ಒಲಿಂಪಿಕ್ಸ್‌ನಲ್ಲಿ ಈಜುವ ಹೆಬ್ಬಯಕೆ... ಪ್ಯಾರಾ ಈಜುಪಟು ಎಂ. ನಿರಂಜನ್‌ ಹುಟ್ಟಿದಾಗಲೇ ‘ಸ್ಪೈನಾ ಬೈಪಿಡಾ’ ಎಂಬ ಕಾಯಿಲೆಗೆ ತುತ್ತಾಗಿದ್ದರು. ಇದರಿಂದ ಅವರ ಬೆನ್ನು ಹುರಿಗಳು ಊನವಾಗಿದ್ದವು. ಜತೆಯಲ್ಲೇ ಕಾಲಿನಲ್ಲಿ ಹುಣ್ಣು ಕಾಣಿಸಿಕೊಂಡಿತು. ಅಂದಿನಿಂದ ಇಂದಿನವರೆಗೆ 16 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಆದರೆ ಇದ್ಯಾವುದೂ ಅವರ ಸಾಧನೆಗೆ ಅಡ್ಡಿಯಾಗಿಲ್ಲ. ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ದೇಶಕ್ಕಾಗಿ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ಆರ್‌. ಮುಕುಂದನ್‌ ಮತ್ತು ಲಕ್ಷ್ಮಿ ದಂಪತಿಯ ಮಗನಾಗಿರುವ ನಿರಂಜನ್‌ ಅವರನ್ನು ಗುಣಪಡಿಸಲು ಪೋಷಕರು ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರು. ಈ ವೇಳೆ ವೈದ್ಯರೊಬ್ಬರು ನಿರಂಜನ್‌ ಅವರಿಗೆ ಕುದುರೆ ಸವಾರಿ ಇಲ್ಲವೇ ಈಜು ಕಲಿಸುವುದು ಸೂಕ್ತ ಎಂದು ಸಲಹೆ ನೀಡಿದ್ದರು. ವೈದ್ಯರ ಸಲಹೆಯಂತೆ ನಿರಂಜನ್‌ ಪೋಷಕರು ಮಗನನ್ನು ಜಯನಗರದ ಪಿ.ಎಂ. ಈಜು ಕೇಂದ್ರಕ್ಕೆ ಸೇರಿಸಿದರು. ಇದು ಅವರ ಜೀವನಕ್ಕೆ ಹೊಸ ತಿರುವು ನೀಡಿತು. ಅಂದಿನಿಂದ ಹಂತ ಹಂತವಾಗಿ ಪ್ರವರ್ಧಮಾನಕ್ಕೆ ಬಂದ ನಿರಂಜನ್‌ ಜುಲೈ ತಿಂಗಳ ಎರಡನೇ ವಾರ ನೆದರ್‌ ಲೆಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ವೀಲ್‌ಚೇರ್‌ ಮತ್ತು ಆ್ಯಂಪುಟಿ ಕ್ರೀಡೆಯಲ್ಲಿ (ಐವಾಸ್‌) ಭಾಗವಹಿಸಿದ 10 ಸ್ಪರ್ಧೆಗಳಲ್ಲೂ ಪದಕ ಗೆದ್ದಿದ್ದಾರೆ. ಅವರ ಜತೆಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ. * ನಿಮ್ಮ ಕ್ರೀಡಾ ಬದುಕು ಆರಂಭವಾಗಿದ್ದು ಹೇಗೆ? 2003ರಲ್ಲಿ ಪಿ.ಎಂ. ಈಜು ಕೇಂದ್ರಕ್ಕೆ ಸೇರಿದೆ. ಆಗ ಕೋಚ್‌ ಜಾನ್‌ ಕ್ರಿಸ್ಟೋಫರ್‌ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು. 2004ರಲ್ಲಿ ಮೊದಲ ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದೆ. ಮುಂಬೈನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನ 50 ಮೀ. ಬಟರ್‌ಫ್ಲೈನಲ್ಲಿ ಬೆಳ್ಳಿ ಗೆದ್ದೆ. 2005ರಲ್ಲಿ ಕೋಲ್ಕತ್ತದಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಎರಡು ರಜತಪದಕ ಜಯಿಸಿದೆ. 2010ರಲ್ಲಿ ಜರ್ಮನಿಯಲ್ಲಿ ನಡೆದ ಅಂತರರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು. ಆಗ 8ನೇ ಸ್ಥಾನ ಪಡೆಯಲಷ್ಟೇ ಶಕ್ತನಾಗಿದ್ದೆ. ‌ ನಂತರ ಕಠಿಣ ಅಭ್ಯಾಸ ನಡೆಸಿ ಹಲವು ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿದೇನೆ. * ಈ ವರ್ಷ ಐವಾಸ್‌ ವಿಶ್ವ ಕ್ರೀಡಾಕೂಟದಲ್ಲಿ ಮೂಡಿದ ಸಾಧನೆ ಬಗ್ಗೆ ಹೇಳಿ ? ಖಂಡಿತವಾಗಿಯೂ ಖುಷಿಯಾಗುತ್ತಿದೆ. ಈ ಸಾಧನೆ ಮಾಡಿದ ಭಾರತದ ಮೊದಲ ಪ್ಯಾರಾ ಕ್ರೀಡಾಪಟು ಎಂಬುದು ತಿಳಿದಾಗ ತುಂಬಾ ಹೆಮ್ಮೆ ಎನಿಸಿತು. ಜೂನಿಯರ್‌ ವಿಭಾಗದಲ್ಲಿ ಪಾಲ್ಗೊಳ್ಳುತ್ತಿರುವ ಕೊನೆಯ ಚಾಂಪಿಯನ್‌ಷಿಪ್‌ ಇದಾಗಿತ್ತು. ನನ್ನ ಕೋಚ್‌ ಕ್ರಿಸ್ಟೋಫರ್‌ ಇದು ನಿನಗೆ ಕೊನೆಯ ಅವಕಾಶ. ಈ ಬಾರಿ ನಿನ್ನಿಂದ ಮೂಡಿಬರುವ ಸಾಧನೆ ಇಡೀ ರಾಷ್ಟ್ರವೇ ಹೆಮ್ಮೆ ಪಡುವಂತಹದ್ದಾಗಿರಬೇಕು. ಎಂದು ಧೈರ್ಯ ತುಂಬಿದ್ದರು. ಅವರ ಆ ಮಾತುಗಳು ನನಗೆ ಸ್ಫೂರ್ತಿಯಾದವು. * ಮುಂದಿನ ಗುರಿ ಏನು ? 2016ರ ಪ್ಯಾರಾ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವುದು ನನ್ನ ಮುಖ್ಯ ಗುರಿ. 2012ರ ಪ್ಯಾರಾ ಒಲಿಂಪಿಕ್ಸ್‌ ವೇಳೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೆ. ಹೀಗಾಗಿ ಭಾಗವಹಿಸುವ ಅವಕಾಶ ಕೈತಪ್ಪಿತ್ತು. ಆದರೆ ಈ ಬಾರಿ ಅರ್ಹತೆ ಗಳಿಸಲೇಬೇಕೆಂದು ಪಣ ತೊಟ್ಟಿದ್ದೇನೆ. ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಚೀನಾ ಓಪನ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಇದು ಒಲಿಂಪಿಕ್ಸ್‌ ಅರ್ಹತೆಗೆ ವೇದಿಕೆಯಾಗಿದ್ದು ಅಲ್ಲಿ ಪದಕ ಗೆಲ್ಲಬೇಕು. * ನಿಮ್ಮ ಅಭ್ಯಾಸ ಕ್ರಮ ಹೇಗಿರುತ್ತೆ ? ಪ್ರತಿಯೊಬ್ಬ ಕ್ರೀಡಾಪಟುವಿಗೂ ಫಿಟ್‌ನೆಸ್‌ ಬಹಳ ಅಗತ್ಯ. ಹೀಗಾಗಿ ಮುಂಜಾನೆ 5.30ರಿಂದ 8.30ರವರೆಗೆ ಈಜು ಅಭ್ಯಾಸ ನಡೆಸುತ್ತೇನೆ. ಬಳಿಕ 9 ಗಂಟೆಯಿಂದ 11 ಗಂಟೆಯವರೆಗೆ ಜೆ.ಪಿ ನಗರದಲ್ಲಿರುವ ‘ವಿ ಫಿಟ್‌’ ಜಿಮ್‌ನಲ್ಲಿ ಕಸರತ್ತು ನಡೆಸುತ್ತೇನೆ. ನಂತರ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತೇನೆ. ಮತ್ತೆ ಸಂಜೆ 4.30ರಿಂದ 8ರವರೆಗೆ ಈಜು ಅಭ್ಯಾಸ ಮುಂದುವರಿಯುತ್ತದೆ. ದೇಹ ಹೆಚ್ಚು ದಣಿದಿದೆ ಎಂದೆನಿಸಿದರೆ ಒಂದು ಅಥವಾ ಎರಡು ವಾರಕ್ಕೊಮ್ಮೆ ಫಿಸಿಯೋಥೆರಪಿ ಮಾಡಿಸಿಕೊಳ್ಳುತ್ತೇನೆ. ಇದರಿಂದ ನೋವೆಲ್ಲಾ ಮಾಯವಾಗಿ ಮನಸ್ಸು ಉಲ್ಲಸಿತವಾಗುತ್ತದೆ. * ಕುಟುಂಬದ ಬೆಂಬಲ ಮತ್ತು ಸಹಕಾರ ಹೇಗಿದೆ? ಆರಂಭದಲ್ಲಿ ನನ್ನ ತಂದೆ ತಾಯಿ ತುಂಬಾ ಭಯಪಟ್ಟಿದ್ದರು. ಕ್ರಮೇಣ ನಾನು ಪದಕಗಳನ್ನು ಗೆದ್ದು ತಂದಾಗ ಹೆಚ್ಚು ಖುಷಿ ಪಡುತ್ತಿದ್ದರು. ಅಂದಿನಿಂದ ಇಂದಿನವರೆಗೂ ಎಲ್ಲಾ ವಿಷಯದಲ್ಲೂ ಬೆಂಬಲವಾಗಿ ನಿಂತಿದ್ದಾರೆ. ನನ್ನ ಅಜ್ಜಿಯ ಸಹಕಾರವನ್ನಂತೂ ನಾನು ಎಂದಿಗೂ ಮರೆಯಲಾರೆ. ಈಜು ಕಲಿಯಲು ಸೇರಿದ ದಿನಗಳಲ್ಲಿ ಅವರೇ ನನ್ನ ಆರೈಕೆ ನೋಡಿಕೊಳ್ಳುತ್ತಿದ್ದರು. ತರಬೇತಿ ಮುಗಿಯುವವರೆಗೂ ಇದ್ದು ನನ್ನನ್ನು ಮರಳಿ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಐವಾಸ್‌ ಕ್ರೀಡಾಕೂಟದಲ್ಲಿ 10 ಪದಕಗಳನ್ನು ಗೆದ್ದಾಗ ನನಗೆ ಮೊದಲು ಕರೆ ಮಾಡಿ ಅಭಿನಂದಿಸಿದ್ದು ಅವರೇ. ಆಗ ನನ್ನ ಕಣ್ಣುಗಳು ತುಂಬಿಕೊಂಡಿದ್ದವು. * ಪ್ರವಾಸದ ಖರ್ಚು ವೆಚ್ಚಗಳನ್ನು ಹೇಗೆ ಭರಿಸುತ್ತೀರಿ? ಆರಂಭದಲ್ಲಿ ನನ್ನ ತಂದೆಯೇ ಎಲ್ಲವನ್ನೂ ನೋಡಿಕೊಂಡು ಬೆಂಬಲವಾಗಿ ನಿಂತಿದ್ದರು. ನನ್ನ ಸಾಧನೆಯನ್ನು ಗುರುತಿಸಿ ಹಿಂದಿನ ಎರಡು ವರ್ಷಗಳಿಂದ ಗೋ ಸ್ಪೋರ್ಟ್ಸ್ ಫೌಂಡೇಷನ್‌ ಸಹಕಾರ ನೀಡುತ್ತಿದೆ. ಇದರ ಜತೆಗೆ ರಾಜ್ಯ ಸರ್ಕಾರವೂ ಪದಕ ಗೆದ್ದಾಗ ಹಣಕಾಸಿನ ನೆರವು ನೀಡಿ ಪ್ರೋತ್ಸಾಹಿಸಿದೆ. * ನಿಮ್ಮ ಪ್ರಕಾರ ಯಾವ ರಾಷ್ಟ್ರದ ಸ್ಪರ್ಧಿಗಳು ಬಲಿಷ್ಠವಾಗಿದ್ದಾರೆ? ಏಷ್ಯಾ ಖಂಡದಲ್ಲಿ ಚೀನಾ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳ ಸ್ಪರ್ಧಿಗಳು ತುಂಬಾ ಬಲಿಷ್ಠರಾಗಿದ್ದಾರೆ. ಇದನ್ನು ಹೊರತುಪಡಿಸಿದರೆ ಅಮೆರಿಕ, ರಷ್ಯಾ ಮತ್ತು ಆಸ್ಟ್ರೇಲಿಯಾದ ಕ್ರೀಡಾಪಟುಗಳಿಂದ ನಮಗೆ ಕಠಿಣ ಸವಾಲು ಎದುರಾಗುತ್ತದೆ. ಮೂಲಭೂತ ಸೌಕರ್ಯಗಳ ವಿಷಯಕ್ಕೆ ಬಂದರೆ ಅವರು ನಮಗಿಂತ ಸಾಕಷ್ಟು ಮುಂದಿದ್ದಾರೆ. * ಪ್ಯಾರಾ ಕ್ರೀಡಾಪಟುಗಳಿಗೆ ಸರಿಯಾದ ಮನ್ನಣೆ ಸಿಗುತ್ತಿದೆ ಅನಿಸುತ್ತದೆಯೇ ? ಕ್ರಿಕೆಟ್‌, ಬ್ಯಾಡ್ಮಿಂಟನ್‌, ಫುಟ್‌ಬಾಲ್‌, ಟೆನಿಸ್‌ ಕ್ರೀಡೆಗಳನ್ನು ಆಡುವ ಆಟಗಾರರಿಗೆ ಹೋಲಿಸಿದರೆ ನಮಗೆ ಸಿಗುತ್ತಿರುವ ಪ್ರಚಾರ ಮತ್ತು ಮನ್ನಣೆ ತುಂಬಾ ಕಡಿಮೆ. ಹೆಚ್ಚು ಜನಕ್ಕೆ ಪ್ಯಾರಾ ಕ್ರೀಡಾಕೂಟದ ಬಗ್ಗೆಯೇ ಮಾಹಿತಿ ಇಲ್ಲ. ಆದರೂ ಈಚೆಗೆ ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಾಗ ನಮ್ಮನ್ನು ಜನ ಗುರುತಿಸಿ ಅಭಿನಂದಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ಬಹಳ ಖುಷಿಯಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.