ಪುಟ್ಟ ದೇಶಗಳ ಸದ್ದು ಶತಮಾನದಷ್ಟು ಸುದೀರ್ಘ ಫುಟ್‌ಬಾಲ್‌ ಇತಿಹಾಸ ಹೊಂದಿರುವ ಚಿಲಿ ತಂಡ ಬಲಿಷ್ಠ ಅರ್ಜೆಂಟಿನಾ ತಂಡವನ್ನು ಮಣಿಸುವ ಮೂಲಕ ಮೊದಲ ಬಾರಿಗೆ ಕೊಪಾ ಅಮೆರಿಕ ಪ್ರಶಸ್ತಿ ಗೆದ್ದಿದೆ. ಈ ತಂಡ 2017ರಲ್ಲಿ ರಷ್ಯಾದಲ್ಲಿ ನಡೆಯುವ ಫಿಫಾ ಕಾನ್ಫೆಡರೇಷನ್ಸ್‌ ಕಪ್‌ನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಂಡಿರುವುದೂ ಇದೇ ಮೊದಲು. ಈ ಗೆಲುವಿನಿಂದ ಜಾಗತಿಕ ಫುಟ್‌ಬಾಲ್‌ನ ಶಕ್ತಿಶಾಲಿ ತಂಡಗಳಾದ ಜರ್ಮನಿ, ಬ್ರೆಜಿಲ್‌, ಫ್ರಾನ್ಸ್‌, ಅರ್ಜೆಂಟಿನಾ, ಸ್ಪೇನ್‌, ಪೋರ್ಚುಗಲ್‌ ಮುಂತಾದವುಗಳಿಗೆ ಚಿಲಿ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇದೇ ಟೂರ್ನಿಯಲ್ಲಿ ಪೆರುಗ್ವೆ ತಂಡ ಬ್ರೆಜಿಲ್‌ ತಂಡವನ್ನು ಸೋಲಿಸಿರುವುದು ಸಹ ಗಮನಾರ್ಹ. ಅಷ್ಟೇನು ಪ್ರಬಲವಲ್ಲದ ತಂಡಗಳ ಅಚ್ಚರಿಯ ಗೆಲುವು ಮತ್ತು ಅರ್ಜೆಂಟಿನಾ ಹಾಗೂ ಬ್ರೆಜಿಲ್‌ಗಳಂತಹ ತಂಡಗಳ ಸೋಲು ಮುಂಬರುವ 2018ರ ವಿಶ್ವಕಪ್‌ನಲ್ಲಿ ಅನಿರೀಕ್ಷಿತ ಫಲಿತಾಂಶ ಬರಬಹುದೇನೊ ಎಂಬ ಕುತೂಹಲ ಕೆರಳಿಸಿದೆ. ಕೊಪಾ ಅಮೆರಿಕದ (ದಕ್ಷಿಣ ಅಮೆರಿಕ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌) 44ನೇ ಆವೃತ್ತಿಯಲ್ಲಿ ಸೆಣಸಿದ್ದು ಒಟ್ಟು 15 ತಂಡಗಳು. 1916ರಲ್ಲಿ ಈ ಟೂರ್ನಿ ಆರಂಭಗೊಂಡಿದ್ದು, ಇವತ್ತಿಗೂ ದಕ್ಷಿಣ ಅಮೆರಿಕ ದೇಶಗಳ ಫುಟ್‌ಬಾಲ್‌ಪ್ರಿಯರ ಅತೀವ ಆಸಕ್ತಿಯ ಅಖಾಡವಾಗಿದೆ. ಹೀಗಾಗಿ ಇಲ್ಲಿ ನಡೆಯುವ ಪ್ರತಿ ಪಂದ್ಯಕ್ಕೂ ಮಹತ್ವವಿದೆ. ಇದರಲ್ಲಿ ಇದುವರೆಗೂ ಅರ್ಜೆಂಟಿನಾ, ಉರುಗ್ವೆ ಮತ್ತು ಬ್ರೆಜಿಲ್ ದೇಶಗಳೇ ಪಾರಮ್ಯ ಮೆರೆಯುತ್ತಿದ್ದವು. ಕಳೆದ ವಿಶ್ವಕಪ್‌ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದ ಅರ್ಜೆಂಟಿನಾ, ಕೊಪಾ ಅಮೆರಿಕ ಚಾಂಪಿಯನ್‌ಷಿಪ್‌ ಗೆಲ್ಲುವ ನೆಚ್ಚಿನ ತಂಡ ಎನಿಸಿತ್ತು. ಫೈನಲ್‌ ಹಂತಕ್ಕೆ ಏರುವವರೆಗೂ ಚಾಂಪಿಯನ್‌ನಂತೆಯೇ ಆಟವಾಡಿದ ಅರ್ಜೆಂಟಿನಾ ಅಲ್ಲಿ ಎಡವಿತು. ಮೆಸ್ಸಿಯಂತಹ ಆಟಗಾರನ ನಾಯಕತ್ವದಲ್ಲಿ ಅರ್ಜೆಂಟಿನಾ ಇಲ್ಲಿ ಸೋತಿತು ಎನ್ನುವುದಕ್ಕಿಂತ, ಅಷ್ಟೇನೂ ಖ್ಯಾತನಾಮರಿಲ್ಲದ ಚಿಲಿ ಆಕ್ರಮಣಕಾರಿ ಮತ್ತು ಸಂಘಟಿತ ಆಟದಿಂದ ಗೆಲುವು ಕಂಡಿತು ಎಂದೇ ಫುಟ್‌ಬಾಲ್‌ ಜಗತ್ತು ವಿಶ್ಲೇಷಿಸುತ್ತಿದೆ. ಫಿಫಾ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ತಂಡವನ್ನು ಚಿಲಿ ಪೆನಾಲ್ಟಿ ಶೂಟೌಟ್‌ನಲ್ಲಿ ದೊರೆತ ಅವಕಾಶವನ್ನು ಬಳಸಿಕೊಂಡು ಸೋಲಿಸಿದೆ. ಕೊಪಾ ಅಮೆರಿಕ ಚಾಂಪಿಯನ್‌ಷಿಪ್‌ ಫೈನಲ್‌ ಮಾತ್ರವಲ್ಲ, ಇಡೀ ಟೂರ್ನಿಯಲ್ಲಿ ಇಂತಹ ಕೆಲವು ರೋಚಕ ಫಲಿತಾಂಶಗಳು ಬಂದಿವೆ. ಫಿಫಾ ರ್‍ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಬ್ರೆಜಿಲ್ ತಂಡವನ್ನು 56ನೇ ಸ್ಥಾನದಲ್ಲಿರುವ ಪೆರುಗ್ವೆ ಸೋಲಿಸಿದೆ. ನಾಲ್ಕನೇ ಸ್ಥಾನದಲ್ಲಿರುವ ಕೊಲಂಬಿಯಾ ತಂಡ ಇಡೀ ಟೂರ್ನಿಯಲ್ಲಿ ಒಂದೂ ಗೋಲು ಗಳಿಸಲು ಸಾಧ್ಯವಾಗದೆ ಪರದಾಡಿತು. ನಿಜುವೆಲಾದಂತಹ ದುರ್ಬಲ ತಂಡವೂ ಒಂದು ಗೋಲಿನಿಂದ ಕೊಲಂಬಿಯಾವನ್ನು ಸೋಲಿಸಿತ್ತು. ಟೂರ್ನಿಯಲ್ಲಿ ಚಿಲಿಯ ಸಾಂಪ್ರದಾಯಿಕ ಎದುರಾಳಿ ಪೆರು ಮೂರನೇ ಸ್ಥಾನ ಪಡೆದರೆ, ಪೆರುಗ್ವೆ ನಾಲ್ಕನೇ ಸ್ಥಾನ ಪಡೆದಿದೆ. ಚಿಲಿಯ ಏಳು ಬೀಳಿನ ದಾರಿ ಚಿಲಿ ಫುಟ್‌ಬಾಲ್‌ ಪರಂಪರೆಯನ್ನು ಗಮನಿಸಿದಾಗ ವರ್ಷದಿಂದ ವರ್ಷಕ್ಕೆ ಅದು ತನ್ನ ಸಾಮರ್ಥ್ಯದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲವಾದ ತಂಡ. 1930ರ ಮೊದಲ ವಿಶ್ವಕಪ್‌ನಲ್ಲಿ ಆಡಿದ 13 ದೇಶಗಳ ಪೈಕಿ ಚಿಲಿಯೂ ಒಂದು. 1962ರ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಪಡೆದರೂ ಅದು ಬಲಿಷ್ಠ ತಂಡವಾಗಿ ಹೊರಹೊಮ್ಮಲಿಲ್ಲ. ಪ್ರಮುಖ ತಂಡಗಳೆದುರು ಪ್ರಬಲ ಸ್ಪರ್ಧೆ ನೀಡಿದ ಉದಾಹರಣೆಗಳಿದ್ದರೂ ಅದನ್ನು ಚಾಂಪಿಯನ್‌ ಪಟ್ಟಕ್ಕೆ ಪರಿವರ್ತಿಸಿಕೊಳ್ಳುವಲ್ಲಿ ಚಿಲಿ ಸಫಲವಾಗಿರಲಿಲ್ಲ. ಏರಿಳಿತ ಹಾದಿಯಲ್ಲಿ ಸಾಗುತ್ತಿದ್ದ ತಂಡ, ಇತ್ತೀಚಿನ ದಿನಗಳಲ್ಲಿ ದುರ್ಬಲವಾಗಿತ್ತು. ಕೊಪಾ ಅಮೆರಿಕ ಚಾಂಪಿಯನ್‌ಷಿಪ್‌ನಲ್ಲಿ ದೊರೆತ ಜಯದಿಂದ, 2017ರ ಫಿಫಾ ಕಾನ್ಫೆಡರೇಷನ್ಸ್‌ ಕಪ್‌ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿದೆ. ತವರಿನಲ್ಲಿ ನಡೆದ ಟೂರ್ನಿಯ ಲಾಭವನ್ನು ಚಿಲಿ ಬಳಸಿಕೊಂಡಿದೆ. ಅಚ್ಚರಿ ಫಲಿತಾಂಶ ನೀಡಬಲ್ಲ ಪೆರು 2011ರಲ್ಲಿ 8ನೇ ರ್‍ಯಾಂಕಿಂಗ್‌ಗೆ ಏರಿದ್ದ ಪೆರುಗ್ವೆ 2010ರ ವಿಶ್ವಕಪ್‌ನಲ್ಲಿ ಆರರ ಘಟ್ಟವನ್ನು ತಲುಪಿತ್ತು. ಅದೀಗ 56ನೇ ಸ್ಥಾನಕ್ಕೆ ಕುಸಿದಿದೆ. ಇದುವರೆಗೆ ಎಂಟು ಬಾರಿ ವಿಶ್ವಕಪ್‌ಗೆ ಆಡುವ ಅರ್ಹತೆ ಗಿಟ್ಟಿಸಿಕೊಂಡರೂ ಪೆರುಗ್ವೆಗೆ ಪ್ರಶಸ್ತಿ ದೂರವೇ ಉಳಿದಿದೆ. 1953 ಮತ್ತು 1979ರಲ್ಲಿ ಎರಡು ಬಾರಿ ಕೊಪಾ ಅಮೆರಿಕ ಟೂರ್ನಿಯಲ್ಲಿ ಗೆದ್ದದ್ದು ಈ ತಂಡದ ಸಾಧನೆಯಾಗಿದೆ. ಈ ಬಾರಿ ಕೊಪಾ ಅಮೆರಿಕದಲ್ಲಿ ಉರುಗ್ವೆ, ಬ್ರೆಜಿಲ್ ಮತ್ತು ಅರ್ಜೆಂಟಿನಾ ತಂಡಗಳಿಗೆ ಕಠಿಣ ಪೈಪೋಟಿ ನೀಡಿದೆ. ಪೆರು ಕೂಡ ದೀರ್ಘಕಾಲದಿಂದ ಪ್ರಶಸ್ತಿಗಾಗಿ ಹೆಣಗಾಡುತ್ತಿದ್ದರೂ ಗಮನಾರ್ಹ ಸಾಮರ್ಥ್ಯವನ್ನೇನೂ ನೀಡಿಲ್ಲ. ಈ ಟೂರ್ನಿಯಲ್ಲಿ ಇದುವರೆಗೆ ಎರಡು ಬಾರಿ ಚಾಂಪಿಯನ್‌ ಆಗಿದ್ದ ಪೆರು, 1930ರಿಂದ ಇದುವರೆಗೆ ನಾಲ್ಕು ಬಾರಿ ಮಾತ್ರ ವಿಶ್ವಕಪ್‌ ಫುಟ್‌ಬಾಲ್‌ಗೆ ಅರ್ಹತೆ ಪಡೆದುಕೊಂಡಿದೆ. ವಿಶ್ವಕಪ್‌ನಲ್ಲಿ ಅರ್ಜೆಂಟಿನಾ, ಜರ್ಮನಿ, ಫ್ರಾನ್ಸ್‌, ಬ್ರೆಜಿಲ್‌, ಬೆಲ್ಜಿಯಂ, ಕೊಲಂಬಿಯಾ, ನೆದರ್‌ಲೆಂಡ್‌, ಪೋರ್ಚುಗಲ್‌, ಸ್ಪೇನ್‌ ಮುಂತಾದ ದೇಶಗಳದ್ದೇ ಪ್ರಾಬಲ್ಯ ಮುಂದುವರಿದಿದೆ. ಚಿಲಿ, ಪೆರುಗ್ವೆಯಂತಹ ತಂಡಗಳು ನಿರೀಕ್ಷೆಯನ್ನು ತಲೆಕೆಳಗಾಗಿಸುವ ಫಲಿತಾಂಶ ನೀಡುವಷ್ಟು ಶಕ್ತವಾಗಿವೆ. ಕೊಪಾ ಅಮೆರಿಕ ಟೂರ್ನಿಯ ಫಲಿತಾಂಶಗಳು ಆ ಸಾಧ್ಯತೆಯನ್ನು ತೋರಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.