ಬೈಕ್‌ ರ್‍ಯಾಲಿಗೆ ದಿನಗಣನೆ... ‘ರ‍್ಯಾಲಿ ಹಬ್‌’ ಎನಿಸಿಕೊಳ್ಳುತ್ತಿರುವ ಚಿಕ್ಕಮಗಳೂರಿನ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಇದೇ ಮೊದಲ ಬಾರಿಗೆ ‘ರಾಷ್ಟ್ರೀಯ ದ್ವಿಚಕ್ರ ವಾಹನಗಳ ಮಟ್ಟದ ರ‍್ಯಾಲಿ ಚಾಂಪಿಯನ್‌ಷಿಪ್‌’ಗೆ ಇದೀಗ ಸಿದ್ಧತೆಗಳು ನಡೆಯುತ್ತಿವೆ. ಪ್ರತಿ ವರ್ಷ ರಾಷ್ಟ್ರಮಟ್ಟದ ಕಾರು ರ‍್ಯಾಲಿ ಚಾಂಪಿಯನ್‌ಷಿಪ್‌ಗಳನ್ನು ಯಶಸ್ವಿಯಾಗಿ ನಡೆಸಿ ಸೈ ಎನಿಸಿಕೊಂಡಿರುವ ಚಿಕ್ಕಮಗಳೂರು ಮೋಟಾರು ಸ್ಪೋರ್ಟ್ಸ್ ಕ್ಲಬ್‌ (ಸಿಎಂಎಸ್‌ಸಿ), ಅಂತರರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ ಏಷ್ಯಾ ಪೆಸಿಫಿಕ್‌ ರ‍್ಯಾಲಿ ಸಂಘಟಿಸುವ ಅವಕಾಶ ಗಿಟ್ಟಿಸಿಕೊಂಡಿದೆ. ಡಿಸೆಂಬರ್‌ನಲ್ಲಿ ನಡೆಯುವ ಎಪಿಆರ್‌ಸಿ ರ‍್ಯಾಲಿಗೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ನಡುವೆ ಅಕ್ಟೋಬರ್‌ 11 ಮತ್ತು 12ರಂದು ಮಲೆನಾಡಿನ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಬೈಕ್‌ ರ‍್ಯಾಲಿ ನಡೆಯಲಿದೆ. ಈಗಾಗಲೇ ಮೊದಲ ಮತ್ತು ಎರಡನೇ ಸುತ್ತಿನ ಸ್ಪರ್ಧೆಯನ್ನು ಕ್ರಮವಾಗಿ ನಾಸಿಕ್‌ ಹಾಗೂ ಕೊಯಮತ್ತೂರಿನಲ್ಲಿ ಮುಗಿಸಿರುವ ‘ಫೆಡರೇಷನ್‌ ಮೋಟಾರ್‌ ಸ್ಪೋರ್ಟ್ಸ್ ಕ್ಲಬ್‌ ಆಫ್‌ ಇಂಡಿಯಾ’ 3ನೇ ಸುತ್ತಿನ ಸ್ಪರ್ಧೆಯ ಆತಿಥ್ಯ ವಹಿಸಲು ಕಾಫಿ ಕಣಿವೆಗೆ ಅವಕಾಶ ಕಲ್ಪಿಸಿದೆ. ಬೀರೂರಿನ ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ಕ್ಯಾಂಪಸ್‌ನಲ್ಲಿರುವ ಡರ್ಟ್‌ ಟ್ರ್ಯಾಕ್‌ನಲ್ಲಿ ಪರಿಣತ ಬೈಕ್‌ ಸವಾರರು ದೂಳೆಬ್ಬಿಸಲಿದ್ದಾರೆ. ವೇಗ, ಸಾಹಸ ಮತ್ತು ಕೌಶಲದಿಂದ ಕೂಡಿದ ಬೈಕ್‌ ರ‍್ಯಾಲಿ ಪ್ರೇಕ್ಷಕರಿಗೂ ಭರಪೂರ ಮನರಂಜನೆ ನೀಡಲಿದೆ. 2 ಅಥವಾ 3 ಹಂತದ ಸ್ಪರ್ಧೆಯಲ್ಲಿ ಸುಮಾರು 70 ಕಿ.ಮೀ. ದೂರವನ್ನು ಬೈಕ್‌ ಸವಾರರು ಕ್ರಮಿಸಲಿದ್ದಾರೆ. ಡಾಕಾರ್‌ ರ‍್ಯಾಲಿ ಪೂರ್ಣಗೊಳಿಸಿದ ದೇಶದ ಮೊಟ್ಟಮೊದಲಿಗ ಎಂಬ ಹೆಗ್ಗಳಿಕೆಯ ಬೆಂಗಳೂರಿನ ಸಂತೋಷ್‌ ಅವರನ್ನು ಈ ರ‍್ಯಾಲಿಗೆ ಆಹ್ವಾನಿಸಿ ಗೌರವಿಸಲಾಗುವುದು ಎಂದು ಚಿಕ್ಕಮಗಳೂರು ಮೋಟಾರ್‌ ಸ್ಪೋರ್ಟ್ಸ್ ಕ್ಲಬ್‌ ಅಧ್ಯಕ್ಷ ಜಯಂತ್‌ ಪೈ ಹೇಳಿದ್ದಾರೆ. ಸ್ಥಳೀಯ ಸ್ಪರ್ಧಿಗಳಲ್ಲದೇ ವಿವಿಧ ರಾಜ್ಯಗಳಿಂದ 40ಕ್ಕೂ ಹೆಚ್ಚು ಖ್ಯಾತ ಸಾಹಸಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ದೇಶದ ಹೆಸರಾಂತ ಮೋಟಾರು ಬೈಕ್‌ ತಯಾರಿಕಾ ಕಂಪೆನಿಗಳು ತಾವು ತಯಾರಿಸಿರುವ ಬೈಕ್‌ಗಳನ್ನು ಈ ರ‍್ಯಾಲಿಯಲ್ಲಿ ಸಾಮರ್ಥ್ಯ ಪರೀಕ್ಷಿಸುವ ಉದ್ದೇಶದಿಂದಲೂ ಕಣಕ್ಕಿಳಿಸಲಿವೆ ಎನ್ನುತ್ತಾರೆ ಜಯಂತ್‌ಪೈ. ಮಲೆನಾಡಿನಲ್ಲಿ ಸಾಹಸ ಕ್ರೀಡೆಗಳಿರುವ ಪೂರಕ ವಾತಾವರಣ ಇದೆ. ಸಾರ್ವಜನಿಕರು ಮತ್ತು ಪ್ರಾಯೋಜಕರ ಇನ್ನಿಲ್ಲದ ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಕಾರು, ಬೈಕು ರ‍್ಯಾಲಿಗಳು ವಿಶೇಷ ಕಳೆ ಪಡೆಯುತ್ತಿವೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಸಾಲು ಸಾಲು ರ‍್ಯಾಲಿಗಳನ್ನು ಕಣ್ತುಂಬಿ ಕೊಳ್ಳಲು ರ‍್ಯಾಲಿಪ್ರಿಯರು ಮಳೆಗಾಲ ಮುಗಿಯುವುದನ್ನೇ ಎದುರು ನೋಡುತ್ತಿದ್ದಾರೆ. ‘ಮಲೆನಾಡಿನಲ್ಲಿ ಮಳೆಗಾಲ ದಲ್ಲಿ ಮಳೆ ಜೋರು, ಚಳಿಗಾಲ ಮತ್ತು ಬೇಸಿಗೆಯಲ್ಲಿ ಬೈಕು, ಕಾರು ರ‍್ಯಾಲಿ ಇನ್ನೂ ಜೋರು’ ಎಂಬ ಮಾತು ಇಲ್ಲಿ ಸಾಮಾನ್ಯವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.