ವಿಜೇಂದರ್‌ ‘ಪಂಚ್’ ಹರಿಯಾಣದ ಬಸ್‌ ಚಾಲಕ ಮಹಿಪಾಲ್ ಸಿಂಗ್ ಬೆನಿವಾಲ್ ಇಪ್ಪತ್ತು ವರ್ಷಗಳ ಹಿಂದೆ ತಮ್ಮ ಎರಡನೇ ಮಗನ ಕೈಯಿಂದ ಪುಸ್ತಕ ತೆಗದುಕೊಂಡು, ಬಾಕ್ಸಿಂಗ್ ಗ್ಲೌಸ್‌ ಕೈಗಿಟ್ಟು ‘ಉನ್ನತ ಸಾಧನೆ ಮಾಡು ಹೋಗು’ ಎಂದು ಹರಸಿದ್ದರು. ಅವರ ಆಕಾಂಕ್ಷೆ, ಹಾರೈಕೆಗಳು ಹುಸಿಯಾಗಲಿಲ್ಲ. ಆ ಹುಡುಗ ಭಾರತದ ಕೀರ್ತಿ ಪತಾಕೆಯನ್ನು ಒಲಿಂಪಿಕ್ ಅಂಗಳದಲ್ಲಿ ಹಾರಿಸಿಬಂದ. ಇದೀಗ ಭಾರತದ ಬಾಕ್ಸಿಂಗ್‌ ರಂಗದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿ, ಮತ್ತೆ ಸುದ್ದಿಯಲ್ಲಿದ್ದಾನೆ. ಹೌದು: ಆ ಹುಡುಗ ಬೇರೆ ಯಾರೂ ಅಲ್ಲ. ಒಲಿಂಪಿಯನ್ ವಿಜೇಂದರ್‌ಸಿಂಗ್. ಅಮೆಚೂರ್ ಬಾಕ್ಸಿಂಗ್‌ ತೊರೆದು ವೃತ್ತಿಪರ ಬಾಕ್ಸಿಂಗ್‌ನತ್ತ ಹೆಜ್ಜೆ ಇಟ್ಟಿರುವ ವಿಜೇಂದರ್‌ ಈಗ ಸುದ್ದಿಯಲ್ಲಿದ್ದಾರೆ. ಭಾರತದ ಮಟ್ಟಿಗೆ ಅಷ್ಟೇನೂ ಪರಿಚಿತವಲ್ಲದ ಮಾದರಿ ಇದು. ಯುರೋಪ್‌ ದೇಶಗಳಲ್ಲಿ ವೃತ್ತಿಪರ ಬಾಕ್ಸಿಂಗ್ ಹೆಚ್ಚು ಪ್ರಚಲಿತದಲ್ಲಿದೆ. ಬೃಹತ್ ಮೊತ್ತದ ಟೂರ್ನಿಗಳನ್ನು ಆಯೋಜಿಸಲು ದೊಡ್ಡ ಸಂಸ್ಥೆಗಳು ಇವೆ. ಬಾಕ್ಸಿಂಗ್‌ಪಟುಗಳೊಂದಿಗೆ ಒಪ್ಪಂದ ಮಾಡಿಕೊಂಡು ಪಂದ್ಯ ಆಯೋಜಿಸುತ್ತವೆ. ಪ್ರಾಯೋಜಕತ್ವ, ಪ್ರವೇಶ ಶುಲ್ಕ ಸಂಗ್ರಹಿಸಿ ಅದರಲ್ಲಿ ಗೆದ್ದವರು ಮತ್ತು ಸೋತವರು ಇಬ್ಬರಿಗೂ ಹಣ ನೀಡುತ್ತವೆ. ಅಮೆಚೂರ್‌ ಬಾಕ್ಸಿಂಗ್‌ಗೆ ತದ್ವಿರುದ್ಧ. ವೃತ್ತಿಪರ ಬಾಕ್ಸಿಂಗ್. ಇದನ್ನು ‘ಪ್ರೈಜ್‌ಫೈಟಿಂಗ್‌’ ಎಂದು ಕರೆಯಲಾಗುತ್ತದೆ. ಗೆದ್ದವರಿಗೆ ನಗದು ಪ್ರಶಸ್ತಿ, ಚಾಂಪಿಯನ್‌ಷಿಪ್ ಬೆಲ್ಟ್‌ಗಳನ್ನು ಪ್ರದಾನ ಮಾಡ ಲಾಗುತ್ತದೆ. ಒಂದು ಬೌಟ್‌ನಲ್ಲಿ ನಾಲ್ಕು ಸುತ್ತುಗಳು ಇರುತ್ತವೆ. ಶಿರಸ್ತ್ರಾಣ ಧರಿಸಲು ಅವಕಾಶ ಇಲ್ಲ. ಇತ್ತೀಚೆಗೆ ಫ್ಲಾಯ್ಡ್ ಮೇವೆದರ್ ಮತ್ತು ಮಾನಿ ಪಕಿಯಾವೊ ನಡುವೆ ಶತಮಾನದ ಹಣಾಹಣಿ ಇದಕ್ಕೊಂದು ಉದಾಹರಣೆ. ಇಂತಹ ಒಂದು ಏಜೆನ್ಸಿಯಾಗಿರುವ ಇಂಗ್ಲೆಂಡ್‌ನ ಕ್ವೀನ್ಸ್‌ಬೆರ್ರಿ ಪ್ರಮೋಷನ್ಸ್‌ ಜೊತೆಗೆ ವಿಜೇಂದರ್‌ ಸಿಂಗ್ ಒಪ್ಪಂದ ಮಾಡಿಕೊಂಡಿದ್ದಾರೆ. ಇದೇ ಸೆಪ್ಟೆಂಬರ್‌ನಲ್ಲಿ ಅವರು ಪದಾರ್ಪಣೆ ಮಾಡಲಿದ್ದಾರೆ. ಅವರಿಗೆ ಮಾಜಿ ಪ್ರೊ ಚಾಂಪಿಯನ್ ಲೀ ಬಿಯರ್ಡ್ ತರಬೇತಿ ನೀಡುತ್ತಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆಲ್ಲುವ ಮೂಲಕ ಭಾರತದ ಮನೆಮಾತಾಗಿದ್ದವರು ವಿಜೇಂದರ್‌. ದೇಶದ ಕ್ರೀಡಾ ಜಗತ್ತಿನ ಲೋಪಗಳನ್ನು ಹೊರಹಾಕಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಕಳೆದ ವರ್ಷ ಮಾದಕ ದ್ರವ್ಯ ಸಾಗಣೆ ಜಾಲವೊಂದರ ನಂಟು ಹೊಂದಿರುವ ಆರೋಪವನ್ನೂ ಎದುರಿಸಿದ್ದರು. ಇದೀಗ ಅವರು ವೃತ್ತಿಪರ ಬಾಕ್ಸಿಂಗ್‌ಗೆ ಹೋಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಅವರು ದೇಶಕ್ಕಾಗಿ ಆಡುವುದನ್ನು ಮುಂದುವರಿಸಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಡಿಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಹರಿಯಾಣ ಪೊಲೀಸ್ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಆದರೆ, ಈ ಯಾವುದೇ ಬೆದರಿಕೆ, ಟೀಕೆಗಳಿಗೆ ವಿಜೇಂದ್ರ ಸೊಪ್ಪು ಹಾಕಿಲ್ಲ. 2008ರಲ್ಲಿ ಭಾರತದ ಪ್ರದೀಪ್ ಸಿಂಗ್ ಅವರು ಆಸ್ಟ್ರೇಲಿಯಾಕ್ಕೆ ಹೋಗಿ ವೃತ್ತಿಪರ ಬಾಕ್ಸಿಂಗ್‌ ಸೇರಿದ್ದರು. ಆ ಸಾಲಿಗೆ ಸೇರಿರುವ ಎರಡನೇ ಬಾಕ್ಸರ್‌ ವಿಜೇಂದ್ರ ಆಗಿದ್ದಾರೆ. ವೃತ್ತಿಪರ ರಂಗದಲ್ಲಿಯೂ ಸಾಧನೆಯ ಶಿಖರವೇರಲು ತಾಲೀಮು ಆರಂಭಿಸಿದ್ದಾರೆ. ಅವರ ಈ ನಡೆಯಿಂದಾಗ ಭಾರತದಲ್ಲಿಯೂ ವೃತ್ತಿಪರ ಬಾಕ್ಸಿಂಗ್‌ ಬಗ್ಗೆ ಆಸಕ್ತಿ ಹೆಚ್ಚುವ ಲಕ್ಷಣಗಳು ಕಾಣುತ್ತಿವೆ. ಅದಕ್ಕಾಗಿ ಭಾರತೀಯ ಬಾಕ್ಸಿಂಗ್‌ ಕೌನ್ಸಿಲ್ (ಐಬಿಸಿ) ಇತ್ತೀಚೆಗೆ ಕಾರ್ಯಾರಂಭ ಮಾಡಿದೆ. ವೃತ್ತಿಪರ ಬಾಕ್ಸಿಂಗ್ ನಡೆಸುವ ಪ್ರಮುಖ ಸಂಸ್ಥೆಗಳು * ಅಂತರರಾಷ್ಟ್ರೀಯ ಬಾಕ್ಸಿಂಗ್ ಫೆಡರೇಷನ್ (ಐಬಿಎಫ್‌) * ವಿಶ್ವ ಬಾಕ್ಸಿಂಗ್ ಸಂಘಟನೆ (ಡಬ್ಲ್ಯುಬಿಎ) * ವಿಶ್ವ ಬಾಕ್ಸಿಂಗ್ ಕೌನ್ಸಿಲ್ (ಡಬ್ಲ್ಯುಬಿಸಿ) *ವಿಶ್ವ ಬಾಕ್ಸಿಂಗ್ ಸಂಸ್ಥೆ (ಡಬ್ಲ್ಯುಬಿಒ) * ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಐಬಿಒ) ವಿಜೇಂದರ್‌ ವಿವರಗಳು ಪೂರ್ಣ ಹೆಸರು: ವಿಜೇಂದರ್‌ಸಿಂಗ್ ಬೆನಿವಾಲ್ ಜನನ: 29–10–1985 (ಸ್ಥಳ: ಕುಲುವಾಸ, ಬಿವಾನಿ, ಹರಿಯಾಣ) ಎತ್ತರ: ಆರು ಅಡಿ ಕ್ರೀಡೆ: ಮಿಡಲ್‌ವ್ಹೇಟ್ ಬಾಕ್ಸಿಂಗ್ (70.5 ರಿಂದ 72.5ಕೆಜಿ) ವೃತ್ತಿ: ಡಿಎಸ್‌ಪಿ, ಹರಿಯಾಣ ಪೊಲೀಸ್ ಪತ್ನಿ ಹೆಸರು: ಅರ್ಚನಾ ಸಿಂಗ್ ಅಮೆಚೂರ್ ಬಾಕ್ಸಿಂಗ್‌ ಆರಂಭ: 1998 ವೃತ್ತಿಪರ ಬಾಕ್ಸಿಂಗ್‌: 2015 ಪದಕ ಸಾಧನೆ: ಬೀಜಿಂಗ್ ಒಲಿಂಪಿಕ್ಸ್ 2008 (ಕಂಚಿನ ಪದಕ) ವಿಶ್ವ ಅಮೆಚೂರ್ ಬಾಕ್ಸಿಂಗ್ 2009 (ಕಂಚು) ಕಾಮನ್‌ವೆಲ್ತ್ ಗೇಮ್ಸ್‌: ಮೆಲ್ಬರ್ನ್‌ 2006 (ಬೆಳ್ಳಿ), ದೆಹಲಿ 2010: (ಕಂಚು), ಗ್ಲಾಸ್ಗೋ 2014 (ಬೆಳ್ಳಿ) ಏಷ್ಯನ್ ಗೇಮ್ಸ್: ದೋಹಾ 2006 (ಕಂಚು), ಗುವಾಂಗ್‌ಜು 2010 (ಚಿನ್ನ). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.