ಆ್ಯಶಸ್‌ ರಂಗು... ‘ಹಿಂದೆ ಯಾವ ಸರಣಿ ಜಯಿಸಿದ್ದೆವು, ಯಾವುದರಲ್ಲಿ ಎಡವಿದ್ದೆವು ಎಂಬುದು ಈಗ ಮುಖ್ಯವಾಗುವುದಿಲ್ಲ. ಈ ಬಾರಿ ಆ್ಯಶಸ್‌ ಸರಣಿ ಗೆಲ್ಲಬೇಕು. ಅದು ನನ್ನ ಕನಸು. ಈ ಸರಣಿ ಗೆದ್ದಾಗ ಸಿಗುವ ಸಂತಸ, ಗೌರವ, ಧನ್ಯತಾ ಭಾವ ಬದುಕಿನುದ್ದಕ್ಕೂ ನೆನಪಿನಲ್ಲಿ ಉಳಿಯುವಂತಹದ್ದು. ಅದು ನನ್ನ ವೃತ್ತಿಜೀವನದ ಸರ್ವಶ್ರೇಷ್ಠ ಸಾಧನೆಯೂ ಆಗಲಿದೆ’... ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಅಲಸ್ಟೇರ್‌ ಕುಕ್‌ ಹೇಳಿದ ಮಾತುಗಳಿವು. ಹೌದು. ಆ್ಯಶಸ್‌ ಸರಣಿಯ ಮಹತ್ವವೇ ಅಂತಹದ್ದು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಡುವಣ ಈ ಪೈಪೋಟಿಯನ್ನು ಉಭಯ ತಂಡಗಳ ಆಟಗಾರರು ಮಾತ್ರವಲ್ಲ ಕ್ರಿಕೆಟ್‌ ಲೋಕದ ಪ್ರತಿಯೊಬ್ಬರೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ತಮ್ಮ ನೆಚ್ಚಿನ ತಂಡ ವಿಶ್ವಕಪ್‌ನಲ್ಲಿ ಸೋಲು ಕಂಡರೂ ಅಭಿಮಾನಿಗಳು ಸಹಿಸಿಕೊಳ್ಳಬಹುದು. ಆದರೆ ಆ್ಯಶಸ್‌ನಲ್ಲಿ ಮುಖಭಂಗ ಅನುಭವಿಸಿದರೆ ಯಾರೂ ಸುಮ್ಮನಿರುವುದಿಲ್ಲ.ಅಷ್ಟರ ಮಟ್ಟಿಗೆ ಕ್ರಿಕೆಟ್‌ ಪ್ರಿಯರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹಿಂದಿನಿಂದಲೂ ಹಲವಾರು ಟೆಸ್ಟ್‌ ಸರಣಿಗಳು ನಡೆದುಕೊಂಡು ಬಂದಿವೆ. ಆದರೆ ಆ್ಯಶಸ್‌ನಷ್ಟು ಜನಪ್ರಿಯತೆ ಬೇರ್‍ಯಾವ ಸರಣಿಗೂ ಸಿಕ್ಕಿಲ್ಲ. ಅಷ್ಟು ವಿಶಿಷ್ಠವಾದ ಹಿನ್ನೆಲೆ ಇದಕ್ಕಿದೆ. 134 ವರ್ಷಗಳ ಇತಿಹಾಸ ಹೊಂದಿರುವ ಈ ಸರಣಿ ಈ ಬಾರಿ ಇಂಗ್ಲೆಂಡ್‌ ನೆಲದಲ್ಲಿ ನಡೆಯುತ್ತಿದ್ದು ಕೇವಲ ಇಂಗ್ಲೆಂಡ್‌ ಮತ್ತು ಕಾಂಗರೂಗಳ ನಾಡಿನವರು ಮಾತ್ರವಲ್ಲದೇ ಕ್ರಿಕೆಟ್‌ ಲೋಕದ ಚಿತ್ತವನ್ನು ತನ್ನತ್ತ ಸೆಳೆದುಕೊಂಡಿದೆ. ಟೆಸ್ಟ್‌ ಪಂದ್ಯವೆಂದರೆ ಮೂಗು ಮುರಿಯುವವರೂ ಸಾಂಪ್ರದಾಯಿಕ ಎದುರಾಳಿಗಳ ಆಟವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಸರಣಿಯ ಬಗ್ಗೆ ಉಭಯ ತಂಡಗಳ ನಡುವೆ ಮೊದಲ ಆ್ಯಶಸ್‌ ಸರಣಿ ನಡೆದಿದ್ದು 1882–83ರಲ್ಲಿ. ಆಗ ಒಂದು ಪಂದ್ಯ ಮಾತ್ರ ನಡೆದಿತ್ತು. 1938 ಮತ್ತು 1975ರಲ್ಲಿ ನಡೆದ ಸರಣಿ ಗಳು ನಾಲ್ಕು ಪಂದ್ಯಗಳನ್ನು ಒಳಗೊಂಡಿದ್ದವು. 1970–71, 1974–75, 1978–79, 1981, 1985, 1989, 1993 ಮತ್ತು 1997ರ ಅವಧಿಗಳಲ್ಲಿ ಆರು ಪಂದ್ಯಗಳ ಸರಣಿಯನ್ನು ಆಯೋಜಿಸ ಲಾಗಿತ್ತು. ಆ ನಂತರ ಇದು ಐದು ಪಂದ್ಯಗಳಿಗೆ ಸೀಮಿತವಾಗಿದೆ. ಆ್ಯಶಸ್‌ನಲ್ಲಿ ಆಸ್ಟ್ರೇಲಿಯಾವೇ ದೊರೆ.. ಆ್ಯಶಸ್‌ ಆರಂಭವಾದಾಗಿನಿಂದ ಇದುವರೆಗೂ 320 ಪಂದ್ಯಗಳು ನಡೆದಿವೆ. ಈ ಪೈಕಿ ಆಸ್ಟ್ರೇಲಿಯಾ 128 ಪಂದ್ಯಗಳಲ್ಲಿ ಗೆದ್ದಿದ್ದರೆ, ಇಂಗ್ಲೆಂಡ್‌ 103 ಪಂದ್ಯಗಳಲ್ಲಿ ಜಯಿಸಿದೆ. 89 ಪಂದ್ಯಗಳು ಡ್ರಾ ಹೊಂದಿವೆ. ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು 301 ಶತಕಗಳನ್ನು ದಾಖಲಿಸಿದ್ದಾರೆ. ಇದರಲ್ಲಿ 23 ಆಟಗಾರರು 200ಕ್ಕಿಂತಲೂ ಹೆಚ್ಚು ರನ್‌ ಗಳಿಸಿದ್ದರೆ, ನಾಲ್ಕು ಮಂದಿ 300ಕ್ಕಿಂತಲೂ ಅಧಿಕ ರನ್‌ ಬಾರಿಸಿರುವುದು ವಿಶೇಷ. ಆಂಗ್ಲರ ನಾಡಿನ ಬ್ಯಾಟ್ಸ್‌ಮನ್‌ಗಳು ಈ ವಿಷಯದಲ್ಲಿ ಕೊಂಚ ಹಿಂದಿದ್ದಾರೆ. ಈ ತಂಡದ ಆಟಗಾರರಿಂದ ಒಟ್ಟು 238 ಶತಕಗಳು ದಾಖಲಾಗಿವೆ. 13 ಮಂದಿ 200ಕ್ಕೂ ಹೆಚ್ಚು ಮೊತ್ತ ಗಳಿಸಿದ್ದು, ಲಿಯೊನಾರ್ಡ್‌ ಹಟ್ಟನ್‌ 300ಕ್ಕೂ ಹೆಚ್ಚು ರನ್‌ ಬಾರಿಸಿರುವ ಏಕೈಕ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. ಅವರು 1938ರಲ್ಲಿ ದಿ ಓವಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ 874ಎಸೆತಗಳನ್ನು ಎದುರಿಸಿ 364ರನ್‌ ಗಳಿಸಿದ್ದರು. ಅವರ ಇನಿಂಗ್ಸ್‌ನಲ್ಲಿ 35 ಬೌಂಡರಿಗಳು ದಾಖಲಾಗಿದ್ದವು. ಬೌಲರ್‌ಗಳ ಸಾಧನೆಯಲ್ಲೂ ಕಾಂಗರೂಗಳ ನಾಡಿನ ಬಳಗವೇ ಮೇಲುಗೈ ಹೊಂದಿದೆ. ಈ ತಂಡದ ಬೌಲರ್‌ಗಳು ಪಂದ್ಯವೊಂದರಲ್ಲಿ ಒಟ್ಟು 43 ಬಾರಿ 10 ವಿಕೆಟ್‌ ಕಬಳಿಸಿದ್ದಾರೆ. ಇಂಗ್ಲೆಂಡ್‌ನ ಬೌಲರ್‌ಗಳಿಂದ 40 ಬಾರಿ ಈ ಸಾಧನೆ ಮೂಡಿಬಂದಿದೆ. * ಮೊದಲ ಪಂದ್ಯದ ನೆನಪು.. ಶತಮಾನ ಉರುಳಿದರೂ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯಾ ವಿರುದ್ಧ ತನ್ನ ನೆಲದಲ್ಲಿ ಸೋತ ಮೊದಲ ಟೆಸ್ಟ್‌ ಪಂದ್ಯದ ನೆನಪು ಅಭಿಮಾನಿಗಳ ಮನಸ್ಸಿನಿಂದ ಇನ್ನೂ ಮಾಸಿಲ್ಲ. 1882ರಲ್ಲಿ ದಿ ಓವಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ ಕೇವಲ 63ರನ್‌ಗಳಿಗೆ ಆಲೌಟ್‌ ಆಗಿತ್ತು. ಎ.ಎನ್‌. ಹಾರ್ನ್‌ಬೈ ನೇತೃತ್ವದ ಆಂಗ್ಲರ ಬಳಗ ಪ್ರಥಮ ಇನಿಂಗ್ಸ್‌ನಲ್ಲಿ 101ರನ್‌ ಗಳಿಸಿ 38ರನ್‌ ಮುನ್ನಡೆ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಹ್ಯೂ ಮಸ್ಸಿ (55) ಅವರ ಅರ್ಧಶತಕದ ನೆರವಿನಿಂದ 122ರನ್‌ ಗಳಿಸಿ ಎದುರಾಳಿ ತಂಡದ ಗೆಲುವಿಗೆ 85ರನ್‌ ಗುರಿ ನೀಡಿತ್ತು. ಆದರೆ ಆಸ್ಟ್ರೇಲಿಯಾದ ವೇಗಿ ಫ್ರೆಡ್‌ ಸ್ಪೊಫ್ಫೊರ್ತ್‌ ಅವರ ದಾಳಿಗೆ ನಲುಗಿದ್ದ ಇಂಗ್ಲೆಂಡ್‌ ಎಂಟು ರನ್‌ನಿಂದ ಸೋಲುಕಂಡಿತ್ತು. * ಆ್ಯಶಸ್‌ ಹುಟ್ಟಿದ ಕಥೆ... ಯಾವುದೇ ಸರಣಿಗೆ ಹೆಸರಿಡುವ ಮುನ್ನ ಅದಕ್ಕೆ ಅದರದೇ ಆದ ಪೂರ್ವಪರ ಇರುತ್ತದೆ. ಈ ಸರಣಿಗೆ ‘ಆ್ಯಶಸ್‌’ ಎಂದು ಹೆಸರು ಬಂದಿರುವುದರ ಹಿಂದೆಯೂ ಅಂತಹದ್ದೊಂದು ರೋಚಕ ಕಥೆ ಇದೆ. 1882ರಲ್ಲಿ ದಿ ಓವಲ್‌ನಲ್ಲಿ ನಡೆದಿದ್ದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ ಅನ್ನು ಮಣಿಸಿತ್ತು. ಆಂಗ್ಲರ ನೆಲದಲ್ಲಿ ಆಸ್ಟ್ರೇಲಿಯಾ ಗೆದ್ದ ಚೊಚ್ಚಲ ಟೆಸ್ಟ್‌ ಅದಾಗಿತ್ತು. ಆಗ ಇಂಗ್ಲೆಂಡ್‌ನ ‘ಸ್ಪೋರ್ಟಿಂಗ್‌ ಟೈಮ್ಸ್‌’ ದಿನಪತ್ರಿಕೆ ‘ಇಂಗ್ಲೆಂಡ್‌ ಕ್ರಿಕೆಟ್‌ ಈಗ ಸತ್ತುಹೋಗಿದೆ. ಶವದ ಅಂತ್ಯಕ್ರಿಯೆ ನಡೆದಿದ್ದು. ಚಿತಾಭಸ್ಮವನ್ನು ಆಸ್ಟ್ರೇಲಿಯಾಕ್ಕೆ ಕೊಂಡೊಯ್ಯಲಾಗಿದೆ’ ಎಂದು ನಿಧನ ಸುದ್ದಿ ಪ್ರಕಟಿಸಿತ್ತು. ಇದು ಇಂಗ್ಲೆಂಡ್‌ನಲ್ಲಿ ದೊಡ್ಡ ಸಂಚಲನ ಉಂಟು ಮಾಡಿತ್ತು. ಮರು ವರ್ಷ ಆಸ್ಟ್ರೇಲಿಯಾದಲ್ಲಿ ಸರಣಿ ಆಯೋಜನೆಯಾಗಿತ್ತು. ಆಗ ಇಂಗ್ಲೆಂಡ್‌ ತಂಡದ ನಾಯಕ ಇವೊ ಬ್ಲಿಗ್‌ ‘ಅವರು ತೆಗೆದುಕೊಂಡು ಹೋಗಿರುವ ಚಿತಾಭಸ್ಮವನ್ನು ಮರಳಿ ತರುತ್ತೇನೆ’ ಎಂದು ಭರವಸೆ ನೀಡಿದ್ದರು. ಮೂರು ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್‌ 2–1ರಲ್ಲಿ ಗೆದ್ದು ಬೀಗಿತ್ತು. ಈ ಪ್ರವಾಸದ ವೇಳೆ ಫ್ಲೋರೆನ್ಸ್‌ ಮರ್ಫಿ ಅವರನ್ನು ಒಳಗೊಂಡ ಮೆಲ್ಬರ್ನ್‌ನ ಮಹಿಳೆ ಯರ ಗುಂಪೊಂದು ಮರದ ಬೇಲ್ಸ್‌ ಅನ್ನು ಸುಟ್ಟು ಅದರ ಬೂದಿಯನ್ನು ಸಂಗ್ರಹಿಸಿರುವ ಚಿಕ್ಕ ಟ್ರೋಫಿಯನ್ನು ಬ್ಲಿಗ್‌ ಅವರಿಗೆ ನೀಡಿತ್ತು. ಅದನ್ನು ‘ಆಸ್ಟ್ರೇಲಿಯಾ ಕ್ರಿಕೆಟ್‌ನ ಬೂದಿ’ ಎಂದು ಆಗ ಹಲವರು ಕರೆದಿದ್ದರು. ಆದರೆ ಅದು ಬ್ಲಿಗ್‌ಗೆ ಆ ಮಹಿಳೆಯರ ಗುಂಪು ನೀಡಿದ್ದ ಉಡುಗೊರೆಯಾಗಿತ್ತು. 1927ರಲ್ಲಿ ಬ್ಲಿಗ್‌ ನಿಧನರಾದ ಬಳಿಕ ಅದನ್ನು ಎಂಸಿಸಿಗೆ ನೀಡಲಾಯಿತು. ಆ ನಂತರದ ದಿನಗಳಲ್ಲಿ ಇದನ್ನು ವಿಜಯದ ಸಂಕೇತವಾಗಿ ಸರಣಿ ಗೆದ್ದ ತಂಡಕ್ಕೆ ನೀಡುವ ಪ್ರತೀತಿ ಬೆಳೆದುಬಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.