ಉಳಿಯಬೇಕಿದೆ ವಿಶ್ವಾಸಾರ್ಹತೆ ಹದಿನಾಲ್ಕು ವರ್ಷಗಳ ಹಿಂದೆ ಮೊದಲ ಮ್ಯಾಚ್‌ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದಾಗ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ತನಿಖೆ ನಡೆಸಲು ಸಮಿತಿ ಯೊಂದನ್ನು ರಚಿಸಿ ವರದಿ ನೀಡುವಂತೆ ಸೂಚಿಸಿತ್ತು. ಒಂದು ವರ್ಷ ತನಿಖೆ ನಡೆಸಿದ ಸಮಿತಿ 1970ರಿಂದಲೇ ಮ್ಯಾಚ್‌ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್‌್ ನಡೆಯುತ್ತಿದೆ. ಅದು ಬಹುತೇಕ ಲೀಗ್ ಪಂದ್ಯಗಳಿಗೆ ಸೀಮಿತವಾಗಿತ್ತು ಎಂದು ವರದಿಯಲ್ಲಿ ತಿಳಿಸಿತ್ತು. ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‌ ಹಗರಣದ ತಪ್ಪಿತಸ್ಥರಿಗೆ ಹೋದ ವಾರ ಲೋಧಾ ನೇತೃತ್ವದ ಸಮಿತಿ ನೀಡಿದ ತೀರ್ಪಿನ ಅಂಶಗಳನ್ನು ಮಾಧ್ಯಮಗಳಲ್ಲಿ ನೋಡಿದಾಗ ಹಿಂದಿನ ದಿನಗಳು ನೆನಪಾದವು. 2006ರ ಐಪಿಎಲ್‌ನಲ್ಲೂ ಬೆಟ್ಟಿಂಗ್‌ ನಡೆದಿದೆ ಎನ್ನುವ ವಿಷಯ ಬಹಿರಂಗವಾದಾಗ ಅಚ್ಚರಿಯೇನೂ ಆಗಿರಲಿಲ್ಲ. ಏಕೆಂದರೆ, ಹಲವು ವರ್ಷಗಳಿಂದ ಬೇರೆ ಬೇರೆ ಸ್ವರೂಪಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಇಂಥ ಪ್ರಕರಣಗಳು ಸಾರ್ವಜನಿಕರಿಗೆ ಬೇಗನೆ ತಿಳಿಯುತ್ತಿವೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ಸಣ್ಣ ಪುಟ್ಟ ತಪ್ಪುಗಳನ್ನು ಜನ ಬೇಗ ಮರೆತುಬಿಡುತ್ತಾರೆ. ಆದರೆ, ಐಪಿಎಲ್‌ನಲ್ಲಿ ಇಷ್ಟು ದೊಡ್ಡ ಘಟನೆ ನಡೆದರೂ ಆಟದ ಸೊಗಡು ಜನರ ಮನದಿಂದ ಸುಲಭವಾಗಿ ಮಾಸುವುದಿಲ್ಲ. ಏಕೆಂದರೆ, ಭಾರತದಲ್ಲಿ ಕ್ರಿಕೆಟ್‌ ಒಂದು ಧರ್ಮ. ಎಷ್ಟೇ ತಪ್ಪು ಮಾಡಿದರೂ ಆಟಗಾರರನ್ನು ದೇವರು ಎಂದು ಪೂಜಿಸುವ ಅಭಿಮಾನಿಗಳಿದ್ದಾರೆ. ದೊಗಲೆ ಪ್ಯಾಂಟ್‌ನಿಂದ ಆರಂಭವಾದ ಕ್ರಿಕೆಟ್‌, ಕ್ಯಾರಿ ಪ್ಯಾಕರ್‌ (ಏಕದಿನ ಮಾದರಿಯ ಅಭಿವೃದ್ಧಿಗೆ ಆಯೋಜಿಸಲಾಗಿದ್ದ ವಿಶ್ವ ದರ್ಜೆಯ ಟೂರ್ನಿ) ಸರಣಿಯೊಂದಿಗೆ ತನ್ನ ಸ್ವರೂಪ ಬದಲಿಸಿದಾಗ ಈ ಕ್ರೀಡೆಗೆ ಉಳಿಗಾಲವಿಲ್ಲ ಎಂದು ಜರಿದವರೇ ಹೆಚ್ಚು. ಆದರೆ, 1983ರ ವಿಶ್ವಕಪ್‌ ಗೆದ್ದ ನಂತರ ಭಾರತದ ಕ್ರಿಕೆಟ್‌ಗೆ ಹೊಸ ಆಯಾಮ ಲಭಿಸಿತು. ವಿಶ್ವಕಪ್‌ ಬಳಿಕ ನಡೆದ ಹಲವಾರು ಟೂರ್ನಿಗಳು ಗಮನ ಸೆಳೆದವು. ಇಲ್ಲಿ ‘ಸಭ್ಯರ ಆಟ’ ಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ಸಿಕ್ಕಿತು. ಕೆಲ ದೋಷಗಳನ್ನು ಸರಿಪಡಿಸಿ ಆಧುನೀಕರಿಸಿದ ಆಟವೇ ಐಪಿಎಲ್. ಐಪಿಎಲ್‌ ಆಯೋಜಿಸುವ ಮೂಲಕ ಬಿಸಿಸಿಐ ವಿಶ್ವ ಮಟ್ಟದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿತು. ಹರಿದು ಬಂದ ಹಣಸಾಗರದಲ್ಲಿ ಮಿಂದೆದ್ದ ಕೆಲವರು ನಾವಿಕನಿಲ್ಲದ ದೋಣಿಯ ಹಾಗೆ ತಮಗಿಷ್ಟವಾದ ಹಾದಿಯಲ್ಲಿ ಸಾಗಿದರು. ಹೀಗಾಗಿ ಲಯ ತಪ್ಪಿದ ದೋಣಿ ಕವಲು ದಾರಿ ಹಿಡಿಯಿತು. ಹಾಟ್‌ ಸ್ಪಾಟ್‌ ಹಾಗೂ ಡಿಆರ್‌ಎಸ್ ಹೀಗೆ ಹಲವು ತಂತ್ರಜ್ಞಾನಗಳು ಅಂಪೈರ್‌ ಕೆಲಸವನ್ನು ಸುಲಭ ಮಾಡಿವೆ. ಅಂಪೈರ್‌ ಪ್ರತಿ ತೀರ್ಪಿನ ಹಿಂದೆ ಸಾವಿರಾರು ಪರಿಣಾಮಗಳು ಇರುತ್ತವೆ. ಆದ್ದರಿಂದ ಅಂಪೈರ್‌ ಆಗಾಗ್ಗೆ ವಿವಾದಕ್ಕೆ ಒಳಗಾಗಬೇಕಾಗುತ್ತದೆ. ಅಂಪೈರ್‌ಗಳ ತೀರ್ಪನ್ನೇ ಬಳಸಿಕೊಂಡ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಂಕಣದ ಹೊರಗೆ ಜಾಣಕುರುಡು ಮೆರೆದಿದ್ದರಿಂದಲೇ ‘ಮಿಲಿಯನ್‌ ಡಾಲರ್‌ ಬೇಬಿ’ ಐಪಿಎಲ್‌ ಸತ್ಯದ ಹಾದಿ ಬಿಟ್ಟು ನಡೆಯುತ್ತಿದೆ. ಎಸ್. ಶ್ರೀಶಾಂತ್‌ ಬೌಲಿಂಗ್ ಮಾಡುವಾಗ ಸೊಂಟದಲ್ಲಿ ಟವೆಲ್‌ ಸಿಕ್ಕಿಸಿಕೊಳ್ಳು ತ್ತಿದ್ದರು. ಕೆಲ ಬಾರಿ ಟವೆಲ್ ಇರುತ್ತಿರಲಿಲ್ಲ. ಟವೆಲ್ ಹಾಕಿ ಕೊಂಡು ಮಾಡಿದ ಬೌಲ್‌ ಫಿಕ್ಸಿಂಗ್‌ ಆಗಿರುತ್ತಿತ್ತು ಎನ್ನುವುದು ಮಾಧ್ಯಮ ಗಳಲ್ಲಿ ವರದಿಯಾಗಿತ್ತು. ಆದರೆ, ಪ್ರತಿ ಆಟಗಾರನು ಪಂದ್ಯ ಆಡುವಾಗ ಚೆಂಡನ್ನು ಸ್ವಚ್ಛಗೊಳಿಸಲು ಅಥವಾ ಬೆವರು ಒರೆಸಿಕೊಳ್ಳಲು ಟವೆಲ್ ಇಟ್ಟುಕೊಳ್ಳುವುದು ಸಾಮಾನ್ಯ. ಈ ಒಂದು ಘಟನೆ ಪಂದ್ಯ ಆಡುವ ವೇಳೆ ಆಟಗಾರರ ಬಳಿ ಇರುವ ಪ್ರತಿ ವಸ್ತುವನ್ನೂ ಅನು ಮಾನದ ದೃಷ್ಟಿಯಿಂದ ನೋಡು ವಂತೆ ಮಾಡಿದೆ. ಕೈಗೆ ಹಾಕುವ ಬ್ಯಾಂಡ್‌, ಕೊರಳಲ್ಲಿ ಧರಿಸುವ ಸರ, ಬೂಟಿನ ಲೇಸನ್ನು ಪದೇ ಪದೇ ಕಟ್ಟಿ ಕೊಳ್ಳುವ ಮೂಲಕ ಸಂಕೇತ ಗಳನ್ನು ನೀಡುವ ಅಪಾಯವೂ ಇದೆಯೇ ಎನ್ನುವ ಸಂದೇಹ ಮೂಡಿಸುತ್ತದೆ. 2013ರಲ್ಲಿ ನಡೆದ ಫಿಕ್ಸಿಂಗ್‌ ಘಟನೆ ಟೂರ್ನಿ ಮುಗಿದ ಹಲವು ತಿಂಗಳುಗಳ ಬಳಿಕ ಬೆಳಕಿಗೆ ಬಂತು. ಅದು ದೆಹಲಿ ಪೊಲೀಸರು ಪಟ್ಟುಬಿಡದೇ ನಡೆಸಿದ ಕಾರ್ಯಾಚರಣೆಯಿಂದ. ಆದರೆ, ಫೀಲ್ಡ್‌ನಲ್ಲಿರುವ ಅಂಪೈರ್‌ಗಳಿಗೆ ಫಿಕ್ಸಿಂಗ್‌ ಸೂಚನೆಯ ಸೂಕ್ಷ್ಮಗಳನ್ನು ಗಮನಿಸಲು ಪುರುಸೊತ್ತೇ ಇರುವುದಿಲ್ಲ. ಮೂರು ಗಂಟೆಯಲ್ಲಿ ಮುಗಿದು ಹೋಗುವ ಚುಟುಕು ಆಟದಲ್ಲಿ ಪ್ರತಿ ಎಸೆತವನ್ನು ಎಚ್ಚರಿಕೆಯಿಂದ ಗಮನಿಸಬೇಕು. ಐಪಿಎಲ್ ಹಾಗೂ ಚಾಂಪಿಯನ್ಸ್‌ ಲೀಗ್‌ ನಂಥ ಟೂರ್ನಿಗಳಲ್ಲಿ ಕಿಕ್ಕಿರಿದು ತುಂಬುವ ಕ್ರೀಡಾಂಗಣದಲ್ಲಿ ಅಂಪೈರಿಂಗ್‌ ಜವಾಬ್ದಾರಿ ನಿಭಾಯಿಸುವುದೇ ಸವಾಲು. ಆದ್ದರಿಂದ ಆಟಗಾರರ ನಡವಳಿಕೆ ಮೇಲೆ ಕಣ್ಣಿಡುವುದು ಕಷ್ಟ. ಒಂದು ವೇಳೆ ಆಟಗಾರರ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಾಗ ಪಂದ್ಯದ ರೆಫರಿಗೆ ದೂರು ನೀಡುವ ಅಧಿಕಾರ ಅಂಪೈರ್‌ಗೆ ಇದೆ. ಆದರೆ, ಈ ರೀತಿ ಕೆಲಸಗಳು ಆಗಿದ್ದು ಅಷ್ಟಕಷ್ಟೆ. ಫಿಕ್ಸಿಂಗ್ ಎನ್ನುವ ಭೂತ ಎಲ್ಲಾ ತಂಡಗಳಲ್ಲಿಯೂ ಇದೆ. ಕ್ರಿಕೆಟ್‌ ಬಗ್ಗೆ ಅಭಿಮಾನಿಗಳ ನಂಬಿಕೆ ಎಷ್ಟರ ಮಟ್ಟಿಗೆ ಹಾಳಾಗಿದೆಯೆಂದರೆ ಪ್ರತಿ ಎಸೆತದ ಹಿಂದೆಯೂ ‘ಮ್ಯಾಚ್‌ ಫಿಕ್ಸ್ ಆಗಿತ್ತಾ’ ಎನ್ನುವ ಮಾತು ಸಾಮಾನ್ಯವಾಗಿಬಿಟ್ಟಿವೆ. ಅಂತರರಾಷ್ಟ್ರೀಯ ಮಟ್ಟದ (ಐಪಿಎಲ್‌ ಬಿಟ್ಟು) ಟೂರ್ನಿಗಳಲ್ಲಿ ಅಂಪೈರ್‌ ಗಳನ್ನೂ ಮೋಸದಾಟದ ಬಲೆಯಲ್ಲಿ ಸಿಲುಕಿಸಲು ಯತ್ನಿಸಿದ ಘಟನೆಗಳು ಸಾಕಷ್ಟಿವೆ. 1994ರಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲದಂತೆ ನೋಡಿಕೊಳ್ಳಲು ವೀಕ್ಷಕನೊಬ್ಬ ಹಣದ ಆಮಿಷ ಒಡ್ಡಿದ್ದನೆಂಬ ಸಂಗತಿಯನ್ನು ಖುದ್ದು ದಕ್ಷಿಣ ಆಫ್ರಿಕಾದ ಅಂಪೈರ್‌ ಸಿರಿಲ್ ಮಿಷೆಲ್‌ ಅವರೇ ಬಹಿರಂಗ ಮಾಡಿದ್ದರು. ಐಸಿಸಿ ಪ್ಯಾನೆಲ್ ಅಂಪೈರ್‌ ಆಗಿದ್ದ ಜಾವೇದ್ ಅಖ್ತರ್‌ 1999ರ ವಿಶ್ವಕಪ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್ ಮಾಡಿದ್ದರು ಎನ್ನುವ ಆರೋಪವನ್ನು ಎದುರಿಸಬೇಕಾಯಿತು. ಹೀಗೆ ಸಾಕಷ್ಟು ಘಟನೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದ ದಕ್ಷಿಣ ಆಫ್ರಿಕಾದ ಆಟಗಾರ ಹ್ಯಾನ್ಸಿ ಕ್ರೊನಿಯಾ ಶಿಕ್ಷೆ ಅನುಭವಿಸುವ ಮೊದಲೇ ವಿಮಾನ ಅಪಘಾತದಲ್ಲಿ ಮೃತಪಟ್ಟರು. ಪಾಕಿಸ್ತಾನದ ಮೂವರು ಆಟಗಾರರು ಶಿಕ್ಷೆ ಅನುಭವಿಸಿದರು. ಭಾರತದ ಶ್ರೀಶಾಂತ್‌, ಅಜಿತ್‌ ಚಾಂಡಿಲಾ ಹಾಗೂ ಅಂಕಿತ್‌ ಚವಾಣ್‌ ಕೂಡಾ ಶಿಕ್ಷೆ ಅನು ಭವಿಸುತ್ತಿದ್ದಾರೆ. ಮಹಮ್ಮದ್‌ ಅಜರುದ್ದೀನ್ ಹಾಗೂ ಅಜಯ್ ಜಡೇಜ ಅವರಿಗೆ ಫಿಕ್ಸಿಂಗ್‌ ಕಹಿ ಏನೆಂಬುದು ಗೊತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಿದೆ ಎನ್ನುವುದೇನೋ ಸತ್ಯ. ಆದರೆ ಮಾಡಿದ ತಪ್ಪನ್ನೇ ಪದೇ ಪದೇ ಮಾಡುತ್ತಾ ಹೋದರೆ ಜನರಿಗೆ ಆಟಗಾರರ ಮೇಲೆ ನಂಬಿಕೆ ಉಳಿಯವುದಾದರೂ ಹೇಗೆ? ಇಷ್ಟೆಲ್ಲಾ ಆದರೂ ಫಿಕ್ಸಿಂಗ್‌ನ ವಿಸ್ತಾರಕ್ಕೆ ನಿಖರ ಉತ್ತರ ಹುಡುಕುವುದು ಕಷ್ಟ. ಇದನ್ನೆಲ್ಲಾ ಮೆಟ್ಟಿ ನಿಲ್ಲಬೇಕಾದರೆ ಆಟಗಾರರ ಮಾನಸಿಕ ಸ್ಥಿತಿ ಬದಲಾಗ ಬೇಕು. ಭಾರತದಲ್ಲಿ ಹಲವಾರು ಕ್ರೀಡೆಗಳಿದ್ದರೂ ಕ್ರಿಕೆಟ್‌ಗೆ ಎತ್ತರದ ಸ್ಥಾನವಿದೆ. ಆದ್ದರಿಂದ ಈ ಕ್ರೀಡೆಯ ಬಗ್ಗೆ ಮುಂದಾದರೂ ವಿಶ್ವಾಸಾರ್ಹತೆ ಉಳಿಯುವ ಕೆಲಸವಾಗಬೇಕಿದೆ. ಆದರೆ, ಯಾರದ್ದೋ ತಪ್ಪಿಗೆ ಎರಡು ಐಪಿಎಲ್‌ ತಂಡಗಳ ಆಟಗಾರರು ಬಲಿಯಾಗಿದ್ದು ವಿಪರ್ಯಾಸ. ಲೇಖಕರು ಕೆಎಸ್‌ಸಿಎ ಅಂಪೈರ್ 2010ರಲ್ಲಿ ಮೊದಲ ಫಿಕ್ಸಿಂಗ್‌ ನಾಲ್ಕು ವರ್ಷಗಳ ಹಿಂದೆಯಷ್ಟೇ ಬೆಳಕಿಗೆ ಬಂದ ಸ್ಪಾಟ್‌ ಫಿಕ್ಸಿಂಗ್‌ ಕೆಲ ವರ್ಷಗಳಲ್ಲಿ ವಿಶ್ವವ್ಯಾಪಿ ಹರಡಿದೆ. 2010ರಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದಾಗ ಮೊದಲ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣ ಬೆಳಕಿಗೆ ಬಂದಿತ್ತು. ಪಾಕ್ ತಂಡದ ಮಹಮ್ಮದ್‌ ಆಸಿಫ್‌, ಮಹಮ್ಮದ್ ಅಮಿರ್‌ ಮತ್ತು ಸಲ್ಮಾನ್‌ ಬಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದು ತನಿಖೆಯಿಂದ ಸಾಬೀತಾಗಿತ್ತು. ಇವರಿಗೆ ಶಿಕ್ಷೆಯೂ ಆಗಿದೆ. ಅಮಿರ್ ಮತ್ತು ಆಸಿಫ್‌ ನೋ ಬಾಲ್‌ ಹಾಕಲು ಫಿಕ್ಸಿಂಗ್‌ ಮಾಡಿಕೊಂಡಿದ್ದರು ಎಂಬುದು ಬಹಿರಂಗವಾಗಿತ್ತು. ಸ್ಪಾಟ್‌ ಫಿಕ್ಸಿಂಗ್‌ ನಡೆಸಿ ಶಿಕ್ಷೆಗೆ ಒಳಗಾಗಿರುವ ಪ್ರಮುಖ ಆಟಗಾರರು ಪಾಕಿಸ್ತಾನ * ಮಹಮ್ಮದ್ ಆಸಿಫ್‌ * ಮಹಮ್ಮದ್ ಅಮಿರ್ * ಸಲ್ಮಾನ್ ಬಟ್‌ * ದಿನೇಶ್‌ ಕನೇರಿಯಾ ಭಾರತ * ಮೋನಿಶ್‌ ಮಿಶ್ರಾ * ಶಲಭ್‌ ಶ್ರೀವಾತ್ಸವ್‌ * ಟಿ.ಪಿ. ಸುಧೀಂದ್ರ * ಶ್ರೀಶಾಂತ್‌ * ಅಂಕಿತ್‌ ಚವಾಣ್‌ * ಅಜಿತ್‌ ಚಾಂಡಿಲಾ * ಮೆರ್ವಿನ್‌ ವೆಸ್ಟ್‌ಫೀಲ್ಡ್‌ (ಎಸೆಕ್ಸ್‌ ಕ್ಲಬ್‌ನ ಕೌಂಟಿ ಆಟಗಾರ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.