ಪ್ರಾಥಮಿಕ ಶಾಲೆಗೂ ಮಾಂಟೆಸ್ಸರಿ ಪದ್ಧತಿ ಇಟಲಿ ಮೂಲದ ವೈದ್ಯೆ ಮರಿಯಾ ಮಾಂಟೆಸ್ಸರಿ ಅವರು ಪ್ರಚುರಪಡಿಸಿದ ಮಾಂಟೆಸ್ಸರಿ ಶಿಕ್ಷಣ ಪದ್ಧತಿ ರಾಜ್ಯದಲ್ಲೂ ಹೆಚ್ಚು ಜನಪ್ರಿಯವಾಗುತ್ತಿದೆ. ಪೂರ್ವ ಪ್ರಾಥಮಿಕ ಹಂತಕ್ಕೆ ಮಾತ್ರ ಸೀಮಿತವಾಗಿದ್ದ ಈ ಪದ್ಧತಿ ಇತ್ತೀಚಿನ ದಿನಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲೂ ಬಳಕೆಯಾಗುತ್ತಿದೆ. ಎರಡೂವರೆ ವರ್ಷದಿಂದ ಆರು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕಲಿಸುವ ವಿಧಾನ ಇದಾಗಿದ್ದು, ಇಲ್ಲಿ ಪಾಠ ಪ್ರವಚನವಾಗಲೀ, ಬೋಧನೆಯಾಗಲೀ ಇರುವುದಿಲ್ಲ. ಬದಲಿಗೆ ಅನುಭವದ ಮೂಲಕ ಮಕ್ಕಳು ಆಡುತ್ತಾ, ನಲಿಯುತ್ತಾ ಕಲಿಯುತ್ತಾರೆ. ಈ ಪದ್ಧತಿಯಲ್ಲಿ ಮಕ್ಕಳಿಗೆ ಮೂರು ವಿಧಾನಗಳಲ್ಲಿ ಹೇಳಿಕೊಡಲಾಗುತ್ತದೆ. ಸೂಕ್ತ ಪರಿಸರ: ಮಕ್ಕಳು ಪರಿಸರದಲ್ಲಿನ ವಸ್ತುವನ್ನು ನೋಡಿದ ತಕ್ಷಣ ತಿಳಿದುಕೊಳ್ಳುವಂತಿರುತ್ತದೆ. ನೋಡಿದ ವಸ್ತುವಿನಿಂದ ಉತ್ತೇಜಿತರಾಗಿ ಕಲಿಯುತ್ತಾರೆ. ಅದಕ್ಕೆಂದೇ ವಿಶೇಷವಾಗಿ ಪರಿಸರ ಸೃಷ್ಟಿಸಲಾಗಿರುತ್ತದೆ. ಇಲ್ಲಿ ಕಲಿಕಾ ಸಾಮಗ್ರಿಗಳನ್ನು ಇಟ್ಟಿರುತ್ತಾರೆ. ಇವು ವೈಜ್ಞಾನಿಕ ನೆಲೆಗಟ್ಟಿನಲ್ಲಿ ತಯಾರಿಸಿದ ಸಾಮಗ್ರಿಗಳು. ವ್ಯಾಕರಣ, ಭಾಷೆ, ಬಣ್ಣ, ಗಾತ್ರ, ವಿಸ್ತೀರ್ಣ, ಗಣಿತ... ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಸಾಮಗ್ರಿಗಳ ಮೂಲಕ ಮಕ್ಕಳಿಗೆ ಶಿಕ್ಷಣ ದೊರೆಯುತ್ತದೆ. ವೈಜ್ಞಾನಿಕ ಉಪಕರಣ: ವಸ್ತುಗಳನ್ನು ಮಕ್ಕಳ ಕಣ್ಣಿಗೆ ಕಾಣುವಂತೆ ಪ್ರದರ್ಶಿಸಲಾಗುತ್ತದೆ. ಅಲ್ಲದೇ ಅವರ ಕೈಗೆಟಕುವಂತ್ತಿರುತ್ತವೆ. ಯಾವ ಸಲಕರಣೆ ಜೊತೆಗಾದರೂ, ಎಷ್ಟು ಸಮಯವಾದರೂ ಚಟುವಟಿಕೆಯಿಂದ ಇರುವಷ್ಟು ಸ್ವಾತಂತ್ರ್ಯವನ್ನು ಕೊಟ್ಟಿರುತ್ತಾರೆ. ಮಕ್ಕಳು ಏನನ್ನಾದರೂ ಕಲಿಯಲು ಆಸಕ್ತಿಯಿಂದ ತಾವೇ ಆಯ್ಕೆ ಮಾಡಿಕೊಳ್ಳುವಂತಿರುತ್ತದೆ. ತಮ್ಮದೇ ರೀತಿಯಲ್ಲಿ ಆಡುತ್ತಾ, ಖುಷಿಯಿಂದ ಅಭ್ಯಾಸ ಮಾಡುತ್ತಾರೆ. ಪ್ರೌಢರು: ಮಕ್ಕಳಿಗೆ ಕಲಿಸಲು ‘ಪ್ರೌಢರು’ ಎಂಬ ಶಿಕ್ಷಕರು ಇರುತ್ತಾರೆ. ಇವರನ್ನು ಮಕ್ಕಳು ‘ಆಂಟಿ’, ‘ಅಕ್ಕ’ ಎಂದೂ ಕರೆಯುತ್ತಾರೆ. ಇವರು ಇಂಡಿಯನ್‌ ಮಾಂಟೆಸ್ಸರಿ ಸೆಂಟರ್‌ನಿಂದ ವಿಶೇಷ ತರಬೇತಿ ಪಡೆದವರಾಗಿರುತ್ತಾರೆ. ಮಕ್ಕಳಿಗೆ ಯಾವ ಸಮಯದಲ್ಲಿ, ಯಾವ ವಿಷಯಕ್ಕೆ ಸಂಬಂಧಿಸಿದಂತೆ, ಏನನ್ನು ಕಲಿಸಬೇಕು? ಎಂಬುದನ್ನು ಹೇಳಿಕೊಟ್ಟಿರುತ್ತಾರೆ. ಇವರು ಮಕ್ಕಳಿಗೆ ಏನು ಅಗತ್ಯ ಎಂಬುದನ್ನು ಮೊದಲು ತಿಳಿದುಕೊಂಡಿರಬೇಕಾಗುತ್ತದೆ. ಯಾವ ವಿಷಯವನ್ನು ಯಾವ ಸಂದರ್ಭದಲ್ಲಿ ಹೇಳಿಕೊಡಬೇಕು ಎಂಬುದು ಸೇರಿದಂತೆ ಒಟ್ಟಾರೆ ಮಕ್ಕಳ ಅವಲೋಕನ ಮಾಡಬೇಕು. ‘ಮಾಂಟೆಸ್ಸರಿ ಅವರು 1939ರಲ್ಲಿ ಚೆನ್ನೈನಲ್ಲಿ ಮೊದಲ ಮಾಂಟೆಸ್ಸರಿ ಕೇಂದ್ರ ಆರಂಭಿಸಿದರು. ಮಾಂಟೆಸ್ಸರಿ ಪದ್ಧತಿಯಲ್ಲಿ ಮಕ್ಕಳು ಸ್ವಯಂ ಪ್ರೇರಿತವಾಗಿ ತಮಗಿಷ್ಟದ ವಿಷಯವನ್ನು ಆಯ್ಕೆ ಮಾಡಿಕೊಂಡು ಕಲಿಯುವ ವಾತಾವರಣ ಸೃಷ್ಟಿಸಲಾಗಿರುತ್ತದೆ. ಸಿಬಿಎಸ್‌ಸಿ, ಐಸಿಎಸ್‌ಸಿ ಅಥವಾ ಸ್ಟೇಟ್‌ ಸಿಲಬಸ್ ಅನ್ನೂ ಸಹ ಮಾಂಟೆಸ್ಸರಿ ವಿಧಾನದ ಮೂಲಕ ಹೇಳಿಕೊಡಬಹುದು. ಆದರೆ ಕಲಿಕೆಯ ರೀತಿ ಬೇರೆಯಾಗಿರುತ್ತದೆ. ಈ ವಿಧಾನ ಇತ್ತೀಚಿನ ದಿನಗಳಲ್ಲಿ ಪ್ರಾಥಮಿಕ ಶಾಲೆ ಹಂತಗಳಲ್ಲೂ ಪರಿಚಯಿಸಲಾಗುತ್ತಿದೆ. ಉದಾಹರಣೆಗೆ ಬೆಂಗಳೂರಿನ ಆತ್ರೇಯ, ಅನ್ವೇಷಣಾ, ವಿದ್ಯಾನಿಕೇತನ, ವೇಲಿಯಂಟ್‌ ಅಕಾಡೆಮಿ, ಗುರುಕುಲ ಶಾಲೆಗಳಲ್ಲಿ ಪರಿಚಯಿಸಲಾಗಿದೆ’ ಎನ್ನುತ್ತಾರೆ ಇಂಡಿಯನ್‌ ಮಾಂಟೆಸ್ಸರಿ ಸೆಂಟರ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಅನಂತ ಪದ್ಮನಾಭ. ಮಾಂಟೆಸ್ಸರಿ ಟೀಚರ್‌ ಟ್ರೈನಿಂಗ್‌ ಕೋರ್ಸ್‌ ಪ್ರತಿ ವರ್ಷ ಮಾರ್ಚ್‌ನಲ್ಲಿ ಮಾಂಟೆಸ್ಸರಿ ಟೀಚರ್‌ ಟ್ರೈನಿಂಗ್‌ ಕೋರ್ಸ್‌ಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಇದರಲ್ಲಿ ಪೂರ್ವ ಪ್ರಾಥಮಿಕ ಹಂತ ಹಾಗೂ ಪ್ರಾಥಮಿಕ ಹಂತ ಎರಡು ಕೋರ್ಸ್‌ಗಳಿವೆ. ಪೂರ್ವ ಪ್ರಾಥಮಿಕ ಹಂತಕ್ಕೆ 10ನೇ ತರಗತಿ ಉತ್ತೀರ್ಣರಾಗಿರಬೇಕು. ಪ್ರಾಥಮಿಕ ಹಂತಕ್ಕೆ ಯಾವುದೇ ಪದವಿ ಆದವರೂ ಸಹ ಅರ್ಹರಾಗಿರುತ್ತಾರೆ. ಒಂದು ವರ್ಷ ಹಾಗೂ 16 ತಿಂಗಳ ಕೋರ್ಸ್‌ಗಳಾಗಿವೆ. ಉದ್ಯೋಗವಕಾಶ: ಈ ತರಬೇತಿ ಕೋರ್ಸ್‌ ಮುಗಿಸಿದವರು ಮಾಂಟೆಸ್ಸರಿ ಕೇಂದ್ರಗಳು, ಪಬ್ಲಿಕ್‌ ಹಾಗೂ ಅಂತರರಾಷ್ಟ್ರೀಯ ಶಾಲೆಗಳಲ್ಲಿ ಶಿಕ್ಷಕರಾಗಬಹುದು. ಬೆಂಗಳೂರಿನಲ್ಲಿಯೇ 350ಕ್ಕೂ ಹೆಚ್ಚಿನ ಶಾಲೆಗಳಿವೆ. 10ರಿಂದ 20 ಸಾವಿರದವರೆಗೂ ಸಂಬಳ ಪಡೆಯಬಹುದು. ಅಲ್ಲದೇ ತರಬೇತಿ ಪಡೆದು ಸ್ವಂತ ಮಾಂಟೆಸ್ಸರಿ ಕೇಂದ್ರವನ್ನು ಆರಂಭಿಸಬಹುದು. ಮೂರು ಹಂತದ ತರಬೇತಿ *ತಾಂತ್ರಿಕ ಮಟ್ಟ: ಈ ಹಂತದಲ್ಲಿ ಪರಿಸರ, ಕಲಿಕಾ ಸಲಕರಣೆಗಳ ಬಗ್ಗೆ ಹೇಳಿಕೊಡಲಾಗುತ್ತದೆ. *ಬೌದ್ಧಿಕ ಮಟ್ಟ: ತಾಂತ್ರಿಕ ಮಟ್ಟದಲ್ಲಿ ಹೇಳಿಕೊಟ್ಟ ಪ್ರತಿಯೊಂದು ವಿಷಯವನ್ನು ಏಕೆ ಮಾಡಬೇಕು ಎಂಬುದರ ಬಗ್ಗೆ ಈ ಹಂತದಲ್ಲಿ ಹೇಳಿಕೊಡಲಾಗುತ್ತದೆ. ಜೊತೆಗೆ ಮಗುವಿಗೆ ಏಕೆ ಸ್ವಾತಂತ್ರ (ಕಲಿಕೆಯಲ್ಲಿ) ಕೊಡಬೇಕು ಎಂಬುದರ ಬಗ್ಗೆ ತಿಳಿಸಲಾಗುತ್ತದೆ. ಇಲ್ಲಿ ಪ್ರತಿಯೊಂದು ಹಂತಕ್ಕೂ ಸಂಬಂಧವಿರುತ್ತದೆ. *ಆಧ್ಯಾತ್ಮಿಕ ಮಟ್ಟ: ತಾಂತ್ರಿಕ ಹಾಗೂ ಬೌದ್ಧಿಕ ಮಟ್ಟದ ತರಬೇತಿ ಪಡೆದ ಶಿಕ್ಷಕರಿಗೆ ಈ ಹಂತದಲ್ಲಿ ಮಗುವಿನ ಗುಣ, ವ್ಯಕ್ತಿತ್ವ ತಿಳಿಯುವುದು ಹೇಗೆ ಎಂಬುದನ್ನು ತಿಳಿಸಲಾಗುತ್ತದೆ. ‘ಮಕ್ಕಳ ಬಗ್ಗೆ ಕಾಳಜಿ, ಪ್ರೀತಿ ಇರಬೇಕು. ನೋಡುವ ದೃಷ್ಟಿಕೋನ ಬದಲಾಗಬೇಕು ಹಾಗೂ ಬದ್ಧತೆ ಹೆಚ್ಚಾಗಬೇಕು. ಈ ವಿಷಯಗಳ ಬಗ್ಗೆ ಆಧ್ಯಾತ್ಮಿಕ ಮಟ್ಟದಲ್ಲಿ ಹೇಳಿಕೊಡಲಾಗುತ್ತದೆ. ಈ ಎಲ್ಲಾ ಹಂತಗಳ ತರಬೇತಿ ನೀಡಿದರೆ ಮಕ್ಕಳಿಗೆ ಕಲಿಸಲು ಫಿಟ್‌ ಆಗುತ್ತಾರೆ. ಈ ತರಬೇತಿ ಕೋರ್ಸ್‌ ಕರ್ನಾಟಕ ಶಿಕ್ಷಣ ಇಲಾಖೆಯ ಮಾನ್ಯತೆ ಪಡೆದಿದೆ. ಪ್ರಾದೇಶಿಕ ಭಾಷೆಯಲ್ಲಿಯೂ ತರಬೇತಿ ನೀಡಲಾಗುತ್ತದೆ’ ಎನ್ನುತ್ತಾರೆ ಅನಂತ ಪದ್ಮನಾಭ. ಬೆಂಗಳೂರಿನ ಮಲ್ಲೇಶ್ವರ, ಜೆ.ಪಿ.ನಗರ ಹಾಗೂ ಮಾರತ್ತಹಳ್ಳಿಯಲ್ಲಿ ತರಬೇತಿ ಕೇಂದ್ರಗಳಿವೆ. ಮಾಹಿತಿಗೆ: .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.