ಲಿಲಿಪುಟ್‌ ಎದುರು ಗಲಿವರನೇ ಸೋತ ಕಥನ... ಆರು ದಿನಗಳ ಹಿಂದೆ ಗ್ವಾಮ್‌ ದೇಶದ ಫುಟ್‌ಬಾಲ್‌ ತಂಡ ಭಾರತ ತಂಡವನ್ನು 2–1 ಗೋಲುಗಳಿಂದ ಸೋಲಿಸಿತು. ಭಾರತೀಯ ಫುಟ್‌ಬಾಲ್‌ ಚರಿತ್ರೆಯಲ್ಲೇ ಇದೊಂದು ಮುಜುಗರದ ಅಧ್ಯಾಯ. ಫುಟ್‌ಬಾಲ್‌ಗೆ ಸಂಬಂಧಿಸಿದಂತೆ ಪೂರ್ವ ಏಷ್ಯಾದಲ್ಲಿ ಜಪಾನ್‌, ಉತ್ತರ ಮತ್ತು ದಕ್ಷಿಣ ಕೊರಿಯ, ಚೀನಾ ದೇಶಗಳ ನಂತರದ ಸ್ಥಾನಕ್ಕೇರಲು ಗ್ವಾಮ್‌ ದೇಶ ಹತ್ತು ವರ್ಷಗಳ ಯೋಜನೆಯನ್ನು ಹಮ್ಮಿಕೊಂಡಿದೆ. ಇಂಗ್ಲೆಂಡ್‌ನ ಕೋಚ್‌ ಗ್ಯಾರಿ ವೈಟ್‌ ಮಾರ್ಗದರ್ಶನದಲ್ಲಿ ಗ್ವಾಮ್‌ ತಂಡ ಸಜ್ಜುಗೊಳ್ಳುತ್ತಿದೆ. ಪುಟ್ಟದೇಶ ಗ್ವಾಮ್‌ನಿಂದ ಭಾರತೀಯ ಫುಟ್‌ಬಾಲ್‌ ಆಡಳಿತಗಾರರು ಕಲಿಯುವುದು ಬಹಳಷ್ಟಿದೆ. ಈ ಕುರಿತು ಪಿ.ಜಿ.ವಿಜು ಪೂಣಚ್ಚ ಅವರು ವಿಶ್ಲೇಷಣೆ ನಡೆಸಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೇ 31ರಂದು ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ಮತ್ತು ಕೋಲ್ಕತ್ತದ ಮೋಹನ್‌ ಬಾಗನ್‌ ನಡುವಣ ಐ ಲೀಗ್‌ ನಿರ್ಣಾಯಕ ಪಂದ್ಯ ನಡೆದಿತ್ತು. ರಾತ್ರಿ ಏಳು ಗಂಟೆಗೆಲ್ಲಾ ಆಟ ಶುರುವಾಗಿ ಒಂಬತ್ತು ಗಂಟೆಗೆ ಮುಗಿಯಿತು. ಆಟ ನಡೆದಷ್ಟೂ ಹೊತ್ತು ಮಳೆ ಎಡೆಬಿಡದೆ ಸುರಿಯುತ್ತಲೇ ಇತ್ತು. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಮಳೆಯಲ್ಲೇ ನಿಂತು ಆ ಪಂದ್ಯ ನೋಡಿ ಸಂಭ್ರಮಿಸಿದ್ದರು. ಮಂಗಳೂರಿನಲ್ಲಿ ಆಗಸ್ಟ್‌ನಲ್ಲಿ ಇಂಡಿಪೆಂಡೆನ್ಸ್‌ ಕಪ್‌ ಫುಟ್‌ಬಾಲ್‌ ಟೂರ್ನಿ ನಡೆಯುತ್ತದೆ. ನೂರಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳುತ್ತವೆ. ಕಳೆದ ಒಂದೂವರೆ ದಶಕದಿಂದ ನಡೆಯುತ್ತಿರುವ ಈ ಟೂರ್ನಿಗೆ ಮಳೆಯ ಕಾಟ ಸಾಮಾನ್ಯ. ಇವತ್ತಿಗೂ ಫೈನಲ್‌ ಪಂದ್ಯವನ್ನು ಆರೇಳು ಸಾವಿರ ಮಂದಿ ನಿಂತು ನೋಡುತ್ತಾರೆ. ಮಳೆ ಬಂದರೂ ಕದಲುವುದಿಲ್ಲ. ದೇಶದಾದ್ಯಂತ ಇಂತಹ ನೂರಾರು ‘ಬೆಂಗಳೂರು’ ‘ಮಂಗಳೂರು’ ಗಳಿವೆ. ಬೆಂಗಳೂರು ನಗರ ಒಂದರಲ್ಲೇ ಇಂದು ‘ಸೆವೆನ್ಸ್‌’ ಆಡುವ ಅಂಕಣಗಳೂ ಸೇರಿದಂತೆ ಕನಿಷ್ಠವೆಂದರೂ ನೂರಕ್ಕೂ ಹೆಚ್ಚು ಫುಟ್‌ಬಾಲ್‌ ಮೈದಾನಗಳಿವೆ. ಇಂಗ್ಲೆಂಡ್‌ನ ಪ್ರೀಮಿಯರ್‌ ಲೀಗ್‌, ಯೂರೊಪಿಯನ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಗಳು ನಡೆದಾಗ ಭಾರತದಲ್ಲಿ ಆ ಪಂದ್ಯಗಳನ್ನು ಟೆಲಿವಿಷನ್‌ನಲ್ಲಿ ನೋಡುವವರ ಸಂಖ್ಯೆ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸುವವರ ಸಂಖ್ಯೆ ಯಷ್ಟೇ ಇರುತ್ತದೆ ಎಂದು ಅಧ್ಯಯನ ಒಂದು ತಿಳಿಸಿದೆ. ಹೌದು, ಭಾರತದಲ್ಲಿ ಫುಟ್‌ಬಾಲ್‌ ಆಡುವವರ ಸಂಖ್ಯೆ, ನೋಡುವವರ ಸಂಖ್ಯೆ ಬಲು ದೊಡ್ಡದಿದೆ. ಮೈದಾನಗಳೂ ಅಸಂಖ್ಯ. ನಮ್ಮ ಫುಟ್‌ಬಾಲ್‌ ಪರಂಪರೆಯೂ ಹೆಮ್ಮೆ ಪಡುವಂತಹದ್ದೆ. 127 ವರ್ಷಗಳ ಹಿಂದಿನಿಂದಲೂ ನಮ್ಮಲ್ಲಿ ಡುರಾಂಡ್‌ ಕಪ್‌ ಟೂರ್ನಿ ನಡೆಯುತ್ತಲೇ ಇದೆ. 1948ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಫ್ರಾನ್ಸ್‌ ಎದುರು ಸಮಬಲದ ಸಾಮರ್ಥ್ಯ ತೋರಿದ್ದು, ಮೆಲ್ಬರ್ನ್‌ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ ತಲುಪಿದ್ದು, 1951 ಮತ್ತು 1962ರ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದಿದ್ದು ಸೇರಿದಂತೆ ಅನೇಕ ಮೈಲುಗಲ್ಲುಗಳು ನಮ್ಮಲ್ಲಿವೆ. ಆದರೂ ಇವತ್ತು ಜಾಗತಿಕ ಫುಟ್‌ಬಾಲ್‌ನಲ್ಲಿ ನಮ್ಮ ಧ್ವನಿ ಕ್ಷೀಣವಾಗಿದೆ. ಆರು ದಿನಗಳ ಹಿಂದೆ ಭಾರತ ತಂಡ ವಿಶ್ವಕಪ್‌ ಅರ್ಹತಾ ಹಂತದ ಎರಡನೇ ಸುತ್ತಿನಲ್ಲಿ ಗ್ವಾಮ್‌ ಎಂಬ ದೇಶದ ಎದುರು ಸೋತಿತು. ಈ ಸಂದರ್ಭದಲ್ಲಿ ಗಲಿವರ್‌ ಮತ್ತು ಲಿಲಿಪುಟ್‌ ಕಥೆ ನೆನಪಾಗುತ್ತದೆ. ಇಂಗ್ಲೆಂಡ್‌ನ ಜೊನಾಥನ್‌ ಸ್ವಿಫ್ಟ್‌ ಎಂಬ ಬರಹಗಾರ ಕ್ರಿ.ಶ.1726ರಲ್ಲಿ ‘ಗಲಿವರನ ಪ್ರವಾಸಗಳು...’ ಎಂಬ ಕೃತಿ ರಚಿಸುತ್ತಾನೆ. ಆಗಿನಿಂದಲೂ ಅತ್ಯಂತ ಜನಪ್ರಿಯವಾಗಿರುವ ಈ ಕೃತಿಯ ಕಥೆ ಹೀಗಿದೆ... ‘ನಮ್ಮೆಲ್ಲರಂತೆ ಸಾಮಾನ್ಯ ಮನುಷ್ಯನಾಗಿದ್ದ ಕಥಾನಾಯಕ ಗಲಿವರನು ಪ್ರವಾಸ ಮಾಡುತ್ತಿದ್ದ ಹಡಗು ಮುಳುಗುತ್ತದೆ. ಅವನಿಗೆ ಎಚ್ಚರವಾದಾಗ ಅಪರಿಚಿತ ದ್ವೀಪದ ಕಡಲ ತಡಿಯಲ್ಲಿರುತ್ತಾನೆ. ಆರು ಅಡಿ ಎತ್ತರದ ಅವನ ಸುತ್ತಲೂ ಸಾವಿರಾರು ಮಂದಿ ಕಿಕ್ಕಿರಿದಿರುತ್ತಾರೆ. ಅವರಲ್ಲಿ ಯಾರೂ ಆರು ಇಂಚಿಗಿಂತಲೂ ಹೆಚ್ಚು ಎತ್ತರವಿರಲಿಲ್ಲ. ಸಾವಿರಾರು ಮಂದಿ ಒಗ್ಗೂಡಿ ‘ಹಗ್ಗ’ದಿಂದ ಆತನನ್ನು ಬಿಗಿದು ಕಟ್ಟಿರುತ್ತಾರೆ. ಆದರೆ ಗಲಿವರನು ಎದ್ದು ಮೈ ಕೊಡವುತ್ತಿದ್ದಂತೆಯೇ ಆ ಹಗ್ಗಗಳೆಲ್ಲಾ ಕಳಚುತ್ತವೆ. ಜನರೆಲ್ಲರೂ ಚೆಲ್ಲಾಪಿಲ್ಲಿಯಾಗುತ್ತಾರೆ. ಆ ದ್ವೀಪದ ಹೆಸರು ಲಿಲಿಪುಟ್‌ . ಹೀಗಾಗಿ ಅಲ್ಲಿನ ಕಿರು ಆಕೃತಿಯ ನಿವಾಸಿಗಳನ್ನೂ ಲಿಲಿಪುಟ್‌ಗಳೆಂದೇ ಕರೆಯಲಾಗುತ್ತದೆ. ಶತಮಾನಗಳು ಉರುಳಿದರೂ ಗಲಿವರ ಮತ್ತು ಲಿಲಿಪುಟ್‌ಗಳ ಸಾಹಸ, ತಮಾಷೆ ಜಗತ್ತಿನಾದ್ಯಂತ ಜನಮಾನಸದಲ್ಲಿ ಹಾಸುಹೊಕ್ಕಾಗಿದೆ’. ಇದೀಗ, ಫುಟ್‌ಬಾಲ್‌ನಲ್ಲಿ ಗ್ವಾಮ್‌ಗೆ ಹೋಲಿಸಿದರೆ, ಭಾರತ ಗಲಿವರನೇ ಹೌದು. ಆದರೆ ಇದೀಗ ‘ಲಿಲಿಪುಟ್‌ ’ ದ್ವೀಪದ ಕೈಯಲ್ಲೇ ಭಾರತ ಸೋತು ಹೋಗಿದೆ. ಶಿವಮೊಗ್ಗ ನಗರದಲ್ಲಿರುವ ಅರ್ಧದಷ್ಟೂ ಜನರಿಲ್ಲ... ಪೆಸಿಫಿಕ್‌ ಸಾಗರದ ತಳದಲ್ಲಿ ಬಹಳ ಹಿಂದೆ ಪದರಗಳ ಪಲ್ಲಟ ನಡೆದಾಗ ಮತ್ತು ಜ್ವಾಲಾಮುಖಿ ಭುಗಿಲಾದಾಗ ನೂರಾರು ದ್ವೀಪಗಳು ಹುಟ್ಟು ಪಡೆದವು ಎಂದು ಭೂಗೋಳ ಶಾಸ್ತ್ರಜ್ಞರು ಹೇಳುತ್ತಾರೆ. ಗ್ವಾಮ್‌ ಅಂತಹದ್ದೊಂದು ದ್ವೀಪ. ಆಸ್ಟ್ರೇಲಿಯಾದಲ್ಲಿ ಸಹಸ್ರಮಾನಗಳಿಂದ ಹೇಗೆ ಕಪ್ಪು ಜನರು ನೆಲೆ ನಿಂತರೋ, ಅದೇ ರೀತಿ ಗ್ವಾಮ್‌ನಲ್ಲಿಯೂ ಕಪ್ಪು ಮಂದಿಯೇ ಮೂಲನಿವಾಸಿಗಳು. ಜಪಾನ್‌ಗೆ ಆಗ್ನೇಯದಲ್ಲಿ, ಹವಾಯ್‌ಗೆ ನೈರುತ್ಯದಲ್ಲಿ, ನ್ಯೂಗಿನಿಗೆ ಉತ್ತರದಲ್ಲಿ, ಫಿಲಿಪ್ಪೀನ್ಸ್‌ನ ಪೂರ್ವ ದಿಕ್ಕಿನಲ್ಲಿರುವ ಗ್ವಾಮ್‌ ದ್ವೀಪಕ್ಕೆ 1521ರಲ್ಲಿ ಪೋರ್ಚುಗಲ್‌ನ ನಾವಿಕ ಫರ್ಡಿನಾಂಡ್‌ ಮೆಗಲನ್‌ ಕಾಲಿಟ್ಟು, ಈ ಸ್ಥಳದ ಬಗ್ಗೆ ಮೊದಲಿಗೆ ಹೊರಜಗತ್ತಿಗೆ ತಿಳಿಸುತ್ತಾನೆ. ಇದಾಗಿ 44ನೇ ವರ್ಷದಲ್ಲಿ ಸ್ಪೇನ್‌ನ ಮಿಗ್ಯುಲ್‌ ಲೋಪೆಜ್‌ ಎಂಬ ನಾವಿಕ ಅಲ್ಲಿಗೆ ಹೋಗಿ ಆ ದ್ವೀಪ ಸ್ಪೇನ್‌ನ ವಸಾಹತು ಎಂದು ಘೋಷಿಸುತ್ತಾನೆ. 1898ರವರೆಗೆ ಆ ದ್ವೀಪ ಸ್ಪೇನ್‌ನ ಸುಪರ್ದಿಯಲ್ಲಿತ್ತು. ಆದರೆ 115 ವರ್ಷಗಳ ಹಿಂದೆ ಯುದ್ಧವೊಂದರಲ್ಲಿ ಅಮೆರಿಕದ ಎದುರು ಸೋತ ಸ್ಪೇನ್‌ ಆಡಳಿತಗಾರರು ಗ್ವಾಮ್‌ ಅನ್ನು ಅಮೆರಿಕಕ್ಕೆ ನೀಡುತ್ತಾರೆ. ನಂತರ ಎರಡು ಮಹಾಯುದ್ಧಗಳ ಆಗುಹೋಗುಗಳ ನಡುವೆ ಹಲವು ವರ್ಷ ಗ್ವಾಮ್‌ ದ್ವೀಪ ಜಪಾನಿಗಳ ನಿಯಂತ್ರಣದಲ್ಲಿರುತ್ತದೆ. ಎಪ್ಪತ್ತು ವರ್ಷಗಳ ಹಿಂದೆ ಈ ದ್ವೀಪ ಮತ್ತೆ ಅಮೆರಿಕದ ಕೈಸೇರುತ್ತದೆ. ಪೆಸಿಫಿಕ್‌ ಸಾಗರದಾದ್ಯಂತ ತಮ್ಮ ನಿಯಂತ್ರಣವಿರಿಸಿಕೊಳ್ಳುವ ಹುನ್ನಾರದಿಂದ ಅಮೆರಿಕ ಈ ದ್ವೀಪವನ್ನು ತನ್ನ ಸೇನಾ ನೆಲೆಯನ್ನಾಗಿಸಿಕೊಳ್ಳುತ್ತದೆ. ಗ್ವಾಮ್‌ ಕೇವಲ 541 ಚದರ ಕಿಲೋಮೀಟರ್‌ ವಿಸ್ತೀರ್ಣ ಹೊಂದಿದೆ. ಅಲ್ಲಿನ ಒಟ್ಟು19 ‘ಗ್ರಾಮ’ಗಳಲ್ಲಿ 1,60,000 ಜನ ನೆಲೆಸಿದ್ದಾರೆ. ಆದರೆ ಆ ದ್ವೀಪದ ಒಟ್ಟು ಭೂಪ್ರದೇಶದ ಶೇಕಡ 29ರಷ್ಟು ಪ್ರದೇಶ ಅಮೆರಿಕದ ಸೇನಾನೆಲೆಯಾಗಿದೆ! ನಮ್ಮ ಶಿವಮೊಗ್ಗ ನಗರದಲ್ಲಿರುವ ಜನರ (3,22,000) ಸಂಖ್ಯೆಯ ಅರ್ಧದಷ್ಟು ಜನಸಂಖ್ಯೆ ಈ ದ್ವೀಪದಲ್ಲಿದೆ! ಇರುವುದೊಂದೇ ಮೈದಾನ... ನಮಗಿರುವಂತಹ ಫುಟ್‌ಬಾಲ್‌ ಪರಂಪರೆಯೂ ಗ್ವಾಮ್‌ ದೇಶಕ್ಕೆ ಇಲ್ಲ. 1975ರಲ್ಲಿ ಮೊದಲ ಬಾರಿಗೆ ಅಲ್ಲಿ ರಾಷ್ಟ್ರೀಯ ತಂಡವೊಂದನ್ನು ಕಟ್ಟುತ್ತಾರೆ. ಆ ದೇಶಕ್ಕೆ 1996ರಲ್ಲಿ ಫಿಫಾ ಸದಸ್ಯತ್ವ ಸಿಕ್ಕಿತು. ಅದಾಗಿ ನಾಲ್ಕನೇ ವರ್ಷದಲ್ಲಿ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಗ್ವಾಮ್‌ ತಂಡವನ್ನು ಇರಾನ್‌ 19–0 ಗೋಲುಗಳಿಂದ ಸೋಲಿಸಿದ್ದರೆ, ತಾಜಿಕಿಸ್ತಾನ 16–0 ಗೋಲುಗಳಿಂದ ಮಣಿಸಿತ್ತು. ಆ ನಂತರ ಗ್ವಾಮ್‌ ಇದೇ ಮೊದಲ ಬಾರಿಗೆ ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಆಡುತ್ತಿರುವುದಾಗಿದೆ. 2009ರಲ್ಲಿ ಈಸ್ಟ್‌ ಏಷ್ಯಾ ಕಪ್‌ಗಾಗಿ ನಡೆದ ಟೂರ್ನಿಯೊಂದರಲ್ಲಿ ಮಂಗೋಲಿಯ ವಿರುದ್ಧ ಗ್ವಾಮ್‌ ಆಡಿ ಗೆಲ್ಲುತ್ತದೆ. ಆ ದೇಶ ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಮೊದಲ ಬಾರಿಗೆ ಗೆದ್ದ ದಾಖಲೆ ಅದು. ಅಲ್ಲಿ ರಾಷ್ಟ್ರೀಯ ಫುಟ್‌ಬಾಲ್‌ ಕ್ರೀಡಾಂಗಣವೊಂದಿದ್ದು, ಅಲ್ಲಿ ನಡೆಯುವ ಪಂದ್ಯಗಳನ್ನು ಕೇವಲ ಒಂದು ಸಾವಿರದಷ್ಟು ಮಂದಿ ಮಾತ್ರ ಕುಳಿತು ನೋಡಬಹುದು! ಆ ದೇಶದಲ್ಲಿರುವುದಕ್ಕಿಂತ ಹೆಚ್ಚು ಫುಟ್‌ಬಾಲ್‌ ಮೂಲಸೌಕರ್ಯಗಳು ನಮ್ಮ ಮಂಗಳೂರು ನಗರದಲ್ಲಿವೆ! ಇಂತಹದ್ದೊಂದು ದೇಶದ ಎದುರು ಭಾರತ ಸೋತಿತು. ಹೀಗಾಗಿ 2018ರಲ್ಲಿ ರಷ್ಯಾದಲ್ಲಿ ನಡೆಯುವ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗೆ ಸಂಬಂಧಿಸಿದ ಅರ್ಹತಾ ಸುತ್ತಿನ ಪೈಪೋಟಿಯಿಂದಲೇ ಭಾರತ ಬಹುತೇಕ ನಿರ್ಗಮಿಸಿದಂತಾಗಿದೆ. ಏನಿದು ಅರ್ಹತಾ ಸುತ್ತು... ವಿಶ್ವಕಪ್‌ ಕ್ರಿಕೆಟ್‌ನ ಪ್ರತಿ ಮಾಹಿತಿಗಳೂ ನಮಗೆ ಗೊತ್ತು. ಕ್ರಿಕೆಟ್‌ ಜಗತ್ತಿನಲ್ಲಿ ಭಾರತವೇ ಮಹಾರಾಜ. ಉತ್ತಮವಾಗಿ ಕ್ರಿಕೆಟ್‌ ಆಡುವ ಬೆರಳೆಣಿಕೆಯಷ್ಟು ದೇಶಗಳ ನಡುವೆ ಭಾರತವೇ ಎದ್ದು ಕಾಣುತ್ತದೆ. ಆಫ್ಘಾನಿಸ್ತಾನ, ಸ್ಕಾಟ್ಲೆಂಡ್‌ನಂತಹ ‘ಹಸುಗೂಸು’ಗಳೂ ಸೇರಿದಂತೆ 2015ರ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಒಟ್ಟಾರೆ 14 ತಂಡಗಳಷ್ಟೇ ಆಡಿದವು. ವಿಶ್ವಕಪ್‌ ಫುಟ್‌ಬಾಲ್‌ ಎಂದರೆ ಹಾಗಲ್ಲ. ಒಟ್ಟು 208 ದೇಶಗಳು ಪ್ರಧಾನ ಸುತ್ತು ತಲುಪಲು ಹಣಾಹಣಿ ನಡೆಸುತ್ತವೆ. ರಷ್ಯಾ ದೇಶವು ಆತಿಥೇಯ ಎಂಬ ಕಾರಣಕ್ಕೆ ತನ್ನಷ್ಟಕ್ಕೆ ತಾನೇ ಪ್ರಧಾನ ಹಂತದಲ್ಲಿ ಆಡುವ ಗೌರವ ಪಡೆದಿದೆ. ಉಳಿದ 31 ಸ್ಥಾನಗಳಿಗೆ ಅರ್ಹತೆ ಗಿಟ್ಟಿಸಲು 2015ರ ಮಾರ್ಚ್‌ 12ರಿಂದಲೇ ಹಣಾಹಣಿ ಶುರುವಾಗಿ ಬಿಟ್ಟಿದೆ. 2017ರ ನವೆಂಬರ್‌ 14ರ ವರೆಗೂ ಇದು ನಡೆಯುತ್ತದೆ. ಎರಡೂವರೆ ವರ್ಷಗಳ ಕಾಲ ನಡೆಯುವ ಈ ಅರ್ಹತಾ ಹಂತದ ಪಂದ್ಯಗಳೇ ರೋಚಕತೆ ಉತ್ತುಂಗದಂತಿರುತ್ತವೆ. ಏಷ್ಯಾ ಫುಟ್‌ಬಾಲ್‌ ಒಕ್ಕೂಟದಲ್ಲಿ 46 ದೇಶಗಳು ಆಡಿದರೆ, ಆಫ್ರಿಕಾ ಖಂಡದ 54 ದೇಶಗಳು, ಯೂರೊಪ್‌ನ 52 ದೇಶಗಳು, ಉತ್ತರ, ಮಧ್ಯ ಅಮೆರಿಕ ಮತ್ತು ಕೆರಿಬಿಯನ್‌ ಫುಟ್‌ಬಾಲ್‌ ಒಕ್ಕೂಟಗಳು ಸೇರಿದಂತೆ 35 ದೇಶಗಳು, ದಕ್ಷಿಣ ಅಮೆರಿಕಾದ 10 ದೇಶಗಳು, ಒಸಿನಿಯಾ ಒಕ್ಕೂಟದಲ್ಲಿ ನ್ಯೂಜಿಲೆಂಡ್‌ ಸೇರಿದಂತೆ 11 ದೇಶಗಳು ಹೋರಾಟ ನಡೆಸುತ್ತವೆ. ಏಷ್ಯಾ ಗುಂಪು ಒಂದರಲ್ಲೇ ನಾಲ್ಕು ಸುತ್ತುಗಳ ಪೈಪೋಟಿ ನಡೆಯುತ್ತದೆ. ಕೊನೆಗೆ 2017ರ ನವೆಂಬರ್‌ನಲ್ಲಿ ಅಂತರ ಖಂಡ ‘ಪ್ಲೇ ಆಫ್‌’ ಪಂದ್ಯಗಳೂ ನಡೆಯುತ್ತವೆ. ಅಂತಿಮದಲ್ಲಿ ಏಷ್ಯಾ ಖಂಡದಿಂದ 4ರಿಂದ 5 ತಂಡಗಳು, ಆಫ್ರಿಕಾದಿಂದ 5 ತಂಡ, ಉತ್ತರ ಅಮೆರಿಕ ವಲಯದಿಂದ 3ರಿಂದ 4 ತಂಡ, ದಕ್ಷಿಣ ಅಮೆರಿಕಾದಿಂದ 4ರಿಂದ 5 ತಂಡ, ಯೂರೊಪ್‌ನಿಂದ 13 ತಂಡಗಳು ಪ್ರಧಾನ ಹಂತದಲ್ಲಿ ಆಡಲು ಅರ್ಹತೆ ಪಡೆಯುತ್ತವೆ. ಒಸಿನಿಯಾ ದೇಶಗಳ ಗುಂಪಿನಿಂದ ಒಂದು ತಂಡ ಅರ್ಹತೆ ಪಡೆಯಲೂ ಕಷ್ಟ. ಹಲವು ಸಲ ಒಸಿನಿಯಾ ಗುಂಪಿನಿಂದ ಯಾವುದೇ ದೇಶಗಳು ಪ್ರಧಾನ ಹಂತ ತಲುಪಿಲ್ಲ. ಫಿಫಾ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 141ನೇ ಸ್ಥಾನದಲ್ಲಿರುವ ಭಾರತ ತಂಡ, ಏಷ್ಯಾ ಕ್ರಮಾಂಕ ಪಟ್ಟಿಯಲ್ಲಿ 35ನೇ ಕ್ರಮಾಂಕದಲ್ಲಿದೆ. ಫಿಫಾ ನಿಯಮದ ಪ್ರಕಾರ ಏಷ್ಯಾ ವಲಯದಲ್ಲಿ 35ರಿಂದ 46ರವರೆಗಿನ ಕ್ರಮಾಂಕದಲ್ಲಿರುವ ದೇಶಗಳು ಮೊದಲ ಸುತ್ತಿನ ಅರ್ಹತಾ ಪಂದ್ಯಗಳ ಮೂಲಕವೇ ಹೋರಾಟ ಆರಂಭಿಸಬೇಕು. ಹೀಗಾಗಿ ಭಾರತ 41ನೇ ಕ್ರಮಾಂಕದಲ್ಲಿರುವ ನೇಪಾಳದ ವಿರುದ್ಧ ಗೆದ್ದು ಎರಡನೇ ಸುತ್ತು ಪ್ರವೇಶಿಸಿತ್ತು. ಮೊದಲ 34ನೇ ಕ್ರಮಾಂಕದವರೆಗಿನ ದೇಶಗಳು ಮೊದಲ ಸುತ್ತಿನಲ್ಲಿ ಆಡಬೇಕಿಲ್ಲ. ಇದೀಗ ಎರಡನೇ ಸುತ್ತಿನಲ್ಲಿ ಭಾರತ ‘ಡಿ’ ಗುಂಪಿನಲ್ಲಿದೆ. ಇದೇ ಗುಂಪಿನಲ್ಲಿ ಭಾರತದ ಜತೆಗೆ ಇರಾನ್‌, ಒಮನ್‌, ತುರ್ಕಮೆನಿಸ್ತಾನ, ಗ್ವಾಮ್‌ ತಂಡಗಳಿವೆ. ಇರಾನ್‌ ಏಷ್ಯಾದ ಪ್ರತಿಷ್ಠಿತ ಎಎಫ್‌ಸಿ ಕಪ್‌ ಅನ್ನು ಹಿಂದೆ ಮೂರು ಸಲ ಗೆದ್ದಿದೆ. ಫಿಫಾ ಕ್ರಮಾಂಕ ಪಟ್ಟಿಯಲ್ಲಿ 41ನೇ ಸ್ಥಾನದಲ್ಲಿದೆ. ಇದೀಗ ಪೋರ್ಚುಗಲ್‌ನ ಕಾರ್ಲೋಸ್‌ ಕ್ವಿರೋಜ್‌ ಅವರಿಂದ ತರಬೇತು ಪಡೆದಿರುವ ಇರಾನ್‌ ವಿರುದ್ಧ ಭಾರತಕ್ಕೆ ಗೆಲ್ಲಲು ಸಾಧ್ಯವೇ ಇಲ್ಲ. ಫಿಫಾ ಪಟ್ಟಿಯಲ್ಲಿ 101ನೇ ಸ್ಥಾನದಲ್ಲಿರುವ ಒಮನ್‌ ಎದುರೂ ಭಾರತ ಈಗಾಗಲೇ ಸೋತಿದೆ. ಫಿಫಾ ಪಟ್ಟಿಯಲ್ಲಿ 173ನೇ ಸ್ಥಾನದಲ್ಲಿರುವ ತುರ್ಕಮೆನಿಸ್ತಾನದ ವಿರುದ್ಧ ಗೆದ್ದರೂ ಭಾರತಕ್ಕೆ ಮುಂದಿನ ಸುತ್ತು ತಲುಪಲು ಸಾಧ್ಯವೇ ಇಲ್ಲ. ‘ವಿದೇಶಿ’ ಆಟಗಾರರ ನೆಪ... ಗ್ವಾಮ್‌ ಎದುರು ಸೋತ ಒಡನೆ ಮಾತನಾಡಿದ ಭಾರತ ತಂಡದ ಕೋಚ್‌ ಸ್ಟೀಫನ್‌ ಕಾನ್‌ಸ್ಟೆಂಟೈನ್‌ ‘ಗ್ವಾಮ್‌ ತಂಡದಲ್ಲಿ ಅಮೆರಿಕ ಲೀಗ್‌ನಲ್ಲಿ ಆಡಿದ ಅನುಭವಿಗಳು ಇದ್ದಿದ್ದರಿಂದ ನಮ್ಮ ಆಟಗಾರರು ಪರದಾಡಿದರು’ ಎಂದಿದ್ದಾರೆ. ಇದು ಭಾರತದ ಸೋಲಿಗೆ ಸರಿಯಾದ ಸಮರ್ಥನೆಯಲ್ಲ. ಜಪಾನ್‌ನಿಂದ ಪ್ರತಿ ವರ್ಷವೂ ಬರುವ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಖರ್ಚು ಮಾಡುವ ಹಣವೇ ಗ್ವಾಮ್‌ ಆರ್ಥಿಕತೆಯ ಬೆನ್ನೆಲುಬು. ಈ ನಡುವೆ ಹಲವರು ಗ್ವಾಮ್‌ ತೊರೆದು ಅಮೆರಿಕದಲ್ಲಿ ಹೊಸ ಬದುಕು ಕಟ್ಟಿಕೊಳ್ಳಲು ಹೋಗುತ್ತಾರೆ. ಅವರಲ್ಲೇ ಅನೇಕ ಮಂದಿ ಅಮೆರಿಕದ ಫುಟ್‌ಬಾಲ್‌ ಕ್ಲಬ್‌ಗಳಲ್ಲಿ ಆಡುತ್ತಾರೆ. ಅಂತಹ ಏಳು ಮಂದಿ ಗ್ವಾಮ್‌ ತಂಡದಲ್ಲಿದ್ದರು, ನಿಜ. ಹಾಗೆ ಹೇಳುವುದಿದ್ದರೆ, ಬ್ರೆಜಿಲ್‌, ಅರ್ಜೆಂಟಿನಾ ಸೇರಿದಂತೆ ದಕ್ಷಿಣ ಅಮೆರಿಕದ ಬಹುತೇಕ ಆಟಗಾರರು ಯೂರೊಪಿಯನ್‌ ಕ್ಲಬ್‌ಗಳಲ್ಲೇ ಆಡುವವರು ತಾನೆ? ಆದರೆ ಭಾರತದ ಸೋಲಿಗೆ ಕೋಚ್‌ ಕಾನ್‌ಸ್ಟೆಂಟೈನ್‌ ಹೇಳಿದ್ದೇ ಮುಖ್ಯ ಕಾರಣವೇನಲ್ಲ. ಹಾಗಿದ್ದರೆ, ಬ್ರಿಟನ್‌, ನಾರ್ವೆ, ಹಾಲೆಂಡ್‌, ವೇಲ್ಸ್‌ನ ಸ್ವಾನ್ಸಿಯಗಳಲ್ಲಿ ಕ್ಲಬ್‌ ತಂಡಗಳಿಗೆ ಆಡುವ ಭಾರತೀಯ ಮೂಲದ ಕ್ರಮವಾಗಿ ಮೈಕೆಲ್‌ ಚೋಪ್ರಾ, ಹರ್ಮಿತ್‌ ಸಿಂಗ್‌, ಲೂಸಿಯಾನೊ ನರಸಿಂಗ್‌, ವೆಲ್ಸ್‌ಮನ್‌ ನೀಲ್‌ ಟೇಲರ್‌ ಅವರನ್ನು ಕರೆಸಿಕೊಂಡು ತಂಡ ಕಟ್ಟಿದರೆ ಭಾರತ ಗೆಲ್ಲುತ್ತದೆ ಎನ್ನುವುದೂ ಸರಿಯಲ್ಲ. ಗ್ವಾಮ್‌ ಎದುರು ಮುಖಭಂಗಕ್ಕೆ ಒಳಗಾಗಿರುವುದರಿಂದ ಭಾರತ ಫುಟ್‌ಬಾಲ್‌ ಫೆಡರೇಷನ್‌ನವರು ಇಂತಹದ್ದೊಂದು ನೆಪ ಮಾಡಿಕೊಂಡು ಭಾರತ ಕ್ರೀಡಾ ಸಚಿವಾಲಯದಲ್ಲಿ ಮಾತನಾಡಿದ್ದಾರೆ. ದೂರಾಲೋಚನೆಯ ಕೊರತೆ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ವಿವಿಧ ದೇಶಗಳ ಸಾಮರ್ಥ್ಯಕ್ಕೆ ಹೋಲಿಸಿದರೆ, ಭಾರತದಲ್ಲಿ ಫುಟ್‌ಬಾಲ್‌ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಐ ಲೀಗ್‌, ಇಂಡಿಯನ್‌ ಸೂಪರ್‌ ಲೀಗ್‌ ಸೇರಿದಂತೆ ಹತ್ತು ಹಲವು ಟೂರ್ನಿಗಳು ಭಾರತದಲ್ಲಿ ನಡೆಯುತ್ತಿವೆ. ವಿದೇಶಿ ಆಟಗಾರರು ಪ್ರತಿ ಕ್ಲಬ್‌ನಲ್ಲಿಯೂ ಮಿಂಚು ಹರಿಸುತ್ತಿದ್ದಾರೆ. ಸಾಕಷ್ಟು ಹಣವೂ ಹರಿಯುತ್ತಿದೆ. ಆದರೆ ರಾಷ್ಟ್ರೀಯ ತಂಡ ಮಾತ್ರ ಹೊಳೆಯುತ್ತಿಲ್ಲ. ಭಾರತದಲ್ಲಿ ಫುಟ್‌ಬಾಲ್‌ ಅಭಿವೃದ್ಧಿಗೆ ಫಿಫಾ ಕೂಡಾ ಹಣ ನೀಡುತ್ತಿದೆ. ಉದಾಹರಣೆಗೆ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಕೃತಕ ಹಾಸು ಹಾಕಲು ಮತ್ತು ಅಕಾಡೆಮಿ ನಡೆಸಲು ಸುಮಾರು ಎಂಟು ಕೋಟಿಯಷ್ಟು ಹಣ ನೀಡಿತ್ತು. ಆ ಹಣದಲ್ಲಿ ಟರ್ಫ್‌ ಹಾಸಲಾಯಿತು, ನಿಜ. ಆದರೆ ಇಡೀ ಕ್ರೀಡಾಂಗಣವನ್ನೇ ಇದೀಗ ಪುನರ್‌ನಿರ್ಮಾಣ ಮಾಡುವ ಪ್ರಯತ್ನಗಳು ನಡೆದಿದ್ದು, ಟರ್ಫ್‌ ವ್ಯರ್ಥವಾಗಲಿದೆ. ಅಕಾಡೆಮಿಯಂತೂ ನಿಂತೇ ಹೋಯಿತು. ಇಲ್ಲಿದ್ದ ಕಿರಿಯ ಆಟಗಾರರನ್ನು ಬೇರೆ ಕಡೆ ಕಳುಹಿಸಲಾಯಿತು. ಕೆಲವರು ಹೋದರು, ಹಲವರು ಹೋಗಲಿಲ್ಲ. ಇದು ನಮ್ಮ ಫುಟ್‌ಬಾಲ್‌ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಯೋಜನೆಗಳ ಒಂದು ನಿದರ್ಶನ. ಹಿಂದೆ ಹಲವು ವರ್ಷಗಳ ಕಾಲ 19 ವರ್ಷದೊಳಗಿನವರ ಮತ್ತು 21 ವರ್ಷದೊಳಗಿನವರ ರಾಷ್ಟ್ರೀಯ ಟೂರ್ನಿ ನಡೆಯುತಿತ್ತು. ಈಗ ಅದು ನಿಂತು ಹೋಗಿದೆ. ಸಂತೋಷ್‌ ಟ್ರೋಫಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ತನ್ನ ಮಹತ್ವ ಕಳೆದುಕೊಂಡಿದೆ. ನಮ್ಮ ರಾಜ್ಯದ ಬಗ್ಗೆಯೇ ಹೇಳುವುದಿದ್ದರೆ, ಫುಟ್‌ಬಾಲ್‌ ಎಂದರೆ ಅದು ಬೆಂಗಳೂರಿಗೆ ಮಾತ್ರ ಸೀಮಿತಗೊಂಡಿದೆ. ಅಂತರ ಜಿಲ್ಲಾ ಟೂರ್ನಿಯಂತೂ ಕಾಟಾಚಾರಕ್ಕೆ ಎಂಬಂತೆ ನಡೆಯುತ್ತಿದೆ. ಎಲ್ಲಾ ರಾಜ್ಯಗಳಲ್ಲೂ ಇದೇ ಕಥೆ. ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನವರು ಬಲಿಷ್ಠ ರಾಷ್ಟ್ರೀಯ ತಂಡ ಕಟ್ಟುವ ಬಗ್ಗೆ ನಿರಾಸಕ್ತಿ ತಾಳಿದಂತಿದೆ. ಈಚೆಗೆ ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಆಡಬೇಕಿದ್ದ ರಾಷ್ಟ್ರೀಯ ತಂಡಕ್ಕೆ ಕಡಿಮೆ ಎಂದರೂ ಒಂದು ತಿಂಗಳ ತರಬೇತಿ ನೀಡಬೇಕಿತ್ತು. ಆದರೆ ಬಹುತೇಕ ಆಟಗಾರರು ಐ ಲೀಗ್‌ ಪಂದ್ಯಗಳಲ್ಲಿ ಆಡುತ್ತಿದ್ದರು. ಅಂತಹ ಆಟಗಾರರನ್ನು ಕ್ಲಬ್‌ ಬಿಡುಗಡೆ ಮಾಡಲೇ ಇಲ್ಲ. ರಾಷ್ಟ್ರೀಯ ಫೆಡರೇಷನ್‌ ಬಾಯಿ ಮುಚ್ಚಿ ಕುಳಿತಿತ್ತು. ಕೊನೆಗೆ ಕೆಲವೇ ದಿನಗಳ ತರಬೇತಿಯ ನಂತರ ತಂಡ ಒಮನ್‌ ಎದುರು ಆಡುವಂತಾಯಿತು. ರಾಷ್ಟ್ರೀಯ ಫೆಡರೇಷನ್‌ನ ಆಡಳಿತಗಾರರಿಗೆ ‘ರಾಷ್ಟ್ರೀಯ ಕರ್ತವ್ಯ’ಕ್ಕಿಂತ ಚಿನ್ನದ ಮೊಟ್ಟೆ ಇಡುವ ಕ್ಲಬ್‌ ಮಾಲೀಕರ ಆದೇಶವೇ ಮುಖ್ಯವಾಯಿತು. ಆಟಗಾರರಿಗೆ ಉದ್ಯೋಗವಕಾಶಗಳು ಹಿಂದಿನಂತಿಲ್ಲ, ಕಡಿಮೆಯಾಗಿದೆ. ಫೆಡರೇಷನ್‌ಗೆ ‘ಕ್ಲಬ್‌’ಗಳ ಬಗ್ಗೆ ಇರುವ ಪ್ರೀತಿ ‘ರಾಷ್ಟ್ರೀಯ ತಂಡ’ದ ಬಗ್ಗೆ ಇಲ್ಲ ಎಂಬುದು ಈಗ ನಿಚ್ಚಳವಾಗಿದೆ. ಇಂತಹ ಹತ್ತು ಹಲವು ಕಾರಣಗಳಿಂದ ಭಾರತದಲ್ಲಿ ಫುಟ್‌ಬಾಲ್‌ ಸೊರಗುತ್ತಿದೆ. ಆದರೆ ಫುಟ್‌ಬಾಲ್‌ ಅಭಿಮಾನಿಗಳ ಸಂಖ್ಯೆ ಕುಂದಿಲ್ಲ, ಆಟಗಾರರ ಸಂಖ್ಯೆ ಇಳಿಮುಖವಾಗಿಲ್ಲ. ಆಡಳಿತಗಾರರ ಅದಕ್ಷತೆ ಮತ್ತು ಅನ್ಯಮನಸ್ಕತೆಯಿಂದಾಗಿಯೇ ಇವತ್ತು ಭಾರತ ಫುಟ್‌ಬಾಲ್‌ ಲೋಕದ ‘ಲಿಲಿಪುಟ್‌’ ಆಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.