ಹೋಂವರ್ಕ್ ಮಾಡಿಸುವ ಪರಿ ‘ಅಯ್ಯೋ, ಅಮ್ಮಾ ಇವತ್ತು ಸ್ಕೂಲಲ್ಲಿ ತುಂಬಾ ‘ಹೋಂವರ್ಕ್’ ಕೊಟ್ಟಿದ್ದಾರೆ. ಮ್ಯಾತ್ಸ್‌ನಲ್ಲಿ ಬ್ಯಾಕ್‌ವರ್ಡ್ ಕೌಂಟಿಂಗ್, ಇವಿಎಸ್‌ನಲ್ಲಿ ಪ್ರೊಜೆಕ್ಟ್ ವರ್ಕ್, ಇಂಗ್ಲಿಷಿನಲ್ಲಿ ಸ್ಟೋರಿ ಟೆಲ್ಲಿಂಗ್, ಹಿಂದಿ ರೀಡಿಂಗ್, ಸೈನ್ಸ್ ಎಕ್ಸ್‌ಪೆರಿಮೆಂಟ್‌ಗೆ ಪ್ರಿಪರೇಶನ್, ಕಂಪ್ಯೂಟರ್ ಪ್ರ್ಯಾಕ್ಟಿಸ್...!’ ಹೀಗೆ ಮನೆಯೊಳಗೆ ಕಾಲಿಡುತ್ತಲೇ ‘ಮನೆಗೆಲಸ’ದ ಉದ್ದನೆಯ ಪಟ್ಟಿಯನ್ನು ಮಗು ತಾಯಿ ಮುಂದೆ ಮಂಡಿಸುತ್ತದೆ. ಅದನ್ನು ಕೇಳುತ್ತಲೇ ಮಗುವಿನ ಮಣ ಭಾರದ ಸ್ಕೂಲ್‌ಬ್ಯಾಗ್ ಎತ್ತಿಟ್ಟು, ಮಗುವಿನ ಕೈಕಾಲು ತೊಳೆದು, ತಿಂಡಿ ಕೊಟ್ಟು, ಆಟದ ಮೂಡ್‌ನಲ್ಲಿರುವ ಮಗುವನ್ನು ಮುದ್ದಿಸಿ, ಲಾಲಿಸಿ, ಅನಿವಾರ್ಯವಿದ್ದರೆ ಬೆದರಿಸಿ ಮನೆಗೆಲಸಕ್ಕೆ ಕೂರಿಸುವ ತಾಯಿಯ ಶ್ರಮ, ತಾಳ್ಮೆ ನಿಜಕ್ಕೂ ಪ್ರಶಂಸಾರ್ಹ. ಇನ್ನೇನು ಮಗುವಿನಿಂದ ಮನೆಗೆಲಸ ಮಾಡಿಸಲು ಆರಂಭಿಸಬೇಕು ಎಂಬಷ್ಟರಲ್ಲಿ ಸ್ಕೂಲ್‌ಬ್ಯಾಗಿನಿಂದ ನಾಪತ್ತೆಯಾದ ಪೆನ್ನು, ಪೆನ್ಸಿಲ್, ಶಾರ್ಪನರ್, ಇರೇಸರ್, ಹೋಂವರ್ಕ್‌ ಬುಕ್, ಕ್ಲಾಸ್ ಡೈರಿ, ಕ್ರೆಯಾನ್ಸ್, ನೋಟ್‌ಬುಕ್‌್, ಪುಸ್ತಕಗಳು, ಪೆಚ್ಚು ಮೋರೆ ಹಾಕಿ ಕುಳಿತ ಮಗುವಿನ ರಂಪಾಟ, ಬೇಡವೆಂದರೂ ಮಗುವನ್ನು ಅಪ್ಪಿಕೊಳ್ಳುವ ನಿದ್ರಾದೇವಿ, ಕೆಲವೊಮ್ಮೆ ಹಸಿವಿನ ಮತ್ತೊಮ್ಮೆ ನಿಸರ್ಗ ಕರೆಯ ನೆಪವೊಡ್ಡುವ ಮಗು, ಅದು ಬೇಕು, ಇದನ್ನು ಕೊಡು, ಹಾಗೆ ಬೇಡ, ಹೀಗೆ ಮಾಡು ಎಂದು ‘ಆಜ್ಞಾಪಿಸುವ’ ಮನೆಯ ಇತರ ಸದಸ್ಯರು, ಅಡುಗೆ ಕೆಲಸ, ಆಹಾರ ಬಡಿಸುವ ಒತ್ತಡ, ‘ನೋಡಲೇಬೇಕಾದ’ ಟಿವಿ ಸೀರಿಯಲ್, ಪತಿರಾಯನ ಕಿರಿಕಿರಿ, ಚಿಕ್ಕ ಮಗುವಿದ್ದರೆ ಅದಕ್ಕೆ ಸ್ಪಂದಿಸಬೇಕಾದ ಅನಿವಾರ್ಯ, ಸೊಂಟನೋವು, ತಿಂಗಳ ಸಮಸ್ಯೆ ಇವೆಲ್ಲವೂ ಸರತಿಯಂತೆ ತಾಯಿಯನ್ನು ಕಾಡುತ್ತವೆ. ಈ ಒತ್ತಡಗಳ ನಡುವೆ ಕೆಲವೊಮ್ಮೆ ಅನಿವಾರ್ಯವಾಗಿ ಮಗುವಿನ ಮನೆಗೆಲಸವನ್ನೂ ತಾಯಿಯೇ ಮಾಡಬೇಕಾಗುತ್ತದೆ. ಆಗ ತಮ್ಮ ಎಡಗೈ ಬಳಸಿ, ತಮ್ಮ ಮಗುವಿಗಿಂತ ‘ಮುದ್ದಾದ’ ಅಕ್ಷರಗಳನ್ನು ಬರೆಯುವ ತಾಯಂದಿರು ಮತ್ತೊಮ್ಮೆ ಮಗುವಾಗುತ್ತಾರೆ. ಮಕ್ಕಳು ‘ಮನೆಗೆಲಸ’ಕ್ಕೆ ಸಂಬಂಧಿಸಿ ಸ್ವಾವಲಂಬಿಗಳಾಗುವವರೆಗೆ, ಅವರಲ್ಲಿ ಅಷ್ಟು ಬುದ್ಧಿಮಟ್ಟ ಬೆಳೆಯುವವರೆಗೆ ಈ ಕಷ್ಟ ಪ್ರತಿ ತಾಯಿಗೂ ತಪ್ಪಿದ್ದಲ್ಲ. ಈ ನಿಟ್ಟಿನಲ್ಲಿ ತಜ್ಞರು ಮಾರ್ಗದರ್ಶಿಸಿರುವಂತೆ ಮಗುವಿನ ಮನೆಗೆಲಸದ ಪ್ರಕ್ರಿಯೆಯನ್ನು ಸರಳಗೊಳಿಸಲು ಕೆಲ ಕ್ರಮಬದ್ಧ ಅಂಶಗಳನ್ನು ತಾಯಂದಿರು ಅನುಸರಿಸಬಹುದು. ಉತ್ಸಾಹ ಹೊಮ್ಮಿಸುವ ‘ಮುಕ್ತ ಅವಧಿ’ ಮಗು ಶಾಲೆಯಿಂದ ಬಂದ ತಕ್ಷಣ ಹೋಂವರ್ಕ್ ಮಾಡುವಂತೆ ಒತ್ತಡ ಹೇರಬೇಡಿ. ಹೋಂವರ್ಕ್ ಆರಂಭಿಸುವ ಮುನ್ನ ಒಂದು ಗಂಟೆ ‘ಮುಕ್ತ ಅವಧಿಗೆ’ ಮೀಸಲಾಗಿಡಿ. ‘ಈ ಅವಧಿ ಸ್ವಿಚ್ಆಫ್ ಆದ ಮೊಬೈಲ್‌ಅನ್ನು ಚಾರ್ಜ್ ಮಾಡಿದಂತೆ’. ಈ ಅವಧಿಯಲ್ಲಿ ಮಗುವಿಗೆ ಹೆಚ್ಚಿನ ದೈಹಿಕ ಶ್ರಮವಾಗದ ಆಟಗಳನ್ನು ಆಡಲು ಅವಕಾಶ ಕೊಡಿ. ಮಗುವಿಗೆ ಇಷ್ಟವಾದ ಆರೋಗ್ಯಪೂರ್ಣ ತಿಂಡಿಯನ್ನು ಪ್ರೀತಿಯಿಂದ ತಿನ್ನಿಸಿ. ಸಾಕಷ್ಟು ಗಾಳಿ, ಬೆಳಕಿರುವ ಸ್ಥಳದಲ್ಲಿ (ಉದಾ: ಉದ್ಯಾನ, ತೋಟ) ಮಗುವಿನೊಂದಿಗೆ ಸ್ವಲ್ಪ ಹೊತ್ತು ವಿರಮಿಸಿ, ಮಗುವಿನ ಮೈದಡವಿ, ಬೆನ್ನುತಟ್ಟಿ, ಕಚಗುಳಿ ಇಡಿ, ಮಗುವಿನೊಂದಿಗೆ ಮಗುವಾಗಿ ಆಟವಾಡಿ. ಮಗುವನ್ನು ನಗಿಸಿ, ನೀವೂ ನಗಿ. ಸಾಧ್ಯವಾದರೆ ಮಗುವಿಗೆ ಚಿಕ್ಕ ನೀತಿಕತೆ ಅಥವಾ ದೃಷ್ಟಾಂತ ಹೇಳಿ. ಸಾಧ್ಯವಾದರೆ ಮಗುವಿನೊಂದಿಗೆ ಐದು ನಿಮಿಷ ಧ್ಯಾನ ಮಾಡಿ. ಮಗುವಿನ ಮನೋದೈಹಿಕ ಅಭಿವ್ಯಕ್ತಿಗೆ ಅಂದರೆ, ಹಾಡಲು, ಕುಣಿಯಲು, ಕತೆ ಹೇಳಲು, ಕಿರುಚಲು, ಓಡಾಡಲು, ಬೀಳಲು, ಏಳಲು ಮುಕ್ತ ಅವಕಾಶ ಕೊಡಿ. ಆದರೆ, ಈ ವೇಳೆ ಮೊಬೈಲ್, ಟಿವಿ, ವಿಡಿಯೋ ಗೇಮ್‌ಗಳ ಸಹವಾಸದಿಂದ ನೀವೂ ದೂರ ಇರಿ, ಮಗುವನ್ನೂ ದೂರವಿರಿಸಿ. ಈ ವ್ಯವಸ್ಥಿತ ಕ್ರಮವನ್ನು ರೂಢಿಸಿಕೊಳ್ಳಲು ಹಲವು ವಾರಗಳು ಬೇಕೆಂಬುದನ್ನು ಮರೆಯದಿರಿ. ಉತ್ತಮ ಸ್ಥಳ ಆಯ್ದುಕೊಳ್ಳಿ ಮಗುವಿಗೆ ಮನೆಗೆಲಸ ಮಾಡಿಸಲು ಮನೆಯ ಆವರಣದಲ್ಲಿ ಸಾಧ್ಯವಾದ ಉತ್ತಮ ಸ್ಥಳವನ್ನು ಆಯ್ದುಕೊಳ್ಳಿ. ಅವಕಾಶವಿದ್ದರೆ, ಮಗುವಿನ ಆಸಕ್ತಿಗೆ ಅನುಗುಣವಾಗಿ ನಿತ್ಯ ಸ್ಥಳ ಬದಲಿಸಬಹುದು. ಆ ಸ್ಥಳದಲ್ಲಿ ಸಾಕಷ್ಟು ಗಾಳಿ, ಬೆಳಕು ಬರುವಂತಿರಲಿ. ಗದ್ದಲ, ಗೊಂದಲ, ಕೂಗಾಟ ಮೊದಲಾದ ಅಪಕರ್ಷಣ ಹಾಗೂ ಅನಗತ್ಯ ಆಕರ್ಷಣೆಗಳಿಂದ ಮುಕ್ತವಾದ ಶಾಂತ ವಾತಾವರಣ ಅಲ್ಲಿರಲಿ. ಕೂರಲು, ಬರೆಯಲು, ಓದಲು ಅನುಕೂಲವಾಗುವ ಸೂಕ್ತ ಪೀಠೋಪಕರಣ ಹಾಗೂ ಪಾಠೋಪಕರಣಗಳಿದ್ದರೆ ಒಳ್ಳೆಯದು. ಸನಿಹದಲ್ಲಿ ಮೊಬೈಲ್, ಟಿವಿ ಇರದಿರಲಿ, ಇದ್ದರೂ ‘ಆಫ್‌’ ಆಗಿರಲಿ. ಮಗುವಿನ ಜತೆ ಕೂರಿ, ಮಾತನಾಡಿ ‘ಮನೆಗೆಲಸ’ ಆರಂಭಿಸುವ ಮುನ್ನ ಮಗುವಿನ ಜತೆ ಕೂತು ಮುಕ್ತವಾಗಿ ಮಾತನಾಡಿ. ಮಗುವಿನ ಮಾತುಗಳನ್ನು ತಾಳ್ಮೆಯಿಂದ ಆಲಿಸಿ. ಮಗುವಿನ ವಯಸ್ಸು, ಅಗತ್ಯ, ಆಸಕ್ತಿ, ಸಾಮರ್ಥ್ಯ ಅರಿತು ವರ್ತಿಸಿ. ನಿಮ್ಮ ಮಗುವಿಗೆ ಯಾವಾಗ, ಎಷ್ಟು ಸಹಾಯ ಬೇಕು ಎಂಬುದನ್ನು ತಿಳಿಯಿರಿ. ಮಗುವಿಗೆ ಸೂಕ್ತ ತಿಳಿವಳಿಕೆ ನೀಡಿ. ಮಗುವಿನಲ್ಲಿ ಸ್ವಪ್ರಜ್ಞೆ, ಸ್ವಮೌಲ್ಯಮಾಪನ ಪರಿಕಲ್ಪನೆ ಬೆಳೆಸಿ. ಮಗು ನಿಮ್ಮ ನಿರೀಕ್ಷೆಯಂತೆ ಮನೆಗೆಲಸ ಮಾಡಬೇಕು ಎಂದು ಅಪೇಕ್ಷಿಸಬೇಡಿ. ಶಾಲೆಯ ಅಗತ್ಯ, ಶಿಕ್ಷಕರ ಸೂಚನೆ ಏನಿದೆ ಎಂಬುದನ್ನು ಗಮನಿಸಿ. ಅಗತ್ಯ ಬಿದ್ದರೆ, ಮಗುವಿನ ಶಿಕ್ಷಕರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಿರಿ. ಪೋಷಕರಿಗೆ ತಜ್ಞರ ಸಲಹೆಗಳು * ಮಗು ಚಿಕ್ಕದಿದ್ದರೆ, ಮನೆಗೆಲಸಕ್ಕೆ ಸಂಬಂಧಿಸಿ ‘ಚೆಕ್‌ಲಿಸ್ಟ್’ ಸಿದ್ಧಪಡಿಸಿಟ್ಟುಕೊಳ್ಳುವುದು ಉತ್ತಮ. * ನೀವು ಮನೆಗೆಲಸ ಮಾಡಿಸುವ ವಿಧಾನಕ್ಕೂ ಶಾಲೆಯಲ್ಲಿ ಪಾಠ ಹೇಳುವ ಕ್ರಮಕ್ಕೂ ಘರ್ಷಣೆ ಆಗದಿರಲಿ. ಇದು ಮಗುವನ್ನು ಗೊಂದಲಕ್ಕೀಡು ಮಾಡುತ್ತದೆ. * ಮಗುವಿನ ಸರಿ ಉತ್ತರಗಳನ್ನು ಮರೆಯದೇ ಪ್ರಶಂಸಿಸಿ, ತಪ್ಪಾದರೆ ತಾಳ್ಮೆಯಿಂದ ತಿದ್ದಿ. ಋಣಾತ್ಮಕ ಪುನರ್ಬಲನ, ಅನಾರೋಗ್ಯಕರ ಹೋಲಿಕೆಗಳು ಬೇಡ. ಮನೆಗೆಲಸದ ಮೂಲಕ ಮಗುವಿನ ಸಾಮರ್ಥ್ಯವನ್ನು ಒರೆಹಚ್ಚುವ, ಪರಾಮರ್ಶಿಸುವ ಪ್ರಯತ್ನ ಬೇಡ. * ಮಗುವಿನ ವಯಸ್ಸು, ಬುದ್ಧಿಮಟ್ಟ ಹೆಚ್ಚಿದಂತೆ ಮಗುವಿನ ಮನೆಗೆಲಸಕ್ಕೆ ಸಂಬಂಧಿಸಿ ನಿಮ್ಮ ನೆರವನ್ನು ಕಡಿತಗೊಳಿಸಿ. ಸೃಜನಾತ್ಮಕ ಮಾರ್ಗದರ್ಶನಕ್ಕೆ ಒತ್ತು ನೀಡಿ. * ಮಗುವಿನಲ್ಲಿ ಅಧ್ಯಯನ ಪ್ರವೃತ್ತಿ ಹಾಗೂ ಸ್ವಾವಲಂಬನೆ ವೃದ್ಧಿಸಿ. ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಅಧ್ಯಯನಶೀಲತೆ ಬೆಳೆಸುವ ಬೇಸಿಗೆ/ಅಧ್ಯಯನ ಶಿಬಿರಗಳಿಗೆ ಸೇರಿಸಿ. ಮನರಂಜನೆಯೇ ಮುಖ್ಯವಾಗದಿರಲಿ. * ತಂದೆಯೂ ಮಗುವಿಗೆ ಸಂಬಂಧಿಸಿ ಸಮಾನ ಜವಾಬ್ದಾರಿ ಹೊಂದಿದ್ದು, ಮಗುವಿಗೆ ತನ್ನ ಕೈಲಾದಷ್ಟು ಸಹಾಯ ಮಾಡಬೇಕು. ಕನಿಷ್ಠ ಪಕ್ಷ ಮಗುವಿಗೆ ಅಗತ್ಯವಿರುವ ಕಲಿಕಾ ಸಂಪನ್ಮೂಲಗಳನ್ನಾದರೂ ಒದಗಿಸಬೇಕು. ಸಮಸ್ಯಾತ್ಮಕ ಮಗುವಿದ್ದರೆ? ವೈಯಕ್ತಿಕ ಭಿನ್ನತೆ ಜಗದ ನಿಯಮ. ಈ ನಿಯಮದಂತೆ ಎಲ್ಲ ಮಕ್ಕಳೂ ಸಮಾನ ಸಾಮರ್ಥ್ಯ ಹೊಂದಿರುವುದಿಲ್ಲ. ಎಲ್ಲ ಮಕ್ಕಳೂ ಬುದ್ಧಿವಂತರಾಗಿರುವುದಿಲ್ಲ. ಕೆಲ ಮಕ್ಕಳನ್ನು ಹಲವು ಮನೋದೈಹಿಕ ನ್ಯೂನತೆಗಳು ಕಾಡುತ್ತಿರುತ್ತವೆ. ಮಗು ಡಿಸ್ಲೆಕ್ಸಿಯಾ, ರೈಟರ್ಸ್‌ಪ್ಲಾಂಪ್ಟ್, ಸ್ಕಿಝೋಫ್ರೇನಿಯಾ, ಇಫೋರಿಯಾ, ಮಲ್ಟಿಪಲ್ ಫೋಬಿಯಾ, ಮಾನಸಿಕ ಅಸ್ವಸ್ಥತೆ, ನರರೋಗ, ಅಪಸಂಯೋಜನೆ, ಕೀಳರಿಮೆ, ಅಪೌಷ್ಟಿಕತೆ, ದೈಹಿಕ ನ್ಯೂನತೆ... ಈ ರೀತಿಯ ರೋಗಗಳಿಂದ ಬಳಲುತ್ತಿರಬಹುದು. ಇದಕ್ಕೆ ಅನುವಂಶೀಯತೆ ಅಥವಾ ಪರಿಸರ ಕಾರಣವಾಗಿರಬಹುದು. ಈ ಸಂದರ್ಭದಲ್ಲಿ ಮಗುವಿನ ಕಲಿಕೆ ಕುಂಠಿತಗೊಳ್ಳುತ್ತದೆ. ಆಗ ಪೋಷಕರು ತಮ್ಮ ಮಗುವಿನೊಂದಿಗೆ ತಪ್ಪದೇ, ತಜ್ಞ ವೈದ್ಯರನ್ನು, ಆಪ್ತಸಮಾಲೋಚಕರನ್ನು, ಮನಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು. ಮಗುವಿಗೆ ಅಗತ್ಯವಿರುವ ಚಿಕಿತ್ಸೆ, ಮಾರ್ಗದರ್ಶನ ಒದಗಿಸಬೇಕು. ಶಾಲೆ, ಶಿಕ್ಷಕರ ಜವಾಬ್ದಾರಿ ಮಕ್ಕಳಿಗೆ ಮನೆಗೆಲಸ ಹೊರೆಯಾಗಬಾರದು. ಇದು ಕಲಿಕೆಯ ಮುಂದುವರಿದ ಭಾಗವಾಗಿರಬೇಕು. ಸಾಧ್ಯವಾದಷ್ಟು ಚಟುವಟಿಕೆಯುಕ್ತ ಹಾಗೂ ಸೃಜನಶೀಲತೆಗೆ ಅವಕಾಶವಿರುವ ಮನೆಗೆಲಸ ಕೊಡಬೇಕು. ಒಂದೇ ವಿಷಯದಲ್ಲಿ ಒಂದಕ್ಕಿಂತ ಹೆಚ್ಚು ಮನೆಗೆಲಸ ಕೊಡಬಾರದು. ಮುಖ್ಯಶಿಕ್ಷಕರ ಮಾರ್ಗದರ್ಶನದಲ್ಲಿ ತರಗತಿ ಹಾಗೂ ವಿಷಯ ಶಿಕ್ಷಕರೂ ಮನೆಗೆಲಸಕ್ಕೆ ಸಂಬಂಧಿಸಿ ವೇಳಾಪಟ್ಟಿ ತಯಾರಿಸಿ, ಅನುಸರಿಸಬೇಕು. ಈ ಕುರಿತು ಪೋಷಕರಿಗೂ ಮಾಹಿತಿ ಒದಗಿಸಬೇಕು. – ಪ್ರೊ.ಎಂ.ಎಸ್. ತಳವಾರ, ಡೀನ್, ಶಿಕ್ಷಣ ನಿಕಾಯ, ಬೆಂಗಳೂರು ವಿಶ್ವವಿದ್ಯಾಲಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.