ ನೀಡುತ್ತಿದ್ದಾರೆ. ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಕಾಲದ ಗಡುವು ಮೀರಿದ ನಿಲಯದ ಕಟ್ಟಡ ಮೌನವಾಗಿದೆ. * ಕ್ರೀಡಾಂಗಣ ದೂರ.... ಕಣ್ಣಿಗೂ ಮೂಗಿಗೂ ಮೂರು ಗಾವುದ ದೂರ ಎಂಬ ಗಾದೆ ಮಾತಿನಂತೆ, ಕ್ರೀಡಾ ವಸತಿ ನಿಲಯ ಮತ್ತು ತರಬೇತಿ ನಡೆಯುವ ಜಿಲ್ಲಾ ಕ್ರೀಡಾಂಗಣದ ನಡುವೆ ಎರಡೂವರೆ ಕಿ.ಮೀ ಅಂತರವಿದೆ. ಪ್ರತಿ ದಿನ ಬೆಳಿಗ್ಗೆ–ಸಂಜೆ ನಿಲಯದಿಂದ ಕ್ರೀಡಾಂಗಣಕ್ಕೆ ಬರುವಾಗ ಮತ್ತು ನಿಲಯಕ್ಕೆ ವಾಪಸಾಗುವಾಗ ವಿದ್ಯಾರ್ಥಿಗಳು ದಾರಿಹೋಕ ವಾಹನ ಚಾಲಕರಿಗೆ ಕೈ ಒಡ್ಡಿ ಲಿಫ್ಟ್ ಕೇಳುವುದು ಸಾಮಾನ್ಯ ದೃಶ್ಯವಾಗಿದೆ. ತರಬೇತಿ ಮುಗಿದ ಬಳಿಕ ಬಸವಳಿದು ಮತ್ತೆ ನಿಲಯಕ್ಕೆ ನಡೆದೇ ಹೋಗಬೇಕಾದ ವಿದ್ಯಾರ್ಥಿಗಳ ಪಾಡು ಕಷ್ಟಕರವಾಗಿದೆ. ಇಲಾಖೆಯು ಇನ್ನೂ ಅವರಿಗೆ ವಾಹನದ ವ್ಯವಸ್ಥೆ ಮಾಡಿಲ್ಲ. ವಿಸ್ತರಣೆ ಎಂಟರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗಷ್ಟೇ ಮೀಸಲಾಗಿದ್ದ ನಿಲಯಕ್ಕೆ ಐದನೇ ತರಗತಿ ವಿದ್ಯಾರ್ಥಿಗಳೂ ಇದೇ ವರ್ಷದಿಂದ ದಾಖಲಾಗುವ ಅವಕಾಶವೂ ನಿರ್ಮಾಣವಾಗಿದೆ. ಈಗಾಗಲೇ 12 ವಿದ್ಯಾರ್ಥಿಗಳು ಹೊಸದಾಗಿ ದಾಖಲಾಗಿದ್ದಾರೆ. ಹಳಬರು ಹೊಸಬರು ಸೇರಿ 42 ಮಂದಿಗೆ ತರಬೇತಿ ಆರಂಭವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.